ಮುಂದಿನ ಪೀಳಿಗೆಗೂ ಹಂದಿಗೋಡು ಕಾಯಿಲೆ ವಿಸ್ತರಣೆ ಸಾಧ್ಯತೆ; ಡಾ. ಪುಟ್ಟಯ್ಯ ಆತಂಕ
Team Udayavani, Jan 23, 2022, 1:23 PM IST
ಸಾಗರ: ಸಾಗರ ತಾಲೂಕನ್ನು ಕಾಡಿರುವ ಹಂದಿಗೋಡು ಕಾಯಿಲೆಗೆ ವೈದ್ಯಕೀಯ ಚಿಕಿತ್ಸೆ ಪರಿಣಾಮಕಾರಿಯಾಗಿ ಇಲ್ಲದೆ ಇರುವುದರಿಂದ ಮುಂದಿನ ಪೀಳಿಗೆಗೂ ಇದರ ದುಷ್ಪರಿಣಾಮ ನಿರಂತರವಾಗಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹಂಪಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ| ಪುಟ್ಟಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಂದಿಗೋಡು ಗ್ರಾಮಕ್ಕೆ ಭೇಟಿ ನೀಡಿ ಹಂದಿಗೋಡು ಕಾಯಿಲೆಗೆ ತುತ್ತಾದ ಕೆಲವು ಸಂತ್ರಸ್ಥರ ಜೊತೆ ಮಾತುಕತೆ ನಡೆಸಿದ ಅವರು, 1974-75ರ ಸಾಲಿನಲ್ಲಿ ಈ ರೋಗ ಕಾಣಿಸಿಕೊಂಡಿದೆ. ರೋಗಿಗಳ ಅಂದಿನಿಂದ ಇಂದಿನವರೆಗಿನ ಗುಣಲಕ್ಷಣಗಳನ್ನು ಮತ್ತು ರೋಗಿಯ ಆರೋಗ್ಯದ ಮೇಲಾದ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆ. ಹಂದಿಗೋಡು ಕಾಯಿಲೆ ಪ್ರಾರಂಭದಲ್ಲಿ ಯಾರಿಗೆ ವ್ಯಾಪಿಸಿಕೊಂಡಿತು ಹಾಗೂ ಇದು ಸಂಕ್ರಾಮಿಕವಾಗಿ ಹರಡಲು ಕಾರಣವೇನು ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆದಿದೆ ಎಂದರು.
ಸರ್ಕಾರದ ಮಟ್ಟದಲ್ಲಿ ಮತ್ತು ಹಿರಿಯ ತಜ್ಞ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚಿಸಿ ಈ ರೋಗಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಂಶೋಧನಾ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ದಲಿತ ಸಂಘದ ರಾಜೇಂದ್ರ ಬಂದಗದ್ದೆ, ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್, ಧರ್ಮರಾಜ್ ಬೆಳಲಮಕ್ಕಿ, ರವಿ ಜಂಬಗಾರು, ರಾಮಯ್ಯ, ಸುಧಾಕರ ಮಾಸೂರು, ದಲಿತ ಯುವ ಮುಖಂಡ ನಾಗರಾಜ್ ಸಾಗರ ಇನ್ನಿತರ ದಲಿತ ಮುಖಂಡರು ಇದ್ದರು.