CONNECT WITH US  

ಬಾಳು ಕೊಟ್ಟವರು

ಬಣ್ಣದ ಟೆಂಟಿನ ಬದಲಾಗದ ಹೆಣ್ಣು 

ಇಪ್ಪತ್ತು ವರ್ಷ ಕಳೆದರೂ ಕಂಪನಿ ನಾಟಕಗಳಲ್ಲಿ ಇನ್ನೂ ನಮ್ಮೂರ ಹೆಣ್ಣುಗಳಿಗೆ ಬಾಳುಕೊಡುತ್ತ ಬಂದಿರುವ ನಮ್ಮ ಸಮಾಜಕ್ಕೆ ಯಾರೆಷ್ಟು ಹ್ಯಾಪಿ ವುಮನ್ಸ್‌ ಡೇ ಎಂದರೂ ಅಷ್ಟೇ...

ವುಮನ್ಸ್‌ ಡೇ ಬಂತು,  ಹೋಯ್ತು. ಮತ್ತೆ ಮುಂದಿನ ವರ್ಷ ಬರುತ್ತೆ. ಮತ್ತೆ ಎಲ್ಲರೂ ಹುರ್ರ ಅಂತ ಹ್ಯಾಪಿ ವುಮೆನ್ಸ್‌ ಡೇ ಅಂತಾರೆ. ನಾನು ಈ ಬಾರಿ ಯಾರಿಗೂ ವಿಶ್‌ ಮಾಡಲಿಲ್ಲ. ಮಾಡುವುದರಲ್ಲಿ ಅರ್ಥವೂ ಕಾಣಲಿಲ್ಲ. ಏಕೆಂದರೆ, ಯಾರು ನನಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಅಂದರೂ ಆ ನಾಟಕದ ಟೆಂಟ್‌ ನೆನಪಾಗುತ್ತಿತ್ತು. ಬರೋಬ್ಬರಿ ಇಪ್ಪತ್ತು ವರ್ಷಗಳ ಮೇಲೆ ಹೋಗಿದ್ದ ಸಿರ್ಸಿ ಜಾತ್ರೆ, ಅದಕ್ಕಿಂತಲೂ ಜಾತ್ರೆ ಎಂದರೆ ಕಂಪನಿ ನಾಟಕ ನೋಡದ ಹೊರತು ಇನ್‌ಕಂಪ್ಲೀಟ್‌ ಎಂದುಕೊಂಡು ವಿಮಾನ ಪ್ರಯಾಣದ ಹಿಂದಿನ ದಿನವೇ ಆದರೂ ನಿದ್ದೆಗೆಟ್ಟು ನೋಡಿಬಿಡಬೇಕು ಎಂದು ಹೋಗಿದ್ದ ಆ ನಾಟಕ.

ಅದೇ ಬಣ್ಣದ ತಗಡಿನ ಟೆಂಟ್‌. ಮಣ್ಣಿನ ನೆಲ. ಹಿಂದೆಲ್ಲ ಇರುತ್ತಿದ್ದ ಕಬ್ಬಿಣ ಕುರ್ಚಿಗೆ ಬದಲಾಗಿ ಈಗ ಪ್ಲಾಸ್ಟಿಕ್‌ ಕುರ್ಚಿಗಳು. ಕಿಕ್ಕಿರಿದು ತುಂಬಿದ್ದ ಊರಜನ, ಸುತ್ತಲ ಹಳ್ಳಿಜನ. ಕಂಪನಿ ನಾಟಕಗಳಲ್ಲಿ ಏನೋ ಒಂದು ಬಗೆಯ ಸಮಾಜದ ಒಳನೋಟವಿದೆ. ಅದು ಅಂದಿನ ಕಾಲಮಾನ ಜನಜೀವನದ ತುಣುಕೊಂದನ್ನು ತೋರಿಸುತ್ತೆ. ಹಾಗಾಗಿ, ಈ ಇಪ್ಪತ್ತು ವರ್ಷಗಳ ಮೇಲೆ ನಮ್ಮ ಸಮಾಜ ಹೇಗೆ ಬದಲಾಗಿದೆ ನೋಡುವ ಎಂಬ ಕುತೂಹಲವಿತ್ತು. ಅಲ್ಲಿ ಹಾರ್ಮೋನಿಯಂ ಇರಲಿಲ್ಲ. ಲೈವ್‌ ಪ್ರಾರ್ಥನೆ ಇರಲಿಲ್ಲ. ಎಲೆಕ್ಟ್ರಾನಿಕ್‌ ರಿದಮ… ಪ್ಯಾಡ್‌ ಬಾರಿಸುತ್ತಿದ್ದನೊಬ್ಬ.

ಪ್ರಾರ್ಥನೆ ಹಾಡು ಬರೀ ಹಿನ್ನೆಲೆಯಲ್ಲಿತ್ತು. ಕಂಪನಿ ನಾಟಕಗಳು ಪರವಾಗಿಲ್ಲ, ನವೀಕರಣವಾಗಿಬಿಟ್ಟಿವೆ ಎಂದುಕೊಂಡೆ. ನಾಟಕ ಆರಂಭ. ಥೇಟ್‌ ಅದೇ ಕುಣಿತ, ಮಸಾಲಾ ಸಿನಿಮಾದ  ಶೈಲಿಯ, ಸಾಮಾಜಿಕ ಕಾದಂಬರಿ ರೀತಿಯ ಮುನ್ನುಡಿ. ಕಂಪನಿ ನಾಟಕಗಳಿಂದ ನಾನೇನು ಹೆಚ್ಚಿನದೇನನ್ನೂ ನಿರೀಕ್ಷಿಸಿರಲಿಲ್ಲ. ಹಾಗಾಗಿ ತಿಳಿಹಾಸ್ಯ, ಅತಿರೇಕದ ನಟನೆ ಎಲ್ಲ ಮಜವಾಗಿತ್ತು. ಒಂದೆರಡು ಆಕ್ಷೇಪಾರ್ಹ ಉಪದೇಶಾಮೃತದ ಡೈಲಾಗ್‌ ಬಿಟ್ಟರೆ ಕಂಪನಿ ನಾಟಕದ ಚೌಕಟ್ಟಿಗೆ ಹೊಂದಿಕೊಂಡಿದ್ದ ನಾಟಕಕ್ಕೆ ಕಿಕ್ಕಿರಿದು ತುಂಬಿದ್ದ ಟೆಂಟ್‌ ನಗುತ್ತಾ ಸ್ಪಂದಿಸುತ್ತಿತ್ತು.

ಹೀರೋಯಿನ್‌ ಪ್ರಾಧಾನ್ಯ ನಾಟಕದಲ್ಲಿ ಒಟ್ಟೂ ಚಿತ್ರಣ ಚೆನ್ನಾಗಿಯೇ ನಡೆಯುತ್ತಿತ್ತು. ಕ್ರೂರ ಕೊಳಕು ಗಂಡ ಹೆಂಡಿರು, ಆಸ್ತಿಗಾಗಿ ಮೋಸಮಾಡಿದವರು. ಇಲ್ಲಿ ಗಂಡಸನ್ನು ಹತ್ಯೆಗೈಯುವ ನಾಯಕಿ, ಖಳನಾಯಕಿಗೆ, ಅವಳಿಂದ ಮೋಸ ಹೋಗಿ ಆಸ್ತಿ ಕಳಕೊಂಡವನಿಂದಲೇ ಬಾಳು ಕೊಡಿಸುತ್ತಾಳೆ! ಇಲ್ಲಿಗೆ ನನಗೆ ತಲೆ ಒಮ್ಮೆ ಗುಂಯ್‌ ಎಂತು. ಕೆಟ್ಟಗಂಡಸು ಹೇಗೆ ಕೆಟ್ಟವನೋ, ಕೆಟ್ಟ ಹೆಂಗಸಿಗೂ ಅದೇ ನ್ಯಾಯ ಸಂದಿದರೆ ಅದಕ್ಕೊಂದು ಅರ್ಥ. ಯಾರಿಗೆ ಯಾರೂ ಯಾಕೆ ಬಾಳು ಕೊಡಬೇಕೆಂಬುದೇ ನನಗಿನ್ನೂ ಬಗೆಹರಿಯದ ಸಮಸ್ಯೆ. "ಇರಲಿ... ಇದು ರಂಗಶಂಕರವಲ್ಲ.. ಸುಮ್ಮನೆ ನೋಡು' ಎಂದು ನನಗೆ ನಾನೇ ಸಮಾಧಾನಿಸಿಕೊಂಡೆ.

ಆಸ್ಪತ್ರೆ ಕಟ್ಟಿಸಿ, ಕೆಟ್ಟವರನ್ನು ಕೊಂದು, ಕೆಟ್ಟು ಹೋದವರ ಸರಿ ದಾರಿಗೆ ತಂದು, ಬಡವರನ್ನು ಉದ್ದರಿಸಿ, ಪ್ರಗತಿಪರ ಫೆಮಿನಿಸ್ಟ್‌ ಅಂತೆಯೇ ಇದ್ದ ನಾಯಕಿಗೆ ಕೊನೆಯಲ್ಲಿ ಟ್ವಿಸ್ಟ್‌ ಎಂದರೆ, ಬ್ರೇನ್‌ ಟ್ಯೂಮರ್‌! ಧೀರರಂತೆ ಅಪ್ಪನ ಮಡಿಲಲ್ಲಿ ಶಿವಧ್ಯಾನದಲ್ಲಿ ಸಾಯುತ್ತಿದ್ದ ನಾಯಕಿಯ ಅಪ್ಪನಿಗೆ ಇರುವ ಒಂದೇ ಒಂದು ಆಸೆ ಎಂದರೆ ಆಕೆ ಮುತ್ತೈದೆಯಾಗಿ ಸಾಯಬೇಕು. ಥತ್ತೇರಿಕಿ. ಮತ್ತೆ ತಲೆ ಗುಂಯ… ಅಂತು. ಹಿಂದಿನ ಸಾಲಿನ ಒಂದಷ್ಟು ಜನ ಗಳಗಳ ಅಳಲು ತಯಾರಾಗಿ ಕುಂತಿದ್ದರು. ಅಲ್ಲ, ಆಕೆಗೆ ಮದುವೆ, ಪ್ರೀತಿ- ಪ್ರೇಮ ಎಂಬ ಆಸೆ ಇರುವುದು ಸಹಜ.

ಅವಳು ಹೇಳಿಕೊಳ್ಳುವುದೂ ಸಹಜ. ಆ ಬಗೆಯಲ್ಲಿ ಆಕೆಗೆ ಪ್ರೇಮ- ಕಾಮದ ಅನುಭವ ಪಡೆದು ಸಾಯುವ ಬಯಕೆಯಿದ್ದಲ್ಲಿ ಅದು ಅತಿ ಸಹಜ. ಎಲ್ಲ ಬಿಟ್ಟು ಮುತ್ತೈದೆ ಸಾವು. ಅದೂ ಇಷ್ಟೊತ್ತು ನಡೆದ ಪ್ರಗತಿಪರ ನಾಯಕಿಗೆ! ಶಿವನೇ, "ಸ್ಕ್ರಿಪ್ಟ್ ರೈಟರ್‌ ಕರೀರಿ' ಎನ್ನಬೇಕು ಅನಿಸಿಬಿಟ್ಟತು. ಅದಕ್ಕೆ ಸರಿಯಾಗಿ ಇನ್ನೇನು ಆಕೆ ಸಾಯಬೇಕು, ಅವಳೇ ಉದ್ಧರಿಸಿದ ಅವಳಲ್ಲಿ ಅನುರಕ್ತನಾಗಿದ್ದ ಬಡ ಸಂಗೀತಗಾರನೊಬ್ಬ ತಾಳಿ ಕಟ್ಟಿ ಬಾಳು ಕೊಡುತ್ತಾನೆ ಅಲ್ಲಲ್ಲ... ಸಾವು ಕೊಡುತ್ತಾನೆ. ಅಲ್ಲ... ಇಷ್ಟು ದಿನ ಬಾಳು ಕೊಡಲೊಬ್ಬ ಗಂಡು ಬೇಕಿತ್ತು ಅಂದುಕೊಂಡಿದ್ದೆ, ಈಗ ಸಾವು ಕೊಡಲೂ ಗಂಡ ಬೇಕೇ!?

ಮುಕ್ಕಾಲು ಪಾಲು ಟೆಂಟ್‌ ಗಂಡಸು ಹೆಂಗಸರೆನ್ನದೆ ಇಂಟೆನ್ಸ್‌ ನಟನೆಗೆ ಗಳಗಳ ಅಳುತ್ತಿದ್ದರು. ಹೀರೋಯಿನ್‌ ಹೆಣಕ್ಕೆ ಎಲ್ಲರೂ ಬಳಬಳ ಅರಿಶಿನ ಮೆತ್ತುತ್ತಿದ್ದರೆ, ನನಗೆ ತಡೆಯಲಾರದಷ್ಟು ನಗು. ಅತ್ಲಾಗೆ ಅವಳ ಹನಿಮೂನ್‌ ಮುಗಿದು ಗೊಟಕ್‌ ಎಂದಿದ್ದರೆ ಮುತ್ತೈದೆ ಸಾವಿಗೊಂದು ಅರ್ಥವಿತ್ತು, ಇದೆಂಥ ಆಟಕ್ಕುಂಟು ಲೆಕ್ಕಕ್ಕಿಲ್ಲ ಮುತ್ತೈದೆ ಸಾವು ಎಂದುಕೊಂಡು ನಾನು ಮುಸಿಮುಸಿ ನಗುತ್ತಿದ್ದೆ.

ಈ ಮಾಸ್‌ ನಾಟಕಗಳಿಗೆ, ಮಾಸ್‌ ಪ್ರೇಕ್ಷಕರ ಮನಃಸ್ಥಿತಿಯನ್ನು ಒಂದಷ್ಟು ಪ್ರಮಾಣದಲ್ಲಿ ಬದಲಿಸುವ ಸಾಮರ್ಥ್ಯ ಖಂಡಿತಾ ಇದೆ. ಅದಕ್ಕೆ ನಾಟಕದ ನಡುವೆಲ್ಲ ಪ್ರಗತಿಪರ ನಾಯಕಿಗೆ ಬೀಳುತ್ತಿದ್ದ ಶಿಳ್ಳೆಗಳೇ ಸಾಕ್ಷಿ. ಅಂಥಾದ್ದರಲ್ಲಿ ನಾಟಕದ ಕೊನೆಯಲ್ಲಿ ಬಾಳು ಕೊಡಲೂ, ಸಾವು ಕೊಡಲೂ ಗಂಡಸೊಬ್ಬ ಹೆಣ್ಣಿಗೆ ಬೇಕೇ ಬೇಕು ಎಂಬಂತೆ ಷರಾ ಬರೆದಿದ್ದು, ಆ ಹಳ್ಳಿ ಮುಗ್ಧರ ವಿಚಾರಧಾರೆಯಲ್ಲಿ ಒಂದಿಷ್ಟು ಬದಲಾವಣೆ ತರಬಹುದಾಗಿದ್ದ ಚಂದದ ಅವಕಾಶದಿಂದ ಆ ನಾಟಕ ವಂಚಿತವಾಯ್ತು.

ಇಪ್ಪತ್ತು ವರ್ಷ ಕಳೆದರೂ ಕಂಪನಿ ನಾಟಕಗಳಲ್ಲಿ ಇನ್ನೂ ನಮ್ಮೂರ ಹೆಣ್ಣುಗಳಿಗೆ ಬಾಳುಕೊಡುತ್ತ ಬಂದಿರುವ ನಮ್ಮ ಸಮಾಜಕ್ಕೆ ಯಾರೆಷ್ಟು ಹ್ಯಾಪಿ ವುಮನ್ಸ್‌ ಡೇ ಎಂದರೂ ಅಷ್ಟೇ. ಇನ್ನು ಇಪ್ಪತ್ತು ವರ್ಷ ಬಿಟ್ಟು ಮತ್ತೆ ನೋಡುತ್ತೇನೆ, ಆಗಲೂ ತಳಸಮಾಜದ ಮನರಂಜನೆಯ ಮೂಲ ಬಾಳು ಕೊಡುವುದೇ ಆಗಿರದಿದ್ದಲ್ಲಿ ನಿಮ್ಮೆಲ್ಲರಿಗೂ "ಹ್ಯಾಪಿ ವುಮನ್ಸ್‌ ಡೇ' ಎನ್ನುತ್ತೇನೆ. ಅಲ್ಲಿಯವರೆಗೆ, ನನ್ನಷ್ಟಕ್ಕೆ ನಾನು ಹ್ಯಾಪಿ. ನಾನು ಒಬ್ಬ ವುಮನ್‌ ಎಂಬುದೇ ನನಗೆ ಹ್ಯಾಪಿ. ಅನುದಿನವೂ ಹ್ಯಾಪಿ ವುಮನ್ಸ್‌ ಡೇ ನನಗೆ.

* ವೈಶಾಲಿ ಹೆಗಡೆ, ಬಾಸ್ಟನ್‌


Trending videos

Back to Top