ಸುಪಾ ಜಲಾಶಯದಲ್ಲಿ ಈ ಬಾರಿಯ ನೀರಿನ ಸಂಗ್ರಹ ಸೂಪರ್‌

Team Udayavani, May 16, 2019, 3:08 AM IST

ಕಾರವಾರ: ರಾಜ್ಯಕ್ಕೆ ವಿದ್ಯುತ್‌ ನೀಡುವ ಕಾಳಿ ನದಿ ರಾಜ್ಯದ ಬೆಳಕಿನ ನದಿ ಎಂದೇ ಪ್ರಖ್ಯಾತಿ ಪಡೆದಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಈ ನದಿಯ ಜಲ ವಿದ್ಯುದಾಗಾರಗಳು ಜಲ ಸಂಗ್ರಹದಲ್ಲಿ ಸ್ಥಿರತೆ ಕಾಯ್ದುಕೊಂಡಿವೆ.

ಕಾಳಿ ನದಿಗೆ ಜೊಯಿಡಾದ ಬಳಿ ಸುಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಕೊಡಸಳ್ಳಿ, ಕದ್ರಾ ಬಳಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಆ ಪೈಕಿ ತಟ್ಟಿಹಳ್ಳ ಮತ್ತು ಬೊಮ್ಮನಹಳ್ಳಿ ಜಲಾಶಯಗಳು ಪಿಕ್‌ಅಪ್‌ ಡ್ಯಾಂಗಳು. ಸುಪಾ ಜಲಾಶಯವೇ ಕಾಳಿ ನದಿಯ ಮೊದಲ ಜಲಾಶಯ.

ಇದು ರಾಜ್ಯದ ಅತಿ ಎತ್ತರದ ಅಣೆಕಟ್ಟೆಯಾಗಿದ್ದು, 127 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯ ನಿರ್ಮಾಣವಾದ ಮೇಲೆ ಭರ್ತಿಯಾಗಿದ್ದು, ಮೂರೇ ಮೂರು ಸಲ. 2018ರ ಆಗಸ್ಟ್‌ನಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿತ್ತು. ಹಾಗಾಗಿ, ಜಲಾಶಯದ ಕ್ರಸ್ಟ್‌ಗೇಟ್‌ಗಳಿಂದ ಒಂದು ವಾರ ಕಾಲ ನೀರನ್ನು ಹೊರ ಬಿಡಲಾಗಿತ್ತು.

ಜಲಾಶಯ ಒಟ್ಟು 564 ಮೀಟರ್‌ ಎತ್ತರವಿದೆ. 2019, ಮೇ 15ರಂದು ಜಲಾಶಯದಲ್ಲಿ 52 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ಮಳೆಗಾಲದಿಂದ ಈತನಕ 27 ಮೀಟರ್‌ ಎತ್ತರದಷ್ಟು ನೀರು ಜಲಾಶಯದಿಂದ ವಿದ್ಯುತ್‌ ಉತ್ಪಾದನೆಗಾಗಿ ಹರಿದಿದೆ. ಮೊದಲು ಸುಪಾದಲ್ಲಿ ವಿದ್ಯುತ್‌ ಉತ್ಪಾದಿಸಿದ ನಂತರ, ನಾಗಝರಿಯಲ್ಲಿ (ಅಂಬಿಕಾನಗರ) ವಿದ್ಯುತ್‌ ಉತ್ಪಾದಿಸಲಾಗುತ್ತದೆ.

ಅಲ್ಲಿಂದ ಕೊಡಸಳ್ಳಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಿ ಅಲ್ಲಿ ಸಹ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಕೊಡಸಳ್ಳಿಯಿಂದ ಹರಿದ ನೀರನ್ನು ಕದ್ರಾ ಅಣೆಕಟ್ಟಿನಲ್ಲಿ ತಡೆದು ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಹೀಗೆ, ಸುಪಾ ಸೇರಿ ನಾಲ್ಕು ಹಂತಗಳಲ್ಲಿ ನೀರನ್ನು ತಡೆದು ವಿದ್ಯುತ್‌ ಉತ್ಪಾದಿಸುವ ರಾಜ್ಯದ ಏಕೈಕ ಜಲವಿದ್ಯುತ್‌ ಯೋಜನೆ ಇದಾಗಿದೆ.

ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆ: ಈ ವರ್ಷದ ಮಾರ್ಚ್‌ ವೇಳೆಗೆ 2.227 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದ್ದು, ನಿಗದಿತ ಗುರಿಗಿಂತ ಹೆಚ್ಚೇ ವಿದ್ಯುತ್‌ ಉತ್ಪಾದಿಸಲಾಗಿದೆ. ಈಗ ರಾಜ್ಯದ ಬೇಡಿಕೆಗೆ ಅನುಗುಣವಾಗಿ ದಿನವೂ 8 ರಿಂದ 9 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಜಲಾಶಯಗಳಲ್ಲಿ ಮುಂಗಾರು ಬರುವ ತನಕ ಅಗತ್ಯ ನೀರಿನ ಸಂಗ್ರಹವಿದೆ.

ಕಾಳಿ ನದಿಯ ಮೂಲ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಆಶಾದಾಯಕವಾಗಿದೆ. 2018ರ ಏಪ್ರಿಲ್‌ 30ಕ್ಕೆ 536.20 ಮೀಟರ್‌ ಜಲಸಂಗ್ರಹ ಜಲಾಶಯದಲ್ಲಿತ್ತು. 2019ರ ಏ.30ರಂದು 537.20 ಮೀಟರ್‌ ನೀರಿನ ಸಂಗ್ರಹವಿದ್ದು, ರಾಜ್ಯದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆ ಸಾಧ್ಯವಿದೆ ಎಂದು ಕಾಳಿ ಜಲ ವಿದ್ಯುತ್‌ ಯೋಜನೆಗಳ ಮುಖ್ಯ ಎಂಜಿನಿಯರ್‌ (ಎಲೆಕ್ಟ್ರಿಕಲ್‌ ವಿಭಾಗ) ನಂಜುಂಡೇಶ್ವರ “ಉದಯವಾಣಿ’ಗೆ ತಿಳಿಸಿದ್ದಾರೆ.

ಕೊಡಸಳ್ಳಿ ಜಲಾಶಯ 75.5 ಮೀಟರ್‌ ಎತ್ತರವಿದ್ದು, 2018ರಲ್ಲಿ ಜಲಾಶಯದಲ್ಲಿ 72.70 ಮೀಟರ್‌ನಷ್ಟು ನೀರಿನ ಸಂಗ್ರಹವಿತ್ತು. ಪ್ರಸಕ್ತ ವರ್ಷ 70.25 ಮೀಟರ್‌ನಷ್ಟಿದೆ. ಕದ್ರಾ ಜಲಾಶಯದಲ್ಲಿ ಪ್ರಸಕ್ತ ವರ್ಷ 30.25 ಮೀಟರ್‌ವರೆಗೆ ನೀರಿನ ಸಂಗ್ರಹವಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀಟರ್‌. ಕಳೆದ ವರ್ಷ ಜಲಾಶಯದಲ್ಲಿ 30.10 ಮೀಟರ್‌ ನೀರಿನ ಸಂಗ್ರಹವಿತ್ತು. ಎಲ್ಲಾ ಕಾಳಿ ಜಲಾಶಯಗಳಿಗೆ ಮೂಲ, ಸುಪಾ ಅಣೆಕಟ್ಟು. ಅಲ್ಲಿಂದ ಹೊರ ಬಿಟ್ಟ ನೀರನ್ನು 3 ಹಂತಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎನ್ನುತ್ತಾರೆ ಕರ್ನಾಟಕ ಪವರ್‌ ಕಾರ್ಪೊರೇಶನ್‌ನ ಅಧಿಕಾರಿಗಳು.

ಕದ್ರಾ, ಕೊಡಸಳ್ಳಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಜಲ ಸಂಗ್ರಹ ಚೆನ್ನಾಗಿದೆ. ಸುಪಾ ಜಲಾಶಯದಲ್ಲಿ ಸಹ ಉತ್ತಮ ರೀತಿಯಲ್ಲಿ ನೀರಿನ ಸಂಗ್ರಹವಿದೆ. ಇದಕ್ಕೆ ಕಾರಣ 2018ರಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿದ್ದು. ಜಲಾಶಯ ತುಂಬಿದ ಕಾರಣ ವಿದ್ಯುತ್‌ ಉತ್ಪಾದನೆಯಲ್ಲಿ ಸಹ ಗುರಿ ಮೀರಿದ ಪ್ರಗತಿ ಸಾಧಿಸಲಾಗಿದೆ.
-ಶಿವಪ್ರಸಾದ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಅಣೆಕಟ್ಟು ವಿಭಾಗ, ಕದ್ರಾ ಕೊಡಸಳ್ಳಿ, ಉತ್ತರ ಕನ್ನಡ.

ರಾಜ್ಯದ ಬೇಡಿಕೆಗೆ ಅನುಗುಣವಾಗಿ ದಿನವೂ 9 ರಿಂದ 10 ಮಿಲಿಯನ್‌ ಯೂನಿಟ್ಸ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯಲ್ಲಿ ಏರಿಳಿತ ಇರುತ್ತದೆ. ಜಲಾಶಯದಲ್ಲಿ ಈ ಬಾರಿ ನೀರಿನ ಕೊರತೆಯಿಲ್ಲ.
-ನಂಜುಂಡೇಶ್ವರ, ಮುಖ್ಯ ಎಂಜಿನಿಯರ್‌, (ಎಲೆಕ್ಟ್ರಿಕಲ್‌ ವಿಭಾಗ) ನಾಗಝರಿ. ಕೆಪಿಸಿ, ಅಂಬಿಕಾನಗರ.

* ನಾಗರಾಜ ಹರಪನಹಳ್ಳಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ