ಅತೃಪ್ತ ಶಾಸಕರಲ್ಲಿ ಬಗೆಹರಿಯದ ಗೊಂದಲ

Team Udayavani, Jun 17, 2019, 3:10 AM IST

ಬೆಂಗಳೂರು: ವಿರೋಧದ ನಡುವೆ ಸಂಪುಟ ವಿಸ್ತರಣೆ ಮಾಡಿರುವ ಮೈತ್ರಿ ಪಕ್ಷಗಳ ನಾಯಕರಿಗೆ ಶಾಕ್‌ ನೀಡಲು ಅತೃಪ್ತ ಶಾಸಕರು ನಡೆಸುತ್ತಿರುವ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿ ಫ‌ಲ ನೀಡಿಲ್ಲ. ಈಗ ಅತೃಪ್ತರು ಅಸಹಾಯಕರಾಗಿದ್ದು, ಮುಂದಿನ ತಮ್ಮ ನಡೆಯ ಬಗ್ಗೆ ಇನ್ನೂ ಗೊಂದಲದಲ್ಲಿ ಮುಳುಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನಗಳಿಸಿರುವ ಬಿಜೆಪಿ, ಮೈತ್ರಿ ಪಕ್ಷಗಳ ಶಾಸಕರನ್ನು ಸೆಳೆದು ಆಪರೇಷನ್‌ ಕಮಲ ಮಾಡುತ್ತದೆ ಎಂಬ ಆತಂಕದಲ್ಲಿ ಸರ್ಕಾರ ಸಂಪುಟ ಪುನಾರಚನೆಗೆ ಕೈ ಹಾಕಿ, ನಂತರ ಬಿಜೆಪಿಗೆ ಮೊದಲ ಹೊಡೆತ ನೀಡಲು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ. ಆ ಮೂಲಕ ತಕ್ಷಣಕ್ಕೆ ಇದ್ದ ಆತಂಕವನ್ನು ದೂರ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಪಕ್ಷೇತರರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಂಡಿರುವುದಕ್ಕೆ ಕಾಂಗ್ರೆಸ್‌ನ ಹಿರಿ ಕಿರಿಯ ಶಾಸಕರಿಗೆ ಪಕ್ಷದ ನಾಯಕರ ಬಗ್ಗೆ ಅಸಮಾಧಾನ ಉಂಟಾಗಿದ್ದು, ಅದನ್ನು ಯಾವ ರೀತಿಯಲ್ಲಿ ಹೊರ ಹಾಕಬೇಕು ಎನ್ನುವ ಗೊಂದಲ ಬಂಡಾಯಗಾರರು ಹಾಗೂ ಅತೃಪ್ತರಲ್ಲಿ ಮೂಡಿದೆ.

ಶುಕ್ರವಾರ ಕಾಂಗ್ರೆಸ್‌ ಬಂಡಾಯ ನಾಯಕ ರಮೇಶ್‌ ಜಾರಕಿಹೊಳಿಯನ್ನು ಅಥಣಿ ಶಾಸಕ ಮಹೇಶ್‌ ಕುಮಠಳ್ಳಿ ಹಾಗೂ ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.

ಕೂಡದ ಸಂಖ್ಯಾ ಬಲ: ಬಂಡಾಯ ಶಾಸಕರಿಗೆ ತಕ್ಷಣಕ್ಕೆ ರಾಜೀನಾಮೆ ನೀಡಲು ಎರಡು ರೀತಿಯ ಸಮಸ್ಯೆ ಇದೆ ಎನ್ನಲಾಗಿದೆ. ಒಂದೆಡೆ ಬಿಜೆಪಿಗೆ ಅಗತ್ಯವಿರುವಷ್ಟು ಶಾಸಕರ ಸಂಖ್ಯೆಯನ್ನು ಸೇರಿಸುವುದು ಕಷ್ಟವಾಗಿದೆ. ಮತ್ತೂಂದೆಡೆ ಬಿಜೆಪಿಗೆ ಅಗತ್ಯವಿದ್ದಷ್ಟು ಶಾಸಕರು ರಾಜೀನಾಮೆ ನೀಡದಿದ್ದರೆ ಅತಂತ್ರರಾಗುವ ಅತಂಕ ಇದೆ ಎನ್ನಲಾಗಿದೆ. ಮೈತ್ರಿ ಸರ್ಕಾರವನ್ನು ಅಲ್ಪ ಮತಕ್ಕೆ ಕುಸಿಯುವಂತೆ ಮಾಡಲು ಬಿಜೆಪಿ ಕನಿಷ್ಠ 14 ಶಾಸಕರ ರಾಜೀನಾಮೆ ನೀಡಿಸುವ ಅಗತ್ಯವಿದೆ.

ಬಿಜೆಪಿಗೆ ಭರವಸೆಯಾಗಿದ್ದ ಇಬ್ಬರು ಪಕ್ಷೇತರರಿಗೆ ಮಂತ್ರಿ ಸ್ಥಾನ ನೀಡಿರುವುದರಿಂದ ಮತ್ತಿಬ್ಬರು ಅತೃಪ್ತರನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ. ಅಲ್ಲದೇ ರಾಜ್ಯ ಸರ್ಕಾರ ಹಾಗೂ ಮೈತ್ರಿ ಪಕ್ಷಗಳ ನಾಯಕರ ಮೇಲೆ ಬಹುತೇಕ ಕಾಂಗ್ರೆಸ್‌ ಶಾಸಕರಿಗೆ ಅಸಮಾಧಾನ ಇದ್ದರೂ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿಲ್ಲ ಎನ್ನಲಾಗುತ್ತಿದೆ.

ಅಲ್ಲದೇ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಅಮರೇಗೌಡ ಬಯ್ನಾಪುರ, ಶರಣಬಸಪ್ಪ ದರ್ಶನಾಪುರರಂತಹ ಶಾಸಕರು ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನ ಹೊಂದಿದ್ದರೂ, ಪಕ್ಷ ತೊರೆಯಲು ಮನಸ್ಸು ಮಾಡುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.

ಇನ್ನು ಕೆಲವು ಶಾಸಕರು ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮತ್ತೆ ಆಯ್ಕೆಯಾಗಿ ಬರುವ ವಿಶ್ವಾಸ ಹೊಂದಿಲ್ಲ. ಅಲ್ಲದೇ ಬಿಜೆಪಿಗೆ ಯಾರನ್ನು ನಂಬಿ ಹೋಗಬೇಕು ಎನ್ನುವ ಆತಂಕವನ್ನೂ ಕೆಲವು ಶಾಸಕರು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಅವರೇ ಆಪರೇಷನ್‌ ಕಮಲದ ನೇತೃತ್ವ ವಹಿಸಿ ಪಕ್ಷಕ್ಕೆ ಸೇರಿಸಿಕೊಂಡ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು ಅವರನ್ನು ಕಡೆಗಣಿಸಿ ಬೇರೆ ಇನ್ಯಾರಿಗೋ ಅಧಿಕಾರ ನೀಡಿದರೆ, ಪಕ್ಷಾಂತರಿಗಳಾದವರಿಗೆ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಹೇಗಿರುತ್ತದೆ ಎಂಬ ಆತಂಕ ಕೂಡ ಕಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆಪರೇಷನ್‌ಗೆ ಬಿಜೆಪಿ ಹಿಂದೇಟು: ಬಿಜೆಪಿ ರಾಜ್ಯ ನಾಯಕರು ವಿಶೇಷವಾಗಿ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ತಕ್ಷಣವೇ ಅತೃಪ್ತರನ್ನು ಸೆಳೆದು ಮೈತ್ರಿ ಸರ್ಕಾರ ಪತನಗೊಳಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರು ಸ್ಪಂದಿಸುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಂಸತ್‌ ಅಧಿವೇಶನ ಆರಂಭವಾಗುವುದರಿಂದ ತಕ್ಷಣಕ್ಕೆ ಯಾವುದೇ ರೀತಿಯ ಆಪರೇಷನ್‌ ಕಮಲದ ಪ್ರಯತ್ನ ನಡೆಸದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ತಕ್ಷಣಕ್ಕೆ ಆಪರೇಷನ್‌ ಕಮಲ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರ ನಿರಾಸಕ್ತಿ ಹಾಗೂ ನಿರೀಕ್ಷಿತ ಸಂಖ್ಯೆಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗದಿರುವುದರಿಂದ ಬಂಡಾಯ ನಾಯಕರು ಅಸಹಾಯಕರಾಗಿದ್ದು, ಮುಂದೇನು ಮಾಡಬೇಕೆಂಬ ಗೊಂದಲದಲ್ಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

* ಶಂಕರ ಪಾಗೋಜಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ