CONNECT WITH US  

ಕಲೆ ಬುರುಡೆ...

ಈ ಆಭರಣಗಳಿಗೆ ತಲೆಯೇ ಪ್ರತಿಷ್ಠೆ!

ಬುರುಡೆಯ ಆಭರಣವನ್ನು ಯಾವತ್ತಾದರೂ ಧರಿಸಿದ್ದೀರಾ? ಬುರುಡೆ ಬಿಡುತ್ತಿಲ್ಲಾರೀ, ಇದೀಗ ನಿಜಕ್ಕೂ ತಲೆಬುರುಡೆಯ ವಿನ್ಯಾಸದ ಆಭರಣಗಳ ಟ್ರೆಂಡ್‌ ಫ್ಯಾಷನ್‌ಲೋಕದಲ್ಲಿ ಶುರುವಾಗಿದೆ. ಬುರುಡೆಯ ಸರ, ಉಂಗುರ, ಪೆಂಡೆಂಟ್‌, ಹೇರ್‌ಕ್ಲಿಪ್‌ಗ್ಳಿಗೆ ಹೆಂಗೆಳೆಯರು ಫಿದಾ ಆಗುತ್ತಿದ್ದಾರೆ...

ಕಾಮಿಕ್ಸ್‌ ಓದುವವರಿಗೆ ಫ್ಯಾಂಟಮ್‌ನ ಪರಿಚಯ ಇದ್ದೇ ಇರುತ್ತೆ. ಫ್ಯಾಂಟಮ್‌ ಕಥೆಗಳಲ್ಲಿ ಬರುವ ಸ್ಕಲ್‌ ಕೇವ್‌ (ಬುರುಡೆ ಆಕಾರದ ಗುಹೆ) ಓದುಗರನ್ನು ವಿಸ್ಮಿತಗೊಳಿಸಿತ್ತು. ಅಲ್ಲದೆ ಕಥಾನಾಯಕ ಫ್ಯಾಂಟಮ್‌ ಸ್ವತಃ ಬುರುಡೆಯಾಕಾರದ ಉಂಗುರವನ್ನು ತೊಡುತ್ತಿದ್ದ. ತನ್ನ ಬಲಶಾಲಿ ಮುಷ್ಟಿಯಿಂದ ಕಿಡಿಗೇಡಿಗಳಿಗೆ ಆತ ಪಂಚ್‌ ಕೊಟ್ಟಾಗ ಅವರ ಮುಖದ ಮೇಲೆ ಬುರುಡೆಯ ಅಚ್ಚು ಬೀಳುತ್ತಿತ್ತು. ಆ ಅಚ್ಚು ಫ್ಯಾಂಟಮ್‌ನ ಸ್ಟೈಲ್‌ ಆಗಿತ್ತು!

ಮೇಲೆ ಹೇಳಿದ ಬುರುಡೆ ಆಭರಣಗಳಿಗೆ ಫ್ಯಾಂಟಮ್‌ ಸ್ಫೂರ್ತಿ! ಮೊದಮೊದಲು ಬುರುಡೆ ಉಂಗುರಗಳು ಮಾರುಕಟ್ಟೆಗೆ ಬಂದವು. ಅವನ್ನು ಹೆಚ್ಚಾಗಿ ಪುರುಷರೇ ಧರಿಸುತ್ತಿದ್ದರು. ನಂತರದ ದಿನಗಳಲ್ಲಿ ಆ ಉಂಗುರ ಹೆಂಗಸರಿಗೂ ಪ್ರಿಯವಾಯಿತು. ಈಗ ಆ ಬುರುಡೆಯಾಕಾರದ ಉಂಗುರಗಳ ಜೊತೆಗೆ ಇತರೆ ಆಭರಣಗಳೂ ಬಂದಿವೆ. ಬೇರೆ-ಬೇರೆ ಆಕಾರ, ವಿನ್ಯಾಸ, ಬಣ್ಣ ಮತ್ತು ಆಕೃತಿಯ ಫ್ಯಾಷನ್‌ ಆಕ್ಸೆಸರೀಸ್‌ಗಳು ಈಗ ಲಭ್ಯ. 

ಎಲ್ಲೆಲ್ಲಿ ಧರಿಸಬಹುದು?: ಸ್ಕಲ್‌ ರಿಂಗ್‌ನಿಂದ ಪ್ರೇರಣೆ ಪಡೆದ ಪೆಂಡೆಂಟ್‌, ಕಿವಿಯೋಲೆ, ಹೇರ್‌ ಕ್ಲಿಪ್‌, ಬೆಲ್ಟ್, ಬ್ರೇಸ್ಲೆಟ್‌, ಮೂಗುತಿ ಕೂಡ ಬುರುಡೆ ಆಕಾರದಲ್ಲಿ ಲಭ್ಯವಿರುವ ಕಾರಣ ಇವೆಲ್ಲವನ್ನೂ ಬುರುಡೆಯಾಕಾರದ ಉಂಗುರದ ಜೊತೆ ಒಂದು ಸೆಟ್‌ನಂತೆ ಧರಿಸಬಹುದು. ಇವನ್ನು ಧರಿಸುವಾಗ ಯಾವೆಲ್ಲಾ ಕಾರ್ಯಕ್ರಮಗಳಿಗೆ ಇವು ಹೊಂದುತ್ತವೆ ಎನ್ನುವುದನ್ನು ವಿಚಾರ ಮಾಡುವ ಅಗತ್ಯವಿದೆ. 

ಬುರುಡೆ ಆಕಾರದ ಒಡವೆಗಳು, ರೇಷ್ಮೆ ಸೀರೆ, ಉದ್ದ ಲಂಗ, ಚೂಡಿದಾರ, ಲಂಗ ದಾವಣಿ, ಸಲ್ವಾರ್‌ ಕಮೀಜ್‌ ಮುಂತಾದ ಸಾಂಪ್ರದಾಯಿಕ ಉಡುಗೆಗಳ ಜೊತೆ ಅಷ್ಟೊಂದು ಅಂದವಾಗಿ ಕಾಣುವುದಿಲ್ಲ. ಹೀಗಾಗಿ ಮದುವೆಯಂಥ ಶುಭ ಸಮಾರಂಭಗಳಿಗೆ ಈ ಆಭರಣಗಳನ್ನು ಧರಿಸುವುದು ಸೂಕ್ತವೆನಿಸದು. ಕುರ್ತಾ, ಸೆಮಿ ಫಾರ್ಮಲ್ಸ್‌, ಪಲಾಝೊ ಪ್ಯಾಂಟ್ಸ್‌, ಜಂಪ್‌ ಸೂಟ್ಸ್‌, ಸ್ಕರ್ಟ್‌ಗಳು, ಶಾರ್ಟ್ಸ್ ಮತ್ತು ಶರ್ಟ್‌ ಡ್ರೆಸ್‌ಗೆ ಒಪ್ಪುತ್ತವೆ. ಕ್ಯಾಶುವಲ್‌ ಕಾರ್ಯಕ್ರಮಗಳು, ಕಾಲೇಜು ಸಮಾರಂಭಗಳಿಗೂ ಇವು ಹೊಂದಬಹುದು.

ಬಣ್ಣ ಬಣ್ಣದ ಬುರುಡೆ: ಲೋಹ, ಪ್ಲಾಸ್ಟಿಕ್‌, ಗಾಜು ಅಥವಾ ಮರದ ತುಂಡಿನಿಂದ ಮಾಡಿದ ಬುರುಡೆಗೆ ಕೆಂಪು, ನೀಲಿ ಅಥವಾ ಹಸಿರು ಬಣ್ಣದ ಕಲ್ಲು ಅಥವಾ ಗಾಜಿನ ತುಂಡುಗಳಿಂದ ಕಣ್ಣುಗಳನ್ನು ಮಾಡಲಾಗುತ್ತದೆ. ಇದರಿಂದ ಬುರುಡೆ ಇನ್ನೂ ಆಕರ್ಷಕವಾಗಿ ಕಾಣಿಸುತ್ತದೆ! ಕನ್ನಡಕ ಅಥವಾ ಕೂಲಿಂಗ್‌ ಗ್ಲಾಸ್‌ ತೊಟ್ಟ ಬುರುಡೆ, ಕೊಂಬುಳ್ಳ ಬುರುಡೆ, ಅಳುತ್ತಿರುವ ಬುರುಡೆ, ಕಣ್ಣು ಹೊಡೆಯುತ್ತಿರುವ ಬುರುಡೆ, ಕಡಲ್ಗಳ್ಳನಂತೆ ಒಂದು ಕಣ್ಣಿನ ಮೇಲೆ ಪಟ್ಟಿ ತೊಟ್ಟ ಬುರುಡೆ, ಕಣ್ಣು/ ಬಾಯಿಂದ ಬೆಂಕಿ ಕಾರುವ ಬುರುಡೆ, ಕಣ್ಣಿಂದ ಬೆಳಕು ಚೆಲ್ಲುವ ಬುರುಡೆ, ಹೀಗೆ ಚಿತ್ರ- ವಿಚಿತ್ರ ಆಯ್ಕೆಗಳು ಲಭ್ಯವಿವೆ. 

ಸ್ವತಂತ್ರ ಮನೋಭಾವದವರಿಗೆ: ಅಂದಹಾಗೆ, ಈ ಆಭರಣಗಳು ಫ್ಯಾಷನ್‌ ಸ್ಟೇಟ್‌ಮೆಂಟ್‌ ಕೂಡಾ ಹೌದು. ಇವನ್ನು ಧರಿಸುವ ಮೂಲಕ ತಾವು ಸ್ವತಂತ್ರ ಮನೋಭಾವದವರು ಎಂದು ಪ್ರಚುರ ಪಡಿಸಿದಂತಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಬೈಕರ್‌ಗಳು, ಗೋಥಿಕ್‌ ಅಥವಾ ಹೆವಿ ಮೆಟಲ್‌ ಸಂಗೀತ ಪ್ರಿಯರು ಯಾವುದೇ ಶಿಷ್ಟಾಚಾರಗಳನ್ನು ಅನುಸರಿಸದೆ ತಮ್ಮದೇ ಆದ ವಿಶಿಷ್ಟ ಶೈಲಿಯ ಉಡುಗೆ ತೊಡುತ್ತಾರೆ. ತಮ್ಮ ಆಲೋಚನೆಗಳನ್ನು ಪ್ರತಿಬಿಂಬಿಸುವ ಬಣ್ಣಗಳನ್ನು ತೊಡುತ್ತಾರೆ. ಇವರೆಲ್ಲ ಬುರುಡೆ ಆಭರಣಗಳನ್ನು ಹೆಚ್ಚಾಗಿ ತೊಡುತ್ತಾರೆ. 

ಟ್ರೆಂಡ್‌ ಸೆಟ್‌ ಮಾಡಿ..: ಸ್ಕಲ್‌ ಆಭರಣಗಳು ಆನ್‌ಲೈನ್‌ನಲ್ಲಿ ಮಾತ್ರವಲ್ಲ, ರಸ್ತೆ ಬದಿಯ ಅಂಗಡಿಗಳಲ್ಲೂ ಲಭ್ಯ. ಅಂಗೈಯಷ್ಟೇ ದೊಡ್ಡ ಮುದ್ರೆಯ ಸ್ಕಲ್‌ ರಿಂಗ್ಸ್ ಇದೀಗ ಬಹುತೇಕ ಎಲ್ಲ ಕಾಲೇಜು ವಿದ್ಯಾರ್ಥಿನಿಯರ ಕೈಬೆರಳುಗಳಲ್ಲಿ ರಾರಾಜಿಸುತ್ತಿವೆ. ಉಂಗುರದ ಆಕೃತಿ ತುಂಬಾ ದೊಡ್ಡದಿದ್ದ ಮೇಲೆ ಎಲ್ಲರ ಕಣ್ಣು ಅತ್ತ ಬೀಳದಿರುತ್ತದೆಯೇ? ಮತ್ತೂಂದು ಗುಟ್ಟೂ ನಿಮ್ಮ ಗಮನದಲ್ಲಿರಲಿ: ಕ್ಯಾಂಪಸ್‌ನಲ್ಲಿ ಟ್ರೆಂಡ್‌ ಸೆಟ್ಟರ್‌ ಆಗಲು, ಪಾರ್ಟಿಗಳಲ್ಲಿ ಶೋ ಸ್ಟಾಪರ್‌ ಆಗಲು ಸ್ಕಲ್‌ ರಿಂಗ್ಸ್ ಸಹಕಾರಿ.

* ಅದಿತಿಮಾನಸ ಟಿ.ಎಸ್‌.


Trending videos

Back to Top