CONNECT WITH US  

ಉಪ್ಪು, ಹುಳಿ, ಮಾಲಾಶ್ರೀ!

ಮಾತಿನಲಿ ಹೇಳಿದರೆ, ತಾಳಕೆ ಸಿಗದ ಚೆಲುವು

1989ರಲ್ಲಿ ಕನ್ನಡದಲ್ಲಿ ಸಿನಿಮಾ ಕೆರಿಯರ್‌ ಆರಂಭಿಸಿದಾಗಿನಿಂದ ಇಲ್ಲಿಯವರೆಗೂ ಹೀರೋಯಿನ್‌ ಪಾತ್ರದಲ್ಲೇ ಮಿಂಚುತ್ತಿರುವ ನಟಿ ಮಾಲಾಶ್ರೀ. ಅಭಿಮಾನಿಗಳಿಂದ "ಕನಸಿನ ರಾಣಿ 'ಎಂದೇ ಕರೆಸಿಕೊಂಡಿದ್ದ ಇವರ  ಪ್ರಸಿದ್ಧಿ ಯಾವ ಹೀರೋಗೂ ಕಡಿಮೆ ಇರಲಿಲ್ಲ. ಸಿನಿಮಾ ಕಲಾವಿದೆಯಾಗಿದ್ದ ಅಮ್ಮನ ಜೊತೆ ಶೂಟಿಂಗ್‌ ಸೆಟ್‌ಗೆ ಹೋಗುತ್ತಿದ್ದ ಪುಟಾಣಿ ಶ್ರೀ ದುರ್ಗಾ ಕ್ರಮೇಣ ಬಾಲನಟಿಯಾಗಿ ತಮಿಳು, ತೆಲುಗು ಭಾಷೆಗಳ ಒಟ್ಟು 34 ಚಿತ್ರಗಳಲ್ಲಿ ಅಭಿನಯಿಸಿದರು. 1989ರಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ "ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಮಾಲಾಶ್ರೀಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಟಿಸಿದ ಹೆಚ್ಚಿನ ಚಿತ್ರಗಳು ಹಿಟ್‌ ಆದವು. ಇವರು ಎಷ್ಟು ಬ್ಯುಸಿ ನಟಿಯಾಗಿದ್ದರೆಂದರೆ, 1992ರಲ್ಲಿ ಇವರು ನಾಯಕಿಯಾಗಿ ನಟಿಸಿದ್ದ 20 ಚಿತ್ರಗಳು ಬಿಡುಗಡೆಯಾಗಿದ್ದವು. ಇತ್ತೀಚೆಗಷ್ಟೇ ಬಿಡುಗಡೆಯಾದ "ಉಪ್ಪು ಹುಳಿ ಖಾರ' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಜನರನ್ನು ರಂಜಿಸಿದ್ದಾರೆ. ಇಷ್ಟೆಲ್ಲಾ ಪಾತ್ರಗಳನ್ನು ನಿರ್ವಹಿಸಿದರೂ ಸಂಪೂರ್ಣ ತೃಪ್ತಿ ಇಲ್ಲ. ನಾನು ನಿರ್ವಹಿಸದ ಪಾತ್ರಗಳು ತುಂಬಾ ಇವೆ ಇನ್ನುತ್ತಾರೆ ಈ ಆ್ಯಕ್ಷನ್‌ ಹಿರೋಯಿನ್‌.

"ಉಪ್ಪು ಹುಳಿ ಖಾರ'ದ ನಿಮ್ಮ ಪಾತ್ರ ತುಂಬಾ ಜನಪ್ರಿಯವಾಗಿದೆ? ಮತ್ತೆ ಅಂಥದ್ದೇ ಪಾತ್ರ ಸಿಕ್ಕರೆ ಒಪ್ಪಿಕೊಳ್ಳುತ್ತೀರಾ?
ಕಾಮಿಡಿ ಟಚ್‌ ಇರುವ ಪೊಲೀಸ್‌ ಪಾತ್ರವನ್ನು ನಾನು ಮಾಡಿರಲಿಲ್ಲ. ಆದ್ದರಿಂದ ನನ್ನ ಕೆರಿಯರ್‌ನಲ್ಲಿ ಅದೂ ವಿಶೇಷ ಪತ್ರ. ಆದರೆ, ಮತ್ತೆ ಅಂಥದ್ದೇ ಪಾತ್ರ ಮಾಡಲ್ಲ. ನಾನು ಮಾಡುವ ಪ್ರತಿ ಚಿತ್ರದಲ್ಲೂ ಏನಾದರೂ ಹೊಸತನ ಇರಬೇಕು. ಹಾಗೆ ನೋಡಿದರೆ, ಆರಂಭದಿಂದ ಇಲ್ಲಿಯವರೆಗೆ ನಾನು ಒಂದಕ್ಕೊಂದು ಸಂಬಂಧವೇ ಇಲ್ಲದ ಪಾತ್ರಗಳನ್ನೇ ಮಾಡಿರುವುದು.

- ಸಿನಿಮಾ ಇಂಡಸ್ಟ್ರಿ ನಿಮಗೆ ಏನೆಲ್ಲಾ ಕೊಟ್ಟಿದೆ? 
ನಾನು ಕಾಲೇಜಿಗೆ ಹೋದವಳೇ ಅಲ್ಲ. ಇಂಡಸ್ಟ್ರೀನೆ ನನಗೆ ಜ್ಞಾನ ಕೊಟ್ಟಿದೆ. ಜೀವನಾನುಭವ ಕೊಟ್ಟಿದೆ. ಹೆಸರು ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಗಂಡನನ್ನು ಕೊಟ್ಟಿದೆ. ಗೌಡರ ಹುಡುಗನನ್ನು ಮದುವೆಯಾಗಿ ನಾನು ಗೌಡ್ತಿಯಾದೆ, ಜೊತೆಗೆ ಕನ್ನಡತಿಯೂ ಆದೆ.

- ಬಿಡುವಿನ ವೇಳೆ ಹೇಗೆ ಸಮಯ ಕಳೀತೀರ? 
ನಾನು ಒಂದು ನಿಮಿಷವೂ ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ಅಡುಗೆ  ಮಾಡ್ತೀನಿ, ಹೊಸ ಬಗೆಯ ಅಡುಗೆ ಟ್ರೈ ಮಾಡ್ತೀನಿ. ಮನೆ ಅಲಂಕಾರ ಮಾಡುವುದು ನನ್ನ ಮೆಚ್ಚಿನ ಹವ್ಯಾಸ. ಮನೆ ಎಷ್ಟೇ ಕ್ಲೀನ್‌ ಇದ್ದರೂ ಮತ್ತೆ ಮತ್ತೆ ಕ್ಲೀನ್‌ ಮಾಡ್ತಾ ಇರಿ¤àನಿ. ಮಗಳು ಈಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ್ದಾಳೆ. ಫ‌ಸ್ಟ್‌ ಇಯರ್‌ ಪಿಯುಸಿ ಓದುತ್ತಿದ್ದಾಳೆ. ನಾನು ಕಾಲೇಜಿಗೆ ಹೋಗಿಲ್ಲವಲ್ಲಾ, ಆದ್ದರಿಂದ ಮಗಳ ಕಾಲೇಜು ಅನುಭವಗಳ ಬಗ್ಗೆ ಕೇಳ್ತಾ ಇರಿ¤àನಿ. 

- ನೀವು ರುಚಿಯಾಗಿ ಮಾಡುವ ಅಡುಗೆ ಯಾವುದು?
ಗೌಡರ ಶೈಲಿಯ ಎಲ್ಲಾ ಅಡುಗೆಯನ್ನೂ ರುಚಿಯಾಗಿ ಮಾಡ್ತೀನಿ. ಮುದ್ದೆ, ಉಪ್ಸಾರು, ಬಸ್ಸಾರು, ಮಟನ್‌ ಚಾಪ್ಸ್‌, ನಾಟಿ ಕೋಳಿ ಸಾರು ತುಂಬಾ ಚನ್ನಾಗಿ ಮಾಡ್ತೀನಿ. ಇನ್ನೂ ಹೇಳಬೇಕೆಂದರೆ ನನ್ನ ಯಜಮಾರಿಗೆ ಇಷ್ಟವಿರುವ ಎಲ್ಲಾ ಅಡುಗೆಯನ್ನೂ ರುಚಿಯಾಗಿ ಮಾಡ್ತೀನಿ. ಮಕ್ಕಳಿಗೆ ಪಿಝಾl, ನೂಡಲ್ಸ್‌ ಇಷ್ಟ ಅವುಗಳನ್ನೂ ಚೆನ್ನಾಗಿ ಮಾಡ್ತೀನಿ. 

- ನಿಮಗೆ ಕನ್ನಡ ಬರುತ್ತಿರದಿದ್ದಾಗ ನಡೆದ ತಮಾಷೆ ಪ್ರಸಂಗಗಳು ಇದ್ದರೆ ಹೇಳಿ? 
ಮೊದಲ ಚಿತ್ರ "ನಂಜುಂಡಿ ಕಲ್ಯಾಣ'ದಲ್ಲಿ ನಟಿಸುತ್ತಿದ್ದ ವೇಳೆ ಪ್ರತಿದಿನವೂ ತಮಾಷೆ ಪ್ರಸಂಗ ನಡೆಯುತ್ತಿದ್ದವು. ನಾಯಕಿಯಾಗಿ ನನಗೆ ಅದೇ ಮೊದಲ ಚಿತ್ರ. ಅದು ಗೊತ್ತಿರದ ಭಾಷೆ ಬೇರೆ. ಯಾರಾದರೂ ಬಂದು "ಚೆನ್ನಾಗಿ ನಟಿಸಿದೆಯಮ್ಮಾ' ಅಂದರೆ ನನಗೆ ಬೈದರು ಎಂದು ಮುಖ ಚಿಕ್ಕದು ಮಾಡಿಕೊಳ್ಳುತ್ತಿದ್ದೆ. ಯಾರು ಏನೇ ಹೇಳಿದರೂ ಇವರು ನನಗೆ ಬೈಯುತ್ತಿದ್ದಾರೆ, ನನ್ನ ಕೆಲಸ ಇವರಿಗೆ ಇಷ್ಟ ಆಗಿಲ್ಲ ಅಂತಲೇ ಭಾವಿಸುತ್ತಿದ್ದೆ.

- ರೆಬೆಲ್‌ ನಾಯಕಿಯಾಗಿ ಮೆರೆದವರು ನೀವು. ಈಗ ಲೇಡಿ ವಿಲನ್‌ ಪಾತ್ರ ಕೊಟ್ಟರೆ ಒಪ್ಪಿಕೊಳ್ಳುತ್ತೀರಾ?
ವಿಲನ್‌ ಪಾತ್ರ ಮಾಡಲು ನಾನು ಕಾಯುತ್ತಿದ್ದೇನೆ. ನನ್ನ ಮಟ್ಟಿಗೆ ಅದೊಂದು ಸವಾಲೇ ನಿಜ. ಇಷ್ಟು ದಿನ ನನ್ನನ್ನು ಜನರು ಕರುಣಾಮಯಿ ಪಾತ್ರದಲ್ಲೋ ಅಥವಾ ದುಷ್ಟರನ್ನು ಸದೆಬಡೆಯುವ ಪೊಲೀಸ್‌ ಪಾತ್ರಗಳಲ್ಲಿ ನೋಡಿದ್ದಾರೆ. ಒಂದು ರೀತಿ ನಾನು ನಿರ್ವಹಿಸಿ ಪಾತ್ರಗಳೆಲ್ಲಾ ರೋಲ್‌ ಮಾಡೆಲ್‌ ರೀತಿಯ ಪಾತ್ರಗಳು. ಹೀಗಿರುವಾಗ ನನ್ನನ್ನು ಒಬ್ಬ ಕೆಟ್ಟ ವ್ಯಕ್ತಿ ಅಂತ ಜನರನ್ನು ನಂಬಿಸುವುದು ನನಗೆ ಸವಾಲು. ಆ ಸವಾಲು ಸ್ವೀಕರಿಸಲು ನಾನು ಸಿದ್ಧ ಇದ್ದೇನೆ.

- ಇಷ್ಟಲ್ಲಾ ಪಾತ್ರಗಳನ್ನು ನಿರ್ವಹಿಸಿದ ಮೇಲೂ ನಿಮಗೆ ಕನಸಿನ ಪಾತ್ರ ಅಂಥ ಯಾವುದಾರೂ ಇದೆಯಾ?
ನಾನು ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಸಿನಿಮಾದಲ್ಲಿ ನಟಿಸಬೇಕು. ಹಾರರ್‌ ಚಿತ್ರದಲ್ಲಿ ನಟಿಸಬೇಕು. ಈಗ ಹೊಸ ಬಗೆಯ ಚಿತ್ರಗಳು ಬರುತ್ತಿವೆ. ಕಥೆ ಹೇಳುವ ಶೈಲಿಯೂ ಬದಲಾಗಿದೆ. ಅಂಥ ಹೊಸ ಅಲೆ ಚಿತ್ರಗಳಲ್ಲಿ ನಟಿಸಬೇಕು. ಇಷ್ಟು ದಿನ ಪ್ರೇಕ್ಷಕರು ನೋಡಿರದ ವಿಭಿನ್ನ ಅವತಾರದಲ್ಲಿ ನಾನು ಅವರ ಎದುರು ಕಾಣಿಸಿಕೊಳ್ಳಬೇಕು. 

- ನೀವು ಬಾಬ್‌ಕಟ್‌ ಪ್ರಿಯರಾಗಿದ್ದು ಹೇಗೆ?
ನನ್ನ ಬಾಬ್‌ ಕಟ್‌ ಕ್ರೇಜ್‌ ಈಗಿನದಲ್ಲ. ಪುಟ್ಟ ಮಗುವಾಗಿದ್ದಾಗಿನಿಂದ ನಾನು ಅಮಿತಾಭ್‌ ಬಚ್ಚನ್‌ ಅಭಿಮಾನಿ. ಚಿಕ್ಕ ವಯಸ್ಸಿನಲ್ಲಿ ನಾನು ಅಮಿತಾಭ್‌ ಹೇರ್‌ ಕಟ್‌ ಮಾಡಿಸಿಕೊಂಡು, ಅವರಂತೆಯೇ ಬಟ್ಟೆ ಧರಿಸುತ್ತಿದ್ದೆ. ನಾನು ಸುಮಾರು 32 ತಮಿಳು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದೀನಿ. ಬಹುತೇಕ ಚಿತ್ರಗಳಲ್ಲಿ ನಾನು ಹುಡುಗನ ಪಾತ್ರವನ್ನೇ ಮಾಡಿರುವುದು. ಚೆನ್ನೈನಲ್ಲಿ ಒಂದು ಸಲೂನ್‌ನಲ್ಲಿ ಮಾತ್ರ ಅಮಿತಾಭ್‌ ಹೇರ್‌ ಕಟ್‌ ಮಾಡುತ್ತಿದ್ದರು. ನಾನು ಪ್ರತಿ ಸಲ ಅಲ್ಲಿಗೇ ಹೋಗಿ ಹೇರ್‌ ಕಟ್‌ ಮಾಡಿಸಿಕೊಳ್ಳುತ್ತಿದ್ದೆ. ಆದ್ದರಿಂದ ನನಗೆ ಬಾಯ್‌ ಕಟ್‌ ಎಷ್ಟು ಆರಾಮದಾಯಕ ಅಂತ ಗೊತ್ತಿದೆ. ಅದಕ್ಕೆ ಈಗಲೂ ಅದನ್ನೇ ಇಷ್ಟಪಡ್ತೀನಿ.

- ನಿಮ್ಮ ಸಿನಿಮಾ ಪಯಣದಲ್ಲಿ ಮರೆಯಲಾರದ ಘಟನೆ ಯಾವುದು? 
"ನಂಜುಂಡಿ ಕಲ್ಯಾಣ' ಸಕ್ಸಸ್‌ ಆದಾಗ ಉತ್ತರ ಕರ್ನಾಟಕದಲ್ಲಿ ರೋಡ್‌ ಶೋಗೆ ಹೋಗಿದ್ದೆವು. ಆಗ ರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌ ಕೂಡ ಇದ್ದರು. ಅಲ್ಲಿ ಸೇರಿದ್ದ ಜನಸಾಗರ ಕಣ್ಣಿಗೆ ಕಟ್ಟಿದಂತಿದೆ. ಅವರಲ್ಲಿ ಬಹುತೇಕರು ರಾಜ್‌ ಕುಮಾರ್‌ರನ್ನು ನೋಡಲೆಂದೇ ಬಂದಿದ್ದರು. ನನ್ನನ್ನು ಜನ ದೇವಿ, ದೇವಿ ಎಂದೇ ಕೂಗುತ್ತಿದ್ದರು. ಸಿನಿಮಾ ನಟರ ಬಗ್ಗೆ ಜನರಿಗೆ ಇಷ್ಟು ಕ್ರೇಜ್‌ ಇರುತ್ತದೆಯಾ ಎಂದು ನನಗೆ ಆಶ್ಚರ್ಯ ಆಗಿತ್ತು. ಆ ದಿನವನ್ನು ನಾನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. 

- ನಿಮ್ಮ ಸಿನಿ ಜೀವನದಲ್ಲಿ ಇಬ್ಬರು ವ್ಯಕ್ತಿಗಳನ್ನು ನೆನೆಯುವುದಾದರೆ ಯಾರನ್ನು ನೆನೆಯುತ್ತೀರಿ?
ಚಿ. ಉದಯಶಂಕರ್‌ ಮತ್ತು ವರದಪ್ಪ. ನನ್ನ ಕರಿಯರ್‌ ಶುರುವಿನಲ್ಲೇ ಅಷ್ಟು ಒಳ್ಳೆಯ ಚಿತ್ರಗಳನ್ನು ಮತ್ತು ಪಾತ್ರಗಳನ್ನು ಅವರು ಕೊಟ್ಟಿದ್ದರಿಂದಲೇ ನಾನು ನಟಿಯಾಗಿ ನೆಲೆಯೂರಲು ಸಾಧ್ಯವಾಯಿತು. ನಾನು ಕ್ಯಾಮೆರಾ ಎದುರು ಹೋಗುವ ಮೊದಲು ಉದಯಶಂಕರ್‌ ಅವರು ನನಗೆ ಪ್ರತಿ ಪದದ ಅರ್ಥ ಹೇಳುತ್ತಿದ್ದರು. ಪ್ರತಿ ಶಾಟ್‌ ಅನ್ನು ವಿವರಿಸುತ್ತಿದ್ದರು. ಗುರುವಿನಂತೆ ತಿದ್ದುತ್ತಿದ್ದರು. ಅದ್ದರಿಂದಲೇ ಆ ಚಿಕ್ಕ ವಯಸ್ಸಿನಲ್ಲೂ ನಾನು ಅಷ್ಟು ಚೆನ್ನಾಗಿ ಅಭಿನಯಿಸಲು ಸಾಧ್ಯವಾಯಿತು. 

- ಇತ್ತೀಚೆಗೆ ನೀವು ನೋಡಿದ ಸಿನಿಮಾಗಳಲ್ಲಿ ತುಂಬಾ ಇಷ್ಟವಾದ ಸಿನಿಮಾ ಯಾವುದು?
"ರಾಜಕುಮಾರ'. ಈ ಸಿನಿಮಾ ನೋಡಿದ ದಿನವೇ ಪುನೀತ್‌ ರಾಜ್‌ಕುಮಾರ್‌ಗೆ ಕರೆ ಮಾಡಿ ಅಭಿನಂದನೆ ಹೇಳಿದೆ. 

- ನನ್ನಲ್ಲಿದ್ದ ಕೀಳರಿಮೆ ಹೋಗಿಸಿದ್ದು ಹಂಸಲೇಖ!
ನಂಜುಂಡಿ ಕಲ್ಯಾಣ ನಂತರ ನನ್ನ ಸಾಲು ಸಾಲು ಚಿತ್ರಗಳು ಹಿಟ್‌ ಆದವು. ಅದರೆ "ನಿಮ್ಮ ಮೂಗಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳಿ', "ನಿಮ್ಮ ಹಲ್ಲು ವಕ್ರವಾಗಿದೆ, ಸರಿ ಮಾಡಿಸಿಕೊಳ್ಳಿ' ಅಂತ ಪುಕ್ಕಟೆ ಸಲಹೆ ನೀಡುವವರಿಗೇನು ಕಡಿಮೆ ಇರಲಿಲ್ಲ. ನಾನೂ ನನ್ನ ಮೂಗು, ಹಲ್ಲು, ತೂಕ ಎಲ್ಲವೂ ನನ್ನ ನೆಗೆಟಿವ್‌ ಅಂತಲೇ ಭಾವಿಸಿದ್ದೆ. ಆದರೆ, ಹಂಸಲೇಖ ಅವರು "ರಾಮಾಚಾರಿ' ಚಿತ್ರಕ್ಕೆ "ಯಾರಿವಳು ಯಾರಿವಳು' ಹಾಡನ್ನು ಬರೆದ ನಂತರ ನನಗೆ ನನ್ನ ಬಗ್ಗೆ ಇದ್ದ ಕೀಳರಿಮೆಯೆಲ್ಲಾ ಹೋಯಿತು. ಅವರು ಈ ಹಾಡು ಬರೆದ ಸಂದರ್ಭದ ಬಗ್ಗೆ ನಾನು ಹೇಳಲೇಬೇಕು. "ಹಳ್ಳಿ ರಂಭೆ ಬೆಳ್ಳಿ ಬೊಂಬೆ' ಶೂಟಿಂಗ್‌ ನಡೆಯುತ್ತಿದ್ದ ಸಂದರ್ಭ ರವಿಚಂದ್ರನ್‌ ಅವರು ಬಂದು ನನ್ನನ್ನು ಪ್ರಸಾದ್‌ ಲ್ಯಾಬ್‌ಗ ಕರೆದೊಯ್ದು ಹಂಸಲೇಖ ಸರ್‌ ಎದುರು ಕೂರಿಸಿದರು. ಹಂಸಲೇಖ ಸರ್‌ ನನ್ನನು ಮಾತಾಡಿಸುತ್ತಾ ಏನೇನೋ ಹೇಳಿ ನಗಿಸುತ್ತಿದ್ದರು. ಜೊತೆಗೆ ಏನೋ ಬರೆಯುತ್ತಿದ್ದರು. ನನಗೆ ಅವರು ನನ್ನ ಮೇಲೆಯೇ ಸಾಹಿತ್ಯ ಬರೆಯುತ್ತಿದ್ದಾರೆ ಎಂಬ ಕಲ್ಪನೆಯೇ ಇರಲಿಲ್ಲ. ಚಿತ್ರೀಕರಣದ ವೇಳೆ ಹಾಡು ಕೇಳಿ ಕುಣಿದಾಡುವಂತಾಯಿತು. ನನ್ನ ಮೂಗು, ಹಲ್ಲಿನ ಬಗ್ಗೆ ಅವರು ಹೊಗಳಿ ಬರೆದಿದ್ದರು!

ಅಭಿಮಾನಿಗಳು ಕಾರ್‌ ಚೇಸ್‌ ಮಾಡ್ಕೊಂಡು ಬರಿ¤ದ್ರು...
ಆಗೆಲ್ಲಾ ನನಗೆ ನನ್ನ ಚಿತ್ರಗಳನ್ನು ನೋಡಲು ಪುರುಸೊತ್ತೇ ಸಿಗುತ್ತಿರಲಿಲ್ಲ. ಈಗ ಆ ಚಿತ್ರಗಳನ್ನು ನೋಡಿದರೆ ನನಗೇ ಆಶ್ಚರ್ಯ ಆಗುತ್ತದೆ. ನಾನು ಕೇವಲ 15, 16ನೇ ವಯಸ್ಸಿನಲ್ಲಿ ಅಷ್ಟೆಲ್ಲಾ ಪ್ರಬುದ್ಧ ಅಭಿನಯ ನೀಡಿದ್ದೆನಾ ಅಂತ. ಆಗ ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅಂತಲೇ ಗೊತ್ತಾಗುತ್ತಿರಲಿಲ್ಲ. ನನ್ನ ಸ್ಟಾರ್‌ಡಮ್‌ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಜನ ನನಗೆ "ಹಾಯ್‌' ಹೇಳಬೇಕೆಂದೇ ಬೆಂಗಳೂರಿನಿಂದ ಮೈಸೂರಿನವರೆಗೆ ನನ್ನ ಕಾರ್‌ ಛೇಸ್‌ ಮಾಡಿದ್ದೂ ಇದೆ. ಸಾವಿರಾರು ಪತ್ರಗಳು ಬರುತ್ತಿದ್ದವು. ಹಲವಾರು ಪತ್ರಗಳನ್ನು ರಕ್ತದಿಂದ ಬರೆಯಲಾಗಿರುತ್ತಿತ್ತು. ಶಾಲೆ ಮಕ್ಕಳ ಗುಂಪೊಂದು ನನಗೆ ರೋಸ್‌ ನೀಡಲು ಮನೆ ಎದುರು ಕಾಯುತ್ತಿದ್ದರು. ಇದೆಲ್ಲಾ ಜನರು ಯಾಕೆ ಮಾಡ್ತಾರೆ ಅಂತ ನನಗೆ ಗೊತ್ತೇ ಆಗ್ತಾ ಇರಲಿಲ್ಲ. 

ನನಗೆ ಕನ್ನಡ ಓದಲು, ಬರೆಯಲು ಬರುತ್ತೆ!
ನಾನು ಹುಟ್ಟಿ ಬೆಳೆದಿದ್ದೆಲ್ಲಾ ಚೆನ್ನೈನಲ್ಲಿಯೇ. ನನಗೆ ಕನ್ನಡದ ಪರಿಚಯ ಸ್ವಲ್ಪವೂ ಇರಲಿಲ್ಲ. ನಾನು ಕನ್ನಡ ಅರ್ಥಮಾಡಿಕೊಳ್ಳಲು, ಸಂಭಾಷಣೆ ಒಪ್ಪಿಸಲು ಕಷ್ಟಪಡುವುದನ್ನು ನೋಡಿ ಉದಯಶಂಕರ್‌ ಸರ್‌ ನನಗೆ "30 ದಿನಗಳಲ್ಲಿ ಕನ್ನಡ ಕಲಿಯಿರಿ' ಪುಸ್ತಕ ಕೊಟ್ಟರು. ಜೊತೆಗೆ, 30 ದಿನಗಳಲ್ಲಿ ನೀನು ಕನ್ನಡ ಕಲಿತಿರಬೇಕು ಅಂತ ತಾಕೀತು ಮಾಡಿದರು. ಅಲ್ಲಿಂದ ನನ್ನ ಕನ್ನಡ ಕಲಿಕೆ ಆರಂಭವಾಯಿತು. "ಅ ಆ ಇ ಈ'ಯಿಂದ ಕನ್ನಡ ಕಲಿತಿದ್ದೇನೆ. ಈಗ ಕನ್ನಡ ಮಾತನಾಡಲು ಅಷ್ಟೇ ಅಲ್ಲ. ಓದಲೂ, ಬರೆಯಲೂ ಬರುತ್ತದೆ. ಕನ್ನಡ ನ್ಯೂಸ್‌ ಪೇಪರ್‌ಗಳನ್ನು ಆರಾಮಾಗಿ ಓದಿ¤àನಿ. 

ಸನ್ನಿ ಡಿಯೋಲ್‌ನ ಕಾಪಿ ಮಾಡಿದ್ದೀನಿ...
ನಾನು ಯಾವ ಪೂರ್ವ ತಯಾರಿ ಇಲ್ಲದೆಯೇ ಚಿತ್ರರಂಗಕ್ಕೆ ಬಂದೆ. ಹೀಗಾಗಿ ರೋಲ್‌ ಮಾಡೆಲ್‌ ಅಂತ ಯಾರೂ ಇರಲಿಲ್ಲ. ನಂಜುಂಡಿ ಕಲ್ಯಾಣ ಚಿತ್ರದ ನಂತರ ತುಂಬಾ ಜನ "ಮಂಜುಳಾ ಅಂತ ಫೇಮಸ್‌ ನಟಿ ಇದ್ದರು. ನೀವು ಅವರಂತೆಯೇ ಗಂಡುಬೀರಿ ಪಾತ್ರಕ್ಕೆ ಸರಿಯಾಗಿ ಹೊಂದುತ್ತೀರ' ಎಂದರು. ಹಾಗಾಗಿ ಅವರ ಚಿತ್ರಗಳನ್ನು ನೋಡಲು ಆರಂಭಿಸಿದೆ. ಮಂಜುಳಾ, ಕಲ್ಪನಾ, ಜಯಂತಿ ನನ್ನ ಫೇವರಿಟ್‌ ಹೀರೋಯಿನ್‌ಗಳಾಗಿದ್ದರು. ಆ್ಯಕ್ಷನ್‌ ಪಾತ್ರಗಳನ್ನು ಮಾಡಲು ಆರಂಭಿಸಿದ ಬಳಿಕ  ಸನ್ನಿ ಡಿಯೋಲ್‌ ನನ್ನ ರೋಲ್‌ ಮಾಡೆಲ್‌ ಆದರು. ಅವರ ನಟನೆ, ಬಾಡಿ ಲಾಂಗ್ವೇಜ್‌, ಒರಟುತನವನ್ನು ಅನುಕರಿಸುತ್ತಿದ್ದೆ.

- ಚೇತನ ಜೆ.ಕೆ.


Trending videos

Back to Top