CONNECT WITH US  

ಮನೋರಥ

ನಾನು ಈಗಷ್ಟೇ ಒಂದು ವರ್ಷದಿಂದ ಈಚೆಗೆ ವೈದ್ಯಕೀಯ ಕಾಲೇಜು ಸೇರಿರುವ ವಿದ್ಯಾರ್ಥಿ. ಸಂಬಂಧಿಕರಲ್ಲಿ ಯಾರಿಗೆ ಏನಾದರೂ ಆರೋಗ್ಯದ ಸಮಸ್ಯೆ ಇದ್ದರೆ, ಕೆಲವೊಮ್ಮೆ ನನ್ನ ಬಳಿ, ಅವರ ಸಂದೇಹಗಳನ್ನು ಹೇಳಿಕೊಳ್ಳುತ್ತಾರೆ. ನಾನೇನು ಯಾರಿಗೂ ಚಿಕಿತ್ಸೆ ಕೊಡುವ ಹಂತಕ್ಕೆ ಓದಿಲ್ಲವಾದರೂ, ನನ್ನ ಬಳಿ ಸಲಹೆ ಕೇಳಿದಾಗ, ನನಗೆ ಗೊತ್ತಿದ್ದಷ್ಟನ್ನು ಹಾಗೋ ಹೀಗೋ ಹೇಳಿ, ಸರಿಯಾದ ಮಾರ್ಗದರ್ಶನವೇ ನೀಡಲು ಪ್ರಯತ್ನಿಸಿರುತ್ತೇನೆ. ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಹಾಗೆಯೇ ನನಗೆ ಸಂಬಂಧದಲ್ಲಿ ಅಕ್ಕಳಾಗಬೇಕಿರುವ ಒಬ್ಬಳು ಇತ್ತೀಚೆಗೆ ಮದುವೆಯಾಗಿದ್ದಾಳೆ. ಅವಳಿಗೆ ಏನೋ ಲೈಂಗಿಕ ಸಮಸ್ಯೆ ಇದೆ ಅಂತಲೂ, ಅದನ್ನು ಅವಳು ಯಾರ ಬಳಿಯೂ ಹೇಳಿಕೊಳ್ಳಲಾರಳು ಅಂತಲೂ, ಅವರಮ್ಮ ನನ್ನಲ್ಲಿ ಹೇಳಿಕೊಂಡಿದ್ದಾರೆ! ಇದೊಂದು ಮಾನಸಿಕ ಸಮಸ್ಯೆಯೇ ಇರಬೇಕು, ಇದಕ್ಕೆ ಯಾವುದಾದರು ತಜ್ಞವೈದ್ಯರೇ ಬೇಕಾಗುವುದೇನೋ ಅಂತ ನನ್ನಲ್ಲಿ ಪೇಚಾಡಿಕೊಳ್ಳುವುದರ ಜೊತೆಗೆ ಇದಕ್ಕಾಗಿ ಏನು ಮಾಡಬಹುದೆಂದು ನನ್ನನ್ನು ಕೇಳುತ್ತಿದ್ದಾರೆ. ಅದಕ್ಕಾಗಿ ನಾನು ನಿಮ್ಮಲ್ಲಿ ಕೇಳುತ್ತಿದ್ದೇನೆ. ಸರಿಯಾದ ಸಲಹೆ ಸೂಚಿಸಿ ಪ್ಲೀಸ್‌! 
-ಸುರೇಶ, ಹಾಸನ 

ಸುರೇಶರವರೇ, ನಿಮ್ಮ ನಡತೆ ಸರಿಯಾಗಿರುವುದಕ್ಕೆ ನಿಮ್ಮನ್ನು ಶ್ಲಾ ಸಲೇ ಬೇಕೆನಿಸಿದೆ. ಯಾಕೆಂದರೆ, ಇತ್ತೀಚೆಗಿನ ವೈದ್ಯಕೀಯ ವಿದ್ಯಾರ್ಥಿಗಳು, ಪುಸ್ತಕದ ಬದನೆಕಾಯಿಯನ್ನು ಮೆಲ್ಲುತ್ತಾರೆಯೇ ಹೊರತು, ನಿಜವಾಗಿ ಸಮಾಜದಲ್ಲಿರುವ, ತಮ್ಮ ಸುತ್ತಮುತ್ತಲಿರುವ ರೋಗಿಗಳೊಡನೆ ಸ್ಪಂದಿಸುವ ಗೋಜಿಗೇ ಹೋಗುವುದಿಲ್ಲ! ಸರ್ಕಸ್ಸು ತಮ್ಮದಲ್ಲ, ಅದರಲ್ಲಿರುವ ಮಂಗಗಳೂ ತಮ್ಮದಲ್ಲ; ಎಂಬ ಧೋರಣೆಯೊಂದಿಗೆ ಪೂರ್ತಿ ವೈದ್ಯರಾಗುವವರೆಗೆ ಜನರ ರೋಗದ ಬಗ್ಗೆ, ಜನರ ಬಗ್ಗೆ ಗಮನವೇ ಹರಿಸೋಲ್ಲ! ಆದರೆ, ನೀವು, ಎಳೆ ಪ್ರಾಯದಿಂದಲೇ, ನಿಮ್ಮ ಸಂಬಂಧಿಕರ ಸಮಸ್ಯೆಗೆ ಸ್ಪಂದಿಸಲು ಶುರುಮಾಡಿರುವಿರಿ! ಇದು ಉತ್ತಮವಾದ, ಅನುಕರಣೀಯವಾದ ವರ್ತನೆ!

ಇರಲಿ, ಇರುವ ವಿಷಯಕ್ಕೆ ಬರೋಣ! ನಿಮ್ಮ ಸಂಬಂಧಿಕರಿಗೆ ಅಷ್ಟಾಗಿ ಲೈಂಗಿಕ ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಇದ್ದ ಹಾಗೆ ಇಲ್ಲ! ಮೊದಲನೆಯದಾಗಿ, ಲೈಂಗಿಕ ಸಮಸ್ಯೆ ಅನ್ನೋದು ಯಾವಾಗಲೂ ಮಾನಸಿಕ ರೋಗಕ್ಕೆ ಸಂಬಂಧಿಸಿಯೇ ಇರಬೇಕೆಂದೇನೂ ಇಲ್ಲ; ಇವು ಶಾರೀರಿಕ ಸಮಸ್ಯೆಗಳ ಜೊತೆ, ಅದರಲ್ಲೂ ದೀರ್ಘಾವಧಿ ಕಾಡುವ ಶಾರೀರಿಕ ರೋಗಿಗಳಿಂದಲೂ ಬರಬಹುದು. ನಂತರ, ಈ ರೀತಿ ಸಮಸ್ಯೆಯನ್ನು ರೋಗಿಗಳು ವೈದ್ಯರೊಡನೆ ಹೇಳಿಕೊಳ್ಳಲಾರರು ಎಂಬುದೂ ಸುಳ್ಳೇ. ಈಗ ನಿಮ್ಮ ಅಕ್ಕ ಎನಿಸಿಕೊಂಡವರು ತಮ್ಮ ತಾಯಿಗೆ ಹೇಳಿಕೊಂಡಂತೆ, ಯಾವುದಾದರೂ ಅರ್ಥಮಾಡಿಕೊಳ್ಳಬಲ್ಲ, ಸಹನೆಯುಳ್ಳ, ವೈದ್ಯರು ಸಿಕ್ಕರೆ, ಅವರು ಇವಳನ್ನು ಚೆನ್ನಾಗಿ ಮಾತಾಡಿಸಿ,

ಅವರಲ್ಲಿ ವಿಶ್ವಾಸ ಮೂಡುವಂತೆ ಮಾಡಿದರೆ, ನಿಮ್ಮ ಅಕ್ಕ ಸೇರಿದಂತೆ ಹಲವಾರು ರೋಗಿಗಳು, ತಮ್ಮನ್ನು ಒಳಗೊಳಗೇ ಕಾಡುವ ಈ ಲೈಂಗಿಕ ಸಮಸ್ಯೆಯನ್ನೂ ಮನಬಿಚ್ಚಿ ಹೇಳಿಕೊಂಡು, ಪರಿಹಾರ ಕಂಡು ಹಿಡಿದುಕೊಳ್ಳಲು ಕಾತರರಾಗಿರುತ್ತಾರೆ. ಎಷ್ಟೋ ಸಲ, ವೈದ್ಯರಾದವರೇ ತಮಗೆ ಲೈಂಗಿಕ ಸಮಸ್ಯೆ ಇದೆಯೇ ಎಂದು ಕೇಳಲಿ ಎಂದು ಕಾಯುವ ಮಂದಿಯೂ ಇದ್ದಾರೆ! ಆದರೆ, ನಮ್ಮಿ ಸಮಾಜದಲ್ಲಿ ಲೈಂಗಿಕತೆಯನ್ನು ಮುಕ್ತವಾಗಿ ಚರ್ಚೆ ಮಾಡುವ ವಿಶಾಲ ಪರಿಪಾಠವಿಲ್ಲದ ಕಾರಣ, ರೋಗಿಗಳು ಅನ್ಯಥಾ ಭಾವಿಸದಿರಲಿ, ಅಂತ ವೈದ್ಯರೇ ಆ ರೀತಿಯ ಪ್ರಶ್ನೆಗಳನ್ನು, ಸಂದೇಹವಿರದಿದ್ದರೆ, ಕೇಳಲು ಹೋಗರು ಅಷ್ಟೇ! ಎಷ್ಟೋ ಸಂದರ್ಭಗಳಲ್ಲಿ, ಈ ರೀತಿ ಸಮಸ್ಯೆಗಳನ್ನು,

ಅವರ ಕುಟುಂಬದ ವೈದ್ಯರೇ ನೋಡಿ ಪರಿಹಾರ ಸೂಚಿಸಿಬಿಡಬಹುದು. ಶರೀರದ ಸಮಸ್ಯೆ ಏನಾದರೂ ಇದ್ದರೆ, ಅದರೊಂದಿಗೆ ಸಮಸ್ಯೆಯೂ ಗುಣವಾಗುವ ಸಂಭವ ಇರುತ್ತದೆ. ಉಗುರಲ್ಲಿ ಹೋಗುವಂಥದ್ದಕ್ಕೆ ಕೊಡಲಿಯ ಆವಶ್ಯಕತೆ ಹೇಗೆ ಬೀಳುವುದಿಲ್ಲವೋ, ಹಾಗೆ, ಕೆಲವೊಮ್ಮೆ ಸಮಸ್ಯೆಯ ಮೂಲ ಒಂದು ಬಾಲಿಷ ಕಾರಣವೋ, ಅಜ್ಞಾನವೋ ಆಗಿದ್ದು, ಅದಕ್ಕೆ ಅರಿವು, ಅಥವಾ ಖಾಲಿ ಸರಿಯಾದ ಲೈಂಗಿಕ ಶಿಕ್ಷಣ ನೀಡಿದರೂ ಸಾಕಾಗುತ್ತದೆ.

ಎಷ್ಟೋ ಸಲ, ಪೂರ್ವಾಗ್ರಹಪೀಡಿತ, ನಿರ್ಣಾಯಾತ್ಮಕ ನಿಲುವನ್ನು ದೂರವಿಟ್ಟು, ರೋಗಿಗೆ ಮುಕ್ತವಾಗಿ, ಅವರವರ ಲೈಂಗಿಕ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲು ಅನುವು ಮಾಡಿಕೊಟ್ಟರೆ, ಹಾಗೂ ಚರ್ಚಿಸಿದ ವಿಷಯದ ಬಗ್ಗೆ ಸರಿಯಾದ, ಸೂಕ್ತವಾದ, ಸಂಕ್ಷಿಪ್ತವಾದ ಶಾರೀರಿಕ ಹಾಗೂ ಸೈದಾಟಛಿಂತಿಕ ಮಾಹಿತಿಯನ್ನು ಸ್ಪಷ್ಟವಾಗಿ ವಿವರಿಸಿ, ಸೂಕ್ತ ಔಷಧಿ (ಬೇಕಾದ್ದಲ್ಲಿ ಮಾತ್ರೆ) ಹಾಗೂ ಉಪಚಾರ (ಸಮಾಲೋಚನಕರ ಉಪಚಾರವೂ ಸೇರಿ) ವನ್ನು ನೀಡಿದರೆ,

ಬೆಟ್ಟದ ಹಾಗೆ ಕಂಡುಬಂದ ಸಮಸ್ಯೆ, ಬೆಣ್ಣೆಯಂತೆ ಕರಗಿ ಹೋಗುವುದರಲ್ಲಿ ಸಂಶಯವೇ ಇಲ್ಲ! ಇವರನ್ನು ಪರಿಶೀಲಿಸುವ ವೈದ್ಯರು ಅವರು ತೆಗೆದುಕೊಳ್ಳುತ್ತಿರುವ ಬೇರೆ ಔಷಧಿಗಳ ಬಗ್ಗೆಯೂ, ಅವರನ್ನು ಕಾಡುತ್ತಿರುವ ಇನ್ನಿತರ ಶಾರೀರಿಕ ಸಮಸ್ಯೆಯ ಕಡೆಗೂ ಗಮನಹರಿಸಬೇಕಾಗುತ್ತದೆ. ಈ ರೀತಿ ಸಮಸ್ಯೆಗಳನ್ನು ಚರ್ಚಿಸುವಾಗ, ಬಗೆಹರಿಸುವಾಗ ಸೂಕ್ಷ್ಮತೆಯೂ ಬೇಕು, ಹೇಳಿಕೊಳ್ಳಲು ಅನುಕೂಲಕರವಾದ ಏಕಾಂತವೂ ಇರಬೇಕು, ಕೇಳಿಸಿಕೊಂಡ ವಿಚಾರವನ್ನು ಗುಪ್ತವಾಗಿಡುವ ಭರವಸೆಯನ್ನೂ ವೈದ್ಯರಾದವರು ರೋಗಿಗಳಲ್ಲಿ ಮೂಡಿಸತಕ್ಕದ್ದು!

ಯಾವುದರಿಂದಲೂ ಅಷ್ಟೇನೂ ಪರಿಹಾರ ಸಿಗದಿದ್ದರೆ, ಸಲಹೆ- ಚಿಕಿತ್ಸೆ-ಉಪಚಾರದ ನಂತರವೂ ಪರಿಸ್ಥಿತಿ ಹದಗೆಡುತ್ತಾ ಹೋದರೆ, ಲೈಂಗಿಕ ತಜ್ಞವೈದರನ್ನೇ ಭೇಟಿ ಮಾಡುವ ನಿರ್ಧಾರವೂ ಸೂಕ್ತವೇ ಆಗಿರುತ್ತದೆ. ಈ ತಜ್ಞವೈದ್ಯರು ಯಾವಾಗಲೂ ಮನೋವೈದ್ಯರೇ ಆಗಿರಬೇಕಂತಲೂ ಏನೂ ಇಲ್ಲ. ಆದ್ದರಿಂದ, ಅವರನ್ನು ನೋಡುತ್ತಿರುವ ಕುಟುಂಬದ ವೈದ್ಯರೇ, ಅವರನ್ನು ಯಾರಲ್ಲಿ ಕಳಿಸಬೇಕೆಂದು ನಿರ್ಧರಿಸಿ ಕಳಿಸಿದರೆ, ಅಲ್ಲಿಗೆ ಹೋಗಿ, ಪರಿಹಾರ ಕಂಡುಕೊಳ್ಳುವುದೇ ಲೇಸು. 

* ಡಾ. ಅರುಣಾ ಯಡಿಯಾಳ್

Trending videos

Back to Top