CONNECT WITH US  

"ಸಂಶೋಧನೆ ಅಲ್ಪವಿರಾಮವೇ ಹೊರತು ಪೂರ್ಣವಿರಾಮ ಅಲ್ಲ'

ಕಲಬುರ್ಗಿಯವರು ಮಾತನಾಡಿದ ವಿಚಾರಗಳ ಒಂದೆರಡು ಸಾಲುಗಳು ಮಾತ್ರ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದವು. ಅದು ಅವರ ಸಮಗ್ರ ನಿಲುವಾಗಿರಲಿಲ್ಲ. ಆದರೆ, ಆ ಅಭಿಪ್ರಾಯಗಳನ್ನು ತಿದ್ದಿಕೊಳ್ಳುವ ಅವಕಾಶಗಳು ಅವರಿಗೆ ಸಿಕ್ಕಿರಲಿಕ್ಕಿಲ್ಲ. ಇದೆಲ್ಲ ಅವರ ಸಂಶೋಧನೆಗೆ ಸಂಬಂಧಿಸಿದ್ದು.

ಡಾ| ಎಂ.ಎ.ಕಲಬುರ್ಗಿ ಅವರದು ಕನ್ನಡ ಸಂಶೋಧನೆಯ ಸನ್ನಿವೇಶದಲ್ಲಿ ಬಹುಮುಖ್ಯ ಹೆಸರು. ಗ್ರಂಥ ಸಂಪಾದನೆ, ಶಾಸನಗಳ ಸಂಪಾದನೆ, ಹಸ್ತಪ್ರತಿಗಳ ಸಂಪಾದನೆ, ಕಾವ್ಯಗಳ ಸಂಪಾದನೆಯ ಕ್ಷೇತ್ರದಲ್ಲಿ ಇವರು ಸಾಕಷ್ಟು ಕೆಲಸ ಮಾಡಿದ್ದಾರೆ. 

ಪ್ರಾಚೀನ ಕನ್ನಡ ಕಾವ್ಯಗಳ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಅವರ ಪರಿಶ್ರಮ ಅಪಾರ. ಈ ಸಂಶೋಧನೆಯ ಹರಹು ಎರಡು ದಿಕ್ಕುಗಳಲ್ಲಿದ್ದು - ಒಂದು ಹಸ್ತಪ್ರತಿಗಳ (ತಾಳೆಗರಿಗಳ) ಸಂಶೋಧನೆ, ಇನ್ನೊಂದು ಕಾಗದದ ಹಸ್ತಪ್ರತಿಗಳ ಸಂಶೋಧನೆ. ಹಸ್ತಪ್ರತಿಗಳ ಹುಡುಕಾಟದಲ್ಲಿ ಅವರು ಇಂಗ್ಲೆಂಡಿನ ಕೇಂಬ್ರಿಜ್‌ ವಿ.ವಿ.ಯನ್ನು ಕೂಡ ಎಡತಾಕಿದ್ದರು.
 
ವೀರಶೈವ ಸಾಹಿತ್ಯ ಸಂಶೋಧನೆಯ ಕ್ಷೇತ್ರಕ್ಕೆ ಅವರದು ಬಹಳ ದೊಡ್ಡ ಕೊಡುಗೆ. ವೀರಶೈವ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಹಸ್ತಪ್ರತಿಗಳು ವೀರಶೈವ ಮಠಗಳಲ್ಲಿ ಬಿದ್ದುಕೊಂಡಿದ್ದವು. ಅಂತಹ ಹಸ್ತಪ್ರತಿಗಳನ್ನು ಶೋಧಿಸಿ, ಓದಿ ಗ್ರಂಥ ಸಂಪಾದನೆ ಮಾಡಿ ಅವರು ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ಮಧ್ಯಕಾಲೀನ ಶಿವಶರಣರ ವಚನಗಳನ್ನು ಸಂಪಾದಿಸಿದವರಲ್ಲಿ ಇವರೇ ಮೊದಲಿಗರು. ಕರ್ನಾಟಕ ಸರಕಾರ ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನೆ ಯೋಜನೆಯನ್ನು ಇವರ ಪ್ರಧಾನ ಸಂಪಾದಕತ್ವದಲ್ಲಿ ಮಾಡಿತು. ಇದು 15 ಸಂಪುಟಗಳನ್ನು ಒಳಗೊಂಡಿದ್ದು, ಎಲ್ಲ ಶಿವಶರಣ-ಶರಣೆಯರ ವಚನಗಳು ಇದರಲ್ಲಿ ಸೇರಿವೆ. ಸಮಗ್ರ ಸ್ವರ ವಚನಗಳ ಬಗ್ಗೆ ಸಂಪುಟ ಪ್ರಕಟಿಸಿದ್ದಾರೆ.

ನಾಮ ವಿಜ್ಞಾನ- ಅಪರೂಪದ ಕೃತಿ
ಕಲಬುರ್ಗಿಯವರು ಮುಖ್ಯವಾಗಿ ಪ್ರಾಚೀನ ಕಾವ್ಯ, ವಚನಗಳು ಹಾಗೂ ವೀರಶೈವ ಸಾಹಿತ್ಯದ ಬಗ್ಗೆ ಸಂಪಾದನೆ ಮಾಡಿದ್ದಾರೆ. 

ಅವರ ಸಂಶೋಧನೆಯ ಇನ್ನೊಂದು ಆಸಕ್ತಿ ಛಂದಸ್ಸಿನ ಕುರಿತಾದದ್ದು. ಪ್ರಾಚೀನ ಛಂದೋರೂಪಗಳ ಕುರಿತು ಅಧ್ಯಯನ ಗ್ರಂಥ ಬರೆದಿದ್ದಾರೆ. ಕನ್ನಡ ಶಾಸನಗಳ ಬಗ್ಗೆ ವಿಸ್ತಾರವಾದ ಅಧ್ಯಯನ ಮಾಡಿದ್ದಾರೆ. ಅನೇಕ ಪ್ರಾಚೀನ ಶಾಸನಗಳ ಪರಿಷ್ಕೃತ ರೂಪವನ್ನು ಪ್ರಕಟಿಸಿದ್ದಾರೆ. ಸಾಹಿತ್ಯ, ಛಂದಸ್ಸು, ಗ್ರಂಥ ಸಂಪಾದನೆ, ಹಸ್ತಪ್ರತಿ ಅಧ್ಯಯನ ಅವರ ಮುಖ್ಯ ಕಾರ್ಯಕ್ಷೇತ್ರವಾಗಿತ್ತು. 
ಇವರ ಇನ್ನೊಂದು ಮುಖ್ಯ ಸಂಶೋಧನೆ ಸ್ಥಳನಾಮ ಹಾಗೂ ವ್ಯಕ್ತಿನಾಮಗಳ ಬಗ್ಗೆ ಸಂಬಂಧಿಸಿದ್ದು. ಈ ಬಗ್ಗೆ ನಾಮ ವಿಜ್ಞಾನ ಎಂಬ ಕೃತಿಯನ್ನು ಹೊರತಂದಿದ್ದಾರೆ. ಇದು ಕನ್ನಡದ ಅಪೂರ್ವ ಕೃತಿ. 

ಅನೇಕ ಸಂಶೋಧನಾ ಪ್ರಬಂಧಗಳನ್ನು ಬರೆದಿರುವ ಕಲುಬುರ್ಗಿ ಅವರು ಮಾರ್ಗ 1, 2, 3 ಹೆಸರಿನಲ್ಲಿ ತನ್ನ ಸಂಶೋಧನಾ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ಇದರಲ್ಲಿ ಪ್ರಾಚೀನ ಕನ್ನಡ ಕವಿಗಳ ಬಗ್ಗೆ, ಶಬ್ದಗಳ ನಿಷ್ಪತ್ತಿಯ ಬಗ್ಗೆ, ಪದ್ಯಗಳ ಪರಿಷ್ಕರಣೆಯ ಬಗ್ಗೆ ಇದಮಿತ್ಥಂ ಎಂಬಂತೆ ಮಾಹಿತಿಗಳಿವೆ. 

ಇತ್ತೀಚೆಗೆ ಬಿಜಾಪುರದಲ್ಲಿ ಆದಿಲ್‌ಷಾಹಿ ಆಡಳಿತ ಕಾಲದ ಸಾಹಿತ್ಯದ ಬಗ್ಗೆ ಅವರು ನಡೆಸಿದ ಸಂಶೋಧನೆ ಅಪೂರ್ವವಾದದ್ದು. ಕರ್ನಾಟಕ ಸರಕಾರದ ಅನುದಾನದಿಂದ ಅಲ್ಲಿನ ಪರ್ಷಿಯನ್‌ ಸಾಹಿತ್ಯವನ್ನು ಪರ್ಷಿಯನ್‌ ಹಾಗೂ ಉರ್ದು ಬಲ್ಲವರಿಂದ ರೂಪಾಂತರಿಸಿ "ಆದಿಲ್‌ಷಾಹಿ ಸಾಹಿತ್ಯ' ಗ್ರಂಥ ಹೊರತಂದಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಆ ಕಾಲದ ಸಾಹಿತ್ಯವನ್ನು ಸಂಪಾದಿಸಿ, ಕನ್ನಡಕ್ಕೆ ಅನುವಾದಿಸುವ ಈ ಕೆಲಸ ಕನ್ನಡದ ಮಟ್ಟಿಗೆ ಬಹುಮುಖ್ಯವಾದದ್ದು. 

ಕೈಫಿಯತ್ತುಗಳ ಅಧ್ಯಯನ
ಕೈಫಿಯತ್ತುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಕಲಬುರ್ಗಿ ಅವರು ಮದ್ರಾಸ್‌, ಇಂಗ್ಲೆಂಡ್‌ ವಿ.ವಿ.ಗಳಲ್ಲಿದ್ದ ಕರ್ನಲ್‌ ಮೆಕೆಂಜಿಯ ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಬರಹಗಳನ್ನು ಸಂಗ್ರಹಿಸಿ ಸಂಪಾದಿಸಿ "ಕನ್ನಡ ಕೈಫಿಯತ್ತು'ಗಳು ಎಂಬ ಗ್ರಂಥ ಹೊರತಂದಿದ್ದಾರೆ. ಇದು ಕನ್ನಡಕ್ಕೆ ಕಲಬುರ್ಗಿಯವರು ನೀಡಿದ ಅತಿ ದೊಡ್ಡ ಕೊಡುಗೆ. 
ಅರವಿಂದ ಜತ್ತಿ ಅಧ್ಯಕ್ಷರಾಗಿರುವ ಬಸವ ಸಮಿತಿಯು 2,500 ವಚನಗಳನ್ನು ಸಂಗ್ರಹಿಸಿ ಬಸವ ಜಯಂತಿ ದಶಮಾನೋತ್ಸವ ಸಂಸ್ಮರಣೆ ಸಂದರ್ಭದಲ್ಲಿ ಪ್ರಕಟಿತ್ತು. ಇದರ ಪ್ರಧಾನ ಸಂಪಾದಕತ್ವವನ್ನು ವಹಿಸಿದವರು ಕಲಬುರ್ಗಿ. 

ಈ ವಚನಗಳನ್ನು ಅನಂತರ ಇತರ ಭಾಷೆಗಳಿಗೂ ಅನುವಾದಿಸಲಾಯಿತು. ವಚನಗಳನ್ನು ಕನ್ನಡದಿಂದ ಇಂಗ್ಲಿಷ್‌, ಹಿಂದಿ, ಮರಾಠಿ, ತೆಲುಗು, ತಮಿಳು, ಬಂಗಾಳಿ, ಪಂಜಾಬಿ, ಸಂಸ್ಕೃತ ಮತ್ತು ಉರ್ದು ಭಾಷೆಗಳಿಗೆ, ಆಯಾ ಭಾಷೆಗಳಲ್ಲಿನ ತಜ್ಞರನ್ನು ನೇಮಿಸಿ ಅನುವಾದಿಸಿ ಕಲುಬುರ್ಗಿ ಸಂಪಾದಿಸಿದ್ದಾರೆ.
 
ಇದರ 2ನೇ ಹಂತವಾಗಿ ಸ್ಥಳೀಯ ಭಾಷೆಗಳಾದ ಕೊಂಕಣಿ, ಕೊಡವ, ಮಣಿಪುರಿ ಸೇರಿದಂತೆ ಉತ್ತರ ಭಾರತದ 10 ಭಾಷೆಗಳಿಗೆ ಅನುವಾದ ಮಾಡಲಾಯಿತು. ಈ ಕೆಲಸ ಈಗಾಗಲೇ ಮುಗಿದಿದೆ. ಇದನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಎಲ್ಲ ಸಿದ್ಧತೆಯನ್ನು ಕಲಬುರ್ಗಿ ಮಾಡಿದ್ದರು. ಒಟ್ಟು 20 ಭಾಷೆಗಳಲ್ಲಿ ವಚನಗಳನ್ನು ಅನುವಾದ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. 

ಕ್ರಿಯಾಶೀಲ ವ್ಯಕ್ತಿ ಕಲಬುರ್ಗಿ 
ನಾನು 1987ರಲ್ಲಿ ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದ ಸಂದರ್ಭ ಗೋಷ್ಠಿ, ವಿಚಾರಸಂಕಿರಣಗಳಿಗೆ ಕರೆದಾಗೆಲ್ಲ ಬರುತ್ತಿದ್ದವರು. ನಾನು ಕಂಡ ಅವರ ಮುಖ್ಯವಾದ ಗುಣ ಎಂದರೆ, ಯಾವುದೇ ಕ್ಷಣದಲ್ಲೂ ಚಂಚಲಗೊಳ್ಳದೆ ಪಟ್ಟು ಹಿಡಿದು ಕೆಲಸ ಮಾಡುವುದು. ಅದರೊಂದಿಗೆ ಅವಸರದ ಪ್ರವೃತ್ತಿಯೂ ಮೇಳೈಸಿತ್ತು. ಅವರಿಗೆ ಕೆಲಸವೇ ಮುಖ್ಯ. ಆದುದರಿಂದ ಮಿತ ಆಹಾರ ಸೇವಿಸಿ ಎದ್ದೇಳುತ್ತಿದ್ದರು. ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಪ್ರಾಯಃ ಸಂಶೋಧಕನಿಗೆ ತುಂಬಾ ಅತ್ಯಗತ್ಯವಾಗಿದ್ದ ಗುಣಗಳಿವು. ತುಂಬಾ ಶಿಸ್ತಿನ ವ್ಯಕ್ತಿಯಾಗಿದ್ದ ಅವರು ತನ್ನ ವಿಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. 

ವಿಶೇಷವಾದ ಜ್ಞಾಪಕ ಶಕ್ತಿ ಹೊಂದಿದ್ದ ಅವರು ಹಳೆಗನ್ನಡ ಕಾವ್ಯಗಳನ್ನು ನೆನಪಿನಿಂದ ಹೇಳಬಲ್ಲವರಾಗಿದ್ದರು. ವಚನ, ಕಾವ್ಯ, ಶಾಸನದ ಯಾವುದೇ ಭಾಗವನ್ನು ಥಟ್ಟನೆ ನೆನಪಿಸಿಕೊಳ್ಳುವ ಅಗಾಧ ಶಕ್ತಿ -ಪಾಂಡಿತ್ಯ ಅವರಲ್ಲಿತ್ತು. ಶಬ್ದದ ಅರ್ಥಗಳ ಬಗ್ಗೆ ತೀವ್ರ ಚಿಂತನೆ ಅವರಲ್ಲಿತ್ತು, ಅದರ ಬಗ್ಗೆ ಗಂಭೀರ ವಾದ ಮಂಡಿಸುತ್ತಿದ್ದರು. ವಾದ ವಿವಾದದ ಸಂದರ್ಭ ಅವರ ಮಾತಿನಲ್ಲಿ ಕಿಡಿ ಇತ್ತು. ಅವರಲ್ಲಿ ಯಾವುದೇ ವಿಚಾರಗಳ ಬಗ್ಗೆ ಖಚಿತ ಅಭಿಪ್ರಾಯ ಇತ್ತು. ಸ್ನೇಹಸ್ವಭಾವದ ಕಲಬುರ್ಗಿ ತನ್ನ ಸಹವರ್ತಿಗಳೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದರೇ ಹೊರತು ಅದನ್ನು ವೈಯಕ್ತಿಕ ವಿಚಾರಗಳೊಂದಿಗೆ ಬೆರಕೆ ಮಾಡುತ್ತಿರಲ್ಲ. 

ಚರ್ಚೆ-ಸಂವಾದಗಳಿಲ್ಲದ ಕಾಲ ಇದು
ಯಾವುದೇ ವಿಚಾರಕ್ಕೆ ಸಂಬಂಧಿಸಿ ಕಲಬುರ್ಗಿಯವರು ತನ್ನದೇ ಆದ ದಾರಿಯಲ್ಲಿ ಸಂಶೋಧನೆ ಕೈಗೊಳ್ಳುತ್ತಿದ್ದರು. ಆ ಬಗ್ಗೆ ಅವರಿಗೆ ಅವರದೇ ಆದ ಅಭಿಪ್ರಾಯ ಇತ್ತು. ಅವರು ಮಾತನಾಡಿದ ವಿಚಾರಗಳ ಒಂದೆರಡು ಸಾಲುಗಳು ಮಾತ್ರ ಜನಪ್ರಿಯ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದುವು. ಅದು ಅವರ ಸಮಗ್ರ ನಿಲುವಾಗಿರಲಿಲ್ಲ. ಆದರೆ, ಆ ಅಭಿಪ್ರಾಯಗಳನ್ನು ತಿದ್ದಿಕೊಳ್ಳುವ ಅವಕಾಶಗಳು ಅವರಿಗೆ ಸಿಕ್ಕಿರಲಿಕ್ಕಿಲ್ಲ. ಇದೆಲ್ಲ ಅವರ ಸಂಶೋಧನೆಗೆ ಸಂಬಂಧಿಸಿದ್ದು. ವೀರಶೈವ ಧರ್ಮದ ಒಳಗಡೆ ಇದ್ದರೂ ಅವರು ವೀರಶೈವ ಧರ್ಮದ ಋಣಾತ್ಮಕ ಅಂಶಗಳನ್ನು ಎತ್ತಿ ತೋರಿಸಿದರು. ಅವರ ಅನೇಕ ಹೇಳಿಕೆಗಳು ವೀರಶೈವ ಸಂಪ್ರದಾಯವಾದಿಗಳ ಟೀಕೆಗೆ ಒಳಗಾಗಿವೆ.

ಧಾರ್ಮಿಕ ವಿಷಯಗಳು ಬಂದಾಗ ಸಂಶೋಧನಾ ಮನೋಧರ್ಮ ಇಲ್ಲದವರು, ಮೂಲಭೂತವಾದಿ ಮನೋಧರ್ಮ ಹೊಂದಿದವರು ಇಂಥದ್ದನ್ನೆಲ್ಲ ವಿಶ್ಲೇಷಿಸಿ ಸ್ವೀಕರಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಹಿಂದೆ ಅನೇಕ ಸಾಹಿತ್ಯ ಪತ್ರಿಕೆಗಳು ಇದ್ದುವು; ಅವುಗಳಲ್ಲಿ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಅವಕಾಶ ಇತ್ತು. ಅದಕ್ಕೆ ವಿರುದ್ಧವಾದ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದ್ದವು. ಇದೊಂದು ಆರೋಗ್ಯಕರ ಚರ್ಚೆ - ಸಂವಾದಕ್ಕೆ  ದಾರಿಯಾಗುತ್ತಿತ್ತು. ಆದರೆ, ಇಂದು ಅಂತಹ ಚರ್ಚೆ ನಡೆಯುತ್ತಿಲ್ಲ. ಕಲಬುರ್ಗಿಯವರ ಅಭಿಪ್ರಾಯಗಳ ಬಗ್ಗೆ ಹುಟ್ಟಿಕೊಂಡ ಅಸಹಿಷ್ಣು ನಿಲುವನ್ನು ಈ ನೆಲೆಯಲ್ಲಿ ನೋಡಬೇಕು.

ಎಷ್ಟೋ ಬಾರಿ ಸ್ಥಾಪಿತ ಸಂಗತಿಗಿಂತ ಭಿನ್ನ ಸಂಗತಿಗಳನ್ನು ಸಂಶೋಧನೆಯಲ್ಲಿ ಕಂಡುಕೊಂಡಾಗ ಇಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಶಂಬಾ ಜೋಷಿಯವರು ಅನೇಕ ಪುಸ್ತಕಗಳಲ್ಲಿ ಇಂತಹ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಆದರೆ, ಅಂಥವನ್ನು ಕೆಲವರಷ್ಟೇ ಓದುತ್ತಿದ್ದರು. ಆದುದರಿಂದ ಅವು ಹೆಚ್ಚು ವಿವಾದಕ್ಕೆ ಒಳಗಾಗುತ್ತಿರಲಿಲ್ಲ. ಆದರೆ, ಈಗ ಟಿ.ವಿ. ಹಾಗೂ ವೃತ್ತಪತ್ರಿಕೆಗಳು ಜನಪ್ರಿಯವಾಗಿದ್ದು, ಇಡೀ ಭಾಷಣದ ಬದಲು ಕೆಲವು ಮಾತುಗಳನ್ನು ಮಾತ್ರ ಪ್ರಸಾರ ಮಾಡುತ್ತವೆ. ಇಂತಹ ವಿಚಾರಗಳಿಗೆ ಸಂಬಂಧಿಸಿದ ಚರ್ಚೆ ಮಾಡುವ ವೇದಿಕೆ ಈಗ ನಮ್ಮಲ್ಲಿಲ್ಲ. ಕಲುಬುರ್ಗಿಯವರೇ, "ಸಂಶೋಧನೆ ಅಭಿವ್ಯಕ್ತಿಯ ಕ್ರಮ. ಕೆಲವರು ಅದನ್ನು ಒಪ್ಪಬಹುದು, ಕೆಲವರು ಒಪ್ಪದೇ ಇರಬಹುದು. ಸಂಶೋಧನೆ ಎನ್ನುವುದು ಅಲ್ಪವಿರಾಮವೇ ಹೊರತು ಪೂರ್ಣವಿರಾಮ ಅಲ್ಲ' ಎಂದು ಆಗಾಗ ಹೇಳುತ್ತಿದ್ದುದುಂಟು.

ಪ್ರೊ| ಬಿ.ಎ.ವಿವೇಕ ರೈ


Trending videos

Back to Top