CONNECT WITH US  

ಮನೋರಥ

ನನ್ನ ತಮ್ಮನ ಮಗಳಿಗೀಗ ಹನ್ನೊಂದು ವರ್ಷ. ಇನ್ನೂ ದೊಡ್ಡವಳಾಗಿಲ್ಲ. ಅತ್ತ ಚಿಕ್ಕ ಹುಡುಗಿಯೂ ಅಲ್ಲದ, ಇತ್ತ ದೊಡ್ಡವಳೂ ಅಲ್ಲದ ಅವಳ ವರ್ತನೆಯನ್ನು, ಇತ್ತೀಚಿನ ದಿನಗಳಲ್ಲಿ ಮನೆಯವರಿಗೆ ಅರ್ಥಮಾಡಿಕೊಳ್ಳಲು ಆಗುತ್ತಲೇ ಇಲ್ಲ. ಮೊದಲೆಲ್ಲ ಚುರುಕಾಗೇ ಇರುತ್ತಿದ್ದ ಹುಡುಗಿ ಇತ್ತೀಚೆಗೆ ತೀರಾ ಸಪ್ಪಗಾಗಿ ಬಿಟ್ಟಿದ್ದಾಳೆ. ಮನೆಯವರೊಡನೆ ಎಷ್ಟು ಬೇಕೋ ಅಷ್ಟೇ ಮಾತು. ನಗುವುದನ್ನೇ ಮರೆತಂತೆ ಸದಾ ಸಪ್ಪೆ$ಮೋರೆ ಮಾಡಿಕೊಂಡು ಇರುತ್ತಾಳೆ. ವಿಚಾರಿಸಲು ಹೋದರೆ ಸಿಡುಕುತ್ತಾಳೆ. ಅಲ್ಲಿಂದ ಎದ್ದು ಹೋಗಿ ತನ್ನ ರೂಮು ಸೇರಿಕೊಂಡು, ಗಂಟೆಗಟ್ಟಲೆಯಾದರೂ ಹೊರಗೇ ಬರುವುದಿಲ್ಲ. ಶಾಲೆಯಲ್ಲೂ ಕೂಡ, ಈಗೀಗ ಮೊದಲಿನ ಹಾಗೆ ಕ್ಲಾಸ್‌ ರೂಮಿನಲ್ಲಿ ಗಮನವಿಟ್ಟು ಕೂರದೆ, ಏನೋ ಯೋಚಿಸುತ್ತಿರುವಂತೆ ಕಾಣಿಸುತ್ತಾಳೆ. ಪರೀಕ್ಷೆಯಲ್ಲೂ ಕಡಿಮೆ ಅಂಕ ತೆಗೆದಿದ್ದಾಳೆ! ಮೊನ್ನೆ ಪ್ರಾಂಶುಪಾಲರು, ನನ್ನ ತಮ್ಮನನ್ನು ಕರೆದು, ಎಚ್ಚರಿಕೆಯನ್ನೂ ನೀಡಿದ್ದಾರೆ! ಯಾಕೆಂದರೆ, ಇವಳು ಸ್ಕೂಲಿನ ಲೈಬ್ರರಿಯಲ್ಲಿನ ಕಂಪ್ಯೂಟರ್‌ನ್ನು ಬಳಸಿ, ಅಲ್ಲಿ "ಹೌ ಟು ಡೈ?' (How to die?) ಅಂತ ಗೂಗಲ್‌ನಲ್ಲಿ ಹುಡುಕುತ್ತಿದ್ದುದನ್ನು ಶಿಕ್ಷಕರೊಬ್ಬರು ಗಮನಿಸಿ ಅವರಿಗೆ ದೂರು ನೀಡಿದ್ದಾರೆ. ಇದನ್ನು ಕೇಳಿ ಮನೆಯವರಿಗೆಲ್ಲ ಭಾರೀ ತಲೆಬಿಸಿಯ ಜೊತೆ ಆಶ್ಚರ್ಯವೂ ಆಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೀಗೆಲ್ಲಾ ಸಾವಿನ ಆಲೋಚನೆಗಳು ಬರಲು ಸಾಧ್ಯವೆ? ಮುಂದೇನು ಮಾಡೋದು ಅಂತಾನೇ ಗೊತ್ತಾಗುತ್ತಿಲ್ಲ! 
ನಿಮ್ಮ ಸಲಹೆ ಸಿಗಬಹುದೆ?
- ಶಶಿರೇಖಾ, ಕಾಸರಗೋಡು

ಶಶಿರೇಖಾರವರೇ, ನೀವು ಎದುರಿಸುತ್ತಿರುವ ಗೊಂದಲವು ಬಹಳಷ್ಟು ಪೋಷಕರಿಗೂ ಕಾಡುತ್ತದೆ. ಇನ್ನೂ ಜೀವನವೆಂದರೆ ಏನು ಎಂದು ಪೂರ್ತಿಯಾಗಿ ಕಣ್ಣುಬಿಟ್ಟು ನೋಡಿರದ ಕಂದಮ್ಮಗಳೂ ಸಾವಿನ ಬಗ್ಗೆ ಯೋಚಿಸುವುದನ್ನು ನೆನೆಸಿಕೊಂಡರೇನೇ ಹೆತ್ತವರಿಗೆ ಆಶ್ಚರ್ಯ, ಗೊಂದಲ, ಆತಂಕದ 
ಜೊತೆ ಸಂಕಟವೂ ಆಗೇ ಆಗುತ್ತದೆ. ಅದಲ್ಲದೆ, ಮಾನಸಿಕ ಕಾಯಿಲೆ ಅನ್ನೋದು ಮಕ್ಕಳಿಗೆ ಬಾಧಿಸಲಾರದು. ಅದೇನಿದ್ದರೂ ವಯಸ್ಕರ ಸೊತ್ತು ಎಂಬಂತಿರುವ ಸಮಾಜದಲ್ಲಿನ ತಪ್ಪುಧೋರಣೆ, ಈ ಚಿಕ್ಕ ಮಕ್ಕಳನ್ನು ಕಾಡುತ್ತಿರುವ, ಮನೋಬೇನೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸದಂತೆ ಮಾಡಿ ಸೂಕ್ತ ಚಿಕಿತ್ಸೆಯೂ ಸಿಗದೆ ಇನ್ನಷ್ಟು ಸಂಕಷ್ಟಗಳನ್ನು ಎದುರಿಸುವಂತೆ ಮಾಡುತ್ತದೆ. 

ಸಹಜವಾಗಿ ಹೇಳುವುದಾದರೆ, ಮನಸ್ಸು ಅಂತ ಇದ್ದವರಿಗೆಲ್ಲ ಮಾನಸಿಕ ಕಾಯಿಲೆ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಇದಕ್ಕೆ ವಯಸ್ಸಿನ ಕಡಿವಾಣ ಇಲ್ಲ. ನಿಮ್ಮ ತಮ್ಮನ ಮಗಳನ್ನು ಕಾಡುತ್ತಿರುವ ಖನ್ನತೆಯಂಥ ಮನೋಬೇನೆ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಶೇ. 2 - 4.8% ರವರೆಗೆ ಕಾಣಿಸಿಕೊಳ್ಳಬಹುದು. ಇದಕ್ಕೆ ಚಿಕಿತ್ಸೆ ಕೊಡಿಸದೇ ನಿರ್ಲಕ್ಷಿಸಿದರೆ, ಈ ರೀತಿಯ ವ್ಯಾಧಿ ಪುನಃ ಪುನಃ ಉದ್ಭವಿಸಿ, ಅಂಥ ಮಕ್ಕಳು ದೊಡ್ಡವರಾದ ಮೇಲೂ ಈ ಕಾಯಿಲೆ ತೀವ್ರತರವಾಗಿ ಕಾಡಬಹುದು! ಈ ಕಾಯಿಲೆ ಬಂದಾಗ, ಮಕ್ಕಳಲ್ಲಿ ವಯಸ್ಕರಲ್ಲಿ ಕಾಣುವ ಖನ್ನತೆಗಿಂತ ಸ್ವಲ್ಪ$ ವಿಭಿನ್ನವಾದ ಗುಣಲಕ್ಷಣಗಳೂ ಕಾಣಿಸಿಕೊಳ್ಳಬಹುದು! 

 ಬೇಜಾರು ಅಂತ ಬಾಯಿಬಿಟ್ಟು ಹೇಳದಿದ್ದರೂ, ಮಕ್ಕಳ ಸ್ವಭಾವದಲ್ಲಿ ಸ್ಪಷ್ಟ ವ್ಯತ್ಯಾಸಗಳು ಕಾಣಿಸ ತೊಡಗುತ್ತದೆ. ಸಮಾಜದಿಂದ, ಮನೆಯವರಿಂದ ವಿಮುಖರಾಗುವುದು, ಸಿಟ್ಟು- ಸಿಡುಕುತನ, ನಿದ್ರೆಯಲ್ಲಿ ಏರುಪೇರು, ನಿರಾಸಕ್ತಿ, ದೈಹಿಕ ತೊಂದರೆಗಳು, ಆತ್ಮವಿಶ್ವಾಸದಲ್ಲಿನ ಕೊರತೆ, ಹಿಂಜರಿಕೆ, ಹೇಳಿದ್ದಕ್ಕೆಲ್ಲಾ ಎದುರು ಮಾತಾಡುವಿಕೆ, ಉಗ್ರ ವರ್ತನೆ, ಪಾಠ ಹಾಗೂ ಪಠ್ಯೇತರ ವಿಷಯಗಳಲ್ಲಿನ ಸಾಧನೆಯಲ್ಲಿ ಕುಂದುವಿಕೆ- ಇವೆಲ್ಲಾ ಲಕ್ಷಣಗಳ ಜೊತೆ, ಸಾವಿನ ಕುರಿತು ಆಲೋಚನೆಗಳು, ಆತ್ಮಹತ್ಯೆಯ ಬಗ್ಗೆಗಿನ ಚಿಂತೆಗಳೂ ಬರುತ್ತವೆ.

ಇಲ್ಲಿ, ಇನ್ನೊಂದು ಕ್ಲಿಷ್ಟಕರವಾದ ಸಂಗತಿ ಎಂದರೆ, ಈ ಮಕ್ಕಳಲ್ಲಿ ಬೇರೆ ಮನೋವ್ಯಾಧಿಗಳೂ ಅಧಿಕ ಪ್ರಮಾಣದಲ್ಲಿ ಜೊತೆಜೊತೆಗೇ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ, ಆತಂಕ ಮನೋಬೇನೆ, ವಿರೋಧಾಭಾಸವಾದ ನಡವಳಿಕೆಯ ತೊಂದರೆ, ಅತಿ ಚಟುವಟಿಕೆಯ ಕಾಯಿಲೆ, ಮಾದಕ ವಸ್ತುಗಳ ದುರ್ಬಳಕೆ, ಹಾಗೂ ವಿರಳವಾದ ತಿನ್ನುವ ಸ್ವಭಾವಕ್ಕೆ ಸಂಬಂಧಿಸಿದ ಕಾಯಿಲೆಗಳೂ ಕಾಣಿಸಿಕೊಂಡು, ಚಿಕಿತ್ಸೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ. ತಂದೆ-ತಾಯಿಯರಲ್ಲಿ ಖನ್ನತೆ, ಪರಿಸರದಲ್ಲಿ ಅತಿಯಾದ ಒತ್ತಡ, ಋಣಾತ್ಮಕ ಜೀವನ-ಘಟನೆಗಳು, ಪಾಠ- ಪಠ್ಯೇತರ ವಿಷಯಗಳಲ್ಲಿ ನಿರ್ವಹಣಾ ಕೊರತೆ, ನಿಕಟ ಕೌಟುಂಬಿಕ ಆಸರೆ ಇಲ್ಲದಿರುವಿಕೆ ಅಥವಾ ಗ್ರಹಿಸುವಿಕೆ...

ಇದೆಲ್ಲಾ ಇರುವುದು ಆ ಮಕ್ಕಳ ಜೀವನದಲ್ಲಿ ಖನ್ನತೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಈ ರೀತಿಯ ಕಾಯಿಲೆಯನ್ನು ಆದಷ್ಟು ಬೇಗನೇ ಗುರುತಿಸಿ, ತಜ್ಞವೈದ್ಯರಲ್ಲಿ ಆದಷ್ಟು ಬೇಗನೆ ಚಿಕಿತ್ಸೆ ಪ್ರಾರಂಭಿಸುವುದೇ ಮೊದಲ ಹೆಜ್ಜೆಯಾಗಬೇಕು. ನಿರ್ದಿಷ್ಟ ಔಷಧಿಗಳ ಜೊತೆಜೊತೆಗೆ, ಆಪ್ತ ಸಮಾಲೋಚನೆ, ಯೋಚನಾಧಾಟಿಯನ್ನು ಬದಲಿಸುವ ಸಮಾಲೋಚನೆ‌ ಇತರ ಚಿಕಿತ್ಸೆ, ಕುಟುಂಬದವರ ಆಸರೆ-ಪ್ರೀತಿ, ಪೋಷಕರಲ್ಲಿ- ಶಿಕ್ಷಕರಲ್ಲಿ-ಸಮಾಜದಲ್ಲಿ ಇದರ ಬಗೆಗಿನ ಹೆಚ್ಚಿನ ಅರಿವು ಇವೆಲ್ಲವನ್ನೂ ಸಮಯೋಚಿತವಾಗಿ, ಸಮರ್ಪಕವಾಗಿ ನಿರ್ವಹಿಸಿದಲ್ಲಿ, ಈ ಪುಟ್ಟ ಮನಸ್ಸುಗಳು ಖನ್ನತೆ ತಾಪಕ್ಕೆ ಬಾಡದಂತೆ, ನಲುಗದಂತೆ ಕಾಪಿಟ್ಟುಕೊಳ್ಳಬಹುದು. 

* ಡಾ. ಅರುಣಾ ಯಡಿಯಾಳ್‌

Trending videos

Back to Top