ಚೀನಾ 1962ರಲ್ಲಿ ಭಾರತದ ಎಷ್ಟು ಭೂ ಭಾಗ ಕಬಳಿಸಿತ್ತು ಗೊತ್ತಾ?ರಾಹುಲ್ ಗೆ ಪವಾರ್ ತಿರುಗೇಟು
ನಾವು ಗಡಿ ವಿಚಾರದಲ್ಲಿ ಆರೋಪಿಸುವ ಮೊದಲು ಈ ಹಿಂದೆ ಏನಾಗಿತ್ತು ಎಂಬ ಬಗ್ಗೆಯೂ ಗಮನಹರಿಸಬೇಕು.
Team Udayavani, Jun 27, 2020, 4:19 PM IST
ಮುಂಬೈ:ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದಕ್ಕೆ ತಿರುಗೇಟು ನೀಡಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ವರಿಷ್ಠ ಶರದ್ ಪವಾರ್ ಅವರು, ರಾಷ್ಟ್ರೀಯ ಭದ್ರತೆ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಭೂಭಾಗವನ್ನು ಚೀನಾ ಕಬಳಿಸುತ್ತಿದ್ದರೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಶರಣಾಗಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಸಂಬಂಧಿಸಿದಂತೆ ಪವಾರ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
1962ರಲ್ಲಿ ಯುದ್ಧ ನಡೆದ ಬಳಿಕ ಮೊದಲ ಬಾರಿಗೆ ಈ ಘಟನೆ ನಡೆದಿದೆ. ಆದರೆ 1962ರಲ್ಲಿ ಏನು ನಡೆಯಿತು ಎಂಬುದನ್ನು ಮರೆಯಬಾರದು. ಅಂದು ಚೀನಾ ಭಾರತದ 45ಸಾವಿರ ಕಿಲೋ ಮೀಟರ್ ನಷ್ಟು ಜಾಗವನ್ನು ಕಬಳಿಸಿತ್ತು. ನಾವು ಗಡಿ ವಿಚಾರದಲ್ಲಿ ಆರೋಪಿಸುವ ಮೊದಲು ಈ ಹಿಂದೆ ಏನಾಗಿತ್ತು ಎಂಬ ಬಗ್ಗೆಯೂ ಗಮನಹರಿಸಬೇಕು. ಇದೊಂದು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರ. ಯಾರೂ ಇದರಲ್ಲಿ ರಾಜಕೀಯ ಎಳೆದು ತರಬಾರದು ಎಂದು ಹೇಳಿದರು.
ಮಾಜಿ ರಕ್ಷಣಾ ಸಚಿವರು ಆದ ಪವಾರ್ ಸತಾರಾದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನಗೆ ಈ ರೀತಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.