ಯಡಿಯೂರಪ್ಪ “ಕೋಟಾ’ದ ಸಂಪುಟ!

Team Udayavani, Aug 21, 2019, 3:07 AM IST

ಬೆಂಗಳೂರು: ಅಂತೂ ಇಂತೂ ರಾಜ್ಯದ ಏಕವ್ಯಕ್ತಿ ಕ್ಯಾಬಿನೆಟ್‌ ವಿಸ್ತರಣೆಯಾಗಿದೆ. ಏಕ ಚಕ್ರಾಧಿಪತಿ, ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರೆಂಬ ಲೇವಡಿಗೆ ಒಳಗಾಗಿದ್ದ ಯಡಿಯೂರಪ್ಪ ಅವರೀಗ 17 ಮಂತ್ರಿಗಳ ಸಾಥ್‌ನೊಂದಿಗೆ ಆಡಳಿತವನ್ನು ಇನ್ನಷ್ಟು ಬಿಗಿಗೊಳಿಸಲು ಸಜ್ಜಾಗಿದ್ದಾರೆ.

ಮೈತ್ರಿ ಸರ್ಕಾರ ಪತನದ ಬಳಿಕ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರದು 25 ದಿನಗಳ ಕಾಲ ಏಕವ್ಯಕ್ತಿ ಸಂಪುಟವಾಗಿತ್ತು. ರಾಜ್ಯದ ಇತಿಹಾಸದಲ್ಲೇ ಮೊದಲೆಂಬಂತೆ ಸುದೀರ್ಘ‌ 25 ದಿನಗಳ ನಂತರ ಸಂಪುಟ ವಿಸ್ತರಣೆಯಾಗಿದೆ. ದೆಹಲಿಯಲ್ಲಿ ನಡೆದಿದ್ದ ಸಂಸತ್‌ ಅಧಿವೇಶನ, ಬಿಜೆಪಿಯ ನಾಯಕಿ ಸುಷ್ಮಾ ಸ್ವರಾಜ್‌ ನಿಧನ, ಕರ್ನಾಟಕಕ್ಕೆ ಧುತ್ತೆಂದು ಬಂದೆರಗಿದ ನೆರೆ ಮತ್ತಿತರ ಪ್ರಕೃತಿ ವಿಕೋಪ ಮತ್ತು ಕೇಂದ್ರ ನಾಯಕರು ತೋರಿದ “ರಾಜಕೀಯ ಉದಾಸೀನತೆ’ 25ದಿನಗಳ ವಿಳಂಬಕ್ಕೆ ಕಾರಣವಾಗಿದ್ದವು.

ಯಡಿಯೂರಪ್ಪ ಅವರು ತಮ್ಮ ಸಂಪುಟದಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಎಲ್ಲಕ್ಕಿಂತಲೂ ಹೆಚ್ಚು ಪಕ್ಷ ನಿಷ್ಠ ಶಾಸಕರಿಗೆ ಅವಕಾಶ ನೀಡುತ್ತಾರೆ ಎಂಬ ನಂಬಿಕೆ ಬಿಜೆಪಿ ಕಾರ್ಯಕರ್ತರಲ್ಲಿತ್ತು. ಆದರೆ ಹಿಂದೊಮ್ಮೆ ಯಡಿಯೂರಪ್ಪ ಅವರಿಗೆ ಭಾರೀ ಮುಖಭಂಗ ತರಿಸಿದ್ದ ಹಾಗೂ ಒಂದು ರೀತಿಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ತೊಡಕಾಗಿದ್ದ ಇಬ್ಬರನ್ನು (ಅವರಲ್ಲಿ ಒಬ್ಬರು ಸದ್ಯಕ್ಕೆ ಶಾಸಕರೂ ಅಲ್ಲ) ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಲಿಂಗಾಯಿತರಿಗೆ ಹೆಚ್ಚು ಅವಕಾಶ ಕಲ್ಪಿಸಿರುವುದು, ಬಿಜೆಪಿಯ ಭದ್ರ ಅಡಿಪಾಯ ಕರಾವಳಿಗೆ ನಿಜವಾದ ಪ್ರಾತಿನಿಧ್ಯ ನೀಡದೇ ಇರುವುದು ಕೂಡಾ ಒಂದು ಹಂತದಲ್ಲಿ ಅಸಮಾಧಾನ ಮೂಡಿಸಿತ್ತು.

ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್‌ ನಿರ್ಧಾರವೇ ಅಂತಿಮ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಕರ್ನಾಟಕದವರೇ ಆದ ಬಿ.ಎಲ್‌. ಸಂತೋಷ್‌ ಅವರ ಪಾತ್ರ ಇದೆ ಎಂದು ಹೇಳಲಾಗಿತ್ತು. ಆದರೆ, ಸಂಪುಟ ವಿಸ್ತರಣೆಯ ರಹಸ್ಯ ಸ್ಫೋಟದ ಬಳಿಕ ಬಿಜೆಪಿ ಹೈಕಮಾಂಡ್‌ ಸಂಪುಟ ವಿಸ್ತರಣೆಯ ಸ್ವಾತಂತ್ರ್ಯವನ್ನು ಯಡಿಯೂರಪ್ಪ ಅವರಿಗೇ ನೀಡಿರುವಂತೆ ಭಾಸವಾಗುತ್ತಿದೆ. ಶಾ, ನಡ್ಡಾ ಮತ್ತು ಸಂತೋಷ್‌ ಖಂಡಿತಾ ಚರ್ಚಿಸಿರುತ್ತಾರೆ.

ಆದರೆ ಅನೇಕ ಯತ್ನಗಳ ಬಳಿಕ ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿಯನ್ನು ಅಧಿಕಾರದ ಬಾಗಿಲಿಗೆ ತಂದ ಯಡಿಯೂರಪ್ಪ ಅವರಿಗೆ ಸಹಜವಾಗಿ ಸ್ವಾತಂತ್ರ್ಯ ನೀಡಿರಬಹುದು. ಮತ್ತು ಆ ನಿರ್ಧಾರದಲ್ಲಿ ಪಕ್ಷ ಕಟ್ಟುವ ಮತ್ತು ಮುಂದಿನ ಬಿಜೆಪಿಯ ರಹದಾರಿಗೆ ಹೊಸ ನಾಯಕತ್ವವನ್ನು ಸೃಷ್ಟಿಸುವ ಜಾಣ ನಿಲುವೂ ಇರಬಹುದು. ಕೆಲವು ಹಿರಿಯರ ಮತ್ತು ಪ್ರಬಲ ಜಾತಿ ವರ್ಗಗಳ ನಾಯಕರ ಕೋಟಾವನ್ನು ಈ ಬಾರಿ ಮುಗಿಸಿಬಿಟ್ಟರೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಕೇಂದ್ರದ ಮಾದರಿಯಲ್ಲೇ ಬಲಿಷ್ಠವಾಗಿ ಕಟ್ಟಬಹುದು ಎಂಬ ದೂರಾಲೋಚನೆ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಇದ್ದಂತಿದೆ.

ಯಾಕೆಂದರೆ ವರಿಷ್ಠರಿಗೆ ಜಾತಿ, ವರ್ಗಗಳ ಸಮೀಕರಣ ಅಷ್ಟು ಒಲವು ಇರಲಿಕ್ಕಿಲ್ಲ. ಅವುಗಳನ್ನೆಲ್ಲಾ ಮೀರಿ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿಸುವುದು, ಯಾವುದೇ ಪ್ರಬಲ ಜಾತಿ, ಕುಟುಂಬದ ಹಿನ್ನೆಲೆ ಇಲ್ಲದೆ ಪಕ್ಷದಲ್ಲೇ ಬೆಳೆದು ಈಗ ರಾಷ್ಟ್ರವನ್ನೇ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರ ಮಾದರಿ ಬಿಜೆಪಿಯ ಮುನ್ನಡೆಯ ಗುಟ್ಟು ಎಂಬುದು ಅವರಿಗೆ ಗೊತ್ತು.

ಬೆಳಿಗ್ಗೆ ಸಚಿವ ಸಂಪುಟು ವಿಸ್ತರಣೆ ಆದ ಬಳಿಕ ರಾತ್ರಿ ವೇಳೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಂಗಳೂರು ಕ್ಷೇತ್ರದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರನ್ನು ಅಮಿತ್‌ ಶಾ ಅವರು ನೇಮಿಸಿರುವ ಜಾಣತನ ನೋಡಿದಾಗ, ಕೇಂದ್ರ ನಾಯಕತ್ವದ ದೂರದೃಷ್ಟಿಯ ಅರಿವು ಆಗದಿರದು. ಕರಾವಳಿಯನ್ನು ಬಿಜೆಪಿ ಕಡೆಗಣಿಸಿದೆ ಎಂಬ ಆರೋಪ ಸ್ಫೋಟವಾಗುತ್ತಿರುವ ಬೆನ್ನಿಗೇ ಕರಾವಳಿಯವರೇ ಆದ ಪ್ರಬಲ ಬಂಟ ಸಮುದಾಯದ ಕಟೀಲ್‌ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿರುವುದು ಆ ಪ್ರದೇಶಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿರುವುದನ್ನು ಸಾಬೀತುಪಡಿಸಿದೆ.

ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಲಿಂಗಾಯಿತರು ಹಾಗೂ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಕರಾವಳಿ ಭಾಗದವರು ತಮಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಅವಲತ್ತುಕೊಳ್ಳದಂತೆ ಬಿಜೆಪಿ ಹೈಕಮಾಂಡ್‌ ಹೆಜ್ಜೆ ಇಟ್ಟಿದೆ. ಈ ನಡೆಯ ಹಿಂದೆ ರಾಜಕೀಯ ಜಾಣ್ಮೆಯಿದೆ. ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತಿನ ಪ್ರಕಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊತ್ತಿಗೆ ಕರ್ನಾಟಕವನ್ನೂ ವಿಧಾನಸಭೆ ಚುನಾವಣೆಗೆ ಎದುರಿಸುವಂತೆ ಮಾಡುವುದು ಬಿಜೆಪಿ ಯೋಜನೆ.

ಆ ಮಾತು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ಹೇಳುವುದು ಕಷ್ಟ! ಆದರೆ ರಾಜ್ಯ ಬಿಜೆಪಿಗೆ ಯುವ ನಾಯಕತ್ವ ನೀಡಿ ಪಕ್ಷ ಬೆಳೆಸುವ ಇರಾದೆ ಖಂಡಿತಾ ಕೇಂದ್ರ ನಾಯಕತ್ವಕ್ಕೆ ಇದೆ. ಇವೆಲ್ಲವನ್ನೂ ಗಮನಿಸಿದರೆ ಯಡಿಯೂರಪ್ಪ ತಮ್ಮ ಸಂಪುಟ ಪಟ್ಟಿಯನ್ನು ಗಟ್ಟಿಗೊಳಿಸಿ ತಮ್ಮ ಬಿಗಿಪಟ್ಟು ಹೆಚ್ಚಿಸಿಕೊಂಡರು ಎಂದುಕೊಳ್ಳುತ್ತಲೇ, ಕೇಂದ್ರ ಬಿಜೆಪಿ ನಾಯಕತ್ವ ಬುದ್ಧಿವಂತಿಕೆಯ ಪಕ್ಷ ಕಟ್ಟುವ ರಾಜಕೀಯ ನಡೆಯನ್ನು ತೋರಿಸಿದರು ಎಂಬುದು ವೇದ್ಯ.

* ನವೀನ್‌ ಅಮ್ಮೆಂಬಳ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ