CONNECT WITH US  

ಕತ್ತಿನ ಕತ್ತಲು ಕಳೆಯೋದು ಹೀಗೆ ..

ಮುಖದ ಅಂದ, ಆರೈಕೆಗೆ ಕೊಡುವಷ್ಟು ಮಹತ್ವವನ್ನು ಕುತ್ತಿಗೆಗೆ ಕೊಡಲ್ಲ. ಸೌಂದರ್ಯ ತಜ್ಞರ ಪ್ರಕಾರ ಕತ್ತಿಗೂ ಸೌಂದರ್ಯ ಇದೆ. ಕುತ್ತಿಗೆಯ ಕಪ್ಪು ಬಣ್ಣವನ್ನು ನಿವಾರಣೆ ಮಾಡಿ ವ್ಯಕ್ತಿತ್ವವನ್ನು ಆಕರ್ಷಕಗೊಳಿಸಲು ಇಲ್ಲಿದೆ ಸುಲಭ ಸರಳ ವಿಧಾನಗಳು. 

- ಫ್ರುಟ್‌ ಮಾಸ್ಕ್ 
ಬಾಳೆಹಣ್ಣು , ಅವಾಕಾಡೊ, ಕಿತ್ತಳೆ, ಸೇಬು, ಪಪ್ಪಾಯ ಮೊದಲಾದ ಹಣ್ಣುಗಳು ಸಮೃದ್ಧ ಜೀವಸಣ್ತೀ, ಕಿಣ್ವಗಳಿಂದ ಕೂಡಿದೆ ಹಾಗೂ ನೈಸರ್ಗಿಕ ಬ್ಲೀಚಿಂಗ್‌ ಪರಿಣಾಮದಿಂದಾಗಿ ಈ ಹಣ್ಣುಗಳ ಮಾಸ್ಕ್ ಬಳಸಿದಾಗ ಕತ್ತಿನ ಕಪ್ಪು ವರ್ಣ ತಿಳಿಯಾಗಿ ಕಾಂತಿ ವರ್ಧಿಸುತ್ತದೆ. 

ಚೆನ್ನಾಗಿ ಹಣ್ಣಾದ ಒಂದು ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಒಂದೂವರೆ ಚಮಚ ಆಲಿವ್‌ತೈಲ ಬೆರೆಸಿ ಪೇಸ್ಟ್‌ ತಯಾರಿಸಬೇಕು. 

ಇದನ್ನು ಕುತ್ತಿಗೆಗೆ ಲೇಪಿಸಿ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. 20 ನಿಮಿಷದ ಬಳಿಕ ಬಿಸಿ ನೀರಿನಲ್ಲಿ ತೊಳೆಯಬೇಕು. 

- ಪಪ್ಪಾಯ ಮತ್ತು ಸ್ಟ್ರಾಬೆರಿ ಹಣ್ಣಿನ ಮಾಸ್ಕ್
ಪಪ್ಪಾಯದಲ್ಲಿ ಪೆಪೇಯ್ನ ಎಂಬ ಕಿಣ್ವವಿದ್ದು, ಇದು ಮೃತ ಜೀವಕೋಶಗಳ ನಿವಾರಣೆಗೆ ಸಹಕಾರಿ. ಸ್ಟ್ರಾಬೆರಿ ಹಣ್ಣಿನಲ್ಲಿ ಅಧಿಕ ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಚರ್ಮ ಪೋಷಣೆಗೆ ಉಪಯುಕ್ತ .

ಚೆನ್ನಾಗಿ ಹಣ್ಣಾಗಿರುವ ಪಪ್ಪಾಯದ ತಿರುಳನ್ನು 1 ಕಪ್‌ನಷ್ಟು ತೆಗೆದುಕೊಂಡು ಕಿವುಚಿ, ಅದಕ್ಕೆ ಚೆನ್ನಾಗಿ ಕಳಿತ ಸ್ಟ್ರಾಬೆರಿ ಹಣ್ಣುಗಳನ್ನು ಕಿವುಚಿ 6 ಚಮಚದಷ್ಟು ಬೆರೆಸಬೇಕು. ಎರಡನ್ನೂ ಚೆನ್ನಾಗಿ ಕಲಕಿ ಪೇಸ್ಟ್‌ ಮಾಡಿ, ಕುತ್ತಿಗೆಗೆ ಲೇಪಿಸಿ 15 ನಿಮಿಷದ ಬಳಿಕ ತೊಳೆಯಬೇಕು.

ಹಸಿ ಪಪ್ಪಾಯ ಜ್ಯೂಸ್‌ 
ಹಸಿ ಪಪ್ಪಾಯದ ತುಂಡನ್ನು ತುರಿಮಣೆಯಲ್ಲಿ ತುರಿದು ಈ ತುರಿಯನ್ನು ಬಟ್ಟೆಯಲ್ಲಿ ಹಿಂಡಿ ರಸವನ್ನು ತೆಗೆಯಬೇಕು. ಈ ರಸವನ್ನು ಕುತ್ತಿಗೆಗೆ ಲೇಪಿಸಿ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ನೀರಲ್ಲಿ ತೊಳೆಯಬೇಕು. ಇದರ ನಿತ್ಯ ಬಳಕೆಯಿಂದ  1-2 ತಿಂಗಳಲ್ಲಿ ಕಪ್ಪು ಕತ್ತನ್ನು ಬಿಳಿಯಾಗಿಸುತ್ತದೆ.

ಬೇಕಿಂಗ್‌ ಸೋಡಾ
ಇದು ಉತ್ತಮ ನೈಸರ್ಗಿಕ ಎಕ್ಸ್‌ಫೋಲಿಯಂಟ್‌ ಆಗಿದೆ. ಇದು ಕುತ್ತಿಗೆಯ ಚರ್ಮದ ಕಪ್ಪು ಬಣ್ಣವನ್ನು
ತಿಳಿಯಾಗಿಸಿ ಅಧಿಕ ಪಿಗ್‌ಮೆಂಟ್‌ನ ತೊಂದರೆಯನ್ನು ನಿವಾರಿಸುತ್ತದೆ.

ಬೇಕಿಂಗ್‌ ಸೋಡಾ 1/2 ಚಮಚದಷ್ಟು ತೆಗೆದುಕೊಂಡು ಸ್ವಲ್ಪ ನೀರು ಬೆರೆಸಿ ಕಲಕಬೇಕು. ಇದನ್ನು ಕತ್ತಿಗೆ ಲೇಪಿಸಿ 15-20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ಇದನ್ನು ನಿತ್ಯ ಲೇಪಿಸಿ ಕತ್ತು ಬಿಳಿಯಾದ ನಂತರ ವಾರಕ್ಕೊಮ್ಮೆ ಲೇಪಿಸಿದರೆ ಮತ್ತೆ ಕತ್ತಿನ ಚರ್ಮ ಕಪ್ಪಾಗುವುದಿಲ್ಲ.

ನೈಸರ್ಗಿಕ ತೈಲಗಳ ಬಳಕೆ
ನೈಸರ್ಗಿಕ ತೈಲಗಳು ಚರ್ಮಕ್ಕೆ ರಸಾಯನದಂತಿದ್ದು ಚರ್ಮ ಪೋಷಣೆಗೆ ಅತ್ಯುತ್ತಮ ಸಾಧನಗಳಾಗಿವೆ. ವಿವಿಧ ತೈಲಗಳ ಲೇಪ ಈ ಕೆಳಗೆ ಹೇಳಲಾಗಿದೆ.

ಮೊದಲು 3 ಚಮಚ ಬಾದಾಮಿ ಎಣ್ಣೆಯನ್ನು ಬಿಸಿ  ಮಾಡಬೇಕು. ವಿಟಮಿನ್‌ "ಈ' ಅಂಶವುಳ್ಳ ಎರಡು ಕ್ಯಾಪ್ಸೂಲ್‌ಗ‌ಳನ್ನು ಕತ್ತರಿಸಿ, ಅದರಲ್ಲಿರುವ ವಿಟಮಿನ್‌ ಈ ತೈಲವನ್ನು ಬಾದಾಮಿ ತೈಲದೊಂದಿಗೆ ಬೆರೆಸಬೇಕು. ಹತ್ತಿ ಉಂಡೆಯನ್ನು "ಈ' ತೈಲಗಳ ಮಿಶ್ರಣದಲ್ಲಿ ಅದ್ದಿ ಕುತ್ತಿಗೆಗೆ ಲೇಪಿಸಬೇಕು. 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ  ತೊಳೆದರೆ ಪರಿಣಾಮಕಾರಿ.

ಬಾದಾಮಿ ಎಣ್ಣೆ ಆಲಿವ್‌ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ
ಈ ಮೂರು ಎಣ್ಣೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಮಾಡಬೇಕು. ಇದನ್ನು ತುದಿಬೆರಳುಗಳಿಂದ ಕುತ್ತಿಗೆಗೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಬೇಕು. ರಾತ್ರಿ ಲೇಪಿಸಿ ಮರುದಿನ ಬೆಳಿಗ್ಗೆ ತೊಳೆಯಬೇಕು. ಇದನ್ನು ಈ ರೀತಿಯಲ್ಲಿ ನಿತ್ಯ ಲೇಪಿಸಿದರೆ ಶೀಘ್ರ ಕತ್ತು ಬಿಳಿಯಾಗಿ, ಸ್ನಿಗ್ಧವಾಗಿ ಹೊಳೆಯುತ್ತದೆ.

- ಡಾ. ಅನುರಾಧಾ ಕಾಮತ್‌

Tags: 

Trending videos

Back to Top