ಮಳೆ ನಿಂತರೂ ನಿಲ್ಲದ ಪ್ರವಾಹದ ಕೊಳೆ

Team Udayavani, Aug 14, 2019, 3:09 AM IST

ಉತ್ತರ ಕರ್ನಾಟಕ, ಮಲೆನಾಡು, ಹಳೇ ಮೈಸೂರು ಸೇರಿ ರಾಜ್ಯದ ಬಹುತೇಕ ಕಡೆ ಮಳೆಯ ಅಬ್ಬರ ತಗ್ಗಿದ್ದು, ಪ್ರವಾಹ ಇಳಿಮುಖವಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಬಹುತೇಕ ಕಡೆ ಪರಿಹಾರ ಕೇಂದ್ರಗಳಲ್ಲಿದ್ದ ಸಂತ್ರಸ್ತರು ಮನೆಯತ್ತ ತೆರಳಲು ತಯಾರಿ ನಡೆಸಿದ್ದಾರೆ. ಆದರೆ, ನೆರೆಯಿಂದ ಉಂಟಾದ ಅನಾಹುತ ಸಂತ್ರಸ್ತರ ಬದುಕನ್ನು ಮೂರಾಬಟ್ಟೆಯಾಗಿಸಿದೆ.

ನೆರೆ ಇಳಿಯುತ್ತಿದ್ದಂತೆ ಮಳೆಯಿಂದಾದ ಅನಾಹುತದ ಚಿತ್ರಣ ಅನಾವರಣಗೊಳ್ಳುತ್ತಿದೆ. ಭವಿಷ್ಯದ ಬದುಕಿಗಾಗಿ ಅವರೆಲ್ಲಾ ಸರಕಾರದ, ಸಮಾಜ ಬಾಂಧವರ ನೆರವಿಗಾಗಿ ಮೊರೆಯಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಮಧ್ಯೆ, ಕರಾವಳಿ, ಕೊಡಗು ಭಾಗದಲ್ಲಿ ಮಂಗಳವಾರವೂ ಮಳೆ ಮುಂದುವರಿದಿದ್ದು, ಜನರು ಆತಂಕದಿಂದ ಬದುಕನ್ನು ದೂಡುವಂತಾಗಿದೆ.

ನೀರಿನ ಒತ್ತಡಕ್ಕೆ ಮುರಿದ ಡ್ಯಾಂ ಮೇಲ್ಮಟ್ಟದ ಗೇಟ್‌
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಡ್ಯಾಂನ ಎಡದಂಡೆ ಮೇಲ್ಮಟ್ಟದ ಕಾಲುವೆಯ ಮುಖ್ಯ ಗೇಟ್‌ ನೀರಿನ ಒತ್ತಡಕ್ಕೆ ಮುರಿದು ಹೋಗಿದ್ದು, ಜಲಾಶಯದಿಂದ ಅಪಾರ ಪ್ರಮಾಣದ ನೀರು ಪೋಲಾಗು ತ್ತಿದೆ. ಇದರಿಂದ ಆತಂಕಗೊಂಡ ಸುತ್ತಲಿನ ಗ್ರಾಮಗಳ ಜನರು ಊರು ತೊರೆದಿದ್ದಾರೆ. ಆದರೆ, ಜನತೆ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ನದಿ ಪಾತ್ರದಡಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಕಳೆದೊಂದು ವಾರದಿಂದ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದರಿಂದ ನೀರಾವರಿ ಇಲಾಖೆ ಡ್ಯಾಂನ ಸುರಕ್ಷತಾ ದೃಷ್ಟಿಯಿಂದ ನದಿಪಾತ್ರಗಳಿಗೆ ನಿತ್ಯವೂ 2 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಹರಿ ಬಿಟ್ಟಿದ್ದರೂ ನೀರಿನ ಒತ್ತಡಕ್ಕೆ ಎಡದಂಡೆ ಮೇಲ್ಮಟ್ಟದ ಕಾಲುವೆಯ ಮುಖ್ಯ ಗೇಟ್‌ ಮುರಿದಿದೆ. ಇದರಿಂದ 300-400 ಕ್ಯೂಸೆಕ್‌ನಷ್ಟು ನೀರು ಹರಿಯುತ್ತಿದೆ. ನುರಿತ ಇಂಜಿನಿಯರ್‌ಗಳ ತಂಡ ಗೇಟ್‌ ಮುಚ್ಚಲು ನಿರಂತರ ಪ್ರಯತ್ನ ನಡೆಸಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಪಂಪಾವನ ಸಂಪೂರ್ಣ ಜಲಾವೃತ: ಜಲಾಶಯದಿಂದ ಮೇಲ್ಮಟ್ಟದ ಕಾಲುವೆ ಪಂಪಾವನ ಉದ್ಯಾನವನದಲ್ಲೇ ಹಾದು ಹೋಗಿದ್ದು ಗೇಟ್‌ ಮುರಿದಿದ್ದರಿಂದ ನೀರೆಲ್ಲ ಉದ್ಯಾನವನದ ತುಂಬ ಆವರಿಸಿದ್ದು, ಪಂಪಾವನ ಸಂಪೂರ್ಣ ಜಲಾವೃತವಾಗಿದೆ. ಮಂಗಳವಾರ ಬೆಳಗ್ಗೆ 8.20ರಿಂದಲೇ ನೀರು ಪೋಲಾಗುತ್ತಿದ್ದು, ಅಪಾರ ಪ್ರಮಾಣದ ನೀರು ವಿವಿಧ ಉಪಕಾಲುವೆಗಳ ಮೂಲಕ ಮುನಿರಾಬಾದ್‌ ಗ್ರಾಮಕ್ಕೆ ನುಗ್ಗಿದೆ.

ಅಂಬೇಡ್ಕರ್‌ ನಗರದಲ್ಲಿ ಕೆಲವೊಂದು ಮನೆಗಳಿಗೆ ನೀರು ನುಗ್ಗಿದ್ದು, ಮುಂದಿನ ಅಪಾಯವನ್ನು ತಡೆಗಟ್ಟಲು ನೀರಾವರಿ ಇಲಾಖೆ ನೀರನ್ನು ವಿವಿಧ ಕಾಲುವೆಗಳ ಮೂಲಕ ನದಿಪಾತ್ರಗಳಿಗೆ ಹರಿದು ಹೋಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿದೆ. ಸ್ಥಳಕ್ಕೆ ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ತ್ವರಿತಗತಿಯಲ್ಲಿ ಗೇಟ್‌ ದುರಸ್ತಿಗೆ ಸೂಚನೆ ನೀಡಿದ್ದಾರೆ.

ಡ್ಯಾಂ ಒಡೆದಿದೆ ಎಂದು ಊರು ತೊರೆದರು: ಮುನಿರಾಬಾದ್‌ ಸೇರಿ ಹನುಮನಹಳ್ಳಿ, ಅಂಜನಾದ್ರಿ ಸಮೀಪದ ಗ್ರಾಮಸ್ಥರು ಡ್ಯಾಂ ಒಡೆದಿದೆ ಎಂದು ಆತಂಕದಿಂದ ಬೆಳಗ್ಗೆ ಗಂಟುಮೂಟೆ ಕಟ್ಟಿಕೊಂಡು ಊರು ತೊರೆದಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಡ್ಯಾಂ ಬಳಿಯ ಎತ್ತರ ಪ್ರದೇಶದ ಇಂದಿರಾ ಪ್ರವಾಸಕ್ಕೆ ಬಂದು ನೆಲೆಸಿದ್ದಾರೆ. ಕಾಲುವೆ ಮೂಲಕ ನೀರು ಹರಿಯುತ್ತಿದ್ದು, ಕೆಲವೊಂದು ಮನೆಗಳಿಗೆ ತೆರಳಲು ಸಂಪರ್ಕವೇ ಕಡಿತವಾಗಿದೆ. ನೀರಿನ ಅಪಾಯ ಅರಿತು ಹಲವು ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಬೇರೆಡೆ ಸ್ಥಳಾಂತರಗೊಂಡಿವೆ. ಆದರೆ, ಯಾವುದೇ ಅಪಾಯವಿಲ್ಲ. ಗೇಟ್‌ ದುರಸ್ತಿ ಕಾರ್ಯ ನಡೆದಿದೆ. ತಜ್ಞರು ನಿರಂತರ ಪ್ರಯತ್ನ ನಡೆಸಿದ್ದು, ಗ್ರಾಮ ತೊರೆಯಬೇಡಿ ಎಂದು ಮೈಕ್‌ ಮೂಲಕ ಕೊಪ್ಪಳ ಜಿಲ್ಲಾಡಳಿತ ಸುತ್ತಮುತ್ತಲ ಗ್ರಾಮಗಳಲ್ಲಿ ಸಂದೇಶ ಸಾರುತ್ತಿದೆ.

ಕೆಆರ್‌ಎಸ್‌ ಭರ್ತಿ, ಜನರಿಗೆ ಪ್ರವಾಹ ಭೀತಿ
ಶ್ರೀರಂಗಪಟ್ಟಣ: ಕೆಆರ್‌ಎಸ್‌ ಭರ್ತಿಯಾಗಿದೆ. ಕೊಡಗಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಜಲಾಶಯಕ್ಕೆ 70 ಸಾವಿರ ಕ್ಯೂಸೆಕ್‌ನಷ್ಟು ಒಳಹರಿವಿದ್ದು, ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಜಲಾಶಯದ ನೀರಿನ ಮಟ್ಟವನ್ನು 124.25 (ಗರಿಷ್ಠ 124.80) ಅಡಿಗೆ ನಿಲ್ಲಿಸಲಾಗಿದೆ. ಜಲಾಶಯದಿಂದ 50 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಹೀಗಾಗಿ, ನದಿ ತೀರದ ಜನ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

7,873 ಸಂತ್ರಸ್ತರ ಸ್ಥಳಾಂತರ
ಮಡಿಕೇರಿ: ಕೊಡಗಿನಲ್ಲಿ ಅತಿವೃಷ್ಟಿಯಿಂದಾಗಿ ಇದುವರೆಗೆ 9 ಮಂದಿ ಸಾವಿಗೀಡಾಗಿದ್ದು, 147 ಮನೆಗಳಿಗೆ ಭಾಗಶ: ಮತ್ತು 90 ಮನೆಗಳಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ತೋರ ಗ್ರಾಮದಲ್ಲಿ ಭೂಕುಸಿತದ ಸಂದರ್ಭ ನಾಪತ್ತೆಯಾದ 7 ಮಂದಿಯ ಮೃತದೇಹಕ್ಕಾಗಿ ಶೋಧ ಮುಂದುವರಿದಿದ್ದು, ಸಾವಿನ ಪ್ರಮಾಣವೂ ಏರಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 79 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸುಮಾರು 1,507ಕ್ಕೂ ಹೆಚ್ಚು ಜನರು ಮತ್ತು 19ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಒಟ್ಟು 45 ಪರಿಹಾರ ಕೇಂದ್ರ ತೆರೆಯಲಾಗಿದ್ದು, 2,270 ಕುಟುಂಬಗಳ 7,873 ಸಂತ್ರಸ್ತರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಒಟ್ಟು 6 ರಸ್ತೆಗಳು ಭೂಕುಸಿತ ಮತ್ತು ಪ್ರವಾಹದಿಂದ ಬಂದ್‌ ಆಗಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ