ಉಪ ಕದನಕ್ಕೆ ತಾಲೀಮು ಶುರು

Team Udayavani, Sep 24, 2019, 3:09 AM IST

ಅನರ್ಹಗೊಂಡಿರುವ 15 ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ತಕರಾರು ಇಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಭ್ಯರ್ಥಿ ಕುರಿತು ಕಾಂಗ್ರೆಸ್‌,ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ತಾಲೀಮು ಶುರುವಾಗಿದೆ. ನಾಮಪತ್ರ ಸಲ್ಲಿಕೆಯ ಮೊದಲನೇ ದಿನವಾದ ಸೋಮವಾರ 14 ನಾಮಪತ್ರಗಳು ಸಲ್ಲಿಕೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿವೆ.

ಅನರ್ಹರ ಪರ ಆಯೋಗದ ನಡೆಗೆ ಕಾಂಗ್ರೆಸ್‌ನಲ್ಲಿ ಆತಂಕ
ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಅನರ್ಹರ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕಾಂಗ್ರೆಸ್‌ ಪ್ರಕರಣದ ಬೆಳವಣಿಗೆಯನ್ನು ನೋಡಿ ಅಭ್ಯರ್ಥಿಗಳ ಆಯ್ಕೆ ಮಾಡಲು ತೀರ್ಮಾನಿಸಿದೆ. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಅನರ್ಹರ ಪ್ರಕರಣ ವಿಚಾರಣೆಗೆ ಬಂದಿದ್ದು, ಕೇಂದ್ರ ಚುನಾವಣಾ ಆಯೋಗ ಅನರ್ಹರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮದೇನೂ ಆಕ್ಷೇಪವಿಲ್ಲ ಎಂದು ಹೇಳಿರುವುದು ಕಾಂಗ್ರೆಸ್‌ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಚುನಾವಣಾ ಆಯೋಗ ಶಾಸಕರ ಅನರ್ಹತೆ ಪ್ರಕರಣದಲ್ಲಿ ಕಕ್ಷಿದಾ ರರಲ್ಲದಿದ್ದರೂ, ಸ್ವಯಂಪ್ರೇರಿತರಾಗಿ ಸುಪ್ರೀಂಕೋರ್ಟ್‌ ಮುಂದೆ ಹೇಳಿಕೆ ದಾಖಲಿಸಿರುವುದರಿಂದ ಈ ಬೆಳವಣಿಗೆಯ ಹಿಂದೆ ಕೇಂದ್ರ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿದೆ. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ನೀಡಿ ವಾದ ಮಂಡಿಸಲು ಅವಕಾಶ ನೀಡಿರುವುದರಿಂದ ಅವರ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ಬುಧವಾರ ಕಾಂಗ್ರೆಸ್‌ ಪರ ವಾದ ಮಂಡಿಸಲಿದ್ದಾರೆ.

ಈ ನಡುವೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿದೆ. ಆದರೆ, ಬುಧವಾರ ಅನರ್ಹರ ಕುರಿತು ಸುಪ್ರೀಂ ಕೊರ್ಟ್‌ನಲ್ಲಿ ಆಗುವ ಬೆಳವಣಿಗೆಗಳನ್ನು ನೋಡಿಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ತೀರ್ಮಾನಿಸಿದ್ದಾರೆ. ಹದಿನೈದು ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧೆಗೆ ಸುಪ್ರೀಂಕೋರ್ಟ್‌ ಅವಕಾಶ ನಿರಾಕರಿಸಿದರೆ, ಕಾಂಗ್ರೆಸ್‌ ಕಾರ್ಯತಂತ್ರ ಬದಲಾಗುವ ಸಾಧ್ಯತೆ ಇದೆ. ಒಂದು ವೇಳೆ, ಸುಪ್ರೀಂ ಕೋರ್ಟ್‌ ಅನರ್ಹರಿಗೆ ಸ್ಪರ್ಧೆಗೆ ಅವಕಾಶ ನೀಡಿದರೆ, ಕಾಂಗ್ರೆಸ್‌ ಅನರ್ಹರ ಕ್ಷೇತ್ರಗಳಲ್ಲಿ 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಸೆಳೆಯುವ ಕುರಿತಂತೆಯೂ ಪ್ರಯತ್ನಗಳು ತೆರೆ ಮರೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ದಿನೇಶ್‌ ಗುಂಡೂರಾವ್‌ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆ ಹೊರತು ಪಡೆಸಿ ಚುನಾವಣೆ ನಡೆಯುವ ಎಲ್ಲ ಜಿಲ್ಲೆಗಳ ಜಿಲ್ಲಾ ಮುಖಂಡರ ಸಭೆ ನಡೆಸಿ, ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ, ಸ್ಥಳೀಯವಾಗಿ ಬಿಜೆಪಿಯಿಂದ ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಬಗ್ಗೆ ಇರುವ ಅಭಿಪ್ರಾಯ. ಬಿಜೆಪಿಯಿಂದ ಅಭ್ಯರ್ಥಿ ಗಳನ್ನು ಎರವಲು ತರುವುದರಿಂದ ಚುನಾವಣೆಯ ಮೇಲೆ ಆಗುವ ಲಾಭ ನಷ್ಟದ ಲೆಕ್ಕಾಚಾರ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಕಾದು ನೋಡುವ ತಂತ್ರ: ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ನಿಂದ ನಾಲ್ಕು ಐದು ಜನ ಟಿಕೆಟ್‌ ಆಕಾಂಕ್ಷಿಗಳಿದ್ದು, ಎಲ್ಲರ ಚುನಾವಣೆ ಗೆಲ್ಲುವ ಸಾಧ್ಯತೆ, ಸಾಮರ್ಥ್ಯದ ಬಗ್ಗೆ ಮುಖಂಡರು ಅಭಿಪ್ರಾಯ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಗೆ ಹಾಜರಾದ ಪರಮೇಶ್ವರ್‌: ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡು ಪರೋಕ್ಷ ವಾಗ್ಧಾಳಿ ನಡೆಸಿದ್ದ ಡಾ.ಜಿ. ಪರಮೇಶ್ವರ್‌ ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು. ಸಭೆಗೆ ಮೊದಲೇ ಬಂದಿದ್ದ ಸಿದ್ದರಾಮಯ್ಯ, ಪರಮೇಶ್ವರ್‌ ಬಂದ ಮೇಲೆ ಅಧಿಕೃತ ಸಭೆ ಆರಂಭಿ ಸೋಣ ಎಂದು ಹೇಳಿದರು ಎಂದು ತಿಳಿದು ಬಂದಿದೆ. ಅಲ್ಲದೇ ಪರಮೇಶ್ವರ್‌ ಸಭೆಗೆ ಆಗಮಿಸಿದ ತಕ್ಷಣ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡ ಸಿದ್ದರಾಮಯ್ಯ, ನಮ್ಮ ನಡುವೆ ಏನೂ ಜಗಳ ಇಲ್ವಲ್ಲಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪರಮೇಶ್ವರ್‌ ನಮ್ಮ ಜಗಳಕ್ಕೆ ಏನಾದರೂ ಸಾಕ್ಷಿ ಇದೆಯಾ ಎಂದು ಕೇಳಿದ್ದೇನೆ, ಯಾರೂ ಸಾಕ್ಷಿ ಕೊಡುತ್ತಿಲ್ಲ ಎಂದು ಲಘುವಾಗಿಯೇ ಹೇಳಿದ್ದಾರೆ. ನಂತರ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆ ಮುಂದುವರಿಸಿದ್ದಾರೆ.

ಆಯೋಗದ ಮಧ್ಯಪ್ರವೇಶ ಸರಿಯಲ್ಲ: ದಿನೇಶ್‌
ಬೆಂಗಳೂರು: “ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವ ಕುರಿತು ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಸರಿಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, “ಅನರ್ಹ ಶಾಸಕರ ಪ್ರಕರಣಕ್ಕೂ ಚುನಾವಣಾ ಆಯೋಗಕ್ಕೂ ಸಂಬಂಧವೇ ಇಲ್ಲ. ಆಯೋಗ ಅನಗತ್ಯ ವಾಗಿ ಮಧ್ಯಪ್ರವೇಶ ಮಾಡಿ ರುವುದು ಸರಿಯಲ್ಲ. ಅನರ್ಹರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವತಿಯಿಂದ ಕೆವಿಯೆಟ್‌ ಹಾಕಿದ್ದೆವು. ಸುಪ್ರೀಂ ಕೋರ್ಟ್‌ ನಮಗೆ ನೋಟಿಸ್‌ ನೀಡಿದೆ.

ಸೆ. 26 ರಂದು ನಮ್ಮ ಪರ ವಕೀಲರು ಸುಪ್ರೀಂಕೋರ್ಟ್‌ ಮುಂದೆ ವಾದ ಮಂಡಿಸಲಿದ್ದಾರೆ ಎಂದರು. ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿಯವರು ಉತ್ತಮ ಉದ್ದೇಶಕ್ಕಾಗಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಅನರ್ಹ ಶಾಸಕರು ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸ್ಪೀಕರ್‌ ಎತ್ತಿ ಹಿಡಿದಿದ್ದಾರೆ. ಜನರು ಸ್ಪೀಕರ್‌ ಆದೇಶವನ್ನು ಬಯಸಿದ್ದಾರೆ. ಸುಪ್ರೀಂ ಕೋರ್ಟ್‌ ಕೂಡ ಸ್ಪೀಕರ್‌ ಆದೇಶವನ್ನು ಎತ್ತಿ ಹಿಡಿಯುವ ವಿಶ್ವಾಸ ಇದೆ ಎಂದು ಹೇಳಿದರು.

ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆ ನಡೆಸಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ 2-3 ಹೆಸರುಗಳು ಕೇಳಿ ಬಂದಿವೆ. ಬೆಳಗಾವಿ ಸಮಾವೇಶದ ನಂತರ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ, ಕೇಂದ್ರ ಚುನಾವಣಾ ಸಮಿತಿಗೆ ಸಂಭಾವ್ಯರ ಪಟ್ಟಿ ಕಳುಹಿಸಿಕೊಡಲಾಗುವುದು.
-ರಾಮಲಿಂಗಾರೆಡ್ಡಿ, ಮಾಜಿ ಸಚಿವ

ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರಧಾನಿ ಮೋದಿ ಅಮೆರಿಕಾದ ಹೂಸ್ಟನ್‌ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳುತ್ತಾರೆ. ಆದರೆ, ನಮ್ಮ ರಾಜ್ಯದ ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡುತ್ತಿಲ್ಲ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ