CONNECT WITH US  

ರತ್ನ ಪ್ರಭೆ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅಂತರಂಗ

ದಿಟ್ಟ, ದಕ್ಷ, ಜನಪರ ಕಾಳಜಿಯ ಅಧಿಕಾರಿ ಎಂದೇ ಹೆಸರಾಗಿರುವವರು ಕೆ. ರತ್ನಪ್ರಭಾ. ಅವರು ಆಂಧ್ರ ಮೂಲದವರು ಎಂದರೆ, ಆ ಮಾತನ್ನು ಯಾರೂ ಒಪ್ಪುವುದಿಲ್ಲ. ಅಷ್ಟರಮಟ್ಟಿಗೆ ಅವರು "ಕನ್ನಡತಿ' ಆಗಿದ್ದಾರೆ. ಜಿಲ್ಲಾಧಿಕಾರಿಯಾಗಿ ಐದಾರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುವ ರತ್ನಪ್ರಭಾ, ಎಲ್ಲ ಜಿಲ್ಲೆಗಳಲ್ಲೂ "ಬೆಸ್ಟ್‌ ಆಫೀಸರ್‌' ಎಂಬ ಬಿರುದು, ಹೆಗ್ಗಳಿಕೆಗೆ ಪಾತ್ರರಾದರು. ಹುಟ್ಟಿದ ಮಗುವಿಗೆ "ರತ್ನಪ್ರಭಾ' ಎಂದು ಹೆಸರಿಟ್ಟು, ಈ ಮಗುವೂ ನಿಮ್ಮಂತೆಯೇ ಆಫೀಸರ್‌ ಆಗಲಿ ಎಂದು ಜನ ವಿನಂತಿಸುವಷ್ಟರ ಮಟ್ಟಿಗೆ ರತ್ನಪ್ರಭಾ ಜನಪ್ರಿಯರಾಗಿದ್ದಾರೆ. ಇಂಥಾ ವಿಶಿಷ್ಟ, ಆಪ್ತ ಹಿನ್ನೆಲೆಯ ಅವರಿಗೆ ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಒಲಿದು ಬಂದಿದೆ. 

ಒಬ್ಬ ಐಎಎಸ್‌ ಅಧಿಕಾರಿಗೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಸಿಗಬಹುದಾದ ಅತ್ಯುನ್ನತ ಹುದ್ದೆ ಮತ್ತು ಗೌರವವೆಂದರೆ ಅದು- ಮುಖ್ಯ ಕಾರ್ಯದರ್ಶಿ ಹುದ್ದೆಯೇ. ಶಾರ್ಟ್‌ ಆಗಿ ಸಿ.ಎಸ್‌. ಎಂದು ಕರೆಸಿಕೊಳ್ಳುವ ಈ ಹುದ್ದೆಗಿರುವ ಮಹತ್ವ ಬಹಳ ದೊಡ್ಡದು. ಮುಖ್ಯಮಂತ್ರಿಯ ನಂತರದ ಉನ್ನತ ಅಧಿಕಾರ ಇರುವುದು ಮುಖ್ಯ ಕಾರ್ಯದರ್ಶಿಗೇ. ಇವರು ಸಚಿವಾಲಯ ಮತ್ತು ಕಾರ್ಯಾಂಗದ ಮುಖ್ಯಸ್ಥರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೂ ಇವರೇ ಬಾಸ್‌. ರಾಜ್ಯ ಸರ್ಕಾರ ಕೈಗೊಳ್ಳುವ ಮಹತ್ವದ ತೀರ್ಮಾನಗಳಿಗೆಲ್ಲ ಸಾಕ್ಷಿಯಾಗುವವರೇ ಇವರು. ಅಷ್ಟೇ ಅಲ್ಲ, ಬೇರೆ ರಾಜ್ಯಗಳು ಅಥವಾ ಕೇಂದ್ರ ಸರ್ಕಾರದ ಜೊತೆ ಆಡಳಿತಕ್ಕೆ ಸಂಬಂಧಿಸಿದ ಪತ್ರ ವ್ಯವಹಾರ ಮತ್ತು ಆಡಳಿತಾತ್ಮಕ ತೀರ್ಮಾನವನ್ನೂ ಇವರೇ ಮಾಡಬೇಕು. ಕೇಂದ್ರ ಸರ್ಕಾರ, ಯಾವುದೇ ಮಹತ್ವದ ಸೂಚನೆ ನೀಡಿದರೂ, ಅವನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಕೂಡ ಮುಖ್ಯ ಕಾರ್ಯದರ್ಶಿಯದ್ದೇ ಆಗಿರುತ್ತದೆ. 

ಇಂಥದೊಂದು ಮಹತ್ವದ ಹುದ್ದೆಯಲ್ಲಿ ರತ್ನಪ್ರಭಾ ಅವರಿದ್ದಾರೆ. ಆ ಮೂಲಕ, ಸಂಸಾರವನ್ನು ಮುನ್ನಡೆಸುವ ಹೆಣ್ಣು, ಸರ್ಕಾರವನ್ನೂ ಮುನ್ನಡೆಸಬಲ್ಲಳು ಎಂಬ ಮಾತಿಗೆ ಸಾಕ್ಷಿ ಒದಗಿಸಿದ್ದಾರೆ. ತಮ್ಮ ಬಾಲ್ಯ, ಬದುಕು, ಆಸೆ, ಆಶಯಗಳ ಕುರಿತು ಅವರು ಹೇಳಿದ ಮಾತುಗಳನ್ನು "ಉದಯವಾಣಿ' ಸಂಭ್ರಮದಿಂದ ಪ್ರಕಟಿಸುತ್ತಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನ ಲಂಕರಿಸಿದ್ದೀರಿ. ಇರುವ ಕಡಿಮೆ ಅವಧಿಯಲ್ಲಿ ಏನೇನೆಲ್ಲಾ ಯೋಜನೆಗಳಿವೆ?
ಜನರ ಕುಂದುಕೊರತೆಗಳನ್ನು ಬಗೆಹರಿಸೋದು ನನ್ನ ಪ್ರಥಮ ಆದ್ಯತೆ. ದಿನದಲ್ಲಿ ಒಂದೆರಡು ಗಂಟೆಯಾದ್ರೂ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಅಂತ ನಿರ್ಧರಿಸಿದ್ದೇನೆ. ಲಿಖೀತವಾಗಿ, ಟ್ವಿಟ್ಟರ್‌ನಲ್ಲಿ, ನೇರವಾಗಿ ಸಾಕಷ್ಟು ಜನ ಸಮಸ್ಯೆ ಹೇಳಿಕೊಂಡಿದ್ದಾರೆ. ಮುಖ್ಯಕಾರ್ಯದರ್ಶಿಯಾಗಿ ಆದಷ್ಟು ಜನರಿಗೆ ಸಹಾಯ ಮಾಡಬೇಕು. ಅಷ್ಟೇ ಅಲ್ಲದೆ, ಸರ್ಕಾರದ ಹಲವಾರು ಯೋಜನೆಗಳ ಆಗುಹೋಗುಗಳನ್ನು ಗಮನಿಸಬೇಕಿದೆ. ಈಗಾಗಲೇ ಇಲಾಖಾವಾರು ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದೇನೆ. ಮುಂದಿನದ್ದನ್ನು ಸಭೆಯ ನಂತರ ನಿರ್ಧರಿಸುತ್ತೇವೆ. ಮಹಿಳೆಯರ ಅಭಿವೃದ್ಧಿ, ಹೈದರಾಬಾದ್‌ ಕರ್ನಾಟಕಕ್ಕೆ ಜಾಸ್ತಿ ಒತ್ತು ಕೊಡುವುದು ಹೀಗೆ ಸಾಕಷ್ಟು ಯೋಚನೆಗಳಿವೆ. 

ಹಿಂದಿನ ಯಾವ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಯಾಗೋಕೂ ಇಷ್ಟೊಂದು ಜನ ಬಂದಿರಲಿಲ್ಲವಂತೆ. ಅಷ್ಟೊಂದು ಜನ ವಿಧಾನಸೌಧಕ್ಕೆ ಬರ್ತಿದಾರೆ. ಹೇಗನ್ನಿಸ್ತಿದೆ?
ನೋಡಿ, ಇವತ್ತು ರಜೆ ಇದೆ, ಆದರೂ ಜನ ಬರ್ತಾ ಇದ್ದಾರೆ. ನಾನು ಕೆಲಸ ಮಾಡಿದ ಬೀದರ್‌, ರಾಯಚೂರು, ಗುಲ್ಬರ್ಗಾ ಭಾಗದವರಷ್ಟೇ ಅಲ್ಲ, ಕೋಲಾರ, ಚಿತ್ರದುರ್ಗ, ಮೈಸೂರು, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು... ಹೀಗೆ ಎಲ್ಲೆಲ್ಲಿಂದಲೋ ಜನರು ಭೇಟಿಯಾಗೋಕೆ ಬಂದಿದ್ದಾರೆ. ನಂಗೆ ತುಂಬಾ ಆಶ್ಚರ್ಯ, ಖುಷಿ ಆಗ್ತಿದೆ. ಮೊದಲೆರಡು ದಿನ ಬರೀ ಅಭಿನಂದನೆ ಹೇಳ್ಳೋಕಂತಾನೇ ಬಂದಿದ್ದಾರೆ. ಇನ್ನು ಕೆಲವರು ಸಮಸ್ಯೆ ಹೇಳಿಕೊಳ್ಳೋಕೆ ಬಂದಿದ್ದರು. ಇದು ನನ್ನ ಜವಾಬ್ದಾರಿಯನ್ನು ಇನ್ನಷ್ಟು, ಮತ್ತಷ್ಟು ಹೆಚ್ಚಿಸಿದೆ. ಇಷ್ಟೊಂದು ಜನ ಬಂದಿದ್ದು, ಇದೇ ಮೊದಲು ಅಂತ ಇಲ್ಲಿನ ಸಿಬ್ಬಂದಿಯೂ ಹೇಳುತ್ತಿದ್ದರು. ದಿನಾ ಒಂದೆರಡು ಗಂಟೆ ಲೇಟಾಗಿ ಮನೆಗೆ ಹೋದ್ರೂ ಪರವಾಗಿಲ್ಲ, ಜನರ ಸಮಸ್ಯೆ ಕೇಳಬೇಕು ಅಂತ ಅಂದುಕೊಂಡಿದ್ದೇನೆ. ಇವತ್ತು ರಜೆ ಅಂತ ಗೊತ್ತಿಲ್ಲದೆಯೇ ಜನ ಬಂದು, ಹೊರಗೆ ಕಾಯ್ತಿದ್ದಾರೆ. 

ವೃತ್ತಿ ಜೀವನದ ಸಾರ್ಥಕ ಘಟನೆಗಳ ಬಗ್ಗೆ ಹೇಳಿ...
ಜನ ಬಂದು ಹೇಳ್ತಾ ಇರ್ತಾರೆ: "ಮೇಡಂ, ನೀವು ಅದು ಮಾಡಿದ್ರಿ, ನಮಗೆ ಹೀಗೆ ಸಹಾಯ ಮಾಡಿದ್ರಿ' ಅಂತ. ನಂಗೆ ಆ ಘಟನೆಗಳೆಲ್ಲ ನೆನಪಿನಲ್ಲಿ ಉಳಿದಿರೋಲ್ಲ. ಇತ್ತೀಚೆಗೆ ಹುಲಿಯಪ್ಪ ಎಂಬಾತ ಹುಮನಾಬಾದಿನಿಂದ ಬಂದಿದ್ದ. ನಾನು ಅಸಿಸ್ಟೆಂಟ್‌ ಕಮಿಷನರ್‌ ಆಗಿದ್ದಾಗ ಆತನಿಗೆ 14-15 ವರ್ಷವಂತೆ. ಅವರ ತಾಯಿಯ ಹೆಬ್ಬೆಟ್ಟು ಒತ್ತಿಸಿಕೊಂಡು ಯಾರೋ ಸಾಹುಕಾರ ಅವರ ಭೂಮಿಯನ್ನು ಕಿತ್ತುಕೊಂಡಿದ್ದನಂತೆ. ನಾನು ಅವರ ಹಳ್ಳಿಗೇ ಹೋಗಿ, ಪಂಚನಾಮೆ ಮಾಡಿಸಿ ಅವರ ತಾಯಿಯ ಪರವಾಗಿ ನಿಂತು, ಭೂಮಿ ವಾಪಸ್‌ ಕೊಡಿಸಿದ್ದೆ ಅಂತ ಹೇಳಿದ. ಇನ್ನು ಇಬ್ಬರು ಹುಡುಗರು ಬಂದಿದ್ದರು. ನಾನು ಬೀದರ್‌ ಜಿಲ್ಲೆಯಲ್ಲಿ ಎ.ಸಿ ಆಗಿದ್ದಾಗೊಮ್ಮೆ ಪ್ರವಾಹ ಬಂದಿತ್ತು. ನಾನಾಗ ಇಡೀ ಊರಿಗೆ ಊರನ್ನೇ ಸ್ಥಳಾಂತರ ಮಾಡಿಸಿದ್ದೆ. ಅದು ಅಸ್ಪಷ್ಟವಾಗಿ ನೆನಪಿನಲ್ಲಿದೆ. ಹಾಗೆ ಸ್ಥಳಾಂತರ ಮಾಡಿಸಲು ಜಾಗ ಕೊಟ್ಟವರು ಈ ಹುಡುಗರ ತಂದೆಯಂತೆ. ತಕ್ಷಣ ಅವರಿಗೆ ಬೇರೆಡೆ ಭೂಮಿಯನ್ನೂ ಕೊಡಿಸಿದ್ದೆ ಅಂತಾನೂ ಹೇಳಿದರು. ಆಗ ಎ.ಸಿಗಳಿಗೆ ಆ ಅಧಿಕಾರ ಇತ್ತು. ಹೆಲಿಕಾಪ್ಟರ್‌ ಮೂಲಕ ಪ್ರವಾಹಪೀಡಿತರ ನೆರವಿಗೆ ಬಂದಿದ್ದೆ ಅಂತ ಅವರ ತಂದೆ ಹೇಳಿದ್ದನ್ನು ನೆನಪಿಸಿಕೊಂಡು, ಕೃತಜ್ಞತೆ ಸಲ್ಲಿಸೋಕೆ ಬಂದಿದ್ದರು. 

ಇನ್ನೂ ಒಬ್ಬರು ಬಂದಿದ್ದರು. ಅವರ ಮಾವ ಟೀಚರ್‌
ಆಗಿದ್ದವ ರಂತೆ. ಅವರ ಮನೆಯಲ್ಲಿ ಬಾಡಿಗೆಗೆ ಇದ್ದವರು, ಮೋಸದಿಂದ ಮನೆಯನ್ನು ಅವರ ಹೆಸರಿಗೆ ಮಾಡಿಕೊಂಡು 
ಕೋರ್ಟ್‌ನಿಂದ ಆರ್ಡರ್‌ ತಂದಿದ್ದರಂತೆ. ನಾನು ಪೊಲೀಸ್‌ ಜೊತೆ ಹೋಗಿ ಬಾಡಿಗೆಯವರಿಂದ ಮನೆ ಬಿಡಿಸಿಕೊಟ್ಟಿದ್ದೆನಂತೆ. ಈಗ ಅವರು ಆ ಮಾವನ ಮಗಳನ್ನು ಮದುವೆಯಾಗಿ, ಅದೇ ಮನೆಯಲ್ಲಿದ್ದಾರಂತೆ. ಹಾಗೇ ನನ್ನನ್ನೊಮ್ಮೆ ಭೇಟಿ ಮಾಡೋಣಾಂತ ಬಂದಿದ್ರು. 

ಐಎಎಸ್‌ ಅಧಿಕಾರಿ ಆಗೋಕೆ ಸ್ಫೂರ್ತಿ ಯಾರು?
ನಮ್ಮ ತಂದೆ ಕೂಡ ಐಎಎಸ್‌ ಆಫೀಸರ್‌ ಆಗಿದ್ದವರು. ಅವರು ಮೂರು ಜಿಲ್ಲೆಗಳಲ್ಲಿ ಡಿ.ಸಿ. ಆಗಿದ್ದರು. ಅಪ್ಪ ಪ್ರತಿದಿನ ಬೆಳಗ್ಗೆ ಜನರನ್ನು ಭೇಟಿ ಆಗೋಕೆ ಅಂತಾನೇ ಸಮಯ ಮೀಸಲಿಡುತ್ತಿದ್ದರು. ಅದನ್ನು ನೋಡುತ್ತಲೇ ಬೆಳೆದವಳು ನಾನು. ಅವರಿಗೂ, ನಾನು ಅಧಿಕಾರಿ ಆಗಬೇಕು ಅನ್ನೋ ಆಸೆಯಿತ್ತು. ಜನಸೇವೆ ಮಾಡೋಕೆ ಸಿಗೋ ಅವಕಾಶ ಇದೊಂದೇ ಅನ್ನುತ್ತಿದ್ದರು. 

ಒಂದು ವೇಳೆ ಐಎಎಸ್‌ ಅಧಿಕಾರಿ ಆಗಿರದಿದ್ದರೆ...
ಡಾಕ್ಟರ್‌ ಆಗಿರುತ್ತಿದ್ದೆ ಅನ್ನಿಸುತ್ತೆ. ನಮ್ಮ ಅಮ್ಮ ಡಾಕ್ಟರ್‌ ಆಗಿದ್ದರು. ಒಂದರ್ಥದಲ್ಲಿ ಅಪ್ಪ- ಅಮ್ಮನ ಯೋಚನೆಯೂ ಅದೇ ಆಗಿತ್ತು. ಈಗಿನ ಕಾಲದವರಂತೆ ನಾವೆಲ್ಲಾ ತುಂಬಾ ದೊಡ್ಡ ದೊಡ್ಡ ಕನಸುಗಳನ್ನೆಲ್ಲ ಕಾಣುತ್ತಿರಲಿಲ್ಲ. ಈಗಿನವರು ಹಾಗಲ್ಲ, ಅವರಿಗೆ ಏನು ಬೇಕು ಎಂಬುದರ ಬಗ್ಗೆ ಅವರಿಗೆ ಕ್ಲಿಯರ್‌ ಆದ ಐಡಿಯಾ ಇದೆ. ಅದು ತುಂಬಾ ಒಳ್ಳೆಯದು.  

ನೀವು ಡಾಕ್ಟರ್‌ ಆಗಿಯೂ ಸೇವೆ ಮಾಡಬಹುದಿತ್ತಲ್ಲ?
ಹೌದು. ಆದರೆ ನನಗೆ ಸೈನ್ಸ್‌ ಅಂದ್ರೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಚೆನ್ನಾಗಿ ಮಾರ್ಕ್ಸ್ ಬರಿ¤ತ್ತು. ಆದರೆ ವಿಜ್ಞಾನ ನನ್ನ ಆಸಕ್ತಿಯ ವಿಷಯ ಆಗಿರಲಿಲ್ಲ.

ವೃತ್ತಿ ಜೀವನದ ಅತ್ಯಂತ ಕಷ್ಟದ ಘಟನೆ ನೆನಪಿದ್ಯಾ?
ಎಂಥ ಕಠಿಣ ಸಂದರ್ಭವಾದರೂ ತಾಳ್ಮೆಯಿಂದ ಯೋಚಿಸಿ, ಪರಿಹಾರ ಹುಡುಕೋದು ನನ್ನ ಪ್ಲಸ್‌ ಪಾಯಿಂಟ್‌. ಅದು ನನಗೆ ದೇವರು ಕೊಟ್ಟಿರೋ ವರ ಅಂತಾನೇ ಹೇಳೊºàದು. ನಾನು ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಆಗಿದ್ದಾಗ ಒಂದು ಕೋಮುಗಲಭೆ ನಡೆದಿತ್ತು. ಗಣೇಶೋತ್ಸವ ಸಮಯದಲ್ಲಿ ಹಿಂದೂ- ಮುಸ್ಲಿಮರ ಮಧ್ಯೆ ಮಾರಾಮಾರಿ ನಡೆದಿತ್ತು. ಆಗ ಪೊಲೀಸರು ಲಾಠಿಚಾರ್ಜ್‌ ಮಾಡಿದರು. ರಾತ್ರಿ 2 ಗಂಟೆಗೆ ನನ್ನನ್ನು ಕರೆದಿದ್ದರು. ನಾನು ಹೋಗಿದ್ದೆ, ಬೆಳಗ್ಗೆ 5 ಗಂಟೆಯ ಹೊತ್ತಿಗೆ ಪರಿಸ್ಥಿತಿ ಸ್ವಲ್ಪ ತಿಳಿಯಾಗಿತ್ತು. ಎರಡೂ ಕೋಮಿನವರನ್ನು ಸೇರಿಸಿ ಮಾತನಾಡಿದ್ದೆ. ಹೇಗಿತ್ತೆಂದರೆ, ನಾನು ನಿಂತಿದ್ದೆ. ನನ್ನ ಸುತ್ತ ಜನ ಸೇರಿದ್ದರು. ಕಾಲಿಡಲೂ ಆಗದಷ್ಟು ಜನಸಂದಣಿ. ಪ್ರಾಣಕ್ಕೆ ಬೇಕಾದರೂ ಅಪಾಯ ಬರಬಹುದು. ಮಾರನೇದಿನ ನನಗೆ ಬೆಂಗಳೂರಿನಲ್ಲಿ ಮೀಟಿಂಗ್‌ ಇತ್ತು. ಸಾಯಂಕಾಲ ಶಾಂತಿಸಭೆ ಕರೆದು, ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ಹೊರಟೆ. ಪ್ರಾಮಾಣಿಕ ಪ್ರಯತ್ನ ಮಾಡಿದರೆ ಎಂಥ ಪರಿಸ್ಥಿತಿಯನ್ನೂ ನಿಭಾಯಿಸಬಹುದು ಎಂಬುದು ನನ್ನ ನಂಬಿಕೆ. 

ಶಾಲಾದಿನಗಳ ಹವ್ಯಾಸದ ಬಗ್ಗೆ ಹೇಳಿ? 
ನಾನು ಒಳ್ಳೆಯ ಕ್ರೀಡಾಪಟು. ರನ್ನಿಂಗ್‌ ರೇಸ್‌, ಖೊಖೊ, ಥ್ರೋಬಾಲ್‌, ಬಾಸ್ಕೆಟ್‌ಬಾಲ್‌ ಆಡುತ್ತಿದ್ದೆ. ಆಮೇಲೆ ಟೇಬಲ್‌ ಟೆನ್ನಿಸ್‌ನಲ್ಲಿ ಇಂಟರ್‌ ಸ್ಕೂಲ್‌, ಇಂಟರ್‌ಕಾಲೇಜು ಮ್ಯಾಚ್‌ಗಳಲ್ಲಿ ಗೆದ್ದಿದ್ದೇನೆ. ಐಎಎಸ್‌ ಟ್ರೈನಿಂಗ್‌ ಸಮಯದಲ್ಲೂ ಟೇಬಲ್‌ ಟೆನ್ನಿಸ್‌, ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ಗಳಲ್ಲಿ ಪ್ರಶಸ್ತಿ ಪಡೆದಿದ್ದೇನೆ. 

ಸಿನಿಮಾಗಳನ್ನ ನೋಡ್ತೀರ? ಇಷ್ಟದ ಹೀರೋ- ಹೀರೋಯಿನ್‌ ಯಾರು?
ನಾನು ನಾಲ್ಕು ವರ್ಷಗಳ ಕಾಲ ಫಿಲ್ಮ್ ಸೆನ್ಸಾರ್‌ ಬೋರ್ಡ್‌ನಲ್ಲಿ ಕೆಲಸ ಮಾಡಿದ್ದೇನೆ. ಆಗೆಲ್ಲಾ ಪ್ರೊಫೆಷನಲ್ಲಾಗಿ ಮೂವಿ ನೋಡಿದ್ದೇನೆ. 400-600 ಸಿನಿಮಾ ನೋಡಿದ್ದೇನೆ. ಇತ್ತೀಚೆಗೆ ನೋಡಿದ ಮೂವಿಗಳು ಥಿಯೇಟರ್‌ ಹೊರಗೆ ಬಂದಮೇಲೆ ಮರೆತೇ ಹೋಗುತ್ತೆ. ಆದ್ರೆ ಶಾಲೆಯಲ್ಲಿದ್ದಾಗ ಸಿನಿಮಾಗಳ ಬಗ್ಗೆ ಜೋರು ಡಿಸ್ಕಷನ್‌ ನಡೆಯುತ್ತಿತ್ತು. ಈ ಸೀನ್‌ ಹೀಗಿರಬೇಕಿತ್ತು, ಅದು ಹಾಗಿರಬಾರದಿತ್ತು, ಕ್ಲೈಮ್ಯಾಕ್ಸ್‌ ಚೆನ್ನಾಗಿಲ್ಲ ಅಂತೆಲ್ಲಾ ಮಾತಾಡಿಕೊಳ್ತಿದ್ದೆವು. ಅಮಿತಾಭ್‌ ಬಚ್ಚನ್‌, ಹೇಮಾಮಾಲಿನಿ, ನಂತರದಲ್ಲಿ ಶಾರೂಖ್‌ ಖಾನ್‌, ಮಾಧುರಿ, ತೆಲುಗಿನ ಜಯಸುಧಾ, ಜಯಪ್ರದಾ, ಕನ್ನಡದ ಸುಮಲತಾ ನನ್ನ ಮೆಚ್ಚಿನ ನಟ-ನಟಿಯರು. ಇತ್ತೀಚೆಗೆ "ತುಮ್ಹಾರಿ ಸುಲು' ನೋಡಿದೆ. ಎಂಡಿಂಗ್‌ ಅಷ್ಟೊಂದು ಚೆನ್ನಾಗಿಲ್ಲ. ಆದರೆ ಒಂದೊಳ್ಳೆ ಥೀಮ್‌ ಇರೋ ಸಿನಿಮಾ. 

ಇಷ್ಟದ ತಿಂಡಿ ಯಾವುದು?
ಅನ್ನ- ಸಾರು... ನಂಗೆ ಅನ್ನದ ಐಟಂಗಳೆಂದರೆ ಇಷ್ಟ. 

ಕನ್ನಡ ಕಲಿತಿದ್ದು ಹೇಗೆ?
ಟ್ರೈನಿಂಗ್‌ ಆಗಿದ್ದು ಬೆಳಗಾವಿಯಲ್ಲಿ, ಆನಂತರ ಬೀದರ್‌ಗೆ ಹೋದೆ. ಅಲ್ಲಿ ಉರ್ದು ಮಾತಾಡ್ತಾರೆ. ಅಲ್ಲಿನ ಆಡಳಿತದಲ್ಲಿಯೂ ಕನ್ನಡ ಇಲ್ಲ. ಕನ್ನಡ ಕಲಿತಿದ್ದು ಚಿRಕಮಗಳೂರಿನಲ್ಲಿ ಸ್ಪೆಷಲ್‌ ಡಿಸಿ ಆಗಿದ್ದಾಗ. ಆಗ ಪಾರ್ಥ ಸಾರಥಿ ಅವರು ಡಿ.ಸಿ ಆಗಿದ್ದರು. ಮಾದರಿ ಜಿಲ್ಲಾಧಿಕಾರಿ ಅಂತ ಈಗಲೂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಕನ್ನಡದಲ್ಲಿಯೇ ಕಡತಗಳನ್ನು ಬರೆಯುತ್ತಿದ್ದರು. ಕನ್ನಡದಲ್ಲಿಯೇ ಮಾತಾಡುತ್ತಿದ್ದರು. ನನ್ನ ಹತ್ತಿರವೂ ಕನ್ನಡದಲ್ಲಿಯೇ ಮಾತಾಡಿ, ನನಗೆ ಕನ್ನಡ ಕಲಿಸಿದರು. ಅಮ್ಮ ಉಡುಪಿ ಕಡೆಯವರು. ಆದರೆ, ನನಗೆ ಅಲ್ಲಿನ ನಂಟು ಕಡಿಮೆ. ಅಮ್ಮನ ಮನೆಯಲ್ಲಿ ಕೊಂಕಣಿ ಮಾತಾಡ್ತಾರೆ. ಹಾಗಾಗಿ ಕೊಂಕಣಿ ಬರುತ್ತೆ. 

ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರ?
ಮೊದಲೆಲ್ಲ ಧಾರಾವಾಹಿಗಳನ್ನು ನೋಡ್ತಿದ್ದೆ. ಈಗ ಅದನ್ನೂ ಬಿಟ್ಟಿದ್ದೇನೆ. ರಾತ್ರಿ ಮನೆಗೆ ಹೋದಮೇಲೆ ನ್ಯೂಸ್‌ ನೋಡುತ್ತೇನೆ. ಬೆಳಗ್ಗೆ ಎದ್ದು ಕಾಫಿ ಜೊತೆ ನ್ಯೂಸ್‌ ಪೇಪರ್‌ ಓದಿ¤àನಿ. ಫ್ರೀ ಟೈಂ ಅಂತ ಸಿಗೋದು ಅಷ್ಟೇ. 

ಇಷ್ಟೊಂದು ಎನರ್ಜಿಟಿಕ್‌ ಆಗಿ ಹೇಗಿದ್ದೀರ?
ನನ್ನ ಕೆಲಸವೇ ನನಗೆ ಸ್ಫೂರ್ತಿ, ಶಕ್ತಿ. ನಾನು ಯಾರಿಗೂ ಕೆಟ್ಟದ್ದನ್ನು ಬಯಸೋದಿಲ್ಲ. ಒಳ್ಳೆಯದನ್ನು ಮಾಡು, ಒಳ್ಳೆಯದನ್ನೇ ಯೋಚಿಸು. ಇದು ನನ್ನ ಪಾಲಿಸಿ. ನನ್ನ ಜೊತೆಗೆ ಕೆಲಸ ಮಾಡುವ ಎಲ್ಲರೂ ಖುಷಿಯಲ್ಲಿರಬೇಕು ಅಂತ ಬಯಸುತ್ತೇನೆ. ಹಾಗಾಗಿ ಸಂತೋಷವಾಗಿ, ಎನರ್ಜಿಟಿಕ್‌ ಆಗಿ ಇರೋಕೆ ಸಾಧ್ಯ ಅನ್ಸುತ್ತೆ. 

ನಿಮ್ಮನ್ನು ಸದಾ ಎಚ್ಚರಿಸುವ, ಜಾಗೃತಗೊಳಿಸುವ ಮಾತುಗಳು ಯಾವುವು? 
ಚಿಕ್ಕಮಗಳೂರಿನಲ್ಲಿ ಸೇವೆಯಲ್ಲಿದ್ದಾಗ ಒಬ್ಬರು ಹಿರಿಯರು ಬಂದಿದ್ದರು. ಅವರು ಯಾವುದೋ ಹಳ್ಳಿಯ ಗ್ರಾಮ ಪಂಚಾಯ್ತಿ ಮುಖ್ಯಸ್ಥರಾಗಿದ್ದವರು. "ನೋಡಮ್ಮಾ, ಜಿಲ್ಲಾಧಿಕಾರಿಯಂಥಾ ಹುದ್ದೆಗೆ ಮಹಿಳೆಯರು ಬರೋದು ಕಡಿಮೆ. ಹಾಗಾಗಿ, ಎಲ್ಲ ಮಹಿಳೆಯರೂ ಸ್ವಾವಲಂಬಿಗಳಾಗಿ ಬದುಕೋಕೆ ಪ್ರೋತ್ಸಾಹ ನೀಡಬೇಕು. ನಿನ್ನಿಂದಾಗಿ ಮಹಿಳೆಯರಿಗೆ ಒಳ್ಳೆಯದಾಗಬೇಕು' ಅಂದಿದ್ದರು. ಆ ಮಾತುಗಳು ಸದಾ ನೆನಪಿನಲ್ಲಿವೆ. ಮುಂದೆ ನಾನು ಮಹಿಳೆಯರಿಗಾಗಿ ಏನೇನೆಲ್ಲಾ ಮಾಡಿದ್ದೇನೋ, ಅವೆಲ್ಲವೂ ಆ ಮಾತಿನಿಂದ ಪಡೆದ ಸ್ಫೂರ್ತಿಯಿಂದಲೇ. 

ತುಂಬಾ ಸಿಟ್ಟು ತರಿಸೋ ವಿಷಯ ಯಾವುದು?
ಹೇಳಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸದಿದ್ದರೆ ತುಂಬಾ ಕೋಪ ಬರುತ್ತೆ. 

ಕುಟುಂಬದ ಬಗ್ಗೆ ಹೇಳಿ...
ನನ್ನ ಗಂಡ ನಿವೃತ್ತ ಐಎಎಸ್‌ ಅಧಿಕಾರಿ. ಮಗ- ಮಗಳು ಇದ್ದಾರೆ. ಮಗಳು ಕಥೆಗಾರ್ತಿ. ಅವಳಿಗೆ ಮದುವೆಯಾಗಿ ಒಂದು ಮಗು ಇದೆ. ಮಗ ವೃತ್ತಿಯಲ್ಲಿ ವಕೀಲ. ನಮ್ಮದು ತುಂಬಾ ಸಿಂಪಲ್‌ ಬದುಕು, ಸಿಂಪಲ್‌ ಕುಟುಂಬ, ಅಷ್ಟೇ.

ಶಾಪಿಂಗ್‌ ಅಂದ್ರೆ ತುಂಬಾ ಬೋರು
ನನಗೆ ಶಾಪಿಂಗ್‌ ಅಂದ್ರೆ ಅಷ್ಟೊಂದು ಆಸಕ್ತಿಯಿಲ್ಲ. ಈ ಸೀರೆ ತೋರಿಸಿ, ಆ ಸೀರೆ ತೋರಿಸಿ, ಇನ್ನೊಂದು, ಮತ್ತೂಂದು... ಅಂತೆಲ್ಲಾ ನೋಡಿ ನೋಡಿ ಖರೀದಿಸುವಷ್ಟು ತಾಳ್ಮೆ ನನಗಿಲ್ಲ. ಫ್ರೆಂಡ್ಸ್‌ ಜೊತೆಗೆ ಶಾಪಿಂಗ್‌ ಹೋದರೆ ಗಡಿಬಿಡಿಯಲ್ಲೇ ಎಲ್ಲ ಖರೀದಿಸುತ್ತೇನೆ. ಆಗ ಅವರೆಲ್ಲ, "ನೀನು ಅಧಿಕಾರಿ ಅಂತ ಗೊತ್ತು. ಆದ್ರೆ ಶಾಪಿಂಗ್‌ ಮಾಡೋವಾಗ ತಾಳ್ಮೆ ಇರಲಿ' ಅಂತ ರೇಗಿಸ್ತಾರೆ.

ಮಲ್ಲಿಗೆ ಯಾಕಿಷ್ಟ?
ನಂಗೆ ಮಲ್ಲಿಗೆ ಮೇಲೆ ಮೋಹ ಯಾಕೆ, ಯಾವಾಗ ಶುರುವಾಯ್ತು ಅಂತ ಗೊತ್ತಿಲ್ಲ. ಅರೇ, ದಿನಾ ಮಲ್ಲಿಗೆ ಮುಡೀತೀನಲ್ವಾ? ಮೊದಲು ಹೀಗೇ ಇದ್ದೆನಾ ಅಂತ ಹಳೆಯ ಫೋಟೊಗಳನ್ನು ತೆಗೆದು ನೋಡಿದೆ. ಬೀದರ್‌, ರಾಯಚೂರಿನಲ್ಲಿದ್ದಾಗಿನ ಫೋಟೊದಲ್ಲಿಯೂ ನನ್ನೊಂದಿಗೆ ಮಲ್ಲಿಗೆ ಇದೆ. ಕರ್ನಾಟಕಕ್ಕೆ ಬಂದ ಮೇಲೆ ಮಲ್ಲಿಗೆ ಮೋಹ ಶುರುವಾಗಿದ್ದಿರಬೇಕು. ಒಮ್ಮೆ ನನ್ನ ಕಾರ್‌ ಡ್ರೈವರ್‌, ಕಾರಿನಲ್ಲಿದ್ದ ದೇವರ ಮೂರ್ತಿಗೆ ಮಲ್ಲಿಗೆ ಮುಡಿಸಿದ್ದರು. ಎಲ್ಲಿಂದ ತಂದಿರಿ ಅಂತ ಕೇಳಿದಾಗ, ನನ್ನ ಹೆಂಡತಿ ಹೂವು ಮಾರುತ್ತಾಳೆ ಅಂದರು. ನನಗೂ ತಂದುಕೊಡಿ ಅಂದೆ. ಅಂದಿನಿಂದ, ಇಂದಿನವರೆಗೆ ಅವರೇ ನನಗೆ ದಿನಾ ಮಲ್ಲಿಗೆ ಹೂವು ತಂದು ಕೊಡುತ್ತಿದ್ದಾರೆ. 

ಪುಸ್ತಕ ಬರೆಯುತ್ತಿದ್ದೇನೆ...
ನಾನು ಬೀದರ್‌ನಲ್ಲಿ ಕೆಲಸ ಮಾಡುತ್ತಿದ್ದ ದಿನಗಳ ಅನುಭವಗಳನ್ನು ಡೈರಿಯ ರೂಪದಲ್ಲಿ ಬರೆದಿಟ್ಟುಕೊಂಡಿದ್ದೆ. ಅದನ್ನೆಲ್ಲ ಸೇರಿಸಿ ಒಂದು ಪುಸ್ತಕ ಬರೆದಿದ್ದೇನೆ. ಪುಸ್ತಕ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಕನ್ನಡ- ಇಂಗ್ಲಿಷ್‌ನಲ್ಲಿ ಪುಸ್ತಕ ಬರುತ್ತಿದೆ. 

ಕನ್ನಡದಲ್ಲಿ ಫೇಲ್‌ ಆಗಿದ್ದೆ...
ಟ್ರೈನಿಂಗ್‌ನಲ್ಲಿ ನಮಗೆ ಸರ್ಕಾರದವರೇ ಕನ್ನಡ ಕಲಿಸಲು ಟ್ಯೂಷನ್‌ ಕೊಡುತ್ತಾರೆ. ಪಾಪ, ನಮ್ಮ ಟ್ಯೂಷನ್‌ ಟೀಚರ್‌ ನಂಗೆ ತುಂಬಾ ಚೆನ್ನಾಗಿ ಕನ್ನಡ ಕಲಿಸಿದ್ದರು. ಆದರೆ, ನನಗೇ ಸ್ವಲ್ಪ ಆಸಕ್ತಿ ಕಡಿಮೆ ಇತ್ತು. ಅವರು ಹೀಗೆ ಬರೀರಿ, ಹಾಗೆ ಬರೀರಿ ಅನ್ನೋರು. ಹೋಂವರ್ಕ್‌ ಕೊಡುತ್ತಿದ್ದರು. ನಾನು ಹೋಂ ವರ್ಕ್‌ ಅನ್ನೂ ಸರಿಯಾಗಿ ಬರೆಯುತ್ತಿರಲಿಲ್ಲ. ಹೆಚ್ಚಿನ ಎಲ್ಲ ಅಧಿಕಾರಿಗಳಿಗೆ ಅವರೇ ಕನ್ನಡ ಕಲಿಸುತ್ತಿದ್ದರು. ಕೊನೆಗೆ ನಾನು ಪರೀಕ್ಷೆಯಲ್ಲಿ ಫೇಲ್‌ ಆಗಿಬಿಟ್ಟೆ. ಅವರಿಗೆ ಭಾರೀ ಬೇಜಾರಾಗಿತ್ತು.  "ಏನು ಮೇಡಂ ನೀವು? ಐಎಎಸ್‌ ಎಕ್ಸಾಂ ಪಾಸ್‌ ಮಾಡಿದ್ದೀರಿ. ಈಗ ಕನ್ನಡದಲ್ಲಿ ಫೇಲ್‌ ಆದರೆ, ಸರ್ಕಾರದೋರು ನಾನು ಸರಿಯಾಗಿ ಕಲಿಸಿಲ್ಲ ಅಂದೊತಾರೆ' ಅಂತ ಹೇಳಿದ್ದರು. ಮುಂದೆ ಚಿಕ್ಕಮಗಳೂರಿಗೆ ಬಂದಾಗ ಚೆನ್ನಾಗಿ ಕನ್ನಡ ಕಲಿತೆ. 

ಎಂಥ ಕಠಿಣ ಸಂದರ್ಭವಾದರೂ ತಾಳ್ಮೆಯಿಂದ ಯೋಚಿಸಿ, ಪರಿಹಾರ ಹುಡುಕೋದು ನನ್ನ ಪ್ಲಸ್‌ ಪಾಯಿಂಟ್‌.

ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ ಮೂರನೇ ಮಹಿಳೆ ಕೆ. ರತ್ನಪ್ರಭಾ. ಈ ಮೊದಲು ಥೆರೆಸಾ ಭಟ್ಟಾಚಾರ್ಯ ಹಾಗೂ ಮಾಲತಿ ದಾಸ್‌ ಮುಖ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. 

ಎ.ಆರ್‌. ಮಣಿಕಾಂತ್‌/ ಪ್ರಿಯಾಂಕಾ ಎನ್‌.

Trending videos

Back to Top