ಬಿಜೆಪಿ ಜತೆ ಸಖ್ಯದ ಮಾತೇ ಇಲ್ಲ: ಎಚ್‍ಡಿಡಿ

Team Udayavani, May 16, 2019, 3:10 AM IST

ಉಡುಪಿ: ರಾಜ್ಯ, ರಾಷ್ಟ್ರದ ಹಿರಿಯ ರಾಜಕಾರಣಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮೇ 18ರಂದು 87ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಸಂದರ್ಶನ ನೀಡಿದ್ದು, ಅದರ ವಿವರ ಇಲ್ಲಿದೆ.

* ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷರ ನಡುವೆ ನಡೆದ ವಾಕ್ಸಮರ ಬಗ್ಗೆ ಏನಂತೀರಿ?
ಅವರು ಯಾವ ಕಾಂಟೆಸ್ಟ್‌ನಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಇದೆಲ್ಲ ಗಂಭೀರ ವಿಷಯವಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ದಿನದಿಂದ ಎಲೆಕ್ಟ್ರಾನಿಕ್‌ ಮಾಧ್ಯಮ, ಮೈತ್ರಿ ಸರಕಾರದ ಬಗ್ಗೆ ಒಂದು ದಿನವೂ ಸಹಕಾರ ಕೊಡಲಿಲ್ಲ. ಮೈತ್ರಿ ಸರಕಾರ ಸಿದ್ದರಾಮಯ್ಯ ಸರಕಾರದ ಎಲ್ಲ ಯೋಜನೆಗಳನ್ನೂ ಮುಂದುವರಿಸಿಕೊಂಡು ಬಂದಿದೆ. ರೈತರಿಗೆ 2 ಲಕ್ಷ ರೂ.ವರೆಗೆ ಸಾಲಮನ್ನಾ ಮಾಡಿದೆ. ಯಾವ ಸರಕಾರವೂ ಇಂತಹ ಕೆಲಸ ಮಾಡಲಿಲ್ಲ, ಮೋದಿಯವರೂ ಮಾಡಿಲ್ಲ. ಇದಕ್ಕೆ ಒಂದಾದರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರಾ?

* ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಒಂದೇ ಲಾಡ್ಜ್ನಲ್ಲಿದ್ದರೂ ಮುಖದರ್ಶನ ಮಾಡಲಿಲ್ಲವಂತೆ?
ಇದೂ ಗಂಭೀರ ವಿಷಯವಲ್ಲ. ಉಪಚುನಾವಣೆಯಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರೂ ಇದ್ದರು. ಒಟ್ಟಿಗೆ ಲಾಡ್ಜ್ಗೆ ಹೋಗಿದ್ದರು. ರೂಮ್‌ಗೆ ಹೋದ ನಂತರ ಮಾತನಾಡಲಿಲ್ಲವೆಂದು ಹೋಗಿ ನೋಡಿದ್ದಾರಾ?

* ಖರ್ಗೆಯವರು ಸಿಎಂ ಅಭ್ಯರ್ಥಿ ಅಂದಿದ್ದಾರಲ್ಲ ಕುಮಾರಸ್ವಾಮಿ?
ಮೈತ್ರಿ ಸರಕಾರ ರಚನೆಯಾಗುವ ಸಂದರ್ಭವೊಂದರಲ್ಲಿ ಕುಮಾರಸ್ವಾಮಿ, ಮುನಿಯಪ್ಪ, ಖರ್ಗೆ, ಪರಮೇಶ್ವರ್‌ ಎಲ್ಲ ಒಟ್ಟಿಗೆ ಇದ್ದರು. ಆಗ ಖರ್ಗೆಯವರು 2004ರಲ್ಲಿಯೇ ಮುಖ್ಯಮಂತ್ರಿಯಾಗಬೇಕಿತ್ತು ಎಂದು ನಾನೇ ಹೇಳಿದ್ದೆ. ಆಗ ಖರ್ಗೆಯವರು ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದರು. ಗುಲಾಂ ನಬಿ ಆಜಾದ್‌ ಅವರು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಬೇಕೆಂದು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹೇಳಿದ್ದಾರೆ ಎಂದು ಹೇಳಿದರು. ಸರಕಾರ ರಚನೆಯಾಯಿತು.

* ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ, ಚತುರ್ಥ ರಂಗ ಮುಂದೆ ಹೋಗಿಲ್ಲವಲ್ಲ?
ಒಂದೊಂದು ರಾಜ್ಯದಲ್ಲಿ, ಒಂದೊಂದು ರೀತಿಯ ರಾಜಕೀಯ, ಹೊಂದಾಣಿಕೆ ಇದೆ. ನಾವಿಲ್ಲಿಕುಳಿತುಕೊಂಡು ತುಲನೆ ಮಾಡುವುದು ಕಷ್ಟ. ಒಟ್ಟಾರೆ ಹೇಳುವುದಾದರೆ ಪ್ರಾದೇಶಿಕ ಪಕ್ಷಗಳಿಲ್ಲದೆ ಯಾವ ಪಕ್ಷಕ್ಕೂ ಸ್ವತಂತ್ರವಾಗಿ ಸರಕಾರ ರಚನೆ ಮಾಡುವುದು ಆಗುವುದಿಲ್ಲ ಎನ್ನುವುದು ಸತ್ಯ. ಬಿಜೆಪಿಯವರು ತಮಿಳುನಾಡಿನ ಎಐಎಡಿಎಂಕೆ ಜತೆ, ಬಿಹಾರದ ನಿತೀಶ್‌ ಕುಮಾರ್‌ ಜತೆ ಏಕೆ ಮಾತುಕತೆ ನಡೆಸಿದರು? ಹಿಂದೊಮ್ಮೆ ಮುನಿಸಿಕೊಂಡಿದ್ದ ಶಿವಸೇನೆ ಜತೆ ಏಕೆ ಹೊಂದಾಣಿಕೆ ಮಾಡಿಕೊಂಡರು? ಇದರರ್ಥ ಬಿಜೆಪಿಗೂ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಎಂದರ್ಥ.

* ಉತ್ತರ ಭಾರತದಲ್ಲಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳಲು ಡ್ಯಾನಿಶ್‌ ಅಲಿಯನ್ನು ಬಿಎಸ್‌ಪಿಗೆ ಬಿಟ್ಟು ಕೊಟ್ಟಿದ್ದೀರೋ?
ಡ್ಯಾನಿಶ್‌ ಅಲಿ, 25 ವರ್ಷ ಕಾಲದಿಂದ ನನ್ನೊಟ್ಟಿಗಿದ್ದ. ಆತನಿಗೆ ಸಂಸದನಾಗಬೇಕೆಂಬ ಆಸೆ ಇತ್ತು. ಮೈತ್ರಿ ಸರಕಾರದಲ್ಲಿ ಬಿಎಸ್‌ಪಿಯ ಮಂತ್ರಿಯೊಬ್ಬರು ಇದ್ದ ಕಾರಣ ಮಾಯಾವತಿ ಜತೆ ಮಾತನಾಡಿದೆ. ಅವರು ತಮ್ಮ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸುವುದಾದರೆ ಅವಕಾಶ ಕೊಡುತ್ತೇನೆಂಬ ಷರತ್ತು ಹಾಕಿದರು. ಆತನ ಭವಿಷ್ಯಕ್ಕಾಗಿ ಹೋಗಪ್ಪ ಎಂದೆ. ನನಗೆ ರಾಷ್ಟ್ರಮಟ್ಟದ ರಾಜಕೀಯ ಅಪೇಕ್ಷೆ ಇಲ್ಲ. ಕರ್ನಾಟಕದಲ್ಲಿ ಮೈತ್ರಿ ಸರಕಾರ ಮಾಡುವುದು ಅನಿವಾರ್ಯವಾಯಿತಷ್ಟೆ. ನಮಗೆ ಇರುವುದು ಕೇವಲ ಏಳು ಸ್ಥಾನ. ನಾನು ಅಂತಹ ಯಾವ ಆಲೋಚನೆಯನ್ನೂ ಇಟ್ಟುಕೊಂಡಿಲ್ಲ.

* ಚುನಾವಣೆ ಬಳಿಕ ಬಿಜೆಪಿ ಜತೆ ಸಖ್ಯ ಸಾಧಿಸುವ ಸಾಧ್ಯತೆ ಇದೆಯೆ?
ಎಂದಾದರೂ ಉಂಟೆ?. ನನ್ನ ಮಗನೇ ಮುಖ್ಯಮಂತ್ರಿಯಾಗಿರುವಾಗ ಅದೆಲ್ಲ ರಾಜಧರ್ಮವಲ್ಲ. ಅಂತಹ ಯಾವುದೇ ಆಲೋಚನೆ ಇಲ್ಲ.

* ನಿಮಗೂ, ಪ್ರಧಾನಿ ಮೋದಿಗೂ ವೈಯಕ್ತಿಕ ಸಂಪರ್ಕವಿದೆಯೆ?
ಮೂರ್‍ನಾಲ್ಕು ಬಾರಿ ಭೇಟಿಯಾದಾಗ ಮಾತನಾಡಿದ್ದೆ. ಭ್ರಷ್ಟಾಚಾರಮುಕ್ತ ಭಾರತ ಮಾಡುತ್ತೇನೆ ಎಂದಿದ್ದೀರಿ. ಆಯಿತೆ?, ಕಾಂಗ್ರೆಸ್‌ಮುಕ್ತ ಭಾರತ ಮಾಡುತ್ತೇನೆ ಎಂದಿದ್ದೀರಿ, ಸಾಧ್ಯವೆ ಎಂದು ಕೇಳಿದ್ದೆ. ಉತ್ತರ ಕೊಡಲಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಆಲ್ಬಂ ಮಾಡಿ ಕೊಟ್ಟಿದ್ದೆ. ಪ್ರತಿಕ್ರಿಯೆ ಇಲ್ಲ. ಕಾವೇರಿ ವಿಷಯ ಬಂದಾಗ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದಾಗ ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಯವರಿಂದ ದೂರವಾಣಿ ಕರೆ ಬಂದಿತ್ತು. ನಂತರ ಅನಂತಕುಮಾರ್‌ ಅವರನ್ನು ಕಳುಹಿಸಿದ್ದರು.

* ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜರಿಗೆ ಹೆಚ್ಚುವರಿ ಹೊಣೆಗಾರಿಕೆ ಕೊಡುವುದಿದೆಯೆ?
ಚುನಾವಣೆ ವೇಳೆ ಜಯಪ್ರಕಾಶ್‌ ಹೆಗ್ಡೆಯವರು ಅಭ್ಯರ್ಥಿಯಾಗಬಹುದೆಂದುಕೊಂಡಿದ್ದೆ. ಆಗಲಿಲ್ಲ. ಪ್ರಮೋದ್‌ ಮಧ್ವರಾಜ್‌ ಅವರು ಸ್ಪರ್ಧಿಸುತ್ತೇನೆಂದರು. ಅವರು ಗೆದ್ದರೆ ಸಂಸತ್‌ ಪ್ರವೇಶ ಮಾಡುತ್ತಾರೆ. ಇಲ್ಲವಾದರೆ ಜಿಲ್ಲೆ ಅಥವಾ ರಾಜ್ಯಮಟ್ಟದಲ್ಲಿ ಅವರು ಅಪೇಕ್ಷೆ ಪಟ್ಟಂತೆ ಪಕ್ಷದ ಜವಾಬ್ದಾರಿಯನ್ನು ನೀಡುತ್ತೇವೆ.

* ಲೋಕಸಭಾ ಚುನಾವಣಾ ಫ‌ಲಿತಾಂಶದ ಬಳಿಕ ಯಾವ ಸರಕಾರ ರಚನೆಯಾಗಬಹುದು? ಜೆಡಿಎಸ್‌ ಎಷ್ಟು ಸ್ಥಾನಗಳಲ್ಲಿ ಗೆಲುವು ಪಡೆಯಬಹುದು?
ಇದನ್ನು ಈಗ ಹೇಳಲು ಆಗುವುದಿಲ್ಲ. ನಾವು ಊಹಾಪೋಹದಲ್ಲಿ ಏನನ್ನೂ ಹೇಳಬಾರದು.

* ನಿಮ್ಮ ಆರೋಗ್ಯದ ಗುಟ್ಟೇನು?
ನಾನು ಸುದೀರ್ಘ‌ ಅವಧಿಯ ರಾಜಕೀಯ ಜೀವನದಲ್ಲಿ ಧೃತಿಗೆಟ್ಟಿಲ್ಲ. ಅಧಿಕಾರ ಸಿಕ್ಕಿದಾಗ ಹಿಗ್ಗುವುದಿಲ್ಲ, ಅಧಿಕಾರ ಇಲ್ಲದಾಗ ಕುಗ್ಗುವುದಿಲ್ಲ. ನನ್ನನ್ನು ರಾಮಕೃಷ್ಣ ಹೆಗಡೆಯವರು 24*7 ರಾಜಕಾರಣಿ ಎನ್ನುತ್ತಿದ್ದರು. ನಾನು ಕರ್ತವ್ಯನಿರತನಾಗಿರುತ್ತೇನೆ. ಕೆಲಸ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮನಸ್ಸಿಗೆ ಬಂದಂತೆ ಮಾತನಾಡೋದಿಲ್ಲ. ಯಾರಾದರೂ ಕೆರಳಿಸಿದರೂ, ನಿರುತ್ಸಾಹಗೊಳಿಸಿದರೂ, ಹೀಯಾಳಿಸಿದರೂ ಮಾತನಾಡೋದಿಲ್ಲ. ಅಂತಹ ತಾಳ್ಮೆ ಇದೆ. ಆದ್ದರಿಂದಲೇ ಫಿನಿಕ್ಸ್‌ ಪಕ್ಷಿಯಂತೆ ಎದ್ದು ಬಿಡ್ತಾನೆ ಅಂತಾರೆ. ಅಧಿಕಾರವಿಲ್ಲದೆ 23 ವರ್ಷಗಳಾಗಿವೆ. ಆದರೂ, ಕೆಲಸ ಮಾಡ್ತಾ ಇದ್ದೇನೆ.

ನಾನು ಮೂರು ತಿಂಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ನನ್ನ ಅಳಿಯ ಡಾ| ಮಂಜುನಾಥ್‌ ಮುಂಜಾಗರೂಕತೆಯಾಗಿ ಕೆಲವು ಔಷಧ ಕೊಡುತ್ತಾನೆ. ನನಗೆ ಮಧುಮೇಹ, ರಕ್ತದೊತ್ತಡ, ಕಾನ್ಸುಪೇಶನ್‌ ಇದೆ. ಇತ್ತೀಚೆಗೆ ಆಯುರ್ವೇದ ಔಷಧ ಮಾಡುತ್ತಿದ್ದೇನೆ. ನನ್ನ ಮಗ ಕುಮಾರಸ್ವಾಮಿ, ಉಡುಪಿಯ ಡಾ| ತನ್ಮಯ ಗೋಸ್ವಾಮಿಯವರಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಿದ್ದು, ಅದರಂತೆ ಪಂಚಕರ್ಮ ರಸಾಯನ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ.

* ಮಟಪಾಡಿ ಕುಮಾರಸ್ವಾಮಿ/ ರಾಕೇಶ್‌ ಕುಂಜೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ