CONNECT WITH US  

ನೀರೆಗಿಂತ ಚೆಲುವ ಉಂಗುರಾ...!

ದೊಡ್ಡ ಆಕಾರದ ಬೋಹೋ ರಿಂಗ್ಸ್‌ ಈಗ ಹೆಚ್ಚಿನ ಕಾಲೇಜು ವಿದ್ಯಾರ್ಥಿನಿಯರ ಕೈಬೆರಳುಗಳಲ್ಲಿ ರಾರಾಜಿಸುತ್ತಿವೆ. ಉಂಗುರದ ಆಕೃತಿ ದೊಡ್ಡದಾಗಿರುವ ಕಾರಣದಿಂದ ಎಲ್ಲರೂ ಅದನ್ನು ಕುತೂಹಲ ಬೆರಗಿನಿಂದ ನೋಡುತ್ತಿದ್ದಾರೆ. ಪರಿಣಾಮ, ಬೊಹೋ ರಿಂಗುಗಳು ಕ್ಯಾಂಪಸ್‌ನಲ್ಲಿ ಟ್ರೆಂಡ್‌ ಸೆಟ್ಟರ್‌ ಆಗಿವೆ.

ಸ್ವತಂತ್ರ, ಮುಕ್ತ, ಸ್ವತ್ಛಂದ. ಇಂಥ ಆಲೋಚನೆಯ ವ್ಯಕ್ತಿಗಳ ಉಡುಗೆ ತೊಡುಗೆಯೂ ಫ್ರೀ ಸ್ಪಿರಿಟೆಡ್‌, ಅಂದರೆ ಮುಕ್ತ ಮನೋಭಾವವನ್ನು ಬಿಂಬಿಸುತ್ತದೆ. ಈ ರೀತಿಯ ಉಡುಗೆಗೆ ಪ್ರೇರಣೆ ಅಲೆಮಾರಿಗಳು. ಊರಿಂದ ಊರಿಗೆ, ದೇಶದಿಂದ ದೇಶಕ್ಕೆ ಅಲೆದಾಡುತ್ತಾ ಸಾಗುವ ಜನರು, ಬಂಜಾರಾಗಳು, ಹಿಪ್ಪಿಗಳು... ಹೀಗೆ ವಿಶ್ವದೆಲ್ಲೆಡೆ ಅಲೆದಾಡುವ ಅದೆಷ್ಟೋ ಜನ ಸಮುದಾಯದವರು ತಮ್ಮದೇ ಆದ ವಿಶಿಷ್ಟ ಶೈಲಿಯ ಉಡುಗೆ ತೊಡುತ್ತಾರೆ. ತಮ್ಮ ಆಲೋಚನೆಗಳನ್ನು ಪ್ರತಿಬಿಂಬಿಸುವ ಬಣ್ಣಗಳನ್ನು ತೊಡುತ್ತಾರೆ. ಇವುಗಳಿಂದಲೇ ಬೊಹೆಮಿಯನ್‌ ಶೈಲಿ ಪ್ರಸಿದ್ಧಿ ಪಡೆಯಿತು. 

ಇಲ್ಲಿ ತಿಳಿ ಬಣ್ಣದ ಜೊತೆ ಗಾಢ ಬಣ್ಣ ಹಾಕಬಾರದು, ಸಡಿಲ ಅಂಗಿ ಜೊತೆ ಬಿಗಿಯಾದ ಪ್ಯಾಂಟ್‌ ಅಥವಾ ಲಂಗ ತೊಡುವ ಹಾಗಿಲ್ಲ, ಎಂಬಂಥ ಯಾವುದೇ ನಿಯಮಗಳಿಲ್ಲ! ಯಾಕೆಂದರೆ ಅಲೆಮಾರಿಗಳ ಬದುಕಲ್ಲಿ ನಿಯಮಗಳೇ ಇಲ್ಲ. ಇದೀಗ ಫ್ಯಾಷನ್‌ ಲೋಕಕ್ಕೆ ಈ ಬೊಹೆಮಿಯನ್‌ ಶೈಲಿಯ ಹೊಸ ಕೊಡುಗೆ ಎಂದರೆ ಕೈ ಬೆರಳಿಗೆ ತೊಡುವ ಬೊಹೋ ರಿಂಗ್ಸ್ ಇದಕ್ಕೆ ನಿರ್ದಿಷ್ಟ ಆಕಾರ, ನಿರ್ದಿಷ್ಟ ಬಣ್ಣ ಇರಬೇಕೆಂದಿಲ್ಲ. ಬಗೆ ಬಗೆಯ ಕಲ್ಲುಗಳು, ಹಕ್ಕಿ ಪುಕ್ಕ- ಗರಿಗಳು, ಬಟ್ಟೆಯ ದಾರಗಳು, ಪ್ಲಾಸ್ಟಿಕ್‌, ಮರದ ತುಂಡು, ಗಾಜು, ಗೆಜ್ಜೆಗಳು, ಮಣಿಗಳು, ಲೋಹಗಳು ಮತ್ತು ಆಕೃತಿಗಳನ್ನು ಬಳಸಿ ವಿಚಿತ್ರ ಮತ್ತು ವಿಭಿನ್ನವಾದ ಉಂಗುರ ಮಾಡಲಾಗುತ್ತದೆ. ಇವು ಚಿಕ್ಕದಾಗಿರಬಹುದು ಅಥವಾ ಅಂಗೈಗೆ ಅನುಗುಣವಾಗಿ ತುಂಬಾ ದೊಡ್ಡದಾಗಿಯೂ ಇರಬಹುದು. ಹೇಗೆ ಇದ್ದರೂ ಇವು ಚೆನ್ನ! ಇಂಥ ಉಂಗುರಗಳು ಕುರ್ತಾ, ಸೆಮಿ ಫಾರ್ಮಲ್ಸ್‌, ಪಲಾಝೊà ಪ್ಯಾಂಟ್ಸ್‌, ಜಂಪ್‌ ಸೂಟ್ಸ್‌, ಸ್ಕರ್ಟ್‌ಗಳು, ಶಾರ್ಟ್ಸ್ ಮತ್ತು ಶರ್ಟ್‌ ಡ್ರೆಸ್‌ಗೆ ಒಪ್ಪುತ್ತವೆ.

ಸರ, ಬಳೆ, ಬ್ರೇಸ್ಲೆಟ…, ಕಿವಿಯೋಲೆ, ಕೈ ಗಡಿಯಾರ ಯಂಥ ಆಕ್ಸೆಸರೀಸ್‌ಗೆ ಹೋಲುವ ಉಂಗುರ ಅಂದರೆ ಚಿನ್ನ ಅಥವಾ ವಜ್ರದ ಉಂಗುರ. ಆದರೆ ಬೊಹೋ ರಿಂಗ್ಸ್ ತೊಟ್ಟರೆ, ಅದರಂತೆ ಯಾವುದೋ ಆಕೃತಿಯ ಬಳೆ, ಯಾವುದೇ ಬಣ್ಣದ ಸರ, ಇನ್ಯಾವುದೋ ವಿನ್ಯಾಸದ ಕಿವಿಯೋಲೆ, ಹೀಗೆ ಪ್ರಯೋಗಗಳು ಮಾಡಬಹುದು! 

ಅಂಗೈಯಷ್ಟೇ ದೊಡ್ಡ ಮುದ್ರೆಯ ಬೊಹೋ ರಿಂಗ್ಸ್ ಇದೀಗ ಬಹುತೇಕ ಎಲ್ಲ ಕಾಲೇಜು ವಿದ್ಯಾರ್ಥಿನಿಯರ ಕೈಬೆರಳುಗಳಲ್ಲಿ ರಾರಾಜಿಸುತ್ತಿವೆ. ಉಂಗುರದ ಆಕೃತಿ ದೊಡ್ಡದಾಗಿರುವ ಕಾರಣ ಎಲ್ಲರ ಕಣ್ಣು ಅತ್ತ ಹೋಗದೆ ಇರುತ್ತದೆಯೇ? ಕ್ಯಾಂಪಸ್‌ನಲ್ಲಿ ಟ್ರೆಂಡ್‌ ಸೆಟ್ಟರ್‌ ಆಗಲು ಬೊಹೋ ರಿಂಗ್ಸ್ ಉಪಕಾರಿ! ಮಾರುಕಟ್ಟೆಯಲ್ಲಿ ಹುಡುಕಲು ಹೊರಟರೆ ನಾವು, ನೀವು ಊಹಿಸಲೂ ಸಾಧ್ಯವಾಗದಷ್ಟು ಬಗೆಯ ವಿನ್ಯಾಸಗಳಿವೆ, ಬಣ್ಣಗಳಿವೆ, ಆಕೃತಿ, ಶೈಲಿ ಮತ್ತು ರೂಪಗಳಿವೆ ಈ ಬೊಹೋ ರಿಂಗ್‌ಗಳಿಗೆ! ಇವುಗಳು ಆನ್‌ಲೈನ್‌ನಲ್ಲಿ ಮಾತ್ರವಲ್ಲ, ರಸ್ತೆ ಬದಿಯಲ್ಲೂ ಲಭ್ಯವಿವೆ. ಹಾಗೆ ನೋಡುವುದಾದರೆ ರಸ್ತೆ ಬದಿಯÇÉೇ ಇವು ಹೆಚ್ಚು! ಗೋವಾ, ಲಡಾಖ್‌, ಪ್ರಯಾಗ್‌, ಗೋಕರ್ಣ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಇವು ಮಾರಾಟಕ್ಕಿವೆ. ಆನ್‌ಲೈನ್‌ಗಿಂಥ ಕಡಿಮೆ ಬೆಲೆಗೆ ಸಿಗುತ್ತವೆ. ಗುಣಮಟ್ಟದ ಗ್ಯಾರಂಟಿ ಇಲ್ಲದಿದ್ದರೂ ಕಣ್ಣಿಗೆ ಮುದ ನೀಡುವುದರಲ್ಲಿ ಇವಕ್ಕೆ ಸಾಟಿಯಿಲ್ಲ. 

-ಅದಿತಿಮಾನಸ ಟಿ. ಎಸ್‌.

Trending videos

Back to Top