ಉಡುಪಿ: ಭಟ್ಕಳ ಗರ್ಭಿಣಿಯ ಮೊದಲ ವರದಿ ನೆಗೆಟಿವ್
Team Udayavani, Apr 21, 2020, 9:26 AM IST
ಉಡುಪಿ: ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಗರ್ಭಿಣಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಅವರ ಗಂಟಲ ದ್ರವದ ಮಾದರಿ ನೆಗೆಟಿವ್ ಆಗಿ ಬಂದಿದೆ. ಇದೀಗ ಎರಡನೇ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ಎರಡೂ ವರದಿ ನೆಗೆಟಿವ್ ಬಂದ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು.
10 ಜನರ ಮಾದರಿ ಸಂಗ್ರಹ
ಜಿಲ್ಲೆಯಲ್ಲಿ ಸೋಮವಾರ 10 ಜನರ ಮಾದರಿ ಸಂಗ್ರಹಿಸಲಾಗಿದೆ. ಇವರಲ್ಲಿ ಮೂವರು ತೀವ್ರ ಉಸಿರಾಟದ ಸಮಸ್ಯೆಯುಳ್ಳವರು, ಮೂವರು ಕೋವಿಡ್ ಸಂಪರ್ಕದವರು, ನಾಲ್ವರು ಫ್ಲ್ಯೂ ಜ್ವರ ಬಾಧೆಯವರು ಆಗಿದ್ದಾರೆ. ಒಟ್ಟು 904 ಜನರ ಮಾದರಿಗಳನ್ನು ಇದುವರೆಗೆ ಸಂಗ್ರಹಿಸಲಾಗಿದೆ.
ಎಲ್ಲ ವರದಿ ನೆಗೆಟಿವ್
ಸೋಮವಾರ 81 ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್ ಆಗಿವೆ. 24 ಜನರ ವರದಿ ಬರಬೇಕಾಗಿದೆ. ಸೋಮವಾರ 102 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 16 ಮಂದಿ 28 ದಿನಗಳ, 45 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಪ್ರಸ್ತುತ 649 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ನಾಲ್ವರು ಆಸ್ಪತ್ರೆ ಕ್ವಾರಂಟೈನ್‌ಗೆ, ಐವರು ಐಸೊಲೇಶನ್ ವಾರ್ಡ್‌ಗೆ ಸೇರಿದ್ದು, 39 ಜನರು ಕ್ವಾರಂಟೈನ್‌ನಲ್ಲಿ, 33 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. 29 ಮಂದಿ ಐಸೊಲೇಶನ್ ವಾರ್ಡ್ ನಿಂದ ಬಿಡುಗಡೆಗೊಂಡಿದ್ದಾರೆ.
ಈಗಾಗಲೇ ಕೋವಿಡ್ ಸೋಂಕಿತ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯ ಕ್ವಾರಂಟೈನ್‌ನಲ್ಲಿದ್ದಾರೆ.