ಈ ಬಾರಿಯ ಐಪಿಎಲ್ ಎಲ್ಲಿ ಯಾವಾಗ ನಡೆಯಲಿದೆ ?
Team Udayavani, Jan 23, 2022, 7:15 AM IST
ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಎಲ್ಲಿ ನಡೆಯಲಿದೆ? ಇದಕ್ಕೆ ರವಿವಾರ ಒಂದು ಹಂತದ ಉತ್ತರ ಸಿಕ್ಕೀತೆಂಬ ನಿರೀಕ್ಷೆ ಇದೆ. ಬಿಸಿಸಿಐ ಈ ಕುರಿತು ಮಹತ್ವದ ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ.
ಭಾರತದಲ್ಲೇ ಐಪಿಎಲ್ಆಡಿಸಲು ಬಿಸಿಸಿಐ ಗರಿಷ್ಠ ಪ್ರಯತ್ನ ನಡೆಸಲಿದೆ. ಮಾಲಕರೆಲ್ಲ ಮುಂಬಯಿ ಅಥವಾ ಪುಣೆಯಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಒಲವು ಹೊಂದಿದ್ದಾರೆ.
ಭಾರತದಾಚೆಯಾದರೆ ಮತ್ತೆ ಯುಎಇ ಅಥವಾ ದಕ್ಷಿಣ ಆಫ್ರಿಕಾ ಹೆಚ್ಚು ಸುರಕ್ಷಿತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ಗೆ ಹ್ಯಾಟ್ರಿಕ್ ಸೋಲು
ಐಪಿಎಲ್ ಆರಂಭದ ದಿನಾಂಕವನ್ನೂ ಅಂತಿಮಗೊಳಿಸುವ ಸಾಧ್ಯತೆ ಇದೆ. ಇದಕ್ಕೆ 2 ದಿನಾಂಕವನ್ನು ನಿಗದಿಗೊಳಿಸಲಾಗಿದೆ-ಮಾ. 27 ಮತ್ತು ಎ. 2. ಆದರೆ ಮಾ. 18ರಂದು ಭಾರತ ಲಕ್ನೋದಲ್ಲಿ ಶ್ರೀಲಂಕಾ ವಿರುದ್ಧ ಅಂತಿಮ ಟಿ20 ಪಂದ್ಯವಾಡಲಿದೆ.
ಲೋಧಾ ಸಮಿತಿಯ ನಿಯಮಾವಳಿ ಪ್ರಕಾರ ಎರಡು ಸರಣಿಗಳ ನಡುವೆ 14 ದಿನಗಳ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಹೀಗಾಗಿ ಎ. ಎರಡೇ ಪ್ರಶಸ್ತ ದಿನ ಆಗಬಹುದು.