CONNECT WITH US  

ವೃದ್ಧಾಪ್ಯದಲ್ಲಿ ಮ್ಯಾಕುಲ ಹಾನಿಗೊಳ್ಳುವಿಕೆ

ಕೈಗಾರಿಕೀಕರಣಗೊಂಡಿರುವ ಇಂದಿನ ಪ್ರಪಂಚದಲ್ಲಿ  ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆ ತೊಂದರೆಯು ಮತ್ತೆ ಸರಿಪಡಿಸಲಾಗದಂಥ ದೃಷ್ಟಿ ನಾಶಕ್ಕೆ ಒಂದು ಅತಿಮುಖ್ಯವಾದಂತಹ ಕಾರಣವಾಗಿದೆ. ಮಿಲಿಯಗಟ್ಟಲೆ ಜನರು ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯಿಂದಾಗಿ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಈ ಪ್ರಮಾಣವು 2020ರ ವೇಳೆಗೆ ಸುಮಾರು 3 ಮಿಲಿಯ ದಾಟಬಹುದೆಂದು ಅಂದಾಜಿಸಲಾಗಿದೆ. 

ಪ್ರಾಯಸಂಬಂಧಿ ಮ್ಯಾಕುಲರ್‌ 
ಹಾನಿಗೊಳ್ಳುವಿಕೆ ತೊಂದರೆ 
ಎಂದರೇನು ? 

ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿ ಗೊಳ್ಳುವಿಕೆ - ಇದೊಂದು ಪ್ರಾಯಕ್ಕೆ ಸಂಬಂಧ ಪಟ್ಟ ಕಾಯಿಲೆ ಮತ್ತು ಈ ತೊಂದರೆಯು ನಿಧಾನವಾಗಿ ಕೇಂದ್ರದಲ್ಲಿರುವ ಮತ್ತು ಅತೀ ಸೂಕ್ಷ್ಮವಾದ ದೃಷ್ಟಿಯನ್ನು ಹಾನಿಮಾಡುತ್ತದೆ. ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಾದ ಓದುವುದು ಮತ್ತು ವಾಹನ ಚಲಾಯಿಸುವುದು ಇತ್ಯಾದಿಗಳನ್ನು ಪರಿಪೂರ್ಣವಾಗಿ ಮಾಡಲು, ಕಣ್ಣಿನ ಕೇಂದ್ರದಲ್ಲಿರುವ ದೃಷ್ಟಿಯು ಅತೀ ಮುಖ್ಯವಾಗುತ್ತದೆ. 

ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯಿಂದ ಮ್ಯಾಕುಲ ( ಅಕ್ಷಿಪಟಲದ ಅತ್ಯಂತ ಹೆಚ್ಚು ದೃಷ್ಟಿ ತೀಕ್ಷ್ಣತೆಯುಳ್ಳ ಪ್ರದೇಶ) ಹಾನಿಗೊಳ್ಳುತ್ತದೆ ಮತ್ತು ಈ ತೊಂದರೆಯಿಂದ ಯಾವುದೇ ರೀತಿಯ ನೋವು ಉಂಟಾಗುವುದಿಲ್ಲ.

ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿ ಗೊಳ್ಳುವಿಕೆಯ ತೊಂದರೆಯಲ್ಲಿ, ಕೆಲವರಿಗೆ ನಿಧಾನವಾಗಿ, ಅವರ ದೃಷ್ಟಿ  ಮಂದವಾಗುವು ದರ ಮೂಲಕ ದೃಷ್ಟಿ ನಾಶವಾಗುತ್ತಿರುವುದು ಅವರ ಅನುಭವಕ್ಕೆ ಬರುತ್ತದೆ. ಇನ್ನು ಕೆಲವರಲ್ಲಿ  ಮ್ಯಾಕುಲ ಹಾನಿಗೊಳ್ಳುವ ಪ್ರಮಾಣದ ವೇಗ ಅಧಿಕವಾಗಿರುವುದರಿಂದ, ದೃಷ್ಟಿದೋಷವು ಗೊತ್ತಾಗುತ್ತದೆ. ಅಮೆರಿಕದಲ್ಲಿ  60 ವರ್ಷ ಕ್ಕಿಂತ ಮೇಲ್ಪಟ್ಟವರಲ್ಲಿ ಕುರುಡುತನಕ್ಕೆ ಕಾರಣವಾಗುವಲ್ಲಿ  ಈ ತೊಂದರೆಯು ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. 

ಈ ತೊಂದರೆಯು 2 ವಿಧಗಳಲ್ಲಿ ಕಾಣಸಿಗು ತ್ತದೆ, ಅವುಗಳೆಂದರೆ ತೇವ ಮತ್ತು ಶುಷ್ಕ.

ತೇವವಾದ ಪ್ರಾಯಸಂಬಂಧಿ 
ಮ್ಯಾಕುಲರ್‌ ಹಾನಿಗೊಳ್ಳುವಿಕೆ 
ತೊಂದರೆ ಎಂದರೇನು ?

ರೆಟಿನಾದ ಹಿಂದೆ ಇರುವ ಅಸಹಜವಾದ ಹೊಸ ರಕ್ತನಾಳಗಳು ಮ್ಯಾಕುಲದ ಹಿಂದೆ ಬೆಳೆಯುವುದರಿಂದ ತೇವವಾದ ಪ್ರಾಯ ಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರಕ್ತನಾಳಗಳು ತುಂಬಾ ನಾಜೂಕಾಗಿರುವುದರಿಂದ ಅವುಗಳು ರಕ್ತ ಮತ್ತು ಇತರ ದ್ರವ ಪದಾರ್ಥಗಳನ್ನು ಪದೇ ಪದೇ ಸ್ರವಿಸುತ್ತಿರುತ್ತವೆ. ಈ ರಕ್ತ ಮತ್ತು ದ್ರವ ಪದಾರ್ಥಗಳು, ಮ್ಯಾಕುಲವನ್ನು ಸಹಜ ಸ್ಥಿತಿಗಿಂತ ಮೇಲಕ್ಕೆ ಏರಿಸುತ್ತವೆ. ಇದರಿಂದ ಮ್ಯಾಕುಲ ಕ್ಷಿಪ್ರಗತಿಯಲ್ಲಿ  ಹಾನಿಗೊಳಗಾಗುತ್ತದೆ.

ತೇವವಾದ ಪ್ರಾಯ ಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆ ತೊಂದರೆಯಿಂದ ಕಣ್ಣಿನ ಕೇಂದ್ರಭಾಗದ ದೃಷ್ಟಿಗೆ ಅಷ್ಟೇ ವೇಗದಲ್ಲಿ  ಹಾನಿಯಾಗುತ್ತದೆ.
 
ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಮೊದಲ ಹಂತದ ರೋಗ ಲಕ್ಷಣವೆಂದರೆ, ನೇರವಾದ ಗೆರೆಗಳು ಅಲೆಅಲೆಯಾಗಿ ಕಾಣುವುದು. ಈ ತರಹದ ತೊಂದರೆಗಳು ನಿಮ್ಮ ದೃಷ್ಟಿಯಲ್ಲಿ  ಕಂಡುಬಂದಾಗ,  ಕೂಡಲೇ ನೇತ್ರತಜ್ಞರನ್ನು ಭೇಟಿ ಮಾಡಬೇಕು. ಕಣ್ಣನ್ನು ವಿಸ್ತಾರವಾಗಿ ಹಿಗ್ಗಿಸಿ, ಸಮಗ್ರವಾಗಿ ಮಾಡುವ ಪರೀಕ್ಷೆಯ ಅಗತ್ಯ ಈ ಸಮಯದಲ್ಲಿ  ನಿಮಗಿದೆ.

ಶುಷ್ಕವಾದ ಪ್ರಾಯಸಂಬಂಧಿ 
ಮ್ಯಾಕುಲರ್‌ ಹಾನಿಗೊಳ್ಳುವಿಕೆ 
ತೊಂದರೆ ಎಂದರೇನು ?

ಮ್ಯಾಕುಲಾದಲ್ಲಿರುವ ಅತೀ ಸೂಕ್ಷ್ಮವಾದ ಜೀವಕೋಶಗಳು ನಿಧಾನವಾಗಿ ನಾಶಗೊಂಡು, ಹಾನಿಗೊಳಗಾದ ಕಣ್ಣಿನ ಕೇಂದ್ರ ದೃಷ್ಟಿಯನ್ನು ಹಂತಹಂತವಾಗಿ ಮಂದಗೊಳಿಸುವುದಕ್ಕೆ, ಶುಷ್ಕವಾದ ಪ್ರಾಯ ಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆ ಎಂದು ಕರೆಯುತ್ತಾರೆ. ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆ ತೊಂದರೆಯು  ಹದಗೆಟ್ಟಾಗ, ಕೇಂದ್ರ ದೃಷ್ಟಿಯು ಮಂದವಾಗಿ ಕಾಣುತ್ತದೆ. ಕಾಲಕಳೆದಂತೆ ಮ್ಯಾಕುಲ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ, ಹಾನಿಯಾದ ಕಣ್ಣಿನ ಕೇಂದ್ರ ದೃಷ್ಟಿಯು ಕ್ರಮೇಣವಾಗಿ ಕಳೆದುಹೋಗುತ್ತದೆ.

ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ತೀರಾ ಸಾಮಾನ್ಯವಾದ ರೋಗ ಲಕ್ಷಣವೆಂದರೆ, ಸ್ವಲ್ಪ ಮಟ್ಟಿಗೆ ಕಣ್ಣು ಮಂಜಾಗುವುದು. ನಿಮಗೆ ಮುಖಗಳನ್ನು ಗುರುತಿಸುವುದರಲ್ಲಿ  ಕಷ್ಟವಾಗ ಬಹುದು. ಓದಲು ಮತ್ತು ಬೇರೆ ದಿನನಿತ್ಯದ ಕೆಲಸಗಳನ್ನು ಮಾಡಲು ನಿಮಗೆ ಹೆಚ್ಚಿನ ಬೆಳಕಿನ ಆವಶ್ಯಕತೆ ಇರುತ್ತದೆ. ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿ ಗೊಳ್ಳುವಿಕೆಯ ತೊಂದರೆಯು ಎರಡೂ ಕಣ್ಣುಗಳಲ್ಲಿ ಕಾಣಿಸಿಕೊಂಡರೂ ಕೂಡ, ಒಂದು ಕಣ್ಣಿನ ದೃಷ್ಟಿ  ಹಾನಿಗೊಂಡು, ಇನ್ನೊಂದು ಹಾನಿಯಾಗದೇ ಇರುವಂತೆ ತೋರುತ್ತದೆ. ಅಕ್ಷಿಪಟಲ ಮತ್ತು ಕೊರಾಯಡ್‌ ಗಳ ನಡುವೆ ರಾಶಿ ಬಿದ್ದಿರುವ ಹಳದಿ ಬಣ್ಣದ ಕೋಶಾಂಶಗಳು ಕಾಣಿಸಿಕೊಳ್ಳುವುದು ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಮೊದಲ ಹಂತದ ಲಕ್ಷಣ.

ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯು ಮೂರು ಹಂತಗಳಲ್ಲಿ ಇರುತ್ತದೆ. ಈ ತೊಂದರೆಯು ಒಂದು ಕಣ್ಣಿನಲ್ಲಿ ಅಥವಾ ಎರಡು ಕಣ್ಣುಗಳಲ್ಲಿಯೂ ಕಾಣಬಹುದು. 

1. ಮೊದಲ ಹಂತದ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆ 
 
ಈ ಹಂತದಲ್ಲಿ  ಹಳದಿ ಕೋಶಗಳ ಸಂಖ್ಯೆ ಕಡಿಮೆ ಇರುತ್ತದೆ ಅಥವಾ ಅವುಗಳು ಗಾತ್ರದಲ್ಲಿ  ಚಿಕ್ಕದಾಗಿರುತ್ತವೆ. ಆದ್ದರಿಂದ ಈ ಹಂತದಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಇರುವುದಿಲ್ಲ.

2. ಮಧ್ಯಮ ಹಂತದ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆ 

ಈ ಹಂತದಲ್ಲಿ  ಹಳದಿಕೋಶಗಳ ಸಂಖ್ಯೆ ಸ್ವಲ್ಪ  ಹೆಚ್ಚಾಗಿರಬಹುದು ಅಥವಾ ಅವುಗಳ ಗಾತ್ರ ಕೂಡಾ ಸ್ವಲ್ಪ ಮಟ್ಟಿಗೆ ದೊಡ್ಡದಿರಬಹುದು. ಈ ಹಂತದಲ್ಲಿ ರೋಗಿಗೆ ಕೇಂದ್ರ ದೃಷ್ಟಿಯು ಮಂದವಾಗಿ ಕಾಣಬಹುದು. ಓದಲು ಅಥವಾ ಬೇರೆ ಕೆಲಸಗಳನ್ನು ಮಾಡಲು ಹೆಚ್ಚಿನ ಬೆಳಕಿನ ಆವಶ್ಯಕತೆ  ಈ ಹಂತದಲ್ಲಿ ಇರುತ್ತದೆ.

3.ಮುಂದುವರಿದ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆ 

ಈ ಹಂತದಲ್ಲಿ  ಹಳದಿ ಕೋಶಗಳ ಸಂಖ್ಯೆ ಹೆಚ್ಚಾಗುವುದರ ಜತೆಗೆ, ಮ್ಯಾಕುಲಾದ ಸೂಕ್ಷ್ಮವಾದ ಜೀವ ಕೋಶಗಳು ನಾಶವಾಗುತ್ತವೆ. ಇದು ದೃಷ್ಟಿಯು ಮಬ್ಟಾಗಲು ಕಾರಣವಾಗುತ್ತದೆ. ಮುಂದೆ ಈ ಮಬ್ಬುತನವು ಜಾಸ್ತಿಯಾಗಿ, ನಿಮಗೆ ಓದಲು ಮತ್ತು ಬೇರೆಯವರ ಮುಖವನ್ನು ಗುರುತಿಸಲು ಕಷ್ಟವಾಗುತ್ತದೆ. ವಸ್ತುಗಳು ಅಥವಾ ಜನರು ನಿಮ್ಮ ಅತೀ ಸಮೀಪ ಬರುವವರೆಗೆ, ಅವರು ನಿಮಗೆ ಮಬ್ಬು ಮಬ್ಟಾಗಿ ಕಾಣಿಸುತ್ತಾರೆ.

ಶುಷ್ಕ ಅಥವಾ ತೇವ - ಇವುಗಳಲ್ಲಿ 
ಯಾವ ವಿಧವು  ಸಾಮಾನ್ಯವಾಗಿರುತ್ತದೆ ?

ಶುಷ್ಕವಾದ ವಿಧವು ಅತ್ಯಂತ ಸಾಮಾನ್ಯವಾಗಿರುತ್ತದೆ. ಈ ತೊಂದರೆ ಹೊಂದಿರುವ ಒಟ್ಟು ಜನರಲ್ಲಿ  ಶೇ. 85 ಪ್ರಮಾಣದ ಜನರಿಗೆ ಮಧ್ಯಮ ಮತ್ತು ಮುಂದುವರಿದ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯು  ಕಾಣಿಸಿಕೊಳ್ಳುತ್ತದೆ.

ಶುಷ್ಕವಾದ ವಿಧವು ತೇವವಾದ 
ವಿಧಕ್ಕೆ  ತಿರುಗಬಹುದೇ ?

ಹೌದು. ಯಾಕೆಂದರೆ, ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆ ತೊಂದರೆ ಇರುವ ಎಲ್ಲ ಜನರು ಕೂಡಾ ಮೊದಲು ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ಒಳಗಾಗಿದ್ದವರು.

ಕೆಲವೊಮ್ಮೆ  ಶುಷ್ಕವಾದ ವಿಧವು ಮುಂದುವರಿದರೆ, ಆಗ ಅದು ತೇವಕ್ಕೆ ತಿರುಗದೇ, ಅದೇ  ದೃಷ್ಟಿನಾಶಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಮೊದಲ ಹಂತದಲ್ಲೇ ಶುಷ್ಕ ವಿಧಾನವು ತೇವಾಂಶಕ್ಕೆ ತಿರುಗಿ ತೊಂದರೆಯಾಗಬಹುದು. ಯಾವಾಗ ಮತ್ತು ಹೇಗೆ ಶುಷ್ಕವಾದ ವಿಧಾನವು ತೇವಾಂಶಕ್ಕೆ ತಿರುಗಬಹುದು ಎಂಬುದಕ್ಕೆ ಯಾವುದೇ ರೀತಿಯ ಕಾರಣಗಳನ್ನು ಹೇಳುವುದು ಕಷ್ಟ.

ಪ್ರಾಯಸಂಬಂಧಿ ಮ್ಯಾಕುಲರ್‌  ಹಾನಿಗೊಳ್ಳುವಿಕೆಯ 
ತೊಂದರೆಯಿಂದ ಅಪಾಯ ಯಾರಿಗೆ ?

ವಯಸ್ಸಾದವರು  ಈ ಕಾಯಿಲೆಯಿಂದ ಹೆಚ್ಚು ತೊಂದರೆಗೊಳಗಾಗುತ್ತಾರೆ. ಸಂಶೋಧನೆಯ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟವರು ಹೆಚ್ಚಾಗಿ ತೊಂದರೆಗೆ ಒಳಗಾಗುತ್ತಾರೆ.  75 ವರ್ಷ ಮೇಲ್ಪಟ್ಟವರಲ್ಲಿ ಶೇ.30 ಜನರಲ್ಲಿ ಈ ತೊಂದರೆ ಕಂಡುಬರುತ್ತ‌ದೆ.

ಈ ತೊಂದರೆಯ ಅಪಾಯಕ್ಕೆ ಕಾರಣವಾಗುವ ಬೇರೆ ಕಾರಣಗಳೆಂದರೆ :

ಧೂಮಪಾನ  

ಧೂಮಪಾನ ಮಾಡುವುದರಿಂದ, ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಬೊಜ್ಜು  

ಸಂಶೋಧನೆಯ ಮೂಲಕ ವಿಜ್ಞಾನಿಗಳು ಬೊಜ್ಜು ಮೈ ಮತ್ತು ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಸಂಬಂಧವನ್ನು ಕಂಡುಹಿಡಿದಿದ್ದಾರೆ. ಬೊಜ್ಜಿನಿಂದಾಗಿ ಮೊದಲ ಮತ್ತು ಮಧ್ಯಮ ಹಂತದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯು  ಮುಂದುವರಿದು, ಅಡ್ವಾನ್ಸ್‌ ಮ್ಯಾಕುಲರ್‌ ತೊಂದರೆಗೆ ಕಾರಣವಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
 
ಜನಾಂಗ 

ಆಫ್ರಿಕಾ, ಅಮೆರಿಕನ್‌ ಜನರಿಗಿಂತ, ಬಿಳಿಯ ಜನರಲ್ಲಿ  ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಕೌಟುಂಬಿಕ ಹಿನ್ನೆಲೆ

ಕುಟುಂಬದಲ್ಲಿ  ಹತ್ತಿರದ ಸಂಬಂಧಿಕರಲ್ಲಿ ಯಾರಿಗಾದರೂ ಈ ತೊಂದರೆ ಇದ್ದರೆ, ಅವರ ಸಂತತಿಯವರಿಗೆ ಈ ತೊಂದರೆ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
 
ಲಿಂಗ 

 ಗಂಡಸರಿಗಿಂತ ಹೆಂಗ‌ಸರಲ್ಲಿ  ಈ ತೊಂದರೆಯ ಅಪಾಯ ಹೆಚ್ಚು ಇರುತ್ತದೆ.

ನಮ್ಮ ಜೀವನ ರೀತಿ ಪರಿವರ್ತನೆಯಿಂದ  ಬದಲಾವಣೆಯನ್ನು ಮಾಡಬಹುದೇ?

ಜೀವನಶೈಲಿಯು ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ಒಳಗಾಗುವ ಅವಕಾಶವನ್ನು ಕಡಿಮೆ ಮಾಡಬಹುದು.

ಆರೋಗ್ಯಕರವಾದ ಆಹಾರವಾದ ಹಸಿರು ತರಕಾರಿಗಳು ಮತ್ತು ಮೀನನ್ನು ಹೆಚ್ಚಾಗಿ ಸೇವಿಸಬೇಕು.

ಧೂಮಪಾನ ಮಾಡಬಾರದು.

ಸಾಮಾನ್ಯ ಪ್ರಮಾಣದ ರಕ್ತದೊತ್ತಡವನ್ನು ಪಾಲಿಸಿಕೊಂಡು ಬರಬೇಕು. 

ತೂಕವನ್ನು ಆಗಾಗ ಪರೀಕ್ಷಿಸುತ್ತಿರಬೇಕು.

ವ್ಯಾಯಾಮವನ್ನು ನಿಯಮಿತವಾಗಿ ಮಾಡುತ್ತಿರಬೇಕು.

ಚಿಕಿತ್ಸೆಗಳು 

ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ಯಾವ ರೀತಿಯಲ್ಲಿ  ಚಿಕಿತ್ಸೆ ನೀಡಬಹುದು ?

ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ, ಲೇಸರ್‌ ಶಸ್ತ್ರ ಚಿಕಿತ್ಸೆ, ಫೋಟೋಡೈನಾಮಿಕ್‌ ತೆರಪಿ ಮತ್ತು ಕಣ್ಣಿನೊಳಗೆ ಚುಚ್ಚುಮದ್ದನ್ನು ನೀಡುವುದರ ಮೂಲಕ ಚಿಕಿತ್ಸೆ ನೀಡಬಹುದು. ಆದರೆ ಇವೆಲ್ಲವೂ ಕೂಡ ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯನ್ನು ಸಂಪೂರ್ಣವಾಗಿ ಗುಣಪಡಿಸಲು ವಿಫಲವಾಗುತ್ತವೆ. ಚಿಕಿತ್ಸೆಯ ಅನಂತರವೂ ಕೂಡ ಕುರುಡುತನ ಹಾಗೂ ಈ ರೋಗ ಬೆಳೆಯುವ ಸಾಧ್ಯತೆ ಇರುತ್ತದೆ.

1. ಲೇಸರ್‌ಚಿಕಿತ್ಸೆ : ಈ ಲೇಸರ್‌ ಅನ್ನು ಅತೀ ನಾಜೂಕಾಗಿರುವ, ಸ್ರವಿಸುವ ರಕ್ತನಾಳಗಳನ್ನು ನಾಶ ಮಾಡಲು ಉಪಯೋಗಿಸುತ್ತಾರೆ. ಬೆಳಕಿನ ಪ್ರವಾಹವನ್ನು ಹೊಸದಾಗಿ ಬೆಳೆಯುತ್ತಿರುವ ರಕ್ತನಾಳಗಳ ಮೇಲೆ ಹರಿಸಿ, ಅವುಗಳನ್ನು ನಾಶಮಾಡುತ್ತಾರೆ ಮತ್ತು ಮುಂದೆ ಉಂಟಾಗಬಹುದಾದ ಕುರುಡುತನವನ್ನು ತಡೆಯುತ್ತಾರೆ. ಆದರೆ, ಈ ಲೇಸರ್‌ ಚಿಕಿತ್ಸೆಯಿಂದ, ಸುತ್ತಲಿನ ಭಾಗಗಳಲ್ಲಿರುವ ಆರೋಗ್ಯಕರವಾದ ಅಂಗಾಂಶಗಳ  ಮೇಲೆ ಅಲ್ಪ  ಪ್ರಮಾಣದಲ್ಲಿ  ಹಾನಿಯಾಗಬಹುದು. ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ಸ್ವಲ್ಪ  ಪ್ರಮಾಣದ ಜನರಿಗೆ ಮಾತ್ರ ಲೇಸರ್‌ ಶಸ್ತ್ರ ಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಮ್ಯಾಕುಲದ ಕೇಂದ್ರಭಾಗದಲ್ಲಿರುವ ಫೋವಿಯದ ಹೊರಗಡೆ ಈ ಹೊಸ ರಕ್ತನಾಳಗಳು ಬೆಳೆದಿದ್ದರೆ, ಅವುಗಳನ್ನು ನಾಶಪಡಿಸಲು ಲೇಸರ್‌ ಚಿಕಿತ್ಸೆ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಲೇಸರ್‌ ಚಿಕಿತ್ಸೆಯನ್ನು ವೈದ್ಯರ ಚಿಕಿತ್ಸಾಲಯದಲ್ಲೇ ಮಾಡಬಹುದು.

ಲೇಸರ್‌ ಚಿಕಿತ್ಸೆಯ ಅನಂತರವೂ ಹೊಸ ರಕ್ತನಾಳಗಳು ಹುಟ್ಟುವ ಅಪಾಯ ಇರುತ್ತದೆ. ಆಗ ಚಿಕಿತ್ಸೆಯ ಪುನರಾವರ್ತನೆ ಅಗತ್ಯವಾಗಿರುತ್ತದೆ. ಕೆಲವೊಂದು ಸಂದರ್ಭದಲ್ಲಿ  ಚಿಕಿತ್ಸೆಯನ್ನು ಪುನರಾವರ್ತಿಸಿದಾಗಲೂ ಕೂಡ, ಕುರುಡುತನ ಮುಂದುವರಿಯುವ ಸಾಧ್ಯತೆ ಇರುತ್ತದೆ.

2. ಫೋಟೊಡೈನಾಮಿಕ್‌ ತೆರಪಿ : ವರ್ಟೆಫೋರ್‌ಫಿನ್‌ ಎಂಬ ಔಷಧವನ್ನು ನಿಮ್ಮ ತೋಳಿಗೆ ಚುಚ್ಚುಮದ್ದಿನ ಮೂಲಕ ನೀಡಲಾಗುವುದು. ಈ ಔಷಧವು ಕಣ್ಣಿನ ಹೊಸ ರಕ್ತನಾಳಗಳಲ್ಲಿ  ಚಲಿಸುತ್ತದೆ. ಇದು ಕಣ್ಣಿನ ಹೊಸ ರಕ್ತನಾಳಗಳ ಮೇಲೆ ಅಂಟಿಕೊಳ್ಳುತ್ತದೆ. ಅನಂತರ ನಿಮ್ಮ  ಕಣ್ಣುಗಳಲ್ಲಿ  ಒಂದು ಲೇಸರ್‌ ಬೆಳಕು  90 ಸೆಕೆಂಡುಗಳ ವರೆಗೆ ಮಿಂಚುತ್ತದೆ. ಆಗ ಔಷಧವು ಚುರುಕುಗೊಂಡು, ಹೊಸ ರಕ್ತನಾಳಗಳನ್ನು ಸಾಯಿಸುತ್ತದೆ. ಇದರಿಂದ ಕುರುಡುತನದ ತೊಂದರೆ ಸ್ವಲ್ಪ ಮಟ್ಟಿಗೆ ನಿಧಾನವಾಗುತ್ತದೆ. ಲೇಸರ್‌ ಚಿಕಿತ್ಸೆಯಂತೆ ಇದು ಆರೋಗ್ಯಕರವಾದ ಕೋಶಗಳ ಸುತ್ತಲಿನ ಭಾಗಕ್ಕೆ ಹಾನಿಮಾಡುವುದಿಲ್ಲ. ಯಾಕೆಂದರೆ ಈ ಔಷಧವು ಬೆಳಕಿನ ಮೂಲಕ ಚುರುಕುಗೊಳ್ಳುವುದರಿಂದ, ಮುಂದಿನ 5 ದಿನಗಳವರೆಗೆ ನೀವು ನಿಮ್ಮ ಚರ್ಮ ಮತ್ತು ಕಣ್ಣನ್ನು ಬೆಳಕಿಗೆ ಅಥವಾ ಸೂರ್ಯನ ಕಿರಣಗಳಿಗೆ ಒಡ್ಡುವುದನ್ನು ತಪ್ಪಿಸಬೇಕು. 

ಫೋಟೋಡೈನಾಮಿಕ್‌ ತೆರಪಿಯಲ್ಲಿ ನೋವು ಇರುವುದಿಲ್ಲ. ಈ ಚಿಕಿತ್ಸೆಯು 20 ನಿಮಿಷಗಳ ಕಾಲಾವಕಾಶ ತೆಗೆದುಕೊಳ್ಳುವುದರಿಂದ, ಇದನ್ನು ವೈದ್ಯರ ಕೊಠಡಿಯಲ್ಲಿಯೇ ಮಾಡಬಹುದು.

ಫೋಟೋಡೈನಾಮಿಕ್‌ ತೆರಪಿಯು ಕುರುಡುತನ ಉಂಟಾಗುವ ವೇಗವನ್ನು ನಿಧಾನಗೊಳಿಸುತ್ತದೆ. ಇದರಿಂದಲೂ ಕುರುಡುತನವನ್ನು ತಡೆಯಲು ಸಾಧ್ಯವಿಲ್ಲ ಮತ್ತು ಅದಾಗಲೇ ಕಳೆದುಕೊಂಡ ದೃಷ್ಟಿಯನ್ನು ಹಿಂದಿರುಗಿಸುವುದು  ಕೂಡಾ ಸಾಧ್ಯವಿಲ್ಲ. ಚಿಕಿತ್ಸೆಯ ಫಲಿತಾಂಶ ತಾತ್ಕಾಲಿಕವಾಗಿರಬಹುದು ಅಥವಾ ಪುನಃ ಚಿಕಿತ್ಸೆ ಪಡೆಯುವ ಅಗತ್ಯ ಬೀಳಬಹುದು.

3. ಚುಚ್ಚು ಮದ್ದುಗಳು : ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯನ್ನು ಕಣ್ಣಿನೊಳಗೆ ಔಷಧವನ್ನು ಚುಚ್ಚುಮದ್ದಿನ ಮೂಲಕ ಬಿಡುವ ಚಿಕಿತ್ಸೆ ನೀಡಬಹುದು. ಈ ತೊಂದರೆಯಲ್ಲಿ  ಅಸಹಜವಾದ ಗಾತ್ರದಲ್ಲಿ ಒಂದು ಗ್ರೋಥ್‌ ಫ್ಯಾಕ್ಟರ್‌ ಇರುವ ಕಾರಣ ಹೊಸ ರಕ್ತನಾಳಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಚುಚ್ಚುಮದ್ದು ಆ ಗ್ರೋಥ್‌ ಫ್ಯಾಕ್ಟರ್‌ನ್ನು ತಡೆಯುತ್ತದೆ.

ಪ್ರತಿ ತಿಂಗಳು ನಿಮಗೆ ಒಂದಕ್ಕಿಂತ ಹೆಚ್ಚು ಚುಚ್ಚುಮದ್ದುಗಳನ್ನು ನೀಡಬೇಕಾಗಿ ಬರಬಹುದು. ಪ್ರತಿ ಚುಚ್ಚುಮದ್ದು ನೀಡುವ ಮೊದಲು ನಿಮ್ಮ ಕಣ್ಣನ್ನು ಜಡಗೊಳಿಸಲಾಗುತ್ತದೆ. ಈ ಚುಚ್ಚುಮದ್ದು ನೀಡಿದ ಅನಂತರ ನೀವು ವೈದ್ಯರ ಕೊಠಡಿಯಲ್ಲಿ  ಸ್ವಲ್ಪ ಸಮಯದವರೆಗೆ ಉಳಿಯಬೇಕಾಗುತ್ತದೆ. ಆ ಸಮಯದಲ್ಲಿ  ಅವರು ನಿಮ್ಮ  ಕಣ್ಣನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಈ ಚುಚ್ಚುಮದ್ದು ಕೂಡಾ ಕುರುಡುತನ ಉಂಟಾಗುವ ವೇಗವನ್ನು ನಿಧಾನಗೊಳಿಸುತ್ತದೆ ಮತ್ತು ಕೆಲವೊಂದು ಸಂದರ್ಭದಲ್ಲಿ  ದೃಷ್ಟಿ  ಸುಧಾರಿಸಲು ಸಹಾಯ ಮಾಡುತ್ತದೆ.

ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ಯಾವ ರೀತಿಯಲ್ಲಿ  ಚಿಕಿತ್ಸೆ ನೀಡಬಹುದು ?

ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯು ಒಂದು ಬಾರಿ ಮುಂದುವರಿದ ಹಂತಕ್ಕೆ ಹೋದರೆ, ದೃಷ್ಟಿಯನ್ನು ಕಳೆದುಕೊಳ್ಳದಂತೆ ತಡೆಯಲು ಯಾವುದೇ ಚಿಕಿತ್ಸೆಗಳಿಲ್ಲ. ಆದ್ದರಿಂದ ಚಿಕಿತ್ಸೆಯಿಂದ ಮಧ್ಯಮದಿಂದ ಮುಂದುವರಿದ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯವರೆಗೆ ಮುಂದುವರಿಯುವುದನ್ನು ನಿಧಾನಿಸಬಹುದು.
 
ಒಂದು  ಸಂಶೋಧನೆಯ ಪ್ರಕಾರ, ಆಂಟಾಕ್ಸಿಡೆಂಟ್ಸ್‌  ಮತ್ತು ಝಿಂಕ್‌ಗಳ ಸಂಯೋಜನೆಯನ್ನು ಒಟ್ಟಾಗಿ ತೆಗೆದುಕೊಳ್ಳುವುದರಿಂದ ಮುಂದುವರಿದ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಮತ್ತು ಅದರಿಂದಾಗುವ ಕುರುಡುತನದ ಅಪಾಯವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ಮಧ್ಯಮದಿಂದ ಮುಂದುವರಿದ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆವರೆೆಗೆ ಬೆಳೆಯುವ ವೇಗವು ಕಡಿಮೆಯಾಗುವುದರಿಂದ, ಹೆಚ್ಚಿನ ಜನರನ್ನು ಕುರುಡುತನದಿಂದ ರಕ್ಷಿಸಬಹುದು.

ಸಂಶೋಧಕರ ಪ್ರಕಾರ ಆಂಟಾಕ್ಸಿಡೆಂಟ್‌ನ ದಿನದ ಖಚಿತವಾದ ಪ್ರಮಾಣ ಈ ಕೆಳಗಿನಂತಿದೆ.  500 ಮಿಲಿಗ್ರಾಮ್‌ ವಿಟಮಿನ್‌ ಇ , 400 ಇಂಟರ್‌ನ್ಯಾಶನಲ್‌ ಯೂನಿಟ್‌ನಷ್ಟು  ವಿಟಮಿನ್‌ ಉ, 15 ಮಿಲಿಗ್ರಾಮ್‌ ಬೀಟಾ ಕ್ಯಾರೋಟಿನ್‌ ( ಇದು 25,000 ಇಂಟರ್‌ನ್ಯಾಶನಲ್‌ ಯೂನಿಟ್‌ನಷ್ಟು  ವಿಟಮಿನ್‌ ಅಗೆ ಸಮನಾಗಿರುತ್ತದೆ. ), 80 ಮಿಲಿಗ್ರಾಮ್‌ನಷ್ಟು  ಝಿಂಕ್‌ನ್ನು ಝಿಂಕ್‌ ಆಕ್ಸೈಡ್‌ ಆಗಿ ಮತ್ತು 2 ಮಿಲಿಗ್ರಾಮ್‌ನಷ್ಟು  ಕಾಪರ್‌ ಅನ್ನು ಕ್ಯುಪ್ರಿಕ್‌ ಆಕ್ಸೈಡ್‌ ಆಗಿ. 

ಈ ಸಂಯೋಜನೆಯನ್ನು 
ಯಾರು ತೆಗೆದುಕೊಳ್ಳಬೇಕು ?

ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯು ಅತಿಯಾದ ವೇಗದಲ್ಲಿ  ಬೆಳೆಯುವ ಅಪಾಯ ಇರುವವರು ಈ ಸಂಯೋಜನೆಯನ್ನು ತೆಗೆದುಕೊಳ್ಳಬೇಕು. ಈ ಕೆಳಗಿನಂತಿದ್ದರೆ, ನಿಮ್ಮ ಕಣ್ಣುಗಳಲ್ಲಿ ತೊಂದರೆಯು ಅಮಿತ ವೇಗವಾಗಿ ಬೆಳೆಯುವ ಸಾಧ್ಯತೆಗಳಿರುತ್ತವೆ. 

1. ಮಧ್ಯಮ ಹಂತದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯು ಒಂದು ಅಥವಾ ಎರಡು ಕಣ್ಣುಗಳಲ್ಲಿ  ಇರುವವರು  ಅಥವಾ 

2. ಮುಂದುವರಿದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆ ( ತೇವವಾದ ಅಥವಾ ಶುಷ್ಕವಾದ ) ಒಂದು ಕಣ್ಣಿನಲ್ಲಿ  ಇರುವವರು.
ಈ ಸಂಯೋಜನೆಯು, ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ರೋಗ ಪರಿಹಾರಕವಲ್ಲ. ಮೊದಲೇ ಕಳೆದುಹೋದ ದೃಷ್ಟಿಯನ್ನು ಇದು ಹಿಂದಿರುಗಿಸುವುದಿಲ್ಲ. ಆದರೆ ಕುರುಡುತನದ ವೇಗವನ್ನು ಇದು ಕಡಿಮೆ ಮಾಡುತ್ತದೆ ಮತ್ತು ಅಂತಿಮ ಹಂತದಲ್ಲಿರುವ ಜನರಿಗೆ ದೃಷ್ಟಿ  ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ನಿಮ್ಮ  ನೇತ್ರ ತಜ್ಞರು ನಿಮಗೆ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆ ಇದ್ದರೆ, ಅದರ ಹಂತ, ಅದರಿಂದಾಗುವ ಅಪಾಯಗಳ ಬಗ್ಗೆ  ಮತ್ತು ಅದು ಯಾವ ವಿಧದಲ್ಲಿದೆ ಎಂಬುದನ್ನು ತಿಳಿಸುತ್ತಾರೆ.

ಹಳದಿ ಬಣ್ಣದ ಕೋಶಾಂಶಗಳು  (ಡ್ರುಸೆನ್‌) ಎಂದರೇನು ?

ಹಳದಿ ಬಣ್ಣದ ಕೋಶಾಂಶಗಳು, ರೆಟಿನಾದ ಕೆಳಗಡೆ ಸಂಗ್ರಹವಾಗಿರುತ್ತವೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ  ಇವುಗಳು ಸಾಮಾನ್ಯವಾಗಿ ಪದೇ ಪದೇ ಕಾಣಿಸಿಕೊಳ್ಳುತ್ತವೆ. ಕಣ್ಣನ್ನು ವಿಸ್ತಾರವಾಗಿ ಹಿಗ್ಗಿಸಿ ಸಮಗ್ರವಾಗಿ ಮಾಡುವ ಪರೀಕ್ಷೆಯ ಮೂಲಕ ನಿಮ್ಮ ನೇತ್ರತಜ್ಞರು ಇವುಗಳನ್ನು ಪತ್ತೆಹಚ್ಚುತ್ತಾರೆ. ದೃಷ್ಟಿ ಕಳೆದುಕೊಳ್ಳಲು ಈ ಕೋಶಾಂಶಗಳು ಮಾತ್ರ ಕಾರಣವಾಗುವುದಿಲ್ಲ; ಅದಕ್ಕಿಂತಲೂ ಹೆಚ್ಚಾಗಿ ವಿಜ್ಞಾನಿಗಳಿಗೆ, ಈ ಕೋಶಾಂಶಗಳಿಗೆ ಮತ್ತು ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ಇರುವ ಸಂಬಂಧದ ಬಗ್ಗೆ ಇನ್ನೂ ಕೂಡಾ ಸಂಶಯಗಳಿವೆ. ಆದರೆ ಅವರಿಗೆ ತಿಳಿದಿರುವ ವಿಷಯವೆಂದರೆ, ಈ ಹಳದಿಬಣ್ಣದ ಕೋಶಾಂಶಗಳ ಸಂಖ್ಯೆ ಅಥವಾ ಗಾತ್ರ ಹೆಚ್ಚಾಗುವುದರಿಂದ ಮುಂದುವರಿದ ತೇವ ಅಥವಾ ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಅಪಾಯ ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ ಶಾಶ್ವತವಾದ ಕುರುಡುತನ ಉಂಟಾಗುವ ಸಂಭವವಿರುತ್ತದೆ.

ಲಕ್ಷಣಗಳು ಮತ್ತು ಪತ್ತೆಹಚ್ಚುವಿಕೆ 
 ಈ ತೊಂದರೆಯ ಲಕ್ಷಣಗಳೇನು ?

ಸಾಮಾನ್ಯವಾಗಿ ತೇವವಾದ ಮತ್ತು ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯಿಂದ ಕಣ್ಣಿಗೆ ಯಾವುದೇ ರೀತಿಯ ನೋವಾಗುವುದಿಲ್ಲ.

ಶುಷ್ಕವಾದ ಪ್ರಾಯಸಂಬಂಧಿ ಮ್ಯಾಕುಲರ್‌ 
ಹಾನಿಗೊಳ್ಳುವಿಕೆಯ ತೊಂದರೆಯ ಲಕ್ಷಣಗಳು

ಈ ಹಂತದ ಒಂದು ಸಾಮಾನ್ಯವಾದ ಚಿಹ್ನೆಯೆಂದರೆ ದೃಷ್ಟಿ ಮಂಜಾಗುವುದು. ಮ್ಯಾಕುಲದಲ್ಲಿರುವ ಕೋಶಗಳು ಅಲ್ಪ ಪ್ರಮಾಣದಲ್ಲಿ  ಕೆಲಸ ಮಾಡುವಾಗ, ರೋಗಿಯು ಅವನ ಮುಂದಿರುವ ವಸ್ತುವನ್ನು ಅಷ್ಟು ಖಚಿತವಾಗಿ ನೋಡಲಾಗುವುದಿಲ್ಲ. ಉದಾಹರಣೆ : ಪುಸ್ತಕದಲ್ಲಿರುವ ಚಿತ್ರಗಳು ಅಥವಾ ಬರವಣಿಗೆಗಳು ಹೆಚ್ಚು ಪ್ರಕಾಶಮಾನವಾದ ಬೆಳಕಿನಲ್ಲಿ  ಈ ಮಂಜಾಗುವಿಕೆಯು ದೂರವಾಗುತ್ತದೆ. ಒಂದು ವೇಳೆ ಈ ಕೋಶಗಳ ನಾಶವಾಗುವ ಸಂಖ್ಯೆ ಹೆಚ್ಚಾದರೆ, ಆಗ ರೋಗಿಗೆ ನೋಡುವ ದೃಷ್ಟಿಯ ಕೇಂದ್ರಭಾಗದಲ್ಲಿ  ಒಂದು ಕಪ್ಪು ಚುಕ್ಕೆ ಕಾಣಸಿಗುತ್ತದೆ. 

ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ 
ಹಾನಿಗೊಳ್ಳುವಿಕೆಯ ತೊಂದರೆಯ ಲಕ್ಷಣಗಳು

ಈ ಹಂತದ ಒಂದು ಖಚಿತವಾದ ಲಕ್ಷಣವೆಂದರೆ, ನೇರವಾದ ಗೆರೆಗಳು ಬಾಗಿದಂತೆ ಕಾಣುತ್ತವೆ. ಮ್ಯಾಕುಲದ ಹಿಂದಿರುವ ಅಸಹಜವಾದ ರಕ್ತನಾಳಗಳು ರಕ್ತ ಮತ್ತು ಇತರ ದ್ರವ ಪದಾರ್ಥಗಳನ್ನು ಪದೇ ಪದೇ ವಿಸರ್ಜಿಸುವುದರಿಂದ, ಮ್ಯಾಕುಲ ಮೇಲಕ್ಕೆ ಎತ್ತಲ್ಪಡುತ್ತದೆ ಮತ್ತು ಇದು ದೃಷ್ಟಿಯನ್ನು ವಿಕಾರಗೊಳಿಸುತ್ತದೆ. ಒಂದು ಸಣ್ಣ ಕಪ್ಪು ಚುಕ್ಕೆಯಂತೆ ಕಾಣುವ ಇದು, ದೃಷ್ಟಿ  ನಾಶಕ್ಕೂ ಕೂಡಾ ಕಾರಣವಾಗಬಹುದು.

ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳು ವಿಕೆಯ 
 ತೊಂದರೆಯನ್ನು  ಪತ್ತೆ ಹಚ್ಚುವುದು ಹೇಗೆ ?

ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯನ್ನು ಕಣ್ಣಿನ ಸಮಗ್ರ ತನಿಖೆಯಿಂದ ಪತ್ತೆ ಹಚ್ಚಬಹುದು. 

1. ದೃಷ್ಟಿ  ತೀಕ್ಷ್ಣತೆಯ ಪರೀಕ್ಷೆ : ಈ ಪರೀಕ್ಷೆಯ ಮೂಲಕ ವಿವಿಧ ರೀತಿಯ ಅಂತರಗಳಲ್ಲಿ  ನೀವು ಯಾವ ರೀತಿಯಲ್ಲಿ  ದೃಷ್ಟಿ  ತೀಕ್ಷ್ಣತೆಯನ್ನು ಹೊಂದಿದ್ದೀರಿ ಎಂದು ಪರೀಕ್ಷಿಸಲಾಗುತ್ತದೆ.

2. ಕಣ್ಣನ್ನು ಹಿಗ್ಗಿಸಿ ಪರೀಕ್ಷಿಸುವುದು: ಕಣ್ಣು ಪಾಪೆಯನ್ನು ಅಗಲವಾಗಿಸಲು ಅಥವಾ ಹಿಗ್ಗಿಸಲು ಕಣ್ಣಿನ ಒಳಗಡೆ ಕಣ್ಣಿನ ಹನಿಯನ್ನು ಬಿಡುತ್ತಾರೆ. ಅನಂತರ ನೇತ್ರ ತಜ್ಞರು ಒಂದು ವಿಶೇಷವಾದ ಉಪಕರಣದ ಮೂಲಕ ಕಣ್ಣಿನ ನರಗಳ ಮತ್ತು ಅಕ್ಷಿಪಟಲದ ಮೇಲೆ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಅಥವಾ ಬೇರೆ ರೀತಿಯ ತೊಂದರೆಯ ಚಿಹ್ನೆಗಳಿವೆಯೇ ಎಂಬುದನ್ನು ಪರೀಕ್ಷಿಸುತ್ತಾರೆ.
 
3. ಟೊನೊಮೆಟ್ರಿ : ಈ ಸಾಧನದ ಮೂಲಕ ಕಣ್ಣಿನ ಒಳಗಿನ ಒತ್ತಡವನ್ನು ಅಳೆಯಬಹುದು. 

ನಿಮ್ಮ ನೇತ್ರ ತಜ್ಞರು ಕೆಲವು ಬೇರೆ ರೀತಿಯ ಪರೀಕ್ಷೆಗಳನ್ನು ಮಾಡಬಹುದು.

ಕಣ್ಣು ಪರೀಕ್ಷೆಯ ಸಮಯದಲ್ಲಿ ನಿಮ್ಮನ್ನು ಒಂದು ಚದುರಂಗದ ಮಣೆಯಂತಿರುವ ಆಮ್‌ಸ್ಲರ್‌ಗ್ರಿಡ್‌ ಎನ್ನುವ ರೇಖಾಜಾಲವನ್ನು ವೀಕ್ಷಿಸುವಂತೆ ಕೇಳಿಕೊಳ್ಳಲಾಗುತ್ತದೆ. ನಿಮ್ಮ ಒಂದು ಕಣ್ಣನ್ನು ಮುಚ್ಚಲಾಗುತ್ತದೆ ಮತ್ತು ನಿಮ್ಮನ್ನು  ರೇಖಾಜಾಲದಲ್ಲಿರುವ ಕಪ್ಪು ಚುಕ್ಕೆಯ ಮೇಲೆ ದೃಷ್ಟಿ  ನೆಡುವಂತೆ ಕೇಳಿಕೊಳ್ಳಲಾಗುತ್ತದೆ. ಆ ರೇಖಾಜಾಲವನ್ನು ನೋಡುವಾಗ, ನೇರವಾದ ಗೆರೆಗಳು ಅಲೆಅಲೆಯಾಗಿ ಅಥವಾ ಕೆಲವೊಂದು ಕಳೆದುಹೋದಂತೆ ಕಂಡರೆ ಅದು ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಯ ಚಿಹ್ನೆಯಾಗಿರುತ್ತದೆ.

ಒಂದು ವೇಳೆ ನಿಮ್ಮ ನೇತ್ರ ತಜ್ಞರು ನಿಮಗೆ ತೇವವಾದ ಪ್ರಾಯಸಂಬಂಧಿ ಮ್ಯಾಕುಲರ್‌ ಹಾನಿಗೊಳ್ಳುವಿಕೆಯ ತೊಂದರೆಗೆ ಚಿಕಿತ್ಸೆಯ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟರೆ, ಅವರು ನಿಮಗೆ ಫ್ಲೋರೆಸ್ಸಿನ್‌ ಆಂಜಿಯೋಗ್ರಾಮ್‌ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಈ ಪರೀಕ್ಷೆಯಲ್ಲಿ  ಒಂದು ವಿಶೇಷವಾದ ಬಣ್ಣವನ್ನು ತೋಳಿಗೆ ಚುಚ್ಚುಮದ್ದಿನ ಮೂಲಕ ಕೊಡುತ್ತಾರೆ.  ಈ ದ್ರವವು ರೆಟಿನಾದ ರಕ್ತನಾಳದ ಮೂಲಕ ಹಾದುಹೋಗುವಾಗ, ಕಣ್ಣಿನ ಎಕ್ಸರೇ ಬಿಂಬ ತೆಗೆಯುತ್ತಾರೆ. ಇದು ನಿಮ್ಮ  ನೇತ್ರ ತಜ್ಞರಿಗೆ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ.

ಡಾ| ಅಜಯ್‌ ಕುಮಾರ್‌,
ಪ್ರೊಫೆಸರ್‌, ನೇತ್ರ ಚಿಕಿತ್ಸಾ ವಿಭಾಗ,
ಕೆ.ಎಂ.ಸಿ., ಮಣಿಪಾಲ.

Trending videos

Back to Top