CONNECT WITH US  

ರೈತರ ಆದಾಯ ಹೆಚ್ಚಿಸಲು "ದ್ವಿತೀಯ ಕೃಷಿ'

ಸಣ್ಣ ಹಿಡುವಳಿದಾರರು ತಮ್ಮ ಜಮೀನಿನಲ್ಲಿ ಎಂದಿಗೂ ಬರೀ ಪ್ರಾಥಮಿಕ ಕೃಷಿಯಿಂದಲೇ ಆದಾಯ ವೃದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ದ್ವಿತೀಯಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಇದನ್ನು ಒಪ್ಪಿಕೊಂಡು ಕೇಂದ್ರ ಯೋಜನಾ ಆಯೋಗ 1250 ಕೋಟಿ ರೂ.ಗಳ ನಿಧಿ ಸ್ಥಾಪಿಸಿದೆ. ಆದರೆ ಯಾವ ರಾಜ್ಯ ಸರಕಾರಗಳೂ ಈ ಹಣ ಬಳಸಿಕೊಂಡು ತಮ್ಮ ರಾಜ್ಯದ ಸಣ್ಣ ರೈತರ ನೆರವಿಗೆ ಧಾವಿಸುವ ಉತ್ಸಾಹ ತೋರಿಲ್ಲ. 

ಹಳ್ಳಿಗಳಲ್ಲಿ ಕೃಷಿಯಿಂದ ಸಿಗುವ ಆದಾಯ ಕಡಿಮೆಯಾದಷ್ಟೂ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ವಲಸೆಗೆ ಪರಿಹಾರವೇನು? 

ದ್ವಿತೀಯ ಕೃಷಿ.
ಕೆಲ ವರ್ಷಗಳಿಂದ "ದ್ವಿತೀಯ ಕೃಷಿ' ಎಂಬ ಚಿಂತನೆ ಚಾಲ್ತಿಯಲ್ಲಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆದಿದೆ. ಆದರೆ ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಹಾಗೂ ಕೃಷಿಕರ ಆದಾಯವನ್ನು ಕೃಷಿ ಸಂಬಂಧಿ ಅಥವಾ ಕೃಷಿಯೇತರ ಚಟುವಟಿಕೆಗಳ ಮೂಲಕ ಹೆಚ್ಚಿಸುವುದೇ ದ್ವಿತೀಯ ಕೃಷಿ. ಅದರಲ್ಲೂ, ಸಣ್ಣ ಹಿಡುವಳಿದಾರರ ಆದಾಯ ಹೆಚ್ಚಿಸುವುದಕ್ಕೆ ದ್ವಿತೀಯ ಕೃಷಿ ಚಟುವಟಿಕೆಗಳು ಒತ್ತು ನೀಡುತ್ತವೆ.

ಡಾ| ಸಂತು ಶಾಂತಾರಾಂ ಅವರು ದ್ವಿತೀಯ ಕೃಷಿ ಬಗ್ಗೆ ಸ್ಪಷ್ಟ ತಿಳಿವು ಹೊಂದಿರುವ ಸಂಪನ್ಮೂಲ ವ್ಯಕ್ತಿ. ಅವರ ಆಯ್ದ ಅನಿಸಿಕೆಗಳನ್ನು ಹಾಗೂ ಕೆಲ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಭಾರತದಲ್ಲಿ ಶೇ.70ರಷ್ಟು ಜನ ಕೃಷಿ ಅವಲಂಬಿಸಿದ್ದಾರೆ. ಅದರಲ್ಲಿ ಶೇ.90ರಷ್ಟು ಜನ ಸಣ್ಣ ಸಾಗುವಳಿದಾರರು, ಅಂದರೆ ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯಲ್ಲಿ ಕೃಷಿ ಮಾಡುವವರು. ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರ ಅಷ್ಟೊಂದು ಲಾಭದಾಯಕವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಡರೈತನ ಬವಣೆ ನೀಗಿಸಬೇಕಾದರೆ ಸಣ್ಣ ರೈತ ಬರೀ ಆಹಾರ ಬೆಳೆಗಳನ್ನು ಬೆಳೆಸುವುದಷ್ಟೇ ಅಲ್ಲದೆ ಅದರ ಜತೆಗೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಪಾದನೆ ಹೆಚ್ಚಿಸಿಕೊಳ್ಳಬೇಕಾಗಿದೆ. ಹಾಗಾಗಿ, ದ್ವಿತೀಯಕ ಕೃಷಿ ಚಟುವಟಿಕೆಗಳು ಪ್ರಾಮುಖ್ಯ ಪಡೆದುಕೊಳ್ಳುತ್ತವೆ.

ದ್ವಿತೀಯಕ ಕೃಷಿ ಬಗ್ಗೆ ವರದಿ ತಯಾರಿಸಲು ಕೇಂದ್ರ ಯೋಜನಾ ಆಯೋಗ ಒಂದು ಸಮಿತಿ ನೇಮಿಸಿತ್ತು. ಅದಕ್ಕೆ ಅಮೆರಿಕದ ಓಹೈವೋ ಕೃಷಿ ವಿವಿಯ ಪ್ರಾಧ್ಯಾಪಕ ದೇಶ್‌ಪಾಲ್‌ ವರ್ಮ ಎಂಬ ಪ್ರಸಿದ್ಧ ವಿಜ್ಞಾನಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ಪ್ರೊ| ವರ್ಮ ನೀಡಿರುವ 250 ಪುಟಗಳ ವರದಿಯ ಅನುಷ್ಠಾನಕ್ಕೆ 2008ರಿಂದ ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಆಸಕ್ತಿ ತೋರಿಸಿಲ್ಲ. 

ಪ್ರೊ| ವರ್ಮ ಸಮಿತಿಯ ವರದಿ
"ದ್ವಿತೀಯಕ ಕೃಷಿ ಚಟುವಟಿಕೆಗಳಿಂದ ಆಗಬಹುದಾದ ಲಾಭಗಳೆಂದರೆ ಅವು ಪ್ರಾಥಮಿಕ ಕೃಷಿಗೆ ಮೌಲ್ಯಾಧಾರಿತ ಬೆಲೆ ನೀಡುತ್ತವೆ. ಉದ್ಯೋಗಾವಕಾಶ ಹೆಚ್ಚಿಸುತ್ತವೆ. ಪರಿಸರ ಮಾಲಿನ್ಯ ತಡೆಗಟ್ಟಬಹುದು. ಪ್ರಾಥಮಿಕ ಕೃಷಿಯ ಉತ್ಪನ್ನಗಳನ್ನು ಬಳಸಿ ದೇಶದ ಕೃಷಿ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬಹುದು.
ಪ್ರಪಂಚದಾದ್ಯಂತ ದ್ವಿತೀಯಕ ಕೃಷಿ ಕ್ಷೇತ್ರದಿಂದ ತಯಾರಾದ ವಸ್ತುಗಳಿಗೆ ಅಪಾರ ಬೇಡಿಕೆಯಿದೆ. ಭಾರತ ಆ ಬೇಡಿಕೆಗಳನ್ನು ಪೂರೈಸಬಹುದು.'

ಪ್ರೊ| ವರ್ಮ ಸಮಿತಿಯ ವರದಿಯಲ್ಲಿ ಯಾವ ರೀತಿಯಲ್ಲಿ ಕೃಷಿಯನ್ನು ದ್ವಿತೀಯಕ ಕೃಷಿಗೆ ಅನುಗುಣವಾಗಿ ಮಾಡಬೇಕು, ಯಾವ ರೀತಿ ಸಮಗ್ರ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದು ಮತ್ತು ಈ ಚಟುವಟಿಕೆಗಳಿಗೆ ಬೇಕಾಗುವ ಹಣ ಕ್ರೋಡೀಕರಿಸುವುದು ಹೇಗೆ ಎಂಬುದನ್ನು ವಿವರವಾಗಿ ಹೇಳಲಾಗಿದೆ. 

ಸಣ್ಣ ಹಿಡುವಳಿದಾರರು ತಮ್ಮ ಜಮೀನಿನಲ್ಲಿ ಎಂದಿಗೂ ಬರೀ ಪ್ರಾಥಮಿಕ ಕೃಷಿಯಿಂದಲೇ ಆದಾಯ ವೃದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ದ್ವಿತೀಯಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಇದನ್ನು ಒಪ್ಪಿಕೊಂಡು ಕೇಂದ್ರ ಯೋಜನಾ ಆಯೋಗ ಸುಮಾರು 1250 ಕೋಟಿ ರೂ. ಮೊತ್ತದ "ಸರ್ಕಾರಿ ವೆಂಚರ್‌ ಕ್ಯಾಪಿಟಲ್‌' ನಿಧಿ ಸ್ಥಾಪಿಸಿದೆ. ರಾಜ್ಯ ಸರಕಾರಗಳು ಈ ನಿಧಿಯಿಂದ ಹಣ ಪಡೆದು ತಮ್ಮ ತಮ್ಮ ರಾಜ್ಯದ ಬಡ ರೈತರಿಗೆ ಸಹಾಯ ಮಾಡಬಹುದು. ಆದರೆ ಯಾವುದೇ ರಾಜ್ಯ ಸರ್ಕಾರಗಳು ಇನ್ನೂ ಕ್ರಮ ಕೈಗೊಂಡಿಲ್ಲ.

ದ್ವಿತೀಯಕ ಕೃಷಿಯನ್ನು ಆರಂಭಿಸಬೇಕಾದರೆ ಕೆಲವು ಹಳೆಯ, ಕೆಲವು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅದರ ಜತೆಗೆ ಹಳ್ಳಿಗಾಡಿನ ಮೂಲಭೂತ ಸಮಸ್ಯೆಗಳು, ವ್ಯಾಪಾರಕ್ಕೆ ಬೇಕಾದ ಜ್ಞಾನ ಸಹಾಯ ಮತ್ತು ಎಂದೋ ರೂಪಿಸಿದ ಹಳೆಯ ಕಾನೂನು ಕಟ್ಟಳೆಗಳನ್ನು ಬದಲಾಯಿಸಬೇಕು. ಇವೆಲ್ಲಕ್ಕೂ ರಾಜ್ಯ ಸರ್ಕಾರಗಳೇ ಜವಾಬ್ದಾರಿ ಹೊರಬೇಕು. 

ಕರ್ನಾಟಕದಲ್ಲಿ ಕೃಷಿ ನಗಣ್ಯ
ಕರ್ನಾಟಕದಲ್ಲಿ ಕೃಷಿ ವಲಯದ ಅಭಿವೃದ್ಧಿ ನಿಜಕ್ಕೂ ಶೂನ್ಯ ಎಂಬಂತಿದೆ. ಕೇವಲ ಕೃಷಿ ಬಜೆಟ್‌ ಮಂಡಿಸಿದರೆ ಕೃಷಿ ಕ್ಷೇತ್ರ ಅಭಿವೃದ್ಧಿಯಾಗುವುದಿಲ್ಲ. ಬರೀ ಆದಾಯ, ಖರ್ಚಿನ ಲೆಕ್ಕ ತೋರಿಸಿದರೆ ಅದು ಬಜೆಟ್‌ ಅನ್ನಿಸಿಕೊಳ್ಳುವುದಿಲ್ಲ. ಆದರೆ ಯಾರೂ ಇದನ್ನು ಪ್ರಶ್ನಿಸಿಲ್ಲ. ಕೃಷಿ ಬಜೆಟ್‌ನಿಂದ ಬಡ ರೈತನಿಗೆ ಯಾವ ಪ್ರಯೋಜನವೂ ಆಗಿಲ್ಲ. 

ಕೃಷಿ ಅಭಿವೃದ್ಧಿಗೆ ಬಂಡವಾಳ ಹೂಡುತ್ತಿದ್ದೇವೆ ಎಂದು ಸರ್ಕಾರಗಳು ಹೇಳುತ್ತವೆ. ಆದರೆ ಆ ಹೂಡಿಕೆಯ ಶೇ.80ರಷ್ಟು ಹಣವನ್ನು ರಸಗೊಬ್ಬರ, ನೀರಾವರಿ, ಪಂಪ್‌ಸೆಟ್‌ ಮುಂತಾದವುಗಳಿಗೆ ಸಹಾಯಧನವಾಗಿ ಕೊಡಲಾಗುತ್ತದೆ. ಕೇವಲ ಶೇ.20 ಮಾತ್ರ ನೇರವಾದ ಅಭಿವೃದ್ಧಿಗೆ ಹೂಡಿಕೆಯಾಗುತ್ತಿದೆ! ಇದು ಅವೈಜ್ಞಾನಿಕ. ಇದನ್ನು ತಿರುವುಮುರುವು ಮಾಡುವ ಅಗತ್ಯವಿದೆ. ರೈತರಲ್ಲಿ ಕೃಷಿಯ ಬಗ್ಗೆ ನಂಬಿಕೆ ಮೂಡಿಸಲು ಹೆಚ್ಚು ಪ್ರಮಾಣದ ಹೂಡಿಕೆ ಅನಿವಾರ್ಯ. ರೈತರ ಕೌಶಲ ಮತ್ತು ಚಾತುರ್ಯಗಳನ್ನು ಆಧರಿಸಿ ಹೂಡಿಕೆಯ ಫ‌ಲ ಅವರಿಗೆ ದೊರಕುವಂತೆ ಮಾಡಬೇಕು. 

ದ್ವಿತೀಯಕ ಕೃಷಿಯಿಂದ ಪ್ರಯೋಜನ ಪಡೆಯಲು ಮುಸುಕಿನ ಜೋಳ, ಸೋಯಾ ಅವರೆ, ಮೆಣಸಿನಕಾಯಿ, ಚೌಳಿಕಾಯಿ ಮುಂತಾದವುಗಳನ್ನು ವಿವಿಧೋದ್ದೇಶಗಳಿಗೆ ಬಳಸುವತ್ತ ಸಂಶೋಧನೆ ನಡೆಸಿ, ಮೌಲ್ಯವರ್ಧನೆಯ ಪ್ರಯೋಜನ ಪಡೆಯಲು ವಿಫ‌ುಲ ಅವಕಾಶಗಳಿವೆ. ಈ ಬಗ್ಗೆ ಸಂಶೋಧನೆ ನಡೆಯಬೇಕು. ಇಂತಹ ಅವಕಾಶಗಳು ತರಕಾರಿ ಬೆಳೆಗಳು, ಹೂವಿನ ಬೆಳೆಗಳು ಮತ್ತು ಮೇವಿನ ಬೆಳೆಗಳಲ್ಲಿ ಹೆಚ್ಚಿವೆ. ಸ್ಥಳ ಮೌಲ್ಯವರ್ಧನೆ (ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಒಯ್ದು ಮಾರಾಟ ಮಾಡುವುದು), ಸಮಯ ಮೌಲ್ಯವರ್ಧನೆ (ಒಂದು ಋತುವಿನಲ್ಲಿ ಬೆಳೆದುದನ್ನು ಕಾಯ್ದಿರಿಸಿ ಉತ್ತಮ ಬೆಲೆ ಸಿಕ್ಕಾಗ ಮಾರಾಟ ಮಾಡುವುದು) ಹೀಗೆ ಪ್ರಯೋಜನ ಪಡೆಯುವುದೂ ಒಂದು ಮಾರ್ಗ. ಇದಕ್ಕೆ ಸರ್ಕಾರ ಒಂದು ಸ್ವರೂಪ ನೀಡಿ ಮೂಲಸೌಕರ್ಯ ಹೆಚ್ಚಿಸಬೇಕು.

ಕುಗ್ಗುತ್ತಿರುವ ಕೃಷಿ ಭೂಮಿ
ದೇಶದ ಉದ್ದಕ್ಕೂ ಕೃಷಿಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ನೀಡಲಾಗುತ್ತಿದೆ. ಆದ್ದರಿಂದ ದಿನೇದಿನೇ ಕೃಷಿ ಭೂಮಿ ಕಣ್ಮರೆಯಾಗುತ್ತಿದೆ. ಕೃಷಿಯೇತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಬೇಡವೆಂದಲ್ಲ. ಆದರೆ ಅವುಗಳಿಗೆ ಕೃಷಿ ಭೂಮಿ ಬಳಸಿಕೊಳ್ಳಲು ಸ್ಪಷ್ಟ ಮಾನದಂಡ ಬೇಡವೇ? 

ಒಂದು ಉದಾಹರಣೆ ನೀಡುತ್ತೇನೆ. ಕಳೆದ ತಿಂಗಳು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಸಭೆಯಲ್ಲಿ ನಡೆದ ಸಂಗತಿಯಿದು. ವಿಶೇಷ ಆರ್ಥಿಕ ವಲಯದ ಬಗ್ಗೆ ಚರ್ಚೆ ನಡೆದ ಸಮಯದಲ್ಲಿ ನಾನು ಕೃಷಿ ಯೋಗ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ಮಾತ್ರ ಕೃಷಿಯೇತರ ಚಟುವಟಿಕೆಗಳಿಗೆ ಕೊಡಬೇಕು ಎಂದು ಸಲಹೆ ನೀಡಿದೆ. ಅಲ್ಲಿದ್ದ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರು "ಅದು ಸುಲಭದ ಕೆಲಸ; ಮಳೆಯ ಪ್ರಮಾಣವನ್ನು ನಿರ್ಧರಿಸಿ 600 ಎಂಎಂಗಿಂತ ಕಡಿಮೆ ಮಳೆ ಇದ್ದರೆ ಅದನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದು' ಎಂದು ಹೇಳಿದ್ದು ನನಗೆ ಅಚ್ಚರಿ ಉಂಟುಮಾಡಿತು. ಆಗ ನಾನು ಬಾಸ್ಮತಿ, ಈರನಗೆರೆ ಬದನೆ, ದೇವನಹಳ್ಳಿ ಚಕ್ಕೋತ, ಕಮಲಾಪುರ ಬಾಳೆ, ಉಡುಪಿ ಮಲ್ಲಿಗೆ, ಬ್ಯಾಡಗಿ ಮೆಣಸಿನಕಾಯಿ ಮುಂತಾದ ಬೆಳೆಗಳು ಕಡಿಮೆ ಮಳೆ ಬೀಳುವ ಪ್ರದೇಶದಲ್ಲೇ ಬೆಳೆಯುತ್ತಿದ್ದರೂ, ಇವುಗಳು ಮಹತ್ವದ ಬೆಳೆಗಳು. ಇತರೆ ಪ್ರದೇಶಗಳಲ್ಲಿ ಎಷ್ಟೇ ನೀರು ಕೊಟ್ಟು ಬೆಳೆಸಿದರೂ ಇವುಗಳಲ್ಲಿರುವ ವಿಶೇಷ ಗುಣಮಟ್ಟ ಪಡೆಯಲಾಗುವುದಿಲ್ಲ. ಇಸ್ರೇಲ್‌ನಲ್ಲಿ ಬೀಳುವ ಮಳೆಯ ಪ್ರಮಾಣ ಬಹಳ ಕಡಿಮೆ. ಆದರೆ ಅಲ್ಲಿನ ಬೆಳೆ, ಉತ್ಪನ್ನಗಳ ಗುಣ ಮತ್ತು ಇಳುವರಿಯ ಮಟ್ಟ ಬೇರೆಲ್ಲ ದೇಶಗಳಿಗಿಂತ ಹೆಚ್ಚಿದೆ. ಆದ್ದರಿಂದ ಮಳೆಯ ಆಧಾರದ ಮೇಲೆ ಕೃಷಿ ಭೂಮಿಯನ್ನು ಹಂಚುವುದು ಅವೈಜ್ಞಾನಿಕವೆಂದು ಬಿಡಿಸಿ ಹೇಳಬೇಕಾಯಿತು.

ನಮ್ಮ ದೇಶದಲ್ಲಿ ಸಮಿತಿಗಳನ್ನು ರಚಿಸುವುದು, ತೀರ್ಮಾನಗಳನ್ನು ತೆಗೆದುಕೊಳ್ಳುವ ವಿಧಾನ ಸರಿಯಿಲ್ಲ. ಯಾವುದೇ ಕ್ಷೇತ್ರದಲ್ಲಾಗಲಿ, ತಜ್ಞರ ಸಲಹೆ ಕೇವಲ ನೆಪಮಾತ್ರಕ್ಕೆ! ಇತರೆ ಹಿತಾಸಕ್ತಿಗಳೇ ನಿರ್ಧಾರಗಳನ್ನು ರೂಪಿಸುತ್ತವೆ. ಇದೀಗ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಕೈಗೊಂಡಿರುವ "ರೈತ ಮೊದಲು' ಮಾರ್ಗದರ್ಶಿ ಯೋಜನೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ಬಂದರೆ ಸಣ್ಣ ಮತ್ತು ಅತಿಸಣ್ಣ ಹಾಗೂ ಭೂಮಿ ಹೊಂದಿಲ್ಲದ ಕೃಷಿ ಕಾರ್ಮಿಕರಿಗೆ ನೇರವಾಗಿ ಅದರ ಲಾಭ ಸಿಗಲಿದೆ. ಅದೀಗ ಮೊಳಕೆಯ ಹಂತದಲ್ಲಿದೆ. ಬೇಗನೆ ಬೆಳೆದು ಫ‌ಲ ನೀಡಲಿ.

ಪ್ರೊ| ಎಂ. ಮಹದೇವಪ್ಪ
ಕೃಷಿ ವಿವಿ ವಿಶ್ರಾಂತ ಕುಲಪತಿ

Trending videos

Back to Top