ಹಿಂಸೆ ನೀಡಿ ನಾಮಪತ್ರ ವಾಪಸ್‌: ದೇವೇಗೌಡ

Team Udayavani, Nov 22, 2019, 6:30 AM IST

ಬೆಂಗಳೂರು: ಹಿರೇಕೆರೂರು ಮತ್ತು ಅಥಣಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಆಕಾಂಕ್ಷಿಗಳಾಗಿದ್ದವರು ಟಿಕೆಟ್‌ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದು ಇದೀಗ ಜೆಡಿಎಸ್‌ನಿಂದ ಟಿಕೆಟ್‌ ಪಡೆದವರು ಒತ್ತಡದ ಕಾರಣದಿಂದಾಗಿ ತಮ್ಮ ನಾಮಪತ್ರಗಳನ್ನು ವಾಪಸ್‌ ಪಡೆದಿರುವುದರಿಂದ ಅವರಿಗೆ ಬೆಂಬಲ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರೇಕೆರೂರು ಮತ್ತು ಅಥಣಿಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಮೇಲೆ ನಾನಾ ಒತ್ತಡ ಹಾಕಿ ನಾಮಪತ್ರ ಹಿಂದಕ್ಕೆ ತೆಗೆಸಿದ್ದಾರೆ. ಹಿರೇಕೆರೂರಿನಲ್ಲಿ ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ತಮ್ಮ ಅಧಿಕೃತ ಅಭ್ಯರ್ಥಿಯ ಜತೆಗೆ ಹೋಗಿ ಅವರ ನಾಮಪತ್ರವನ್ನು ವಾಪಸ್‌ ತೆಗೆಸಿದ್ದಾರೆ. ಅಥಣಿಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಹೈದರಾಬಾದ್‌ಗೆ ಕರೆದೊಯ್ದು ಒತ್ತಡ ಹಾಕಿದ್ದಾರೆ. ಇದು ಒಳ್ಳೆಯ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.

ಮಹಾಲಕ್ಷ್ಮೀ ಲೇಔಟ್‌ನಲ್ಲೂ ನಮ್ಮ ಅಭ್ಯರ್ಥಿ ಮನೆಯ ಮುಂದಿನ ಪೋಸ್ಟರ್‌ ಕಿತ್ತು ಹಾಕಲಾಗಿದೆ. ಕೆ.ಆರ್‌.ಪೇಟೆಯಲ್ಲಿ ವಿನಾಕಾರಣ ಜೆಡಿಎಸ್‌ನವರು ಚಪ್ಪಲಿ ತೂರಿದರು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹದಿಮೂರು ಕಡೆ ಅಭ್ಯರ್ಥಿ ಹಾಕಿದ್ದೇವೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರಿಗೆ ಬೆಂಬಲ ನೀಡಿದ್ದೇವೆ. ಎಲ್ಲ ಕಡೆ ಚುನಾವಣೆ ಯನ್ನು ಸವಾಲಾಗಿ ಸ್ವೀಕರಿಸಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ನಮಗೆ ಒಂದೇ ಎಂದು ಹೇಳಿದರು.

ಉಪ ಚುನಾವಣೆ ಕಣದಲ್ಲಿದ್ದ ಪಕ್ಷದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿರುವುದರಿಂದ ಜೆಡಿಎಸ್‌ಗೆ ಹಿನ್ನೆಡೆಯುಂಟಾಗಿದ್ದು, ಪಕ್ಷೇತರ ಅಭ್ಯರ್ಥಿಗಳಿಗೆ ಅಲ್ಲಿ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ