CONNECT WITH US  

ಕೆಟ್ಟ ಸಾಲ ಎಂಬ ಬ್ಯಾಂಕಿಂಗ್‌ ಭೂತ

ಸಾರ್ವಜನಿಕ ರಂಗದ ದೊಡ್ಡ ದೊಡ್ಡ ಬ್ಯಾಂಕ್‌ಗಳಲ್ಲಿಯೇ ಕೆಟ್ಟ ಸಾಲಗಳ ಪ್ರಮಾಣ ಹೆಚ್ಚು. ಒಂದು ಅಂದಾಜಿನ ಪ್ರಕಾರ ಈಗಿನ ಅನುತ್ಪಾದಕ ಕೆಟ್ಟ ಸಾಲಗಳಲ್ಲದೆ, ಇತರ ಹಾಳಾಗುತ್ತಿರುವ ಒಟ್ಟು ಸಾಲ ಸೇರಿದರೆ ಇವುಗಳು ಈ ವರ್ಷದ ಮಧ್ಯದ ಹೊತ್ತಿಗೆ ಇಡೀ ಬ್ಯಾಂಕಿಂಗ್‌ನ ಒಟ್ಟು ಸಾಲದ ಶೇ.10.9 ತಲುಪುವ ನಿರೀಕ್ಷೆ ಇದೆ.

ಅನುತ್ಪಾದಕ ಆಸ್ತಿ ಅಥವಾ ಬ್ಯಾಂಕಿನವರು ಸಣ್ಣದಾಗಿ ಸಂಬೋಧಿಸುವ ಎನ್‌ಪಿಎ ಈಗ ಪೆಡಂಭೂತದಂತೆ ಬ್ಯಾಂಕುಗಳನ್ನು, ಅದರಲ್ಲೂ ಸಾರ್ವಜನಿಕ ಬ್ಯಾಂಕುಗಳನ್ನು ಪೀಡಿಸುತ್ತಿದೆ. ಪ್ರತಿ ತಿಂಗಳು ಎನ್‌ಪಿಎ ಮಟ್ಟ ಪ್ರತಿ ಶಾಖೆಗಳಲ್ಲಿ ಎಷ್ಟು ಇದೆ ಎಂದು ಪರಿಶೀಲಿಸುವ ಆಡಳಿತ ವರ್ಗ ಹಲವು ಶಾಖಾಧಿಕಾರಿಗಳ ನಿದ್ರೆ ಕೆಡಿಸುತ್ತಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಬ್ಯಾಂಕ್‌ಗಳಲ್ಲಿ ಕ್ವಾರ್ಟರ್‌ ಎಂಡ್‌, ಇಯರ್‌ ಎಂಡ್‌ ಬಂದಾಗಲಂತೂ ಎಲ್ಲರನ್ನು ನಿದ್ದೆಗೆಡಿಸುವ ಮಾತಿದು. ಸಾಲ ವಿತರಣೆ ವ್ಯವಸ್ಥೆಯಲ್ಲಿ ಯಾರೋ ಮಾಡಿದ ತಪ್ಪು ಅಥವಾ ವ್ಯವಸ್ಥೆಯಲ್ಲಿರುವ ಲೋಪದೋಷ ಹೀಗೆ ಕೆಳಹಂತದಿಂದ ಮೇಲಿನ ಹಂತದವರೆಗೆ ಇಡೀ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಅಲ್ಲಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳ ತಡವಾಗಿಯಾದರೂ ರಿಸರ್ವ್‌ ಬ್ಯಾಂಕ್‌, ವಿತ್ತ ಸಚಿವಾಲಯ ಚಿಂತಿಸುವ ಮಟ್ಟಕ್ಕೆ ಬಂದಿದೆ.

ಇಳಿದ ಲಾಭ, ಏರಿದ ಎನ್‌ಪಿಎ
ಕಳೆದ ಮಾರ್ಚ್‌ ಹೊತ್ತಿಗೆ 27 ಸಾರ್ವಜನಿಕ ರಂಗದ ಸರ್ಕಾರಿ ಬ್ಯಾಂಕ್‌ಗಳ ಅಭಿವೃದ್ಧಿ, ಹಣಕಾಸು ಸ್ಥಿತಿಯನ್ನು ಲೆಕ್ಕ ಹಾಕಿದಾಗ ಬೆಳಕಿಗೆ ಬಂದ ವಿಚಾರವೇನೆಂದರೆ, ಹೆಚ್ಚಿನ ಎಲ್ಲ ಬ್ಯಾಂಕ್‌ಗಳ ನಿವ್ವಳ ಲಾಭ ಕಡಿಮೆಯಾಗಿದೆ. 

ಯಾಕೆ ಹೀಗೆ ಸರ್ಕಾರಿ ಬ್ಯಾಂಕ್‌ಗಳು ತಲೆಕೆಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಬಹಳ ಸರಳ. ಇದಕ್ಕೆ ಕಾರಣ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಏರುತ್ತಿರುವ ಕೆಟ್ಟ ಸಾಲಗಳು ಮತ್ತು ಸಂಬಳ ಏರಿಕೆಯಂತಹ ಅಧಿಕ ಖರ್ಚಿನ ಬಾಬತ್ತುಗಳು. ಒದಗಿಸಿದ ಸಾಲ ಸರಿಯಾಗಿ ಮರುಪಾವತಿಯಾಗದೆ ಕೆಟ್ಟ ಸಾಲವಾದಾಗ, ಅದರ ಬಡ್ಡಿಯನ್ನು ಬ್ಯಾಂಕಿನ ನಿಯಮದಂತೆ ನೇರವಾಗಿ ಲಾಭ ಎಂಬುದಾಗಿ ಪರಿಗಣಿಸಲಾಗದು. ಕೆಟ್ಟ ಸಾಲಗಳು ಹೆಚ್ಚಾದಂತೆಲ್ಲ ಅದಕ್ಕೆ ಸಂಭವನೀಯ ಖರ್ಚನ್ನು ಪ್ರತ್ಯೇಕ ತೆಗೆದಿರಿಸಬೇಕಾಗುವುದರಿಂದ, ಇದು ಬ್ಯಾಂಕ್‌ಗಳ ಲಾಭವನ್ನು ಕುಗ್ಗಿಸುತ್ತದೆ. ಇದುವೇ ಇಂದು ಬ್ಯಾಂಕ್‌ಗಳು ಕಡಿಮೆ ಬಡ್ಡಿಯ ಠೇವಣಿಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುವುದಕ್ಕೆ ಕಾರಣ. 

ದೊಡ್ಡ ಬ್ಯಾಂಕುಗಳದ್ದೇ ಸಿಂಹಪಾಲು
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವರದಿಯಂತೆ, ದೇಶದ ಶೇ.36.9 ಸಾಲಗಳು ಆಪತ್ತಿನ ಕರೆಗಂಟೆ ಬಾರಿಸುತ್ತಿವೆ. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಅನುತ್ಪಾದಕ ಆಸ್ತಿ 2.5 ಲಕ್ಷ ಕೋಟಿಗಿಂತಲೂ ಮಿಗಿಲಾಗಿದೆಯಂತೆ. ಮುಂದಿನ ಹಣಕಾಸು ವರ್ಷಕ್ಕೆ ಇದು ಇನ್ನೂ ಏರಿಕೆ ಕಾಣಲಿದ್ದು, ಭಾರತೀಯ ಬ್ಯಾಂಕುಗಳ ಒಟ್ಟು ಅನುತ್ಪಾದಕ ಸಾಲಗಳು 60 ಸಾವಿರ ಕೋಟಿ ಏರಲಿದ್ದು, ಇದು ನಾಲ್ಕು ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ಇದೆ. ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಸ್ವತಃ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಪರಿಸ್ಥಿತಿಯಲ್ಲಿ, ಸಾರ್ವಜನಿಕ ರಂಗದ ದೊಡ್ಡ ದೊಡ್ಡ ಬ್ಯಾಂಕ್‌ಗಳಲ್ಲಿಯೇ ಕೆಟ್ಟ ಸಾಲಗಳ ಪ್ರಮಾಣ ಹೆಚ್ಚು. ಒಂದು ಅಂದಾಜಿನ ಪ್ರಕಾರ ಈಗಿನ ಅನುತ್ಪಾದಕ ಕೆಟ್ಟ ಸಾಲಗಳಲ್ಲದೆ, ಇತರ ಹಾಳಾಗುತ್ತಿರುವ ಒಟ್ಟು ಸಾಲ ಸೇರಿದರೆ ಇವುಗಳು ಈ ವರ್ಷದ ಮಧ್ಯದ ಹೊತ್ತಿಗೆ ಇಡೀ ಬ್ಯಾಂಕಿಂಗ್‌ನ ಒಟ್ಟು ಸಾಲದ ಶೇ.10.9 ತಲುಪುವ ನಿರೀಕ್ಷೆ ಇದೆ. ಅಂದರೆ 7.05 ಲಕ್ಷ ಕೋಟಿ ರೂ. ಭಾದಿತ ಸಾಲಗಳಾಗಲಿವೆ.

ಎನ್‌ಪಿಎ ಏರಿಕೆಗೆ ಕಾರಣಗಳು
ಸಾರ್ವಜನಿಕ ಬ್ಯಾಂಕ್‌ಗಳ ಕೆಟ್ಟ ಸಾಲ ಪ್ರಮಾಣದ ಎದುರು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಕೆಟ್ಟ ಸಾಲಗಳ ಏರಿಕೆ ಕಡಿಮೆ. ಹಾಲಿ ಪರಿಸ್ಥಿತಿ ಅವಲೋಕಿಸಿದರೆ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಎನ್‌ಪಿಎ ಸದ್ಯವೇ 1 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆ ಇದೆ. ಇದು ಸಾರ್ವಜನಿಕ ಬ್ಯಾಂಕ್‌ಗಳ ಕಾಲಂಶ ಎಂದು ನಿರೀಕ್ಷಿಸಲಾಗಿದೆ.

ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ ಹೀಗೆ ವರುಷದಿಂದ ವರುಷಕ್ಕೆ ಏರುತ್ತಾ ಹೋಗಲು ಬ್ಯಾಂಕಿನ ಒಳಗಿನ, ಹೊರಗಿನ ಕಾರಣಗಳು ಹಲವಾರು. 

1ಶಾಖಾ ಮಟ್ಟದಲ್ಲಿ ಸಾಲಿಗರನ್ನು ಆಯ್ಕೆ ಮಾಡುವಾಗ ಮಾಡುವ ತಪ್ಪುಗಳು, ಎಷ್ಟೋ ಶಾಖಾಧಿಕಾರಿಗಳು ತೆಗೆದುಕೊಳ್ಳುವ ತಪ್ಪು ನಿರ್ಣಯಗಳು.

2ಅನವಶ್ಯಕ ಆಂತರಿಕ ಒತ್ತಡಗಳು ಕೆಲವೊಮ್ಮೆ ಅನುಪಯುಕ್ತ ಸಾಲ ವಿತರಿಸಲು ಪ್ರಮುಖ ಕಾರಣ. ಇದಕ್ಕೆ ರಾಜಕೀಯ ಒತ್ತಡಗಳೂ ಸೇರುತ್ತವೆ.

3ಕಾರ್ಪೊರೇಟ್‌ ಸಾಲಗಳು ಇಂದು ಸಾರ್ವಜನಿಕ ಬ್ಯಾಂಕ್‌ಗಳ ನಿದ್ರೆಗೆಡಿಸಿವೆ. ಇದಕ್ಕೆ ಆಯಾ ಬ್ಯಾಂಕ್‌ಗಳ ಆಡಳಿತ ಮಟ್ಟದ ತಪ್ಪು ನಿರ್ಣಯಗಳು ಕಾರಣ.
 
4ಇತ್ತೀಚೆಗೆ ಸಾಲ ಮಾಡಿ ಮೋಸ ಮಾಡುವ ಪ್ರವೃತ್ತಿ ಹೆಚ್ಚಾಗು
ತ್ತಿದೆ. ಇದು ಗೃಹ ಸಾಲ, ವ್ಯಾಪಾರ ಸಾಲಗಳಲ್ಲಿ ಅಧಿಕ. ನಗರಗಳಲ್ಲಿ ವರದಿಯಾಗುವ ಕೆಟ್ಟ ಸಾಲಗಳಲ್ಲಿ ಇಂಥವೇ ಹೆಚ್ಚು. 

5ಇತ್ತೀಚೆಗೆ ಕಂಡುಬಂದಿರುವಂತೆ, ಕೃಷಿ, ಶಿಕ್ಷಣ ಮತ್ತು ಸ್ವ-ಉದ್ಯೋಗ ಸಾಲಗಳು ಏರಿಕೆ ಕಂಡಿವೆ. ಸಾಲಿಗರಿಗೆ ಸಾಲ ಮರುಪಾವತಿಯ ತಾಕತ್ತಿದ್ದರೂ ಸರ್ಕಾರಗಳು ಮನ್ನಾ ಮಾಡುತ್ತವೆ. ಕಠಿಣ ಕ್ರಮ ಕೈಗೊಂಡರೆ ಹಲವು ತೊಂದರೆಗಳು ಎದುರಾಗುತ್ತವೆ. ಇದು ಬ್ಯಾಂಕ್‌ಗಳ ಕೈಕಟ್ಟಿ ಹಾಕಿವೆ.

6ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾಜ ಅಭಿವೃದ್ಧಿ, ಸ್ವ-ಉದ್ಯೋಗ ಸಬ್ಸಿಡಿ, ಸಹಾಯಧನ ಇತ್ಯಾದಿಗಳನ್ನು ಬ್ಯಾಂಕುಗಳ ಮೇಲೆ ಹೇರುತ್ತವೆ. ಹೆಚ್ಚಿನ ಸಾಲಿಗರು ಈ ಯೋಜನೆಗಳ ನಿಜವಾದ ಪ್ರಯೋಜನಕ್ಕಾಗಿ ಸಾಲ ಮಾಡುತ್ತಿಲ್ಲ. ಪರಿಣಾಮವಾಗಿ ಸ್ವಲ್ಪವೇ ಕಾಲದಲ್ಲಿ ಇವು ಕೆಟ್ಟ ಸಾಲಗಳಾಗಿ ಪರಿವರ್ತನೆಯಾಗುತ್ತವೆ. 

7ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಸಮಸ್ಯೆ ಈಗಲೂ ಕಾಡು
ತ್ತಿದೆ. ಶಾಖಾ ಮಟ್ಟದಲ್ಲಿ ವ್ಯವಹಾರ 3-4 ಪಟ್ಟು ಹೆಚ್ಚಾಗಿದೆ. 

8ಎನ್‌ಪಿಎ ಸಾಲಗಳಲ್ಲಿ ಹತ್ತು ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಸಾಲಗಳು ಡೆಟ್‌ ರಿಕವರಿ ಟ್ರಿಬ್ಯೂನಲ್‌ ಮುಂದೆ ಹೋಗುತ್ತವೆ. ಹೆಚ್ಚಿನ ಕೆಟ್ಟ ಸಾಲಗಳು ಸುಸ್ತಿ ಸಾಲಗಳಾಗಿದ್ದು, ಕೆಲವು ಸಂದರ್ಭಗಳಲ್ಲಿ ಅಡವಿಟ್ಟ ಸೊತ್ತುಗಳು ಸರಿ ಇರುವುದಿಲ್ಲ, ಇಲ್ಲವೇ ತಗಾದೆಯಲ್ಲಿರುತ್ತವೆ. ಕೋರ್ಟ್‌ನಲ್ಲಿ ರಿಕವರಿ ಸರ್ಟಿಫಿಕೇಟ್‌ ಕೊಟ್ಟರೂ ಸರಿಯಾಗಿ ವಸೂಲಾತಿ ಆಗದ ಪ್ರಕರಣಗಳು ಹಲವಾರು. 

ಹಾಗೆಯೇ ನ್ಯಾಯಾಲಯಗಳಲ್ಲಿ ಕೇಸುಗಳ ಕತೆ. ವಕೀಲರು ಕೊಂಚ ಚುರುಕಾಗಿದ್ದರೆ, ಕೇಸುಗಳು ಬೇಗ ತೀರ್ಮಾನವಾಗಲು ಸಾಧ್ಯ. ವಕೀಲರಿಗೆ ಸರಿಯಾದ ಹಿಮ್ಮಾಹಿತಿ ನೀಡಲು ಹಲವು ಶಾಖಾಧಿಕಾರಿಗಳಿಗೆ ಗೊತ್ತಿಲ್ಲದಿರುವುದರಿಂದ ಹಲವು ಕೇಸುಗಳಲ್ಲಿ ತೀರ್ಪು ಬ್ಯಾಂಕ್‌ಗಳಿಗೆ ಉಲ್ಟಾ ಹೊಡೆದು ವಸೂಲಾತಿ ಕಷ್ಟದಾಯಕವಾಗಿವೆ. 

ಏನು ಮಾಡಬಹುದು?
ಬ್ಯಾಂಕ್‌ಗಳಲ್ಲಿ ಮೂರು ವರ್ಷಕ್ಕೊಮ್ಮೆ, ಇಂಡಿಯನ್‌ ಲಿಮಿಟೇಶನ್‌ ಆ್ಯಕ್ಟ್ ಪ್ರಕಾರ ಸಾಲದ ಶಿಲ್ಕು ಒಪ್ಪಿಗೆ ಪತ್ರ ತೆಗೆದುಕೊಳ್ಳುವ ನಿಯಮ ಇದೆ. ಇದು ಬ್ರಿಟಿಷರ ಕಾಲದ ಹಳೆಯ ಕಾನೂನು. ಇದಕ್ಕೆ ತಿದ್ದುಪಡಿ ತಂದರೆ, ಶಾಖಾ ಮಟ್ಟದಲ್ಲಿ ಸಾಲ ವಸೂಲಾತಿ ಚುರುಕುಗೊಂಡು ಕೋರ್ಟ್‌ ಪ್ರಕರಣಗಳು ಕಡಿಮೆಯಾಗಲು ಸಾಧ್ಯ. 

ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಎಲ್ಲೆಲ್ಲಿ ಕೆಟ್ಟ ಸಾಲಗಳು ಹೆಚ್ಚಿದೆಯೋಅಲ್ಲಿ ವಸೂಲಾತಿಗೆ ವಿಶೇಷ ಅಧಿಕಾರಿ ಅಥವಾ ನೋಡಲ್‌ ಆಫೀಸರ್‌ ನೇಮಿಸಿ, ಶಾಖಾಧಿಕಾರಿಗೆ ನೆರವಾಗುವಂತೆ ಮಾಡಬೇಕು. 

ಉದ್ದೇಶಪೂರ್ವಕ ಸಾಲ ಸುಸ್ತಿದಾರರಾಗಿರುವ ಸಾಲಿಗರ ವಿರುದ್ಧ ಕ್ರಿಮಿನಲ್‌ ಪ್ರಕರಣ ಹೂಡುವಂತೆ ಸರ್ಕಾರ ಕಾನೂನು ತಿದ್ದು ಪಡಿ ತರಬೇಕು.
 
ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಗುಟ್ಟಾಗಿ ನಡೆಯುವ ಬಹುಸಾಲ ಕ್ಕೆ ಕಡಿವಾಣ ಹಾಕಬೇಕು. ಎನ್‌ಪಿಎ ನಿಯಮದ ಪ್ರಕಾರ ಒಬ್ಬ ಅಥವಾ ಒಂದು ಸಂಸ್ಥೆಯ ಒಂದು ಸಾಲ ಕೆಟ್ಟ ಸಾಲವಾದರೆ ಅವರ ಎಲ್ಲ ಸಾಲಗಳು ಕೆಟ್ಟ ಸಾಲ ಎಂದಾಗುವುದರಿಂದ ಸಾರ್ವಜನಿಕ ಬ್ಯಾಂಕ್‌ಗಳು ಎಚ್ಚರಿಕೆ ವಹಿಸಬೇಕಾಗಿದೆ. ಕಾರ್ಪೊರೇಟ್‌ ಸಾಲಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು.
 
ಕೊನೆಯ ಮಾತು
ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಕೆಟ್ಟ ಸಾಲದ ಪರಿಸ್ಥಿತಿ ಹೇಗಾಗಿದೆ ಎಂದರೆ, ಒಂದು ಕಡೆ ಮಾರ್ಚ್‌ ವೇಳೆಗೆ ಸಾಲ ವಸೂಲಾತಿ ಮಟ್ಟ ದಿಢೀರನೆ ಏರುತ್ತದೆ. ಅದೇ ಹೊತ್ತಿಗೆ ಅಷ್ಟೇ ಹೊಸ ಎನ್‌ಪಿಎ ಸಾಲಗಳ ಸೇರ್ಪಡೆಯಾಗುತ್ತದೆ. ಇದೊಂದು ರೀತಿಯಲ್ಲಿ ಕೂಡಿಸು - ಕಳೆ ಪ್ರಕ್ರಿಯೆ. ಒಂದು ದೃಷ್ಟಿಯಲ್ಲಿ ಹೇಳುವುದಾದರೆ, ಭಾರತೀಯ ಪರಿಸ್ಥಿತಿಯಲ್ಲಿ ಅನುತ್ಪಾದಕ ಆಸ್ತಿ ಸಾಲಗಳ ನಿಷ್ಕರ್ಷೆಗೆ ಇರುವ ತೊಂಬತ್ತು ದಿನಗಳ ಗಡುವು ತುಂಬ ಕಡಿಮೆ. ನಮ್ಮ ದೇಶದ ಮಟ್ಟಿಗೆ ವಸೂಲಾಗದ ಸಾಲವೊಂದನ್ನು ಎನ್‌ಪಿಎ ಎಂದು ಪರಿಗಣಿಸಲು ಕಡಿಮೆ ಎಂದರೆ 6 ತಿಂಗಳ ಅವಧಿಯಾದರೂ ಅಗತ್ಯ. ಇದು ತಿದ್ದುಪಡಿಯಾದರೆ ಎನ್‌ಪಿಎಗಳ ಪ್ರಮಾಣ ಕಡಿಮೆಯಾಗಲು ಸಾಧ್ಯ.

ನಾಗ ಶಿರೂರು

Trending videos

Back to Top