CONNECT WITH US  

ಮೋಸ್ಟ್‌ ವಾಂಟೆಡ್‌ ಸೀರೆ!

ಪುರಾತನ ಸೀರೆಯ ಸೆರಗು ಹಿಡಿದು...

ಪೇಟೆಯ ಹುಡುಗಿಯರಿಗೆ ಸೀರೆಯ ಮೇಲಿನ ಅಭಿಮಾನ ಕಡಿಮೆಯಾಗುತ್ತಿದೆ ಎಂಬ ದೂರಿದೆ. ಅದಕ್ಕೆ ಅಪವಾದವೆಂಬಂತೆ ಬೆಂಗಳೂರ್‌ ಹುಡುಗಿ ಹೇಮಲತಾ ಜೈನ್‌, ಎರಡು ಸೀರೆಗಳ ಸೆರಗು ಹಿಡಿದಿದ್ದಾರೆ. ಅಂದಹಾಗೆ, ಈಕೆ ಬೆನ್ನು ಬಿದ್ದಿದ್ದ ಸೀರೆ ರೇಷ್ಮೆ, ಕಾಟನ್‌, ಶಿಫಾನ್‌, ಚಿನ್ನದ ಎಳೆಯಿಂದ ತಯಾರಾದ ವೈಭವಯುತ ದುಬಾರಿ ಮದುವೆ ಸೀರೆಯೋ ಅಲ್ಲ. ಈಕೆ ಮನಸೋತಿದ್ದು ಅದಿನ್ನೆಂಥ ಸೀರೆಗಳಿಗೆ? ಆ ಸಮಯದಲ್ಲಿ ಅವನ್ನು ನೋಡೋಣವೆಂದರೆ, ಈ ಮೋಸ್ಟ್‌ ವಾಂಟೆಡ್‌ ಸೀರೆಗಳೆರಡು ಎಲ್ಲೂ ಸಿಗುವ ಹಾಗಿರಲಿಲ್ಲ. ಏಕೆಂದರೆ, ಅಪ್ಪಟ ಕರ್ನಾಟಕದ ಈ ಸೀರೆಯನ್ನು ಉಡುತ್ತಿದ್ದಿದ್ದು 12ನೇ ಶತಮಾನದಲ್ಲಿ!

ಸೀರೆಯ ಮೇಲೆ ಭಾರತೀಯ ಹೆಣ್ಮಕ್ಕಳಿಗಿರುವ ವ್ಯಾಮೋಹ ಮತ್ತು ಪ್ರೀತಿ ಎಲ್ಲರಿಗೂ ಗೊತ್ತಿರುವುದೇ. ಇತ್ತೀಚಿನ ದಿನಗಳಲ್ಲಿ ಪೇಟೆಯ ಹುಡುಗಿಯರಿಗೆ ಪಾಶ್ಚಾತ್ಯ ಉಡುಪುಗಳ ಮೇಲಿನ ಒಲವಿನಿಂದಾಗಿ, ನಮ್ಮದೇ ಸೀರೆಯ ಮೇಲಿನ ಅಭಿಮಾನ ಕಡಿಮೆಯಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಹೀಗಿರುವಾಗ, ಈ ದೂರಿಗೆ ಅಪವಾದವೆಂಬಂತೆ ಬೆಂಗಳೂರ್‌ ಹುಡುಗಿ ಹೇಮಲತಾ ಜೈನ್‌ ಎರಡು ಸೀರೆಯ ಸೆರಗು ಹಿಡಿದಿದ್ದಾರೆ.

ಅಂದ ಹಾಗೆ, ಈಕೆ ಬೆನ್ನು ಬಿದ್ದಿರುವ ಸೀರೆ ರೇಷ್ಮೆ, ಕಾಟನ್‌, ಶಿಫಾನ್‌, ಚಿನ್ನದ ಎಳೆಯಿಂದ ತಯಾರಾದ ವೈಭವಯುತ ದುಬಾರಿ ಮದುವೆ ಸೀರೆಯೋ ಅಲ್ಲ. ನೈಸರ್ಗಿಕ ವಸ್ತುಗಳು, ಪಕ್ಕಾ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಕೈಮಗ್ಗದಿಂದ ನೇಯ್ದ ಸೀರೆಯಿದು. ಸಮಸ್ಯೆಯೆಂದರೆ ಈ ಸೀರೆ ಎಲ್ಲೂ ಲಭ್ಯವಿರಲಿಲ್ಲ. ಅದರ ತಯಾರಿಕೆ ಅಳಿದು ಯಾವುದೋ ಕಾಲವಾಗಿದೆ ಎಂದೇ ನಂಬಲಾಗಿತ್ತು.

"ಪಟ್ಟೆದ ಅಂಚು' ಮತ್ತು "ಗೋಮಿ ತೆನಿ', ಇವೇ ಹೇಮಲತಾ ಜೈನ್‌ ಅವರನ್ನು ಆಕರ್ಷಿಸಿದ ಅಪ್ಪಟ ಕರ್ನಾಟಕದ ಸೀರೆಗಳು. ಹೇಮಲತಾ ಅವರು ಆ ಸಮಯದಲ್ಲಿ ದೆಹಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿಯಲ್ಲಿ ಓದುತ್ತಿದ್ದರು. ಪಿ.ಎಚ್‌.ಡಿ. ಮಾಡುವಾಗ ಆ ಸೀರೆಗಳನ್ನೇ ತಮ್ಮ ಅಧ್ಯಯನದ ವಿಷಯವಾಗಿ ಆರಿಸಿಕೊಂಡರು. ಆ ಸಮಯದಲ್ಲಿ ಉತ್ತರ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಮಾಹಿತಿ ಕಲೆ ಹಾಕಿದರು, ಅಧ್ಯಯನ ನಡೆಸಿದರು. ಶತಮಾನಗಳಷ್ಟು ಇತಿಹಾಸವಿರುವ ಸೀರೆಯ ಜಾಡು ಹಿಡಿಯುವುದೆಂದರೆ ಸುಮ್ಮನೆಯೇ?

ಸೀರೆಯ ಇತಿಹಾಸ ಮತ್ತು ಹಿನ್ನೆಲೆ: ಪಟ್ಟೆದ ಅಂಚು ಸೀರೆಯ ಇತಿಹಾಸ ನಮ್ಮನ್ನು 10ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಕೆಂಪು ಚೌಕಗಳು ಮತ್ತು ಹಳದಿ ಬಾರ್ಡರ್‌ ಈ ಸೀರೆಯ ವೈಶಿಷ್ಟ. ಪ್ರಾಚೀನ ಕಾಲದಲ್ಲಿ ಮದುಮಗಳು ತವರುಮನೆ ಬಿಟ್ಟು ಗಂಡನ ಮನೆ ಸೇರುವ ಮುನ್ನ, ಆವಳ ತಂದೆ ಈ ಸೀರೆಯನ್ನು ಸವದತ್ತಿ ಯಲ್ಲಮ್ಮ ದೇವಿಗೆ ಅರ್ಪಿಸುವ ಪದ್ಧತಿ ಇತ್ತಂತೆ.

ಹೊಸ ಬಾಳು ಆರಂಭಿಸುತ್ತಿರುವ ತನ್ನ ಮಗಳ ಬದುಕಿನ ಹೊಸ ಪಯಣ ಸುಖಕರವಾಗಿರಲಿ ಎಂದು ತಂದೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತಿದ್ದರು. ಇಂಥದ್ದೇ ಹಿನ್ನೆಲೆ ಗೋಮಿ ತೆನಿ ಸೀರೆಯದ್ದು ಕೂಡಾ. ಈ ಸೀರೆಯ ಅಂಚಿನ ವಿನ್ಯಾಸಕ್ಕೆ ಸ್ಫೂರ್ತಿ ಜೋಳದ ತೆನೆ. ಪ್ರಾಚೀನ ಕಾಲದಲ್ಲಿ, ಮದುವೆಯಾದ ಹೆಂಗಸರು ಮತ್ತು ಗರ್ಭಿಣಿಯರಿಗೆ ಈ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಿದ್ದರಂತೆ. ಅಂದಹಾಗೆ, ಗೋಮಿ ತೆನಿ ಸೀರೆ ಸಮೃದ್ಧಿಯ ಸಂಕೇತ. ಈ ಸೀರೆಯ ಬಾರ್ಡರ್‌ನಲ್ಲಿ ಜೋಳದ ತೆನೆಯ ವಿನ್ಯಾಸವನ್ನು ಕಾಣಬಹುದು.

ಆಸಕ್ತಿ ಹುಟ್ಟಿದ ಕತೆ: ಹೇಮಲತಾ ಅವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿನ ಅರ್ಚಕರಿಂದ ಪಟ್ಟೆದ ಅಂಚು ಸೀರೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಇನ್ನೂ ಹೆಚ್ಚಿನ ಮಾಹಿತಿ ಅವರ ಬಳಿ ಇರಲಿಲ್ಲ. ಆದರೆ, ದೇವದಾಸಿಯೊಬ್ಬರ ಬಳಿ ಆ ಸೀರೆಯ ಪಳೆಯುಳಿಕೆ ಇರಬಹುದೆಂಬ ಮಾಹಿತಿ ನೀಡಿದ್ದರು. ಕತ್ತಲ ಕೂಪದಲ್ಲಿ ಚಿಕ್ಕ ಬೆಳಕಿನ ಕಿಂಡಿ ತೆರೆದಂತಾಯಿತು ಹೇಮಲತಾ ಅವರಿಗೆ. ದೇವದಾಸಿಯ ಬಳಿ ಪಟ್ಟದ ಅಂಚು ಸೀರೆಯ ಅವಶೇಷ ಕಡೆಗೂ ಸಿಕ್ಕಿತು. ಹೇಗಾದರೂ ಮಾಡಿ ಅಳಿದು ಹೋಗಿರುವ ಆ ಸೀರೆಗೆ ಮತ್ತೆ ಜೀವ ತುಂಬಬೇಕೆಂಬ ಬಯಕೆ ಆವತ್ತೇ ಅವರ ಮನದಲ್ಲಿ ಮೊಳೆಯಿತು. ಮುಂದಿನ ಹೆಜ್ಜೆ ನೇಕಾರರ ಮನೆಗಳಿಗೆ.

700 ಮಂದಿಯ ಸಂದರ್ಶನ: ಬೆಳಗಾವಿ, ರಾಯಚೂರು, ಬೀದರ್‌, ಕಲಬುರಗಿ, ಧಾರವಾಡ ಮುಂತಾದ ಕಡೆಗಳಲ್ಲಿ ಶತಮಾನಗಳ ಹಿಂದೆ ಪಟ್ಟೆದ ಅಂಚು ಸೀರೆಯನ್ನು ನೇಯುತ್ತಿದ್ದರಂತೆ. ಆದರೆ, ಈಗ ಆ ಪ್ರದೇಶದಲ್ಲಿ ಅದರ ಯಾವ ಕುರುಹೂ ಇರಲಿಲ್ಲ. ಆದರೆ, ಹೇಮಲತಾ ಕೈಕಟ್ಟಿ ಕೂರಲಿಲ್ಲ. ಹತ್ತಕ್ಕೂ ಹೆಚ್ಚಿನ ಹಳ್ಳಿಗಳಿಗೆ ಭೇಟಿ ನೀಡಿ ಸುಮಾರು 700 ಮಂದಿಯನ್ನು ಸಂದರ್ಶಿಸಿದರು. ಅಲ್ಪ ಸ್ವಲ್ಪ ಮಾಹಿತಿ ಸಿಕ್ಕಿತು.

ಬೇಸರದ ಸಂಗತಿಯೆಂದರೆ, ನೇಕಾರಿಕೆಯಲ್ಲಿ ತೊಡಗಿದ್ದವರೆಲ್ಲಾ ತಮ್ಮ ಕುಲಕಸುಬನ್ನು ಬಿಟ್ಟು ಬೇರೆ ವೃತ್ತಿಯಲ್ಲಿ ನಿರತರಾಗಿದ್ದುದು. ಕೆಲವರು ತರಕಾರಿ ಮಾರುತ್ತಿದ್ದರೆ, ಇನ್ನು ಕೆಲವರು ಐಸ್‌ಕ್ರೀಮ್‌ ಮಾರುತ್ತಿದ್ದರು. ಇದನ್ನು ಕಂಡು ಹೇಮಲತಾ ಅವರಿಗೆ ತುಂಬಾ ಬೇಸರವಾಗಿತ್ತು. ಅವರನ್ನು ಮರಳಿ ನೇಕಾರಿಕೆಗೆ ಕರೆತರುವ ಪ್ರಯತ್ನ ಫ‌ಲ ನೀಡಲಿಲ್ಲ. ಆದರೆ, ಹೇಮಲತಾ ಅವರ ಆಸೆ ಫ‌ಲಿಸಿದ್ದು ಗದಗ ಜಿಲ್ಲೆಯ ಗಜೇಂದ್ರಗಡ ಹಳ್ಳಿಯಲ್ಲಿ. ಅಲ್ಲಿ ಅವರು ಅರಸುತ್ತಿದ್ದ ನೇಕಾರರೊಬ್ಬರು ಸಿಕ್ಕಿದರು!

ಪ್ರಾಜೆಕ್ಟ್ ಪುನರ್‌ಜೀವನ: ಶತಮಾನಗಳಷ್ಟು ಹಳೆಯ ಸೀರೆಯನ್ನು ಜೀವಂತಗೊಳಿಸಲು ಕ್ರಮಿಸಬೇಕಾದ ಹಾದಿ ಇನ್ನೂ ದೂರವಿತ್ತು. ಅದಕ್ಕಾಗಿ ಹಲವು ಸಂಪನ್ಮೂಲಗಳು ಬೇಕಿದ್ದವು, ಹಣ ಸಹಾಯವೂ ಬೇಕಿತ್ತು. ಈ ಸಂದರ್ಭದಲ್ಲಿ ಹೇಮಲತಾ ಅವರಿಗೆ ನೆರವಾಗಿದ್ದು ಜಯಾ ಜೇಟಿÉ. ಅವರು ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳ ತಯಾರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದಸ್ತಕಾರಿ ಹಾಥ್‌ ಸಮಿತಿಯನ್ನು ಸ್ಥಾಪಿಸಿದವರು. ಜಯಾ ಅವರು ನೀಡಿದ ಹಣದ ನೆರವಿನಿಂದ, ಪುರಾತನ ಕರ್ನಾಟಕದ ಎರಡು ಸೀರೆಗಳಿಗೆ ಮರುಜೀವ ನೀಡುವ ಉದ್ದೇಶದಿಂದ ಹೇಮಲತಾ ಅವರ "ಪುನರ್‌ಜೀವನ ಪ್ರಾಜೆಕ್ಟ್' ಶುರುವಾಗಿಯೇಬಿಟ್ಟಿತು.

ವಿದೇಶದಲ್ಲಿ ಕರುನಾಡ ಸೀರೆಯ ಕಂಪು: ಈಗ ಹೇಮಲತಾ ಅವರ ಪುನರ್‌ಜೀವನ ಪ್ರಾಜೆಕ್ಟ್ ಅಡಿ ಹಲವಾರು ನೇಕಾರಿಕೆ ಕುಟುಂಬಗಳು ಕಾರ್ಯ ನಿರ್ವಹಿಸುತ್ತಿವೆ. ತಮ್ಮ ಕುಲಕಸುಬನ್ನು ಬಿಟ್ಟವರಲ್ಲಿ ಅನೇಕರು ಮತ್ತೆ ನೇಕಾರಿಕೆಗೆ ವಾಪಸಾಗುತ್ತಿದ್ದಾರೆ. ಸಿಹಿಸುದ್ದಿ ಅದೊಂದೇ ಅಲ್ಲ, ರಾಷ್ಟ್ರ ಮಾತ್ರವಲ್ಲದೆ ವಿದೇಶಗಳಲ್ಲೂ ನಮ್ಮ ಕರ್ನಾಟಕದ ಸೀರೆಯ ಖ್ಯಾತಿ ಹಬ್ಬುತ್ತಿದೆ. ಇತರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ನಡೆಯುವ ವಸ್ತ್ರಮೇಳಗಳಿಗೆ ಹೇಮಲತಾ ಅವರು ಖುದ್ದು ಹಾಜರಾಗಿ ನಮ್ಮ ನಾಡಿನ ಕೀರ್ತಿಯನ್ನು ಪಸರಿಸುತ್ತಿದ್ದಾರೆ.

ವಾರದಲ್ಲಿ ಎರಡು ದಿನಗಳನ್ನು ಗಜೇಂದ್ರಗಡದಲ್ಲಿ ಕಳೆಯುತ್ತೇನೆ. ಒಂದು ದಿನ ನಾನು ಹಳ್ಳಿಯಲ್ಲಿ ಕಾಣಲಿಲ್ಲವೆಂದರೆ ನೇಕಾರರ ಕುಟುಂಬದವರು ನಾನು ಆರೋಗ್ಯವಾಗಿದ್ದೀನಾ ಅಂತ ಫೋನ್‌ ಮಾಡುತ್ತಾರೆ. ಅಷ್ಟು ಚೆನ್ನಾಗಿ ನಮ್ಮ ನಡುವೆ ಬಾಂಧವ್ಯ ಬೆಳೆದುಬಿಟ್ಟಿದೆ. ಜನರು ನಮ್ಮ ಪ್ರಾಚೀನರ ಸೀರೆ ಬಗ್ಗೆ ಒಲವು ತೋರುತ್ತಿರುವ ಖುಷಿ ಒಂದೆಡೆಯಾದರೆ, ನೇಕಾರರ ಕುಟುಂಬದವರೊಂದಿಗೆ ಒಡನಾಡುವ ಖುಷಿ ಇನ್ನೊಂದೆಡೆ.
-ಹೇಮಲತಾ ಜೈನ್‌, ಪುನರ್‌ಜೀವನ ಸಂಸ್ಥೆ ಸ್ಥಾಪಕಿ 

ಸಂಪರ್ಕ: 9972199981
www.facebook.com/punarjeevana16
www.instagram.com/punarjeevana

* ಹರ್ಷವರ್ಧನ್‌ ಸುಳ್ಯ

Trending videos

Back to Top