ಬಾಬರ್ ಪಡೆಯನ್ನು ತಡೆದೀತೇ ಆಸೀಸ್?
ಇಂದು ದ್ವಿತೀಯ ಸೆಮಿಫೈನಲ್ ಅಜೇಯ ಪಾಕಿಸ್ಥಾನ-ಆಸ್ಟ್ರೇಲಿಯ ಮುಖಾಮುಖಿ
Team Udayavani, Nov 11, 2021, 5:35 AM IST
ದುಬಾೖ: ಟಿ20 ವಿಶ್ವಕಪ್ ಕೂಟದ ಏಕೈಕ ಅಜೇಯ ತಂಡವಾಗಿ ಮುನ್ನುಗ್ಗಿ ಬಂದಿರುವ ಪಾಕಿಸ್ಥಾನ ಗುರುವಾರದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯದ ಸವಾಲು ಎದುರಿಸಲಿದೆ.
ಕೂಟದ ನೆಚ್ಚಿನ ತಂಡವಾದರೂ ಕಾಂಗರೂ ಪಡೆಯನ್ನು ಮಣಿಸಲು ಬಾಬರ್ ಪಡೆ ಹೆಚ್ಚಿನ ಸಾಮರ್ಥ್ಯ ತೋರಬೇಕೆಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
2016ರ ವಿಶ್ವಕಪ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಸಂಕಟದಲ್ಲಿದ್ದ ಪಾಕಿಸ್ಥಾನಕ್ಕೆ ಯುಎಇ ಆತಿಥ್ಯ ಎನ್ನುವುದು ಈವರೆಗೆ ಬಂಪರ್ ಆಗಿ ಪರಿಣಮಿಸಿದೆ. ಅರಬ್ ನಾಡು ಪಾಕ್‌ಗೆ ಎರಡನೇ ತವರಿದ್ದಂತೆ ಅಥವಾ ಇದಕ್ಕೂ ಮಿಗಿಲು ಎನ್ನಲಡ್ಡಿಯಿಲ್ಲ. ಅದೂ ಅಲ್ಲದೇ ಬದ್ಧ ಎದುರಾಳಿ ಭಾರತವನ್ನು ಮೊದಲ ಪಂದ್ಯದಲ್ಲೇ ಮಣಿಸಿದ್ದು, ಆ ಮೂಲಕ ವಿಶ್ವಕಪ್ ಇತಿಹಾಸಲ್ಲಿ ಭಾರತದೆದುರು ಗೆಲುವಿನ ಖಾತೆ ತೆರೆದದ್ದೆಲ್ಲ ಪಾಕ್ ಓಟಕ್ಕೆ ಹೆಚ್ಚಿನ ಸ್ಫೂರ್ತಿ ಕೊಟ್ಟಿತು ಎಂಬುದರಲ್ಲಿ ಅನುಮಾನವಿಲ್ಲ.
ಬಾಬರ್ ಸಮರ್ಥ ನಾಯಕತ್ವ
ಬಾಬರ್ ಆಜಂ ಅವರ ಸಮರ್ಥ ನಾಯಕತ್ವ, ಅವರು ಮೊಹಮ್ಮದ್ ರಿಜ್ವಾನ್ ಜತೆಗೂಡಿ ನೀಡುತ್ತಿರುವ ಅಮೋಘ ಆರಂಭ ಎನ್ನುವುದು ಪಾಕ್‌ಗೆ ಹೆಚ್ಚಿನ ಬಲ ನೀಡಿದೆ. ಆಜಂ ಈಗಾಗಲೇ 4 ಅರ್ಧ ಶತಕಗಳೊಂದಿಗೆ 264 ರನ್ ಪೇರಿಸಿದ್ದಾರೆ. ಹಫೀಜ್, ಮಲಿಕ್, ಆಸಿಫ್ ಅಲಿ ಅಮೋಘ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ಫಕರ್ ಜಮಾನ್ ವೈಫಲ್ಯ ತಂಡಕ್ಕೆ ಯಾವುದೇ ರೀತಿಯಲ್ಲಿ ಹಾನಿ ಉಂಟುಮಾಡಿಲ್ಲ. ಅಂದಹಾಗೆ ಪಾಕಿಸ್ಥಾನದ ಬ್ಯಾಟಿಂಗ್ ಸಲಹೆಗಾರ ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್ ಎಂಬುದೊಂದು ಸ್ವಾರಸ್ಯ; ಅವರ ಓಪನಿಂಗ್ ಜತೆಗಾರ ಲ್ಯಾಂಜರ್ ಆಸ್ಟ್ರೇಲಿಯದ ಕೋಚ್!
ಪಾಕಿಸ್ಥಾನದ ಬೌಲಿಂಗ್ ವಿಭಾಗ ಹೆಚ್ಚು ಘಾತಕ. ಅಫ್ರಿದಿ, ರವೂಫ್, ಇಮಾದ್, ಶದಾಬ್ ಅವರೆಲ್ಲ ಯುಎಇ ಟ್ರ್ಯಾಕ್‌ನಲ್ಲಿ ಮಿಂಚಿನ ದಾಳಿ ಸಂಘಟಿಸಿದ್ದಾರೆ.
ಇದನ್ನೂ ಓದಿ:ಮಿಂಚಿದ ಮಿಚೆಲ್; ಕಿವೀಸ್ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆ
ವಾರ್ನರ್ ಫಾರ್ಮ್ ನಿರ್ಣಾಯಕ
ಆಸ್ಟ್ರೇಲಿಯ ಪಾಲಿನ ಶುಭ ಸಮಾಚಾರವೆಂದರೆ ಡೇವಿಡ್ ವಾರ್ನರ್ ಫಾರ್ಮ್ ಗೆ ಮರಳಿರುವುದು. ಆಸೀಸ್ ಬ್ಯಾಟಿಂಗ್ ಕ್ಲಿಕ್ ಆಗಬೇಕಾದರೆ ವಾರ್ನರ್-ಫಿಂಚ್ ಪವರ್ ಪ್ಲೇ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಹಾಗೆಯೇ ಆಲ್‌ರೌಂಡರ್‌ಗಳಾದ ಮಾರ್ಷ್-ಮ್ಯಾಕ್ಸ್‌ವೆಲ್ ಸಿಡಿದು ನಿಲ್ಲಬೇಕು.
ಪಾಕಿಸ್ಥಾನಕ್ಕೆ ಹೋಲಿಸಿದರೆ ಆಸ್ಟ್ರೇಲಿಯದ ಬೌಲಿಂಗ್ ಕಾಗದದಲ್ಲಷ್ಟೇ ಬಲಿಷ್ಠ. ಸ್ಟಾರ್ಕ್, ಹ್ಯಾಝಲ್‌ವುಡ್, ಕಮಿನ್ಸ್ ಅಪಾಯಕಾರಿಯಾಗೇನೂ ಗೋಚರಿಸಿಲ್ಲ. ಸ್ಪಿನ್ನರ್ ಝಂಪ ಓಕೆ. ಆದರೆ ಪಾಕಿಗಳು ಸ್ಪಿನ್ನನ್ನು ಸಮರ್ಥವಾಗಿ ನಿಭಾಯಿಸಬಲ್ಲರು.
ದ್ವಿತೀಯ ಸೆಮಿ ಮುಖಾಮುಖಿ
2009ರ ಚಾಂಪಿಯನ್ ತಂಡವಾದ ಪಾಕಿಸ್ಥಾನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸುತ್ತಿರುವುದು ಇದು ಎರಡನೇ ಸಲ. 2010ರ ಬೃಹತ್ ಮೊತ್ತದ ಮೇಲಾಟದಲ್ಲಿ ಆಸ್ಟ್ರೇಲಿಯ ರೋಚಕ ಜಯ ಸಾಧಿಸಿತ್ತು. ಗ್ರಾಸ್ ಐಲೆಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 6 ವಿಕೆಟಿಗೆ 191 ರನ್ ಪೇರಿಸಿತ್ತು. ಆಸ್ಟ್ರೇಲಿಯ ಮೈಕಲ್ ಹಸ್ಸಿ ಅವರ ಸ್ಫೋಟಕ ಆಟದ ನೆರವಿನಿಂದ 19.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ಹಸ್ಸಿ ಕೇವಲ 24 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿದ್ದರು (6 ಸಿಕ್ಸರ್, 3 ಫೋರ್). ಆದರೂ ಆಸೀಸ್‌ಗೆ ಈ ವರೆಗೆ ಕಪ್ ಎತ್ತಲು ಸಾಧ್ಯವಾಗಿಲ್ಲ. ಈ ಬಾರಿ ಮತ್ತೆ ಪಾಕ್ ಹರ್ಡಲ್ಸ್ ದಾಟಬೇಕಾದ ಒತ್ತಡದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟೈಟಾನ್ಸ್-ರಾಯಲ್ಸ್; ಐಪಿಎಲ್ ಟೈಟಲ್ಗೆ ಬಿಗ್ ಫೈಟ್
ಮಹಿಳಾ ಟಿ20 ಚಾಲೆಂಜ್: ಸೂಪರ್ ನೋವಾಸ್ಗೆ ಪ್ರಶಸ್ತಿ
ಫೈನಲ್ ಮೊದಲು ಸಮಾರೋಪ ಸಮಾರಂಭ; ರಣವೀರ್ ಸಿಂಗ್, ಎ.ಆರ್, ರೆಹಮಾನ್ರಿಂದ ಕಾರ್ಯಕ್ರಮ
ಏಷ್ಯಾ ಕಪ್ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ
ಫೈನಲ್ ಪ್ರವೇಶದ ಖುಷಿಯಲ್ಲಿ ಪುಟ್ಟ ಅಭಿಮಾನಿಗೆ ಜೆರ್ಸಿ ಗಿಫ್ಟ್ ನೀಡಿದ ಟ್ರೆಂಟ್ ಬೌಲ್ಟ್