CONNECT WITH US  

ಒಂದು ಮುಸ್ಸಂಜೆ ಪಾಠ

ಹಿರಿಯರ ಪಾಲನೆ ಹೇಗಿರಬೇಕು?

"ನಮ್ಮಜ್ಜಿ ಹೇಳಿದ್ದನ್ನೇ ಹೇಳ್ತಾ ಇರ್ತಾರೆ. ವಟಗುಟ್ಟದೆ ಸುಮ್ನೆ ಇರೋಕೇ ಬರೋದಿಲ್ಲ ಅವ್ರಿಗೆ', "ಅತ್ತೆ ಜೊತೆ ಅಡ್ಜಸ್ಟ್‌ ಮಾಡ್ಕೊಳ್ಳೋಕೆ ಆಗ್ತಾ ಇಲ್ಲ. ಅದಕ್ಕೇ ಬೇರೆ ಮನೆ ಮಾಡ್ತಾ ಇದೀವಿ'... ಹೆಂಗಸರು ಹೀಗೆ ಹೇಳ್ಳೋದನ್ನು ಕೇಳಿದ್ದೇವೆ ಅಥವಾ ನಮ್ಮ ಮನೆಯಲ್ಲೇ ಇಂಥ ಪ್ರಸಂಗಗಳು ನಡೆಯುತ್ತವೆ. ವಯಸ್ಸಾಯ್ತು ಅಂತ ಮೂಲೆಗೆ ತಳ್ಳಲ್ಪಟ್ಟ ಹಿರಿ ಜೀವಗಳು ಬಹುತೇಕ ಮನೆಗಳಲ್ಲಿದ್ದಾರೆ. ಆ ಹಿರಿಯರನ್ನು ಹೇಗೆ ನೋಡಿಕೊಳ್ಳಬೇಕು ಗೊತ್ತೇ?

1.  ಸಮಯ ಕೊಡಿ
ಮಗ, ಸೊಸೆ ಅಥವಾ ಮಗಳು-ಅಳಿಯ ನೌಕರಿಯೆಂದು ದಿನವೂ ಬಿಜಿ ಇದ್ದರೆ, ಮೊಮ್ಮಕ್ಕಳು ಶಾಲೆ, ಕಾಲೇಜು, ಫ್ರೆಂಡ್ಸ್‌ ಅಂತ ತಮ್ಮದೇ ಲೋಕದಲ್ಲಿರುತ್ತಾರೆ. ಆಗ ಹಿರಿಜೀವಗಳಿಗೆ ಒಂಟಿತನ ಕಾಡುವುದು ಸಹಜ. ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಕಳೆಯುವ ಅವರಿಗೆ ನಿಮ್ಮ ದಿನದ ಒಂದೆರಡು ಗಂಟೆಯನ್ನು ಮೀಸಲಿಡಿ. ಆಫೀಸಿನಿಂದ, ಶಾಲೆಯಿಂದ ಬಂದಮೇಲೆ ಅವರ ಜೊತೆ ಕುಳಿತು ಮಾತನಾಡಿ. 

2.  ತಾಳ್ಮೆಯಿಂದ ಆಲಿಸಿ 
ವಯಸ್ಸಾದವರು ಹೇಳಿದ್ದನ್ನೇ ಪದೇ ಪದೆ ಹೇಳುತ್ತಿರುತ್ತಾರೆ. ವೃದ್ಧಾಪ್ಯಕ್ಕೆ ಮರೆವು ಜೊತೆಯಾಗುವುದರಿಂದ ಹೀಗಾಗುತ್ತದೆ. ಹೇಳಿದ್ದನ್ನೇ ಹೇಳುತ್ತಾರಲ್ಲ: ಅದರಿಂದ ನಿಮಗೆ ಕಿರಿಕಿರಿಯಾಗಬಹುದು. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ತಾಳ್ಮೆಯಿಂದ ವರ್ತಿಸಿ. 

3.  ಬಾಯಿ ಚಪಲ
ಮನುಷ್ಯನಿಗೆ ವಯಸ್ಸಾದಂತೆ ಬಾಯಿ ಚಪಲ ಹೆಚ್ಚುತ್ತದೆ. ಕುರುಕಲು, ಸಿಹಿತಿಂಡಿ ತಿನ್ನಬೇಕು ಅನಿಸುತ್ತದೆ. ಹಾಗಾಗಿ, ಆರೋಗ್ಯಕ್ಕೆ ಅಷ್ಟೇನೂ ಹಾನಿಕರವಲ್ಲದ ಆಹಾರಗಳನ್ನು, ವೈದ್ಯರ ಸಲಹೆ ಮೇರೆಗೆ ಕೊಡಿ. 

4.  ಆರೋಗ್ಯ ತಪಾಸಣೆ 
"ನನಗೇನಾಗಿದೆ? ಚೆನ್ನಾಗಿಯೇ ಇದ್ದೇನಲ್ಲಾ?'... ಇದು ವೃದ್ಧರು ಹೇಳುವ ಮಾತು. ಈಗಲೂ ಕೆಲಸ ಮಾಡುತ್ತೇನೆ, ಬೆಳಗ್ಗೆ ವಾಕ್‌ ಹೋಗುತ್ತೇನೆ, ಬಿಪಿ-ಶುಗರ್‌ ಇಲ್ಲ ಅಂತೆಲ್ಲಾ ಹೇಳಿ ಆಸ್ಪತ್ರೆಗೆ ಹೋಗುವುದಿಲ್ಲ. ಅವರ ಮನವೊಲಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಕರೆದೊಯ್ಯಿರಿ. 

5.  ಸಮವಯಸ್ಕರೊಡನೆ ಬೆರೆಯಲು ಬಿಡಿ
ತಮ್ಮದೇ ವಯಸ್ಸಿನವರೊಂದಿಗೆ ಹರಟೆ ಹೊಡೆಯುವುದರಿಂದ ಹಿರಿಯರಿಗೆ ಖುಷಿ ಸಿಗುತ್ತದೆ. ಸಮವಯಸ್ಕರ ಕ್ಲಬ್‌, ಸಂಘಟನೆ ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ಬಂಧ ಹೇರಬೇಡಿ. ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅವರಿಗೆ ಅವಕಾಶ ಮಾಡಿಕೊಡಿ. 

6.  ರಿಮೋಟ್‌ ಅವರಿಗೂ ಸಿಗಲಿ 
ಹಿರಿಯರಿಗೆ ಯೋಗ, ಪೌರಾಣಿಕ ಸಿನಿಮಾ, ಅಧ್ಯಾತ್ಮ ಪ್ರವಚನದಂಥ ಕಾರ್ಯಕ್ರಮಗಳು ಇಷ್ಟವಾಗುತ್ತವೆ. ಟಿವಿ ನೋಡುವ ಸಮಯದಲ್ಲಿ ಕೆಲಹೊತ್ತು ಅವರಿಗೂ ಆಯ್ಕೆಯ ಸ್ವಾತಂತ್ರ್ಯ ನೀಡಿ.

7. ಧಾರ್ಮಿಕ ಕ್ಷೇತ್ರಗಳ ಭೇಟಿ
ದೇವಾಲಯಕ್ಕೆ, ಅಧ್ಯಾತ್ಮ ಕೇಂದ್ರಗಳಿಗೆ ಭೇಟಿ ನೀಡಿದರೆ ವೃದ್ಧರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೀವನದ ಇಳಿಸಂಜೆಯಲ್ಲಿ ಅವರ ಒಲವು ಅಧ್ಯಾತ್ಮದ ಕಡೆ ವಾಲುವುದು ಸಾಮಾನ್ಯ. ಹಾಗಾಗಿ ಪ್ರಯಾಣಕ್ಕೆ ಆಯಾಸದಾಯಕವಲ್ಲದ ಧಾರ್ಮಿಕ ಕ್ಷೇತ್ರಗಳಿಗೆ ಅವರೊಂದಿಗೆ ಭೇಟಿ ಕೊಡಿ.

8. ಸಲಹೆ ಕೇಳಿ 
ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವಾಗ, ವಯಸ್ಸಾಗಿದೆಯೆಂಬ ಕಾರಣ ನೀಡಿ ಹಿರಿಯರನ್ನು ನಿರ್ಲಕ್ಷಿಸಬೇಡಿ. ಬದಲಿಗೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರಲ್ಲಿ ಸಲಹೆ ಕೇಳಿ. ಅವರ ಅನುಭವಕ್ಕೆ ಬೆಲೆ ಕೊಡಿ.

ಮಾಲಾ ಮ. ಅಕ್ಕಿಶೆಟ್ಟಿ

Trending videos

Back to Top