ಚಿಂಚೋಳಿ-ಕುಂದಗೋಳ ಕ್ಷೇತ್ರಗಳಿಗೆ ಇಂದು ಮತದಾನ

Team Udayavani, May 19, 2019, 3:10 AM IST

ಬೆಂಗಳೂರು: ಮೂರೂ ಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಭಾನುವಾರ ಮತದಾನ ನಡೆಯಲಿದ್ದು, ಎರಡೂ ಕ್ಷೇತ್ರಗಳ 3.83 ಲಕ್ಷ ಮತದಾರರು 25 ಆಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ಹಠಾತ್‌ ನಿಧನದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರ ತೆರವುಗೊಂಡಿದ್ದರೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಶಾಸಕ ಡಾ.ಉಮೇಶ್‌ ಜಾಧವ್‌ ಬಿಜೆಪಿ ಸೇರಿದ್ದರಿಂದ ಚಿಂಚೋಳಿ ಕ್ಷೇತ್ರ ತೆರವುಗೊಂಡಿತ್ತು.

ಇದೀಗ ಈ ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಚಿಂಚೋಳಿಯಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, 1.93 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಕುಂದಗೋಳದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದು 1.89 ಲಕ್ಷ ಮತದಾರರು ಇದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ 241 ಹಾಗೂ ಕುಂದಗೋಳದಲ್ಲಿ 214 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ, ಕುಂದಗೋಳದಲ್ಲಿ 25 ಹಾಗೂ ಚಿಂಚೋಳಿಯಲ್ಲಿ 60 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಚಿಂಚೋಳಿ ಮತ್ತು ಕುಂದಗೋಳದಲ್ಲಿ ತಲಾ ನಾಲ್ಕು ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ, ಇದಲ್ಲದೆ, 25 ಕಡೆ ವೆಬ್‌ ಕ್ಯಾಮರಾ ಕವರೇಜ್ ಮಾಡಲಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಮೈಕ್ರೊ ಅಬ್ಸರ್ವರ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಸಾವಿರ ಚುನಾವಣಾ ಸಿಬ್ಬಂದಿ ನಿಯೋಜನೆ: ಚಿಂಚೋಳಿಯಲ್ಲಿ 265 ಮತಗಟ್ಟೆ ಸಿಬ್ಬಂದಿ, 276 ಪೊಲೀಸ್‌ ಸಿಬ್ಬಂದಿ, 29 ಸಾರಿಗೆ ಸಿಬ್ಬಂದಿ ಸೇರಿದಂತೆ 570 ಚುನಾವಣಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದೇ ರೀತಿ, ಕುಂದಗೋಳದಲ್ಲಿ 144 ಮತಗಟ್ಟೆ ಸಿಬ್ಬಂದಿ, 120 ಪೊಲೀಸ್‌ ಸಿಬ್ಬಂದಿ, 92 ಸಾರಿಗೆ ಸಿಬ್ಬಂದಿ ಸೇರಿ ಒಟ್ಟು 446 ಚುನಾವಣಾ ಸಿಬ್ಬಂದಿಯನ್ನು ಮತದಾನಕ್ಕೆ ಬಳಿಸಿಕೊಳ್ಳಲಾಗುತ್ತಿದೆ.

ಎಡಗೈ ಮಧ್ಯ ಬೆರಳಿಗೆ ಶಾಯಿ: ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಶಾಯಿ ಹಾಕಲಾಗುವುದು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳ ಜನ ಮತ ಚಲಾಯಿಸಿದ್ದಾರೆ. ಆಗ ಎಡಗೈ ಮುಖ್ಯ ಬೆರಳಿಗೆ ಶಾಯಿ ಹಾಕಲಾಗಿತ್ತು. ಅದಕ್ಕಾಗಿ, ಉಪ ಚುನಾವಣೆಯಲ್ಲಿ ಎಡಗೈ ಮಧ್ಯ ಬೆರಳಿಗೆ ಶಾಯಿ ಹಾಕಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್‌ ಕುಮಾರ್‌ ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ