CONNECT WITH US  

ಮನೋರಥ

ನನಗೀಗ ನಲವತ್ತೆಂಟು ವರ್ಷ ವಯಸ್ಸು. ಮೊದಲೆಲ್ಲ ಚುರುಕಾಗಿಯೇ ಓಡಾಡಿಕೊಂಡಿರುತ್ತಿದ್ದ ನನಗೆ ಈಗ ಒಂದು ಆರು ತಿಂಗಳಿಂದ ಎಲ್ಲೆಂದರಲ್ಲಿ ನೋವು ಕಾಣಿಸಿಕೊಂಡಂತಾಗುತ್ತದೆ! ಕುತ್ತಿಗೆ, ಭುಜ, ಬೆನ್ನು, ಕೈ-ಕಾಲುಗಳ ಕೀಲುಗಳಲ್ಲಿ ನೋವು, ಸೆಳೆತೆ, ಬಿಗಿದುಕೊಂಡಂಥ ಅನುಭವ ಕೂಡ ಆಗುತ್ತದೆ. ಇದಕ್ಕಾಗಿ ಮೂಳೆ ತಜ್ಞರಲ್ಲಿ ತೋರಿಸಿದಾಗ, ಅವರು ಹಲವಾರು ಪರೀಕ್ಷೆಗಳನ್ನೆಲ್ಲಾ ಮಾಡಿಸಿದರು. ನಂತರ ಸ್ವಲ್ಪಮಾತ್ರೆಯನ್ನು ಕೊಟ್ಟರು. ಆದರೆ ಏನೂ ಪ್ರಯೋಜನವೇ ಆಗಲಿಲ್ಲ. ಮಾಡಿದ ಪರೀಕ್ಷೆಗಳಲ್ಲಿ ಎಲ್ಲೂ ಏನೂ ದೋಷ ಕಾಣಿಸುತ್ತಿಲ್ಲ. ನಿಮಗೆ ಮೂಳೆ ಅಥವಾ ನರ ಸಂಬಂಧಿ ಕಾಯಿಲೆ ಏನೂ ಇದ್ದಂತೆ ತೋರದು. "ನೀವ್ಯಾಕೆ ಒಮ್ಮೆ ಮನೋವೈದ್ಯರನ್ನು ನೋಡಬಾರದು?' ಎಂಬ ಸಲಹೆ ಇತ್ತರು! ನನಗೆ ಅದನ್ನು ಕೇಳಿ ಇನ್ನಷ್ಟು ಗಾಬರಿಯಾಯಿತು! ಮೈ-ಕೈ ನೋವು ಅಂತ ಹೇಳಿದರೆ ಮಾನಸಿಕ ರೋಗ ಅಂತ ಇವರು ಅನ್ನುತ್ತಾರಲ್ಲಾ ಅಂತ ಆಶ್ಚರ್ಯವೂ ಆಯಿತು! ಇದರ ಬಗ್ಗೆ ಸ್ವಲ್ಪ ಸ್ಪಷ್ಟನೆ ತಿಳಿಸುವುವಿರಾ? 
-ಶರ್ಮಿಳಾ, ಮಡಿಕೇರಿ 

ಶರ್ಮಿಳಾರವರೇ, ತಮ್ಮ ಗಾಬರಿ ಹಾಗೂ ಆಶ್ಚರ್ಯ ಎರಡೂ ಸಮರ್ಪಕವಾದುದೇ! ನಿಮ್ಮ ಜಾಗದಲ್ಲಿ ಯಾರೇ ಇದ್ದರೂ, ಅವರಿಗೂ ಹೀಗೇ ಅನಿಸುವುದಂತೂ ನಿಜ! ಆದರೆ ನೀವು ಇಲ್ಲಿ ಒಂದು ವಿಚಾರವನ್ನು ಸ್ವಷ್ಟವಾಗಿ ಅರಿತುಕೊಳ್ಳಬೇಕಾಗಿದೆ. ದೇಹ ಹಾಗೂ ಮನಸ್ಸು ಎಂಬ ಬೇರೆ ಬೇರೆ ಅಂಶಗಳು ಮನುಷ್ಯನಲ್ಲಿ ಬೇರೆ ಬೇರೆಯಾಗಿ ಅಸ್ತಿತ್ವದಲ್ಲಿಲ್ಲ; ದೇಹವಿಲ್ಲದ ಮನಸ್ಸು ಇರಲಾರದು; ಹಾಗೆಯೇ ಮನಸ್ಸಿಲ್ಲದ ದೇಹವಿರಲಾರದು! ಹಾಗಿದ್ದಾಗ ಒಂದರಲ್ಲಿ ಕಾಯಿಲೆ ಉಂಟಾದಾಗ ಅದು ಇನ್ನೊಂದರಲ್ಲಿ ವ್ಯಕ್ತಗೊಳ್ಳುವುದೂ ಅಸಹಜವಲ್ಲವಷ್ಟೆ !

ಕೆಲವೊಮ್ಮೆ ಈ ರೀತಿಯ ನೋವುಗಳು ಉಂಟಾದಾಗ, ದೇಹದ ಕೂಲಂಕಷ ಪರಿಶೀಲನೆಯ ನಂತರವೂ ನೋವುಗಳಿಗೆ ಸ್ಪಷ್ಟ ಕಾರಣಗಳು ಗೋಚರಿಸದಿದ್ದಾಗ, ಅದಕ್ಕೆ ಮನಸ್ಸಿನ ಮೂಲ ಇರಬಹುದು ಎಂಬ ಸಂಶಯ ವೈದ್ಯರಿಗೆ ಮೂಡುವುದು ಸರಿಯೇ! ಈ ರೀತಿಯ ಕಾಯಿಲೆಗಳನ್ನು ಮನೋ-ಶಾರೀರಿಕ ಕಾಯಿಲೆಗಳ ಪಟ್ಟಿಯ ಕೆಳಗೆ ಹಾಕಬಹುದು. ಅದರಲ್ಲೂ ಮಾಂಸಖಂಡಗಳ, ನರಗಳ ನೋವುಗಳಿಗೆ Fibromyalgia (ಫೈಬ್ರೋಮೈಲ್ಜಾಯಾ) ಎಂದೂ ಕರೆಯುತ್ತಾರೆ.

ಈ ಕಾಯಿಲೆಯ ಗುಣಸ್ವರೂಪ ಅನಿರ್ದಿಷ್ಟ ರೀತಿಯದ್ದಾಗಿದ್ದು, ಇದರಲ್ಲಿ ರೋಗಿಗೆ ನಾನಾ ಹರಡಿದಂತಿರುವ ದೂರುಗಳು ಇರುತ್ತದೆ. ಸ್ನಾಯುಗಳಲ್ಲಿ, ಮಾಂಸಖಂಡಗಳಲ್ಲಿ, ಎಲುಬುಕೀಲುಗಳಲ್ಲಿ, ನೋವು ಸೆಳೆತೆ, ಬಿಗಿತನ ಕಾಣಿಸಿಕೊಂಡು, ಅದರಿಂದ, ಅತೀವ ಸುಸ್ತು, ಮನೋವ್ಯಾಕುಲತೆ, ನಿದ್ರಾ ಉಪದ್ರವವೂ ಕಾಡಬಹುದು. ಇದರಲ್ಲಿ ಎಲುಬು ಕೀಲುಗಳ ಹಾಗೂ ದೇಹದ ಮಾಂಸಖಂಡಗಳಲ್ಲಿ ನೋವು ಹದಿನೆಂಟರಲ್ಲಿ ಹನ್ನೊಂದು ಜಾಗಗಳಿಂತಲೂ ಅಧಿಕ ಜಾಗಗಳಲ್ಲಿ, ಮುಟ್ಟಿದರೆ ನೋವು ಕಾಣಿಸಿಕೊಳ್ಳುವಿಕೆ;

ಈ ಭಾಗಗಳಲ್ಲಿ ಪ್ರಮುಖವಾಗಿದ್ದದ್ದು, ಎರಡೂ ಕಡೆಯ ತಲೆಯ ಕೆಳಭಾಗ, ಕೆಳಕುತ್ತಿಗೆಯ ಭಾಗ, ಬೆನ್ನು, ಎರಡನೇ ಕಿಬ್ಬೆಲುಬಿನ ಜಾಗ, ಮೊಣಕೈ ಭಾಗ, ತೊಡೆಯಭಾಗ, ಹಾಗೂ ಮೊಣಕಾಲಿನ ಭಾಗವೂ ಸೇರ್ಪಡೆಯಾಗಿದೆ ಈ ಭಾಗಗಳನ್ನು ಒತ್ತಿ ಹಿಡಿದಾಗ, ಕನಿಷ್ಟ ಪಕ್ಷ ಹನ್ನೊಂದು ಜಾಗಗಳಲ್ಲಾದರೂ, ನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ, ಸುಸ್ತು, ನಿದ್ರೆಯಲ್ಲಿ ಏರುಪೇರು, ಉದರ ಸಂಬಂಧಿ ಕಾಯಿಲೆ, ತೀವ್ರ ತಲೆನೋವು, ಹಾಗೂ ಗ್ರಂಥಿಗಳ ಉತ್ಪನ್ನಗಳಲ್ಲಿ ಏರುಪೇರು ಇವೆಲ್ಲವೂ ಕಾಣಿಸಬಹುದು!

ಪರೀಕ್ಷೆ ಮಾಡಿದಾಗ ಯಾವುದೇ ರೀತಿಯ ಸೋಂಕು ಅಥವಾ ಊತ ಮಾತ್ರ ಕಾಣಸಿಗುವುದಿಲ್ಲ! ಎರಡರಿಂದ ಐದರಷ್ಟು ಶೇಕಡಾ ಜನಕ್ಕೆ ಈ ಕಾಯಿಲೆ ಇರಬಹುದು! ಇದಕ್ಕೆ ಸ್ಪಷ್ಟ ಕಾರಣಗಳು ಗೊತ್ತಿಲ್ಲದಿದ್ದರೂ, ಇದರ ಹಿಂದೆ ನರ ರಾಸಾಯಿನಿಕಗಳ ಏರುಪೇರು ಹಾಗೂ ಮಿದುಳಿನ ಕೆಲವು ಭಾಗಗಳಿಗೆ ಕಡಿಮೆಯಾದ ರಕ್ತ ಪೂರೈಕೆ ಕಾರಣವಿರಬಹುದು ಅನ್ನುತ್ತದೆ ಈಗಿನ ವಿಜಾnನ. ಈ ಕಾಯಿಲೆಯ ಉಪಸ್ಥಿತಿಯನ್ನು ಖಚಿತವಾಗಿ ಹೇಳಲು ನುರಿತ ವೈದ್ಯರುಗಳಿಗೂ ಕೆಲವೊಮ್ಮೆ ಕಷ್ಟವೇ.

ಯಾಕೆಂದರೆ ಇದರ ಜೊತೆ ಬೇರೆ ಕಾಯಿಲೆಗಳನ್ನು ಹೋಲುವ ಗುಣಲಕ್ಷಣಗಳೂ ಮೇಳೈಸಿಕೊಂಡು ಜೊತೆ ಜೊತೆಗೇ ಇರುತ್ತವೆ. ಉದಾಹರಣೆಗೆ, ಸುಸ್ತು, ತಲೆನೋವು, ಅತಿಯಾದ ಚಳಿಯಾಗುವಿಕೆ, ಕೈ-ಕಾಲುಗಳಲ್ಲಿ ಜೋಮು, ಊತ, ಕಾಲುಗಳ ಅದರುವಿಕೆ, ದೇಹ ಶ್ರಮ ಸಹಿಸದಿರುವಿಕೆ, ಮಲ ಹಾಗೂ ಮೂತ್ರದ ಅಭ್ಯಾಸ ಹಾಗೂ ನಿಯಂತ್ರಣದಲ್ಲಿ ಏರುಪೇರು- ಇತ್ಯಾದಿ ಶರೀರ ಸಂಬಂಧಿ ಕಾಯಿಲೆಯ ಗುಣಲಕ್ಷಣಗಳೂ ಇರಬಹುದು. ಜೊತೆಗೆ ಮಾನಸಿಕ ರೋಗಗಳಾದ ಖನ್ನತೆ, ಆತಂಕ ಮನೋಬೇನೆಯಂಥ ಕಾಯಿಲೆಯ ಚಿಹ್ನೆಗಳೂ ಗೋಚರಿಸಬಹುದು!

ಇದರಂತೆಯೇ ವ್ಯಕ್ತವಾಗುವ ಇನ್ನೂ ಹಲವಾರು ಶಾರೀರಿಕ ಹಾಗೂ ಮಾನಸಿಕ ರೋಗಗಳು ಇರುವ ಕಾರಣ, ಈ ಕಾಯಿಲೆಯ ಸ್ವಷ್ಟ ದೃಢೀಕರಣ ಸ್ವಲ್ಪ ಕಷ್ಟ ಸಾಧ್ಯವೇ! ಹಾಗಿದ್ದಾಗ ರೋಗಿಯನ್ನು ಒಮ್ಮೆ ಮನೋವೈದ್ಯರೂ ನೋಡಿ, ಪರಿಶೀಲನೆ ಮಾಡಿದರೆ, ಒಳಿತೇ ಹೊರತು, ಕೆಡುಕಂತೂ ಖಂಡಿತ ಇಲ್ಲ! ಈ ಕಾಯಿಲೆ ಇದೆ ಅಂತಲೇ ಆದರೆ, ಅದಕ್ಕೆ ಅನುಗುಣವಾಗಿ, ಬೆಂಬಲಾತ್ಮಕವಾದ ಸಮಾಲೋಚನಕರ ಚಿಕಿತ್ಸೆ, ಯೋಚನಾ ಧಾಟಿಯನ್ನೇ ತಿದ್ದುವ ಸಮಾಲೋಚನೆ ಚಿಕಿತ್ಸೆ , ಶಿಕ್ಷಣ, ದೈಹಿಕ ವ್ಯಾಯಮ ಹಾಗೂ ಚಟುವಟುಕೆ, ಮಾಂಸಖಂಡಗಳನ್ನು

ಸಡಿಲಿಸುವ ಹಾಗೂ ಮನಸ್ಸನ್ನು ಖನ್ನತೆಯ ಕೂಪದಿಂದ ಹೊರತರುವ ಕೆಲವೊಂದು ನಿರ್ದಿಷ್ಟ ಔಷಧೋಪಚಾರ, ನಿದ್ದೆಯನ್ನು ಸರಿಯಾಗಿಸಿ, ನೋವನ್ನು ಕುಗ್ಗಿಸುವ ಹಲವಾರು ಚಿಕಿತ್ಸೆ... ಇವೆಲ್ಲವನ್ನೂ ತಜ್ಞ ವೈದ್ಯರಾದವರು ನಿಮಗೆ ನೀಡಿ, ನೀವು ಗುಣಮುಖರಾಗುವಂತೆ ಮಾಡಬಲ್ಲರು. ದೇಹ ಹಾಗೂ ಮನಸ್ಸು, ತತ್ವ ವಿಚಾರಗಳಲ್ಲಿ ಬೇರೆ ಬೇರೆಯೇ ಹೊರತು, ವಾಸ್ತವದಲ್ಲಿ ಎರಡೂ ಒಂದರ ಮೇಲೆ ಇನ್ನೊಂದು ಅವಲಂಬಿತವಾಗಿರುವ ಅಂಗಗಳೇ ಆಗಿದ್ದು, ಒಂದರಲ್ಲಿ ಅಸೌಖ್ಯವಿದ್ದರೆ ಇನ್ನೊಂದರಲ್ಲಿ ತೋರಿಬರುವ ಸಾಧ್ಯತೆ ಇದ್ದೇ ಇರುತ್ತದೆ ಎಂಬ ಅರಿವು ಇಲ್ಲಿ ಅತಿಮುಖ್ಯ! 

* ಡಾ.ಅರುಣಾ ಯಡಿಯಾಳ್


Trending videos

Back to Top