CONNECT WITH US  

ನಾಗಿಣಿ... ನಾನು ಗಿಣಿ! ಬುಸ್‌ ಬುಸ್ಸೆನ್ನುವ ಸುಂದರಿ ದೀಪಿಕಾ

ಈಗ ಎಲ್ಲೆಡೆ "ನಾಗಿಣಿ'ಯದ್ದೇ ಮಾತು. ಝೀ ಕನ್ನಡದ ಈ ಜನಪ್ರಿಯ ಧಾರಾವಾಹಿಯ ಯಶಸ್ಸಿನ ಗುಟ್ಟೇ ಈ ಸುಂದರಿ. ಸಿಟ್ಟು, ದ್ವೇಷ, ಪ್ರೀತಿ, ಅಸಹನೆ ಎಲ್ಲಾ ಭಾವಗಳನ್ನೂ ಒಟ್ಟೊಟ್ಟಿಗೇ ಹೊರಹಾಕುವ "ನಾಗಿಣಿ' ಪಾತ್ರ ನಿರ್ವಹಿಸಿ ಸೈ ಎನ್ನಿಸಿಕೊಳ್ಳುತ್ತಿರುವ ನಟಿ "ದೀಪಿಕಾ ದಾಸ್‌'. "ಕೃಷ್ಣ ರುಕ್ಮಿಣಿ' ಧಾರಾವಾಹಿಯಿಂದ ನಟನಾ ಜೀವನ ಆರಂಭಿಸಿದ ದೀಪಿಕಾ "ದೂಧ್‌ ಸಾಗರ್‌', "ಕಲಿಯುಗ' ಮುಂತಾದ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾರಂಗದಿಂದ ವಿರಾಮ ಪಡೆದು ಕಿರುತೆರೆಯಲ್ಲಿ ನಾಗಿಣಿಯಾಗಿ ಮಿಂಚುತ್ತಿದ್ದಾರೆ.  

ನಿಜವಾಗಿಯೂ ನೀವು "ನಾಗಿಣಿ'ಯಂತೆಯೇ ಇರ್ತಿರಾ? 
ನಾನು ನಾಗಿಣಿ ಸ್ವಭಾವಕ್ಕೆ ಸಂಪೂರ್ಣ ವ್ಯತಿರಿಕ್ತ ಸ್ವಭಾವದವಳು. ನನಗೆ ಕೋಪ ಬರುವುದೇ ಇಲ್ಲ. ಆದರೆ ನನ್ನನ್ನು ಭೇಟಿಯಾಗುವವರೆಲ್ಲಾ ನೀವು "ನಾಗಿಣಿ' ರೀತಿಯೇ ದುರುಗುಟ್ಟಿಕೊಂಡು ನೋಡುತ್ತೀರಾ. ನಿಮ್ಮನ್ನು ಮಾತಾಡಿಸಲು ಭಯವಾಗುತ್ತದೆ ಎಂದೆಲ್ಲಾ ಹೇಳುತ್ತಾರೆ. ಜನರು "ನಾಗಿಣಿ' ಪಾತ್ರವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರುವುದರಿಂದ ಅವರಿಗೆ ನಾನು ನಕ್ಕರೂ ಕೋಪ ಮಾಡಿಕೊಂಡಂತೆ ಕಾಣಿಸುತ್ತದೆ ಎನಿಸುತ್ತದೆ. 

ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗಿನ ಅನುಭವ ಹೇಗಿತ್ತು?
ನಾನು ಶಾಲಾ ದಿನಗಳಿಂದಲೂ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿರುತ್ತಿದ್ದೆ. ಹಾಗಾಗಿ, ಅಷ್ಟೇನೂ ಕಷ್ಟವಾಗಿಲ್ಲ. ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನನ್ನದು ಮುಗ್ಧ ಹುಡುಗಿಯ ಪಾತ್ರ. ಯಾವಾಗಲೂ ಅಳುತ್ತಲೇ ಇರಬೇಕಿತ್ತು. ನಾನು ನಿಜದಲ್ಲಿ ಅಳುವುದೇ ಇಲ್ಲ. ನನಗೆ ಅಳುವೇ ಬರುವುದಿಲ್ಲ. ತುಂಬಾ ಕಷ್ಟ ಪಟ್ಟು , ಕಣ್ಣು ಮುಚ್ಚಿಕೊಂಡು ಆಳ್ತಾ ಇದ್ದೆ. 

ಹಾಗಾದರೆ, ಕಿರುತೆರೆಯಲ್ಲೇ ಬೇರೂರುವ ಇಂಗಿತ ಇರುವಂತಿದೆ?
ಬಹುಶಃ "ನಾಗಿಣಿ'ಯೇ ನನ್ನ ಕೊನೆಯ ಧಾರಾವಾಹಿ. ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತಿವೆ. ಧಾರಾವಾಹಿಗೆ ಹೆಚ್ಚಿನ ಸಮಯ ಮೀಸಲಿಡಬೇಕಿರುವುದರಿಂದ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಈ ಧಾರಾವಾಹಿ ಮುಗಿದ ಬಳಿಕ ಸಿನಿಮಾ ಕಡೆ ಮಾತ್ರ ಗಮನ ಹರಿಸುತ್ತೇನೆ. 

ಒಂದೇ ಎಪಿಸೋಡ್‌ನ‌ಲ್ಲಿ ಎಷ್ಟೊಂದು ಭಾವಗಳನ್ನು ವ್ಯಕ್ತಪಡಿಸುತ್ತೀರಿ. ಕಷ್ಟ ಆಗಲ್ವಾ?
ಒಂದು ಎಪಿಸೋಡ್‌ನ‌ಲ್ಲಿ ಅಲ್ಲ. ಒಂದೇ ಶಾಟ್‌ನಲ್ಲಿ ನನ್ನ ಅಭಿನಯ ಬದಲಾಗುತ್ತದೆ. ರೊಮ್ಯಾಂಟಿಕ್‌ ದೃಶ್ಯದ ಮರುಕ್ಷಣವೇ ಪಕ್ಕಕ್ಕೆ ತಿರುಗಿ ಮುಖದಲ್ಲಿ ದ್ವೇಷ ಭಾವನೆಯನ್ನು ವ್ಯಕ್ತಪಡಿಸಬೇಕು. ಅಭಿನಯದ ಮಟ್ಟಿಗೆ ಇದು ನನಗೆ ಸವಾಲು. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಖುಷಿ ಕೂಡ ಇದೆ. 

ಅಭಿಮಾನಿಗಳ ಪ್ರತಿಕ್ರಿಯೆ ಬಗ್ಗೆ ಹೇಳಿ...
ಒಂದೊಂದು ವಯೋಮಾನದವರು ಒಂದೊಂದು ಪಾತ್ರವನ್ನು ಇಷ್ಟಪಡುತ್ತಾರೆ. ಮಕ್ಕಳಿಗೆ ನಾನು ಹಾವಾಗುವ ದೃಶ್ಯ ಇಷ್ಟವಂತೆ. ಹಾಗೆ ನೋಡಿದರೆ, ನನ್ನ ಅಭಿಮಾನಿಗಳಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಕಾಲೇಜು ವಿದ್ಯಾರ್ಥಿಗಳು ಪ್ರೀತಿ, ರೊಮ್ಯಾನ್ಸ್‌ ದೃಶ್ಯಗಳನ್ನು ಇಷ್ಟಪಡುತ್ತಾರೆ. ವಯಸ್ಸಾದವರಂತೂ ಅರ್ಜುನ್‌ಗೆ ಯಾಕೆ ಕಾಟ ಕೊಡ್ತೀಯಾ ಅಂತ ಬೈದೇ ಬಿಡ್ತಾರೆ. ನಾಗಿಣಿಯಾಗಿ ನಾನು ದ್ವೇಷ ತೀರಿಸಿಕೊಳ್ಳುವುದನ್ನು ಎಷ್ಟು ಜನ ಇಷ್ಟ ಪಡ್ತಾರೋ, ದ್ವೇಷಿಸುವವರೂ ಅಷ್ಟೇ ಸಂಖ್ಯೆಯಲ್ಲಿದ್ದಾರೆ. 

ಶೂಟಿಂಗ್‌ ಇಲ್ಲದೇ ಇರುವಾಗ ನಿಮ್ಮ ದಿನಚರಿ ಹೇಗಿರುತ್ತೆ?
ನಿದ್ದೆ, ನಿದ್ದೆ ಮತ್ತು ನಿದ್ದೆ... ಹೆಚ್ಚಿನ ಸಮಯವನ್ನು ನಿದ್ದೆಯಲ್ಲೇ ಕಳೆಯುತ್ತೇನೆ. ಮನೆಯಲ್ಲಿದ್ದರೆ ನಾನು ಏಳುವುದು 12-1 ಗಂಟೆಗೆ. ನಿದ್ದೆ ಮಾಡಿ ಸಮಯ ಉಳಿದರೆ ಫ್ರೆಂಡ್ಸ್‌ ಜೊತೆ ಎಲ್ಲಿಯಾದರೂ ತಿರುಗಾಡಲು ಹೋಗುತ್ತೇನೆ. ಇಲ್ಲದಿದ್ದರೆ ಮನೆಯಲ್ಲಿ ಟೀವಿ ನೋಡುತ್ತೇನೆ. ಪ್ರವಾಸ ಹೋಗುವುದು ನನ್ನ ನೆಚ್ಚಿನ ಹವ್ಯಾಸ. ಪ್ರವಾಸಕ್ಕೆ ಹೋಗಲು ಜೊತೆಗೆ ಯಾರೂ ಬರದಿದ್ದರೆ ಒಬ್ಬಳೇ ಹೊರಟು ಬಿಡುತ್ತೇನೆ. ಅಯ್ಯೋ ಪಾಪ ಒಬ್ಬಳೇ ಹೋಗಿದ್ದಾಳಲ್ಲ ಅಂತ ಮನೆಯವರು ಅಥವಾ ಸ್ನೇಹಿತರು ಯಾರಾದರೂ ಬಂದು ನನ್ನನ್ನು ಸೇರಿಕೊಳ್ಳುತ್ತಾರೆ.

ಒಬ್ಬರೇ ಎಲ್ಲಿಗೆಲ್ಲಾ ಹೋಗಿದ್ದೀರಾ?
ಗೋವಾ, ಮಡಿಕೇರಿ ಇನ್ನೂ ಎಲ್ಲೆಲ್ಲಿಗೋ...

ಅಡುಗೆ ಮನೆ ಕಡೆ ಹೋಗೊ ಅಭ್ಯಾಸ ಇದೆಯಾ? ಯಾವೆಲ್ಲಾ ಅಡುಗೆ ಮಾಡ್ತೀರಾ?
ಅಪರೂಪಕ್ಕೊಮ್ಮೆ ಹೋಗ್ತಿನಿ. ಚಿಕನ್‌ ಬಿರಿಯಾನಿ, ವೆಜ್‌ ಪಲಾವ್‌ ತುಂಬಾ ಚಂದ ಮಾಡ್ತೀನಿ. 

ಹೋಟೆಲ್‌ ಅಡುಗೆ ಅಥವಾ ಮನೆ ಅಡುಗೆ. ನಿಮ್ಮ ಪ್ರಕಾರ ಬೆಸ್ಟ್‌ ಯಾವುದು?
ಮನೆ ಅಡುಗೆ. ನಾನು ಫ‌ುಡ್ಡೀ ಅಲ್ಲ. ಹಾಗಾಗಿ ಹೋಟೆಲ್‌ಗ‌ಳಿಗೆ ಹೋಗುವುದೂ ಕಡಿಮೆಯೇ. ಆದರೆ, ಮನೆಯಲ್ಲಿ ಅಮ್ಮಾ ಏನೇ ಮಾಡಿದರೂ ಖುಷಿಯಿಂದ ತಿನ್ನುತ್ತೇನೆ. ಅಮ್ಮ ಮಾಡುವ ಬಿಸಿಬೇಳೆ ಬಾತ್‌ ನನ್ನ ಫೇವರಿಟ್‌.

ನಿಮ್ಮ ಡಯೆಟ್‌ ಕತೆ ಹೇಳಿ...
ಮನೆಯಡುಗೆಯನ್ನೇ ತಿನ್ನುತ್ತೇನೆ. ಬೆಳಗ್ಗೆ ರಾಗಿ ಗಂಜಿಗೆ ಮಜ್ಜಿಗೆ ಹಾಕಿಕೊಂಡು ಕುಡಿಯುತ್ತೇನೆ. ಹೆಚ್ಚು ಮೊಳಕೆ ಕಾಳುಗಳನ್ನು ಸೇವಿಸುತ್ತೇನೆ. ಹಣ್ಣಿನ ರಸ ಕುಡಿಯುತ್ತಿರುತ್ತೇನೆ. ಶೂಟಿಂಗ್‌ಗೂ ಮನೆಯಿಂದಲೇ ಊಟ ತೆಗೆದುಕೊಂಡು ಹೋಗುತ್ತೇನೆ. ಫಿಟೆ°ಸ್‌ಗಾಗಿ ಕೆಲ ವಾರ್ಮ್ಅಪ್‌ ವ್ಯಾಯಾಮಗಳನ್ನು ಮಾಡುತ್ತೇನೆ. ಹಗ್ಗದಾಟ ಬಹಳ ಪರಿಣಾಮಕಾರಿ ವ್ಯಾಯಾಮ. ಜಿಮ್‌ಗೆ ಹೋದರೆ ಟ್ರೇಡ್‌ ಮಿಲ್‌ ಮೇಲೆ ಸ್ವಲ್ಪ ಸಮಯ ಓಡುತ್ತೇನೆ. ಆದರೆ ಒಂದು ನೆನಪಿನಲ್ಲಿಡಬೇಕು ಡಯಟ್‌ ಅಥವಾ ವ್ಯಾಯಾಮ ಯಾವುದೂ ಅತಿಯಾಗಬೇರದು. ನಮ್ಮ ದೇಹಕ್ಕೆ ಎಷ್ಟು ಬೇಕೊ ಅಷ್ಟಿದ್ದರೆ ಒಳ್ಳೆಯದು. 

ಕೆಲ ಹುಡುಗಿಯರು ವಾರಕ್ಕೊಮ್ಮೆ ಕ್ರೀಮ್‌, ಸೋಪ್‌ ಬದಲಿಸುತ್ತಿರುತ್ತಾರೆ. ಅಂಥವರಿಗೆ ಬ್ಯೂಟಿ ಟಿಪ್ಸ್‌ ಏನು ಕೊಡ್ತೀರಾ?
ಸೌಂದರ್ಯ ಒಳಗಿನಿಂದ ಬರಬೇಕು. ಹೆಚ್ಚು ನೀರು ಕುಡಿಯುವುದು. ಕಡಿಮೆ ಮಸಾಲೆಯುಕ್ತ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಣ್ತುಂಬಾ ನಿದ್ದೆ ಮಾಡಬೇಕು. ಯಾವುದಾರೂ ಒಂದು ಒಳ್ಳೆ ಕ್ರೀಂ, ಫೇಸ್‌ ವಾಶ್‌ ಬಳಸಬೇಕು. ಪದೇಪದೆ ಪಾರ್ಲರ್‌ಗಳಿಗೆ ಎಡತಾಕುವ ಬದಲು ಹಣ್ಣು ಗಳ ತಿರುಳಿನಿಂದ ಮುಖಕ್ಕೆ ಮಸಾಜ್‌ ಮಾಡಿಕೊಳ್ಳುವುದು ಒಳ್ಳೆಯದು. ಮುಖ ತುಂಬಾ ಎಣ್ಣೆ ಎಣ್ಣೆಯಾಗಿದ್ದರೆ ಕಡ್ಲೆà ಹಿಟ್ಟಿನಿಂದ ತೊಳೆಯುವುದನ್ನು ಮಾಡಿದರೆ ಸಹಜವಾಗಿಯೇ ಸುಂದರವಾಗಿ ಕಾಣಬಹುದು. 

ನೀವು ಮನೆಯಿಂದ ಹೊರಡುವಾಗ ನಿಮ್ಮ ಬ್ಯಾಗಿನಲ್ಲಿ ಯಾವೆಲ್ಲಾ ವಸ್ತುಗಳು ಇರುತ್ತವೆ?
ನನ್ನ ಬ್ಯಾಗು ಒಂಥರಾ ಕಸದ ಬುಟ್ಟಿ ಇದ್ದಂತೆ. ಕೈಗೆ ಸಿಕ್ಕಿದ್ದನ್ನೆಲ್ಲಾ ತುರುಕಿರುತ್ತೇನೆ. ಸಾಮಾನ್ಯವಾಗಿ ಶೇಡ್ಸ್‌, ಲಿಪ್‌ಸ್ಟಿಕ್‌, ಕಾಂಪ್ಯಾಕ್ಟ್ ಪೌಡರ್‌, ಚಾರ್ಜರ್‌, ಮೌತ್‌ ಫ್ರೆಷ°ರ್‌, ಇಯರ್‌ಫೋನ್‌ ಇರುತ್ತವೆ.

ಹೋದಲ್ಲಿ ಬಂದಲ್ಲೆಲ್ಲಾ ನಾಲಿಗೆ ತೋರ್ಸು ಅಂತಾರೆ!
ಜನ ಎಷ್ಟೊಂದು ಮುಗ್ಧರಿರುತ್ತಾರೆ ಎಂದರೆ ಹೊರಗಡೆ ಎಲ್ಲಾದರೂ ನನ್ನನ್ನು ನೋಡಿದರೆ, ದೇವರನ್ನು ಕಂಡಂತೆ ಆಡ್ತಾರೆ. ಇನ್ನೂ ಕೆಲವರು ಹಾವು ಕಂಡಂತೆ ಬೆಚ್ಚಿ ಬಿದ್ದು ನನ್ನನ್ನೇ ದಿಟ್ಟಿಸಿ ನೋಡ್ತಾರೆ. ಆದರೆ, ಹೋದಲ್ಲಿ ಬಂದಲ್ಲೆಲ್ಲಾ ಜನರು "ನಾಲಿಗೆ ತೋರಿಸಿ' ಎಂದು ಪೀಡಿಸುತ್ತಾರಲ್ಲಾ... ಆಗ ಕಿರಿಕಿರಿ ತುಸು ಕಿರಿಕಿರಿ ಆಗುತ್ತೆ. ಪಾಪ, ಕೆಲ ವಯಸ್ಸಾದವರು ನಾನೇ ಹಾವಿನ ನಾಲಿಗೆಯಂತೆ ಮಾಡುತ್ತೇನೆ ಅನ್ಕೊಂಡಿದ್ದಾರೆ. ಅಂಥವರು ಕೇಳಿದಾಗ ಬೇಜಾರಾಗುವುದಿಲ್ಲ. ಆದರೆ, ಎಷ್ಟೋ ಶಿಕ್ಷಿತರು ನನ್ನನ್ನು ಪೀಡಿಸಲೆಂದೇ "ಈಗ ಹಾವಿನ ರೀತಿ ನಾಲಿಗೆ ತೆರೆಯಿರಿ, ನೋಡೋಣ' ಎಂದು ಸವಾಲು ಹಾಕ್ತಾರೆ. ಆಗ ಸ್ವಲ್ಪ ಸಿಟ್ಟು ಬರುತ್ತೆ. 

"ನಾಗಿಣಿ'ಯಲ್ಲಿ ನಟಿಸಲು ಇಷ್ಟ ಇರ್ಲಿಲ್ಲ!
ಮೊದಲ ಧಾರಾವಾಹಿ "ಕೃಷ್ಣ ರುಕ್ಮಿಣಿ'ಯಲ್ಲಿ ನಟಿಸಿದ ಬಳಿಕ ನಾನು ಚಿತ್ರರಂಗದಲ್ಲಿ ಬ್ಯುಸಿ ಆದೆ. ಒಂದೆರಡು ತೆಲುಗು ಚಿತ್ರಗಳಲ್ಲೂ ನಟಿಸಿದೆ. ಸಿನಿಮಾದಿಂದ ಅವಕಾಶಗಳು ಬರುತ್ತಿರುವಂತೆಯೇ ಯಾರಾದರೂ ಧಾರಾವಾಹಿಯಲ್ಲಿ ನಟಿಸಲು ಒಪ್ಪುತ್ತಾರಾ? ಆದರೆ, "ನಾಗಿಣಿ' ತಂಡ ಬಿಡಲಿಲ್ಲ. ಆಡಿಷನ್‌ಗೆ ಬಂದುಹೋಗಿ ಎಂದು ದಂಬಾಲು ಬಿದ್ದರು. ನಾನೂ ಮನಸ್ಸಿಲ್ಲದ ಮನಸ್ಸಿನಿಂದಲೇ ಆಡಿಷನ್‌ ಕೊಟ್ಟು ಬಂದೆ. ಅದರಲ್ಲಿ ಆಯ್ಕೆಯೂ ಆದೆ. ಸಿನಿಮಾ ಶೂಟಿಂಗ್‌ ಇದ್ದಾಗ ಸಮಯ ನೀಡುವುದಾಗಿ ಧಾರಾವಾಹಿ ತಂಡ ನನಗೆ ಆಶ್ವಾಸನೆ ಕೊಟ್ಟಿತು. ಹೀಗಾಗಿ ಒಪ್ಪಿಕೊಂಡೆ.

ಕೆಟ್ಟ ಅನುಭವಗಳಾಗಿಲ್ಲ...
ತುಂಬಾ ಜನ ಕೇಳ್ತಾರೆ... ನಾಗಿಣಿ ಪಾತ್ರದಲ್ಲಿ ನಟಿಸಲು ಆರಂಭಿಸಿದ ಬಳಿಕ ಏನಾದರೂ ಕೆಟ್ಟ ಅನುಭವ ಆಗಿದೆಯೇ ಎಂದು? ಇನ್ನೂ ಕೆಲವರು "ನಾಗಿಣಿ ದ್ವೇಷ'ದ ಬಗ್ಗೆ ಏನೇನೋ ಹೇಳಿ ಹೆದರಿಸುತ್ತಾರೆ. ಆದರೆ, ನಿಜ ಹೇಳ್ತೀನಿ, ನನಗೆ ಈ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ಯಾವುದೇ ಕೆಟ್ಟ ಅನುಭವವೂ ಆಗಿಲ್ಲ, ಇನ್ನೂ ಹೇಳಬೇಕೆಂದರೆ ನನ್ನಲ್ಲಿ ಪಾಸಿಟಿವ್‌ ಶಕ್ತಿ ಬರುತ್ತಿದೆ. ಒಳ್ಳೆಯ ಅನುಭವಗಳೇ ಆಗುತ್ತಿವೆ. 'ನಾಗಿಣಿ' ನನಗೆ ಕೆಟ್ಟದ್ದನ್ನು ಮಾಡುತ್ತಿಲ್ಲ. 

ಅರ್ಜುನ್‌ನಂಥ ಹುಡುಗ ಇದ್ರೆ ಹೇಳ್ತೀರಾ!? 
ನಮ್ಮ ಧಾರಾವಾಹಿಯ ಅರ್ಜುನ್‌ ಪಾತ್ರದಂಥ ಹುಡುಗ ಏನಾದರೂ ನಿಜ ನೀವನದಲ್ಲಿ ಸಿಕ್ಕಿದರೆ ಖಂಡಿತಾ ಸತಾಯಿಸದೇ ಒಪ್ಪಿಕೊಳ್ಳುತ್ತಿದ್ದೆ. ಯಾವಾಗಲೂ ಹಿಂದೆ ಬಿದ್ದು ಸಾಯುವ ಹುಡುಗ ನನಗೆ ಬೇಕು. ಎಷ್ಟೇ ನೋವು ಕೊಟ್ಟರೂ ಅರ್ಜುನ್‌, ಅಮೃತಾಳ ಹಿಂದೆ ಬರುತ್ತಾನೆ. ಅವಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾನೆ. ತನ್ನ ಹುಡುಗಿಗಾಗಿ ಏನನ್ನಾದರೂ ಮಾಡಲು ತಯಾರಿರುತ್ತಾನೆ. ನೋಡೋದಕ್ಕೂ ಚೆಂದ ಇದ್ದಾನೆ.  ಪಾಪ, ಧಾರಾವಾಹಿಯಲ್ಲಿ ಆ ಪಾತ್ರಕ್ಕೆ ಕಾಟ ಕೊಡುವಾಗ ಮನಸ್ಸೆಲ್ಲಾ ಹಿಂಡಿದಂತೆ ಆಗುತ್ತದೆ. ಅಷ್ಟು ಪಾಪದ ಪಾತ್ರ ಅದು. ಆ ಥರದ್ದೇ ಹುಡುಗ ನನಗೆ ಬೇಕು.

ಈ ಧಾರಾವಾಹಿ ನನಗೆ ಸಾಕಷ್ಟು ಹೆಸರು, ಗುರುತು ಕೊಟ್ಟಿದೆ. ಮೊದಲು ನಾನು ಸಿನಿಮಾ ನಟಿ ಆಗಿದ್ದರೂ ಹೊರಗಡೆ ಪ್ರಪಂಚಕ್ಕೆ ನನ್ನ ಪರಿಚಯ ಅಷ್ಟಾಗಿ ಇರಲಿಲ್ಲ. ಈಗ ಎಲ್ಲೇ ಹೋದರೂ ಜನ ಗುರುತಿಸುತ್ತಾರೆ. ಅದರಲ್ಲೂ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಮಾತನಾಡಿಸುತ್ತಾರೆ.

ಚೇತನ ಜೆ.ಕೆ.


Trending videos

Back to Top