ರೆಡಿಯಾಯ್ತು ಟೀಂ

ಇಂದು ಬೆಳಗ್ಗೆ 10.30ಕ್ಕೆ ಬಿಎಸ್‌ವೈ ಸಚಿವ ಸಂಪುಟ ವಿಸ್ತರಣೆ; ಹೈಕಮಾಂಡ್‌ನಿಂದ ಸೋಮವಾರ ರಾತ್ರಿ ಸಿಎಂಗೆ ಪಟ್ಟಿ ರವಾನೆ

Team Udayavani, Aug 20, 2019, 6:15 AM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಗೆ ಮಂಗಳವಾರ ಬೆಳಗ್ಗೆ 10.30ರಿಂದ 11.30ರವರೆಗೆ ಮುಹೂರ್ತ ನಿಗದಿಯಾಗಿದ್ದು, ಬಹುತೇಕ 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕರೆ ಮಾಡಿ ನೂತನ ಸಚಿವರ ಪಟ್ಟಿ ನೀಡಿದ್ದು, ಅದರಂತೆ 17 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಚಿವರಾಗಲಿರುವ ಶಾಸಕರಿಗೆ ಸೋಮವಾರ ರಾತ್ರಿಯೇ ಮಾಹಿತಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ 26 ದಿನ ಕಳೆದ ಬಳಿಕ ಮಂಗಳವಾರ ಸಂಪುಟ ವಿಸ್ತರಣೆಯಾಗುತ್ತಿದೆ. ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ತೀವ್ರ ಪ್ರವಾಹ, ಭೂಕುಸಿತದಿಂದ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದು, ಸಂಪುಟ ವಿಸ್ತರಣೆಯಾಗದಿರುವ ಬಗ್ಗೆ ಪ್ರತಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದೆ.

ಯಾರೆಲ್ಲಾ ಸಚಿವರು?: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಎರಡನೇ ಬಾರಿ ದೆಹಲಿ ಪ್ರವಾಸದಲ್ಲಿ ಕಳೆದ ಶನಿವಾರ ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಚರ್ಚಿಸಿದ ಬಳಿಕ ಮಂಗಳವಾರ ಸಂಪುಟ ವಿಸ್ತರಣೆ ನಿಗದಿಯಾಯಿತು. ಆದರೆ ಮೊದಲ ಹಂತದಲ್ಲಿ ಸಚಿವರಾಗಲಿರುವವರ ಹೆಸರನ್ನು ಬಳಿಕ ರವಾನಿಸುವುದಾಗಿ ಅಮಿತ್‌ ಶಾ ಸೂಚಿಸಿದ್ದರು. ಅದರಂತೆ ಸೋಮವಾರ ಸಂಜೆವರೆಗೂ ಸಚಿವರ ಪಟ್ಟಿ ರವಾನೆಯಾಗಿರಲಿಲ್ಲ. ರಾತ್ರಿ ನಂತರ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರೇ ಬಿಎಸ್‌ವೈ ಅವರಿಗೆ ಕರೆ ಮಾಡಿ ಸಚಿವರಾಗುವವರ ಪಟ್ಟಿ ನೀಡಿದ್ದಾರೆ.

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಹಲವು ನಾಯಕರು ಸೋಮವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ಡಾಲರ್ ಕಾಲೋನಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಉಮೇಶ್‌ ಕತ್ತಿ, ಶಾಸಕರಾದ ಸುನಿಲ್ ಕುಮಾರ್‌, ಪ್ರಭು ಚೌಹಾಣ್‌, ಅಶ್ವತ್ಥ ನಾರಾಯಣ ಇತರರು ಭೇಟಿ ನೀಡಿ ಕೆಲಹೊತ್ತು ಚರ್ಚೆ ನಡೆಸಿದರು.

ಇನ್ನೊಂದೆಡೆ, ಬಿಜೆಪಿ ಸರ್ಕಾರ ರಚನೆಗೆ ಪರೋಕ್ಷವಾಗಿ ಕಾರಣವಾಗಿರುವ ಅನರ್ಹತೆಗೊಂಡ ಶಾಸಕರ ಪೈಕಿ ಮುಂದೆ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು. ಅಲ್ಲಿಯವರೆಗೆ ಆ ಖಾತೆಗಳ ನಿರ್ವಹಣೆ ಜವಾಬ್ದಾರಿಯನ್ನು ಯಾರಿಗೆ ವಹಿಸಬೇಕು ಎಂಬ ಬಗ್ಗೆಯೂ ಹಿರಿಯ ನಾಯಕರ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅನರ್ಹತೆಗೊಂಡ ಶಾಸಕರಿಗೆ ಕಾಯ್ದಿರುವ ಸಂಖ್ಯೆ ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಪೈಪೋಟಿ ನಡೆಸಬೇಕಿದ್ದರಿಂದ ಆಕಾಂಕ್ಷಿಗಳಲ್ಲೂ ಸ್ಪಷ್ಟತೆ ಇಲ್ಲದಂತಾಗಿತ್ತು.

ಯಡಿಯೂರಪ್ಪ ಅವರು ಸಂಭಾವ್ಯ 17 ಸಚಿವರ ಪಟ್ಟಿಯನ್ನು ವರಿಷ್ಠರಿಗೆ ಸಲ್ಲಿಸಿದ್ದರು. ವರಿಷ್ಠರು ಆ ಪಟ್ಟಿಯೊಂದಿಗೆ ತಮ್ಮದೇ ಮೂಲಗಳಿಂದಲೂ ಪಡೆದ ಮಾಹಿತಿ ಆಧರಿಸಿದ ಸಂಭಾವ್ಯರ ಪಟ್ಟಿಯೊಂದಿಗೆ ತಾಳೆ ಹಾಕಿ ಪರಿಶೀಲಿಸಿರುವ ಸಾಧ್ಯತೆ ಇದೆ. ಎರಡೂ ಪಟ್ಟಿಯಲ್ಲಿ ಸಾಮಾನ್ಯವಾಗಿರುವ ಶಾಸಕರಿಗೆ ಸಚಿವ ಸ್ಥಾನ ಖಚಿತ ಮಾಡಿರಬಹುದು ಎಂದು ಮೂಲಗಳು ಹೇಳಿವೆ.

17 ಮಂದಿಗೆ ಸಚಿವ ಸ್ಥಾನ
ಜಗದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಆರ್‌. ಅಶೋಕ್‌, ಸಿ.ಟಿ.ರವಿ, ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ಲಕ್ಷ್ಮಣ ಸವದಿ , ಸುರೇಶ್ ಕುಮಾರ್ , ಬಸವರಾಜು ಬೊಮ್ಮಾಯಿ , ಪ್ರಭು ಚವ್ಹಾಣ್‌ ,  ಶಶಿಕಲಾ ಜೊಲ್ಲೆ, ಎಚ್. ನಾಗೇಶ್‌. ಸಿ .ಸಿ ಪಾಟೀಲ್ ,ಜೆ.ಸಿ ಮಾಧು ಸ್ವಾಮಿ

ಅತೃಪ್ತಿ ತಡೆ ತಂತ್ರ
ಮೊದಲ ಹಂತದಲ್ಲಿ 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ 60ಕ್ಕೂ ಹೆಚ್ಚು ಇದೆ. 10 ಸಚಿವ ಸ್ಥಾನವನ್ನು ಅನರ್ಹತೆಗೊಂಡ ಶಾಸಕರಿಗೆ ಕಾಯ್ದಿರಿಸಿದರೂ ಉಳಿದ 24 ಸಚಿವ ಸ್ಥಾನ ಉಳಿಯಲಿದೆ. ಈ ಪೈಕಿ ಮುಖ್ಯಮಂತ್ರಿಗಳು ಹಣಕಾಸು ಸೇರಿದಂತೆ ಐದಾರು ಖಾತೆಯನ್ನು ತಾವೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಉಳಿದ ಖಾತೆಗಳಿಗಷ್ಟೇ ಹಂತ ಹಂತವಾಗಿ ಹಂಚಿಕೆಯಾಗಬಹುದು. ಮೊದಲ ಹಂತದಲ್ಲಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದವರು ಅಸಮಾಧಾನ ಹೊರಹಾಕುವುದು, ಭಿನ್ನಮತ ಚಟುಟಿಕೆಯಲ್ಲಿ ತೊಡಗದಂತೆ ತಡೆಯುವ ಉದ್ದೇಶದಿಂದ ಅಂತಿಮ ಕ್ಷಣದಲ್ಲಿ ಸಚಿವರ ಪಟ್ಟಿ ಪ್ರಕಟಿಸುವ ತಂತ್ರಕ್ಕೆ ಮೊರೆ ಹೋದಂತಿದೆ ಎನ್ನಲಾಗಿದೆ.

ಪಟ್ಟಿ ಹಿಂದೆ ನಾನಾ ಲೆಕ್ಕಾಚಾರ

ಮೊದಲ ಹಂತದಲ್ಲಿ ಸಚಿವರಾಗುವವರ ಹೆಸರು ಹಾಗೂ ಸಂಖ್ಯೆ ಬಗ್ಗೆ ಸ್ಪಷ್ಟತೆ ಇಲ್ಲದಿದ್ದ ಕಾರಣ ಸೋಮವಾರ ಬಿಜೆಪಿ ನಾಯಕರು, ಸಚಿವಾಕಾಂಕ್ಷಿಗಳು ನಾನಾ ಲೆಕ್ಕಾಚಾರದಲ್ಲೇ ತೊಡಗಿದ್ದರು. ಜಾತಿ, ಪ್ರಾದೇಶಿಕತೆ, ಜಿಲ್ಲಾ ಪ್ರಾತಿನಿಧ್ಯ, ಹಿರಿತನ, ಅನುಭವ ಪರಿಗಣಿಸಿದರೆ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆಯಲ್ಲಿ ಕೆಲವರು ತೊಡಗಿದ್ದರು. ಸಂಘಟನೆ ಹಿನ್ನಲೆ, ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ, ಕ್ಷೇತ್ರದಲ್ಲಿ ಉತ್ತಮ ಜನ ಸಂಪರ್ಕ, ಜನಪ್ರಿಯತೆ ಹಾಗೂ ವರ್ಚಸ್ಸನ್ನು ಮಾನದಂಡವಾಗಿ ಪರಿಗಣಿಸಿದರೆ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬ ಕುರಿತು ತೆರೆಮರೆಯಲ್ಲೇ ಲೆಕ್ಕಾಚಾರ ನಡೆದಿತ್ತು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಂಗಳವಾರ ಬೆಳಗ್ಗೆ 10.30ರಿಂದ 11.30ರವರೆಗೆ ನಡೆಯಲಿದೆ. ಈ ಬಗ್ಗೆ ರಾಜಭವನಕ್ಕೂ ಮಾಹಿತಿ ನೀಡಲಾಗಿದ್ದು, ರಾಜಭವನದಲ್ಲೇ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. -ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ