CONNECT WITH US  

ಹಣ್ಣುಗಳನ್ನು ಸೇವಿಸುವ ಅತ್ಯುತ್ತಮ ಸಮಯ

ಪ್ರಕೃತಿ ಮನುಷ್ಯನಿಗೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳಲ್ಲಿ ಹಣ್ಣುಗಳೂ ಸೇರಿವೆ. ಹಣ್ಣುಗಳು ಅಂದರೆ ಅವು ಪೋಷಕಾಂಶಗಳ ಸಮೃದ್ಧ ಮೂಲಗಳು. ಹಣ್ಣುಗಳು ನಮಗೆ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಹೃದಯಾಘಾತ, ಲಕ್ವಾ  ಮತ್ತು ರಕ್ತದೊತ್ತಡದಂತಹ ಪ್ರಸಂಗಗಳಿಂದ ನಮ್ಮನ್ನು ಸುರಕ್ಷಿತಗೊಳಿಸುತ್ತವೆ. ಹಣ್ಣುಗಳ ಪೋಷಣಾ ತತ್ವಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ ನೀವು ಹಣ್ಣುಗಳನ್ನು ಸೇವಿಸಿದರೆ ಅದರಿಂದ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚು. ಒಮ್ಮೆ ನೀವು ಹಣ್ಣುಗಳನ್ನು ಸೇವಿಸುವ ಸರಿಯಾದ ವಿಧಾನ ಮತ್ತು ಸಮಯದ ಬಗ್ಗೆ ತಿಳಿದುಕೊಂಡಿರಿ ಎಂದಾದರೆ, ನೀವು ಚೆಲುವು, ಆರೋಗ್ಯ, ಆಯುಷ್ಯ ಮತ್ತು ಆನಂದದ ರಹಸ್ಯಗಳ ಬಗ್ಗೆ ತಿಳಿದುಕೊಂಡಂತೆ. 

ಹಣ್ಣುಗಳನ್ನು ಸೇವಿಸುವುದು ಅಂದರೆ ಅವುಗಳನ್ನು ಖರೀದಿಸುವುದು, ಕತ್ತರಿಸುವುದು ಮತ್ತು ಬಾಯೊಳಗೆ ಹಾಕಿಕೊಳ್ಳುವುದು ಎಂಬುದಷ್ಟೆ ನಮ್ಮಲ್ಲಿ  ಅನೇಕರ ಭಾವನೆಯಾಗಿರುತ್ತದೆ. ಆದರೆ ಹಣ್ಣುಗಳನ್ನು ಸೇವಿಸುವ ಸರಿಯಾದ ವಿಧಾನ ಇದಲ್ಲ. ಹಣ್ಣುಗಳ ಸೇವನೆಗೂ ಸಹ ಒಳ್ಳೆಯ ಸಮಯ ಎಂಬುದಿದೆ. ಹಣ್ಣುಗಳನ್ನು ಊಟಕ್ಕೆ ಮೊದಲು ಸೇವಿಸಿದರೆ ಒಳ್ಳೆಯದೋ ಅಥವಾ ನಂತರ ಸೇವಿಸಿದರೆ ಒಳ್ಳೆಯದೋ ಎಂಬುದನ್ನೂ ಸಹ ನಾವು ತಿಳಿದಿರಬೇಕಾಗುತ್ತದೆ. 

ಹಣ್ಣುಗಳ ಸೇವನೆಯ ಬಗ್ಗೆ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳುವುದು ಬಹಳ ಸರಳ. ನೀವು ದಿನಕ್ಕೆ ಸರಿಸುಮಾರು ಮೂರು ದೊಡ್ಡ ಊಟಗಳನ್ನು ಸೇವಿಸುತ್ತೀರಿ ಎಂದಾದರೆ  ಈ ಊಟಗಳ ಮಧ್ಯೆ ಹಣ್ಣುಗಳನ್ನು ಸೇವಿಸಲು ಜಾಗ ಮಾಡಿಕೊಳ್ಳಿ. ಹೀಗೆ ಮಾಡಲು, ನೀವು ಆಗಾಗ ಗಡಿಯಾರದತ್ತ ಕಣ್ಣು ಹಾಯಿಸಬೇಕಾಗುವುದು ಮತ್ತು ನೀವು ನಿಮ್ಮ ಜೊತೆಗೆ ತಂದಿರುವ ಸೇಬನ್ನು ಯಾವಾಗ ತಿನ್ನಬೇಕು ಎಂಬುದನ್ನು ಲೆಕ್ಕ ಹಾಕಬೇಕಾಗುವುದು ಮತ್ತು ನೀವು ಹಾಗೆಯೇ ಮಾಡಬೇಕು ಕೂಡ. ಅಂದರೆ ಆ ಸೇಬನ್ನು ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟವಾದ ಎರಡು ಗಂಟೆಯ ನಂತರ ಸೇವಿಸುವುದು ನಿಮ್ಮ ಗುರಿಯಾಗಿರಬೇಕು. ಒಂದು ವೇಳೆ ಪಾಸ್ತಾ, ಬರ್ಗರ್‌ ರೀತಿಯ ಭಾರೀ ಊಟವನ್ನು ನೀವು ಸೇವಿಸಿದ್ದರೆ, ಅಂತಹ ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆಗ ನೀವು 3-4 ಗಂಟೆ ಬಿಟ್ಟು ನಂತರ ಹಣ್ಣು ಸೇವಿಸಬೇಕು. ಒಂದು  ವೇಳೆ ನೀವು ಮಧ್ಯಾಹ್ನದ ಊಟದಲ್ಲಿ ಮಿಕ್ಸ್‌ ಗ್ರೀನ್‌ ಸಲಾಡ್‌ ಅನ್ನು ಸೇವಿಸಿದ್ದರೆ, ಆಗಲೂ ಇದೇ ನಿಯಮ ಅನ್ವಯವಾಗುತ್ತದೆ ಆದರೆ ಇಲ್ಲಿ ಸಮಯಾವಧಿ ಕಡಿಮೆಯಾಗುತ್ತದೆ; ಅಂದರೆ 1.5 ಗಂಟೆಯ ಬಳಿಕ ನೀವು ಹಣ್ಣು ಸೇವಿಸಬಹುದು. 

ಹಣ್ಣು  ಸೇವನೆಗೆ ಉತ್ತಮ 
ಸಮಯ ಯಾವುದು?

ಹಣ್ಣುಗಳ ಸೇವನೆಗೆ ಅತ್ಯುತ್ತಮ ಸಮಯ ಯಾವುದು ಎಂದು ತಿಳಿದಾಗ ನಿಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಎರಡು ಊಟಗಳ ನಡುವಿನ ಸಮಯದಲ್ಲಿ ಸೇವಿಸಲು ಶಿಫಾರಸು ಮಾಡಲಾಗುತ್ತದೆ. ಈ ಸಮಯದಲ್ಲಿ ಜೀರ್ಣಕ್ರಿಯೆಯು ಅತ್ಯಂತ ಕ್ಷಿಪ್ರವಾಗಿ ನಡೆಯುತ್ತದೆ ಮತ್ತು ಈ ಸಮಯದಲ್ಲಿ ಸೇವಿಸಿದ ಹಣ್ಣುಗಳನ್ನು ಜೀರ್ಣಗೊಳಿಸಲು ಶರೀರವು ವಿವಿಧ ರೀತಿಯ ಕಿಣ್ವಗಳನ್ನು ಬಳಸಿಕೊಳ್ಳುತ್ತದೆ. ಹಣ್ಣುಗಳಲ್ಲಿ ಇರುವ ಸೂಕ್ಷ್ಮ ಸಕ್ಕರೆಯ (ಸಿಂಪಲ್‌ ಶುಗರ್‌) ಅಂಶಗಳು ಸಂಪೂರ್ಣವಾಗಿ ದೇಹಗತವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಣ್ಣುಗಳನ್ನು ಊಟಗಳ ಮಧ್ಯೆ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಎಲ್ಲಾ ಪೋಷಕಾಂಶಗಳು, ನಾರಿನಂಶಗಳು ಮತ್ತು ಸೂಕ್ಷ್ಮ ಸಕ್ಕರೆಯ ಅಂಶಗಳು ಚೆನ್ನಾಗಿ ದೇಹಗತವಾಗುತ್ತವೆ. ಈ ಕ್ರಮದಲ್ಲಿ ಹಣ್ಣುಗಳನ್ನು ಸೇವಿಸಿದರೆ, ನೀವು ಸೇವಿಸಿದ ಹಣ್ಣಿನ ಬಹು ಅಂಶವು ಸಂಪೂರ್ಣವಾಗಿ ದೇಹಗತವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. 

ನೀವು ಊಟವಾದ ಕೂಡಲೇ ಹಣ್ಣನ್ನು ಸೇವಿಸಿದರೆ, ಅದರಲ್ಲೂ ವಿಶೇಷವಾಗಿ ಭಾರೀ ಊಟ ಸೇವಿಸಿದ ಕೂಡಲೇ ಹಣ್ಣನ್ನು ಸೇವಿಸಿದರೆ ಮತ್ತು ಇತರ ಆಹಾರಗಳ ಜೊತೆಗೆ ಸೇರಿಸಿ ಸೇವಿಸಿದರೆ, ಹಣ್ಣು ಇತರ ಆಹಾರಗಳ ಜೊತೆಗೆ ಹೊಟ್ಟೆಯಲ್ಲಿ ಬಹು ಸಮಯ ಇದ್ದು, ಕರುಳಿನಲ್ಲಿಯೇ ಕೊಳೆತು ಬಿಡಬಹುದು ಅಥವಾ ಅಲ್ಲಿ  ಕ್ರಿಮಿಗಳು ಉತ್ಪತ್ತಿಯಾಗಬಹುದು.  ಅನಂತರ ನಿಮಗೆ ಅಜೀರ್ಣ, ಎದೆ ಉರಿ, ತೇಗು ಅಥವಾ ಪಚನಕ್ಕೆ ಸಂಬಂಧಿಸಿದ ಇನ್ನಿತರ ಕಿರಿಕಿರಿಗಳು ಉಂಟಾದರೆ ನೀವು ಆಗ ಊಟವನ್ನು ದೂರುತ್ತೀರಿ - ಆದರೆ ನೀವು ಬೆರಕೆ ಮಾಡಿ ಸೇವಿಸಿರುವ ಆಹಾರ ಅಥವಾ ಸೇವಿಸಿ ಬಹು ಸಮಯ ಆಗಿರುವ ಹಣ್ಣುಗಳಲ್ಲಿ ಹುಟ್ಟಿಕೊಂಡಿರುವ ಕ್ರಿಮಿಗಳು ನಿಮ್ಮ ಹೊಟ್ಟೆಯನ್ನು ಕೆಡಿಸಿರುವ ಕಾರಣದಿಂದ ನಿಮಗೆ ಕಿರಿಕಿರಿಯ ಅನುಭವ ಆಗುತ್ತಿರಬಹುದು. ಇದನ್ನು ನಿಯಂತ್ರಿಸದೆ ಹಾಗೆಯೇ ಬಿಟ್ಟು ಬಿಟ್ಟರೆ, ಜೀರ್ಣಾಂಗವ್ಯೂಹದಿಂದಲೇ ಹುಟ್ಟಿಕೊಳ್ಳುವ ಇತರ ಸಮಸ್ಯೆಗಳಿಗೆ ಇದು ಕಾರಣ ಆಗಬಹುದು. 

ಊಟದಲ್ಲಿ ಹಣ್ಣುಗಳ ಜೊತೆಗೆ ಏನೇನನ್ನೋ ಸೇರಿಸುವುದಕ್ಕೆ ಬದಲಾಗಿ, ಒಂದು ಬಾರಿ ಸೇವಿಸುವಾಗ ಸ್ವಲ್ಪ$ ಹೆಚ್ಚೇ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.  ಪ್ರತಿದಿನ 3ರಿಂದ 4 ಸರ್ವಿಂಗ್ಸ್‌ಗಳಷ್ಟು ಹಣ್ಣುಗಳ ಆವಶ್ಯಕತೆ ಇದ್ದು, ಅದು ಎರಡರಿಂದ ಎರಡೂವರೆ ಕಪ್‌ಗ್ಳಷ್ಟು ಹಣ್ಣುಗಳಿಂದ ಬರುತ್ತದೆ. ಫ್ರುಟ್‌ ಸಲಾಡ್‌ ರೂಪದಲ್ಲಿ ಅಥವಾ ಕೇವಲ 2 ಸೇಬುಗಳನ್ನು ಸೇವಿಸುವ ಮೂಲಕ ನೀವು ಇದನ್ನು ಪಡೆಯಬಹುದು. ಹಣ್ಣುಗಳನ್ನು ಸೇವಿಸಿದ ಬಳಿಕವೂ ನಿಮಗೆ ಹಸಿವಾಗುತ್ತಿದ್ದರೆ, ನೀವು ಬೆಳಗ್ಗಿನ ಉಪಾಹಾರವನ್ನು ಕಡಿಮೆ ಸೇವಿಸಿದ್ದೀರಾ ಅಥವಾ ನಿಮ್ಮ ಊಟವನ್ನು ಇನ್ನಷ್ಟು ಚೆನ್ನಾಗಿ ಯೋಜಿಸಬೇಕಾಗಿದೆಯೇ ಎಂಬ ಬಗ್ಗೆ  ವಿಶ್ಲೇಷಣೆ ಮಾಡಿಕೊಳ್ಳಿ. ಸಾಮಾನ್ಯವಾಗಿ ಒಂದು ಸರ್ವಿಂಗ್ಸ್‌ ಹಣ್ಣುಗಳನ್ನು ಸೇವಿಸಿದ ಬಳಿಕ 1ರಿಂದ 2 ಗಂಟೆಗಳಷ್ಟು  ಸಮಯ ನೀವು ಲವಲವಿಕೆಯಿಂದ ಇರಲು ಸಾಧ್ಯವಾಗಬೇಕು. ಹಣ್ಣನ್ನು ಈ ಕ್ರಮದಲ್ಲಿ ಸೇವಿಸುವುದರಿಂದ ಅದು ಸಂಪೂರ್ಣ ಜೀರ್ಣವಾಗಲು ಮತ್ತು ದೇಹಗತವಾಗಲು ಸಹಾಯವಾಗುತ್ತದೆ.  

ಹಣ್ಣುಗಳನ್ನು  ಸೇವಿಸುವ ಅತ್ಯಂತ ಕೆಟ್ಟ  ಸಮಯ ಯಾವುದು?
ನಿದ್ದೆ ಮಾಡಲು ತೆರಳುವ ಸ್ವಲ್ಪವೇ ಸಮಯಕ್ಕೆ ಮೊದಲು ಹಣ್ಣುಗಳನ್ನು ಸೇವಿಸುವುದು ಒಳ್ಳೆಯ ಕ್ರಮ ಅಲ್ಲ. ಇದು ಇದ್ದಕ್ಕಿದ್ದಂತೆಯೇ ರಕ್ತದ ಸಕ್ಕರೆಯ ಅಂಶವನ್ನು ಮತ್ತು ಇನ್ಸುಲಿನ್‌ ಮಟ್ಟವನ್ನು ಏರಿಸುತ್ತದೆ ಮತ್ತು ಇದರಿಂದಾಗಿ ನಿರಾಳವಾಗಿ ನಿದ್ದೆ ಹೋಗಲು ಕಷ್ಟವಾಗುತ್ತದೆ. ಹಾಗಾಗಿ ಸಾಯಂಕಾಲದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿಕೊಳ್ಳಿ ಮತ್ತು ಯಾವುದೇ ಹಣ್ಣಾದರೂ ಸಹ ಅದನ್ನು ರಾತ್ರಿ ಮಲಗುವುದಕ್ಕೆ 3 ಗಂಟೆ ಮೊದಲು ಸೇವಿಸಬೇಕು ಎನ್ನುವುದನ್ನು ನೆನಪಿಡಿ. 

ಹಣ್ಣುಗಳ ಆಯ್ಕೆ ಮತ್ತು  ಸೇವನೆಗೆ ಸಲಹೆಗಳು 
ಸಂಸ್ಕರಿಸಿದ ಅಥವಾ ಕ್ಯಾನ್‌x ಹಣ್ಣುಗಳು ತಾಜಾ ಹಣ್ಣುಗಳಷ್ಟು ಪ್ರಯೋಜನಕಾರಿ ಅಲ್ಲ. ಕ್ಯಾನ್‌x ಹಣ್ಣುಗಳಲ್ಲಿ ಸಕ್ಕರೆ ಮತ್ತು ಬಹಳಷ್ಟು ಕೃತಕ ರಾಸಾಯನಿಕಗಳು ತುಂಬಿರುತ್ತವೆ, ಈ ರಾಸಾಯನಿಕಗಳು ಹಣ್ಣಿನಲ್ಲಿರುವ ಎಲ್ಲಾ ಪ್ರಯೋಜನಕಾರಿ ಅಂಶಗಳನ್ನು ನಾಶಗೊಳಿಸುತ್ತವೆ. 

ಹಣ್ಣುಗಳನ್ನು ತಿನ್ನುವುದಕ್ಕೆ ಮೊದಲು ಅವನ್ನು ಹರಿಯುತ್ತಿರುವ, ಧಾರಾಳ ನೀರಿನಲ್ಲಿ ಸುತ್ತಲೂ ಕೈಯಾಡಿಸಿ ಚೆನ್ನಾಗಿ ತೊಳೆಯಬೇಕು. ಹೀಗೆ ಮಾಡುವುದರಿಂದ ಹಣ್ಣುಗಳ ಮೇಲ್ಮೆ„ಯಲ್ಲಿ ಇದ್ದಿರಬಹುದಾದ ಯಾವುದೇ ರೋಗಾಣುಗಳು ತೊಳೆದು ಹೋಗುತ್ತವೆ. ತೊಳೆದ ನಂತರ ಹಣ್ಣುಗಳನ್ನು ಶುದ್ಧ ಬಟ್ಟೆಯಿಂದ ಒರಸಿ ಅನಂತರ ಸೇವಿಸಬೇಕು. 

ಪ್ರತೀ ಹಣ್ಣುಗಳಲ್ಲೂ ಅದರದೇ ಆದ ವಿಶೇಷತೆ ಇರುತ್ತದೆ ಹಾಗಾಗಿ ಬೇರೆ ಬೇರೆ ರೀತಿಯ ಹಣ್ಣುಗಳನ್ನು ಸೇವಿಸಿ. ದಿನವೂ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸುವುದರಿಂದ ಬೇರೆ ಬೇರೆ ರೀತಿಯ ಪೋಷಕಾಂಶಗಳನ್ನು ಮತ್ತು ವಿಶೇಷ ಪ್ರಯೋಜನವನ್ನು ಪಡೆಯಬಹುದು. ಹಾಗಾಗಿ ನಿಮ್ಮ ಆಹಾರದಲ್ಲಿ ವಿಶೇಷ ರೀತಿಯ ಹಣ್ಣುಗಳಿದ್ದರೆ ಬಹಳ ಉತ್ತಮ. 

ಹಣ್ಣುಗಳನ್ನು ಯಾವತ್ತೂ ಮೊಟ್ಟೆ, ಸಮುದ್ರಾಹಾರ ಅಥವಾ ಹಸಿ ಮಾಂಸದ ಸಮೀಪ ಇರಿಸಬೇಡಿ. ಹಣ್ಣುಗಳನ್ನು ಖರೀದಿಸುವಾಗ ಅಥವಾ ಮನೆಯಲ್ಲಿ ಸಂಗ್ರಹಿಸುವಾಗ ಯಾವಾಗಲೂ ಪ್ರತ್ಯೇಕ ವಾಗಿಯೆ ಇರಿಸ ಬೇಕು. 

ದಕ್ಷಾ  ಕುಮಾರ್‌.  
ಡಯಟೀಷಿಯನ್‌,  ಪಥ್ಯಾಹಾರ ವಿಭಾಗ, 
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ.


Trending videos

Back to Top