CONNECT WITH US  

ಧೂಮಪಾನ ಮತ್ತು ಆರೋಗ್ಯ ಸಮಸ್ಯೆಗಳು

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರಸ್ತುತ 1.3 ಬಿಲಿಯನ್‌ ಹಿರಿಯರು ತಂಬಾಕನ್ನು ಬಳಸುತ್ತಿದ್ದಾರೆ ಮತ್ತು ತಂಬಾಕಿನ ಚಟದ ಕಾರಣದಿಂದಾಗಿ ಜಗತ್ತಿನಲ್ಲಿ 10ರಲ್ಲಿ ಒಬ್ಬರು ಮರಣಕ್ಕೆ ತುತ್ತಾಗುತ್ತಿದ್ದಾರೆ ಅಥವಾ ಪ್ರತಿ ವರ್ಷ ಸುಮಾರು 5 ಮಿಲಿಯ ಜನರು ಮರಣ ಹೊಂದುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಹೇಳುವ ಪ್ರಕಾರ, ಒಂದು ವೇಳೆ ಜನರ ಧೂಮಪಾನದ ಸ್ವರೂಪ ಬದಲಾಗದಿದ್ದರೆ, ಈಗಾಗಲೇ ಮರಣಹೊಂದುತ್ತಿರುವವರ ಸಂಖ್ಯೆಯು 2020ರ ಹೊತ್ತಿಗೆ ದ್ವಿಗುಣವಾಗಲಿದೆ.  ಅಂದರೆ ಇದರ ಅರ್ಥ, ಜಗತ್ತಿನಲ್ಲಿ ಈಗಾಗಲೆ ಧೂಮಪಾನ ಚಟ ಹೊಂದಿರುವ ಜನರಲ್ಲಿ ಅರ್ಧದಷ್ಟು ಜನರು ಅಥವಾ ಸುಮಾರು 650 ಮಿಲಿಯನ್‌ ಜನರು ತಮ್ಮ ಚಟದ ಕಾರಣದಿಂದಾಗಿ ಮರಣದ ಅಂಚಿಗೆ ಸಾಗಲಿದ್ದಾರೆ. 

ತಂಬಾಕಿನ ಧೂಮಪಾನದಲ್ಲಿ ಹಾನಿ 
ಕಾರಕ  ರಾಸಾಯನಿಕಗಳು ಇವೆಯೇ?

ಹೌದು, ತಂಬಾಕಿನಲ್ಲಿ ಅನೇಕ ವಿಧದ ಹಾನಿಕಾರಕ ರಾಸಾಯನಿಕಗಳು ಇದ್ದು, ಇವು ಧೂಮಪಾನ ಮಾಡುವವರಿಗೆ ಮತ್ತು ಮಾಡದವರಿಗೆ ಇಬ್ಬರಿಗೂ ಹಾನಿಕಾರಕ. ತಂಬಾಕಿನ ಹೊಗೆಯನ್ನು ಸ್ವಲ್ಪವೇ ಉಸಿರಾಡಿದರೂ ಸಹ ಅದರಿಂದ ಅಪಾಯ ಇದ್ದೇ ಇದೆ. ಹೈಡ್ರೋಜನ್‌ ಸಯನೈಡ್‌, ಕಾರ್ಬನ್‌ ಮೋನಾಕ್ಸೆ„ಡ್‌ ಮತ್ತು ಅಮೋನಿಯಾವೂ ಸೇರಿದಂತೆ, ತಂಬಾಕಿನ ಹೊಗೆಯಲ್ಲಿ ಇರುವಂತಹ 7,000 ರಾಸಾಯನಿಕಗಳಲ್ಲಿ, 250 ವಿಧದವುಗಳು ಹಾನಿಕಾರಕ ರಾಸಾಯನಿಕಗಳು ಎಂಬುದಾಗಿ ತಿಳಿದುಬಂದಿದೆ. ತಂಬಾಕಿನಲ್ಲಿರುವ ಸುಮಾರು 250 ಹಾನಿಕಾರಕ ರಾಸಾಯನಿಕಗಳಲ್ಲಿ, ಕನಿಷ್ಠ 69 ರಾಸಾಯನಿಕಗಳು ಕ್ಯಾನ್ಸರ್‌ ಅನ್ನು ಉಂಟು ಮಾಡಬಲ್ಲವು. ಕ್ಯಾನ್ಸರ್‌ ಅನ್ನು ಉಂಟು ಮಾಡಬಲ್ಲಂತಹ ರಾಸಾಯನಿಕಗಳು ಅಂದರೆ, ಅಸಿಟಾಲ್ಡಿಹೈಡ್‌, ಆರೋಮ್ಯಾಟಿಕ್‌ ಅಮೈನ್‌ಗಳು, ಆರ್ಸೆನಿಕ್‌, ಬೆನಿlನ್‌, ಬೆನ್ಸೋಪೈರಿನ್‌, ಬೆರಿಲಿಯಂ (ಒಂದು ವಿಷಕಾರಿ ಲೋಹ), 1-3 ಬ್ಯೂಟಾಡುನ್‌ (ಒಂದು ಅಪಾಯಕಾರಿ ಅನಿಲ), ಕ್ಯಾಡ್ಮಿಯಂ (ಒಂದು ವಿಷಕಾರಿ ಲೋಹ), ಕ್ರೋಮಿಯಂ (ಒಂದು ಲೋಹಧಾತು), ಕ್ಯುಮಿನ್‌, ಎಥಿಲಿನ್‌ ಆಕ್ಸೆ„ಡ್‌, ಫಾರ್ಮಾಲ್ಡಿಹೈಡ್‌, ನಿಕ್ಕೆಲ್‌ (ಒಂದು ಲೋಹದ ಧಾತು), ಪೋಲೋನಿಯಂ-210 (ಒಂದು ಕಿರಣ ಶೀಲ ರಾಸಾಯನಿಕ ಧಾತು), ಪಾಲಿಸೈಕ್ಲಿಕ್‌ ಆರೋಮ್ಯಾಟಿಕ್‌ ಹೈಡ್ರೋಕಾರ್ಬನ್‌ ಗಳು, ತಂಬಾಕು-ಸಂಬಂಧಿತ ನೈಟ್ರೋಸಮೈನ್‌, ನೈಲ್‌ ಕ್ಲೋರೈಡ್‌.  

ಬೀಡಿ ಸೇದುವುದರಿಂದ ಆರೋಗ್ಯದ 
ಮೇಲೆ ಆಗಬಹುದಾದ ಪರಿಣಾಮಗಳು 
ಯಾವುವು?

ಬೀಡಿಗಳು ಅಂದರೆ, ಸಣ್ಣದಾದ, ತೆಳುವಾದ, ಕೈಯಿಂದ ಸುತ್ತಿದ ಸಿಗರೇಟು ಎಂದು ಹೇಳಬಹುದು. ಮೊದಲು ಇವುಗಳು ಭಾರತ ಮತ್ತು ಇತರ ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ ಬೇರೆ ದೇಶಗಳಿಗೆ ರಫ್ತಾಗುತ್ತಿದ್ದವು. ಈ ಬೀಡಿಗಳು ಸುವಾಸನೆ ಸಹಿತ (ಚಾಕೊಲೇಟ್‌, ಚೆರ್ರಿ ಮತ್ತು ಮ್ಯಾಂಗೋ ಸುವಾಸನೆ) ಮತ್ತು ಸುವಾಸನೆ ರಹಿತ ಎಂಬ ಎರಡು ವಿಧದಲ್ಲಿ ಇರುತ್ತಿದ್ದವು. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಮಾರಾಟ ಮಾಡುವ ಸಿಗರೇಟುಗಳಿಗಿಂತಲೂ, ಈ ಬೀಡಿಗಳಲ್ಲಿ ನಿಕೋಟಿನ್‌, ಟಾರ್‌ ಮತ್ತು ಕಾರ್ಬನ್‌ ಮಾನಾಕ್ಸೆ„ಡ್‌ ಪ್ರಮಾಣವು ಹೆಚ್ಚು ಇರುತ್ತದೆ.

ಧೂಮಪಾನದಿಂದಾಗಿ ಬಾಯಿಯ ಕ್ಯಾನ್ಸರ್‌, ಶ್ವಾಸಕೋಶ, ಹೊಟ್ಟೆ ಮತ್ತು ಅನ್ನನಾಳದ ಅಪಾಯವನ್ನು ಹೆಚ್ಚಿಸುವುದನ್ನು ಭಾರತದಲ್ಲಿನ ಸಂಶೋಧನಾ ಅಧ್ಯಯನಗಳು ತಿಳಿಸುತ್ತವೆ. ಹೃದಯ ರಕ್ತನಾಳಗಳ ಕಾಯಿಲೆ ಮತ್ತು ಹೃದಯಾಘಾತಕ್ಕೆ ಮತ್ತು ದೀರ್ಘ‌ಕಾಲಿಕ ಬ್ರಾಂಕೈಟಿಸ್‌ಗೂ ಬೀಡಿ ಸೇದುವುದಕ್ಕೂ ಸಂಬಂಧ ಇರುವುದನ್ನು ಸಹ ಈ ಅಧ್ಯಯನಗಳು ತೋರಿಸಿಕೊಟ್ಟಿವೆ. 

ಧೂಮಪಾನ ಮಾಡುವ 
ಸುರಕ್ಷಿತ ವಿಧಾನ ಇದೆಯೇ?

ಇಲ್ಲ. ಎಲ್ಲ ಸಿಗರೇಟುಗಳು ಮನುಷ್ಯ ಶರೀರಕ್ಕೆ ಹಾನಿ ಮಾಡಿಯೇ ಮಾಡುತ್ತವೆ ಮತ್ತು ಸಿಗರೇಟು ಸೇದುವುದರಿಂದ ಅಪಾಯ ಇದ್ದೇ ಇದೆ. ಆದರೆ ಕೆಲವೇ ಕೆಲವು ಸಿಗರೇಟುಗಳನ್ನು ಸೇದಿ ತಮ್ಮ ಅಭ್ಯಾಸವನ್ನು ಸುರಕ್ಷಿತ ಎಂದು ಕೆಲವರು ಅಂದುಕೊಳ್ಳುವುದಿದೆ. ಆದರೆ ಇದು ಸುರಕ್ಷಿತ ಅಲ್ಲ. ಕಡಿಮೆ ಪ್ರಮಾಣದ ಟಾರ್‌ ಮತ್ತು ನಿಕೋಟಿನ್‌ ಅನ್ನು ಒಳಗೊಂಡಿರುವ ಸಿಗರೇಟು ಸೇದುವುದು ಹೆಚ್ಚು ಸುರಕ್ಷಿತ ಎಂದು ಕೆಲವರು ಅಂದುಕೊಳ್ಳುತ್ತಾರೆ, ಆದರೆ ಇದು ಯಾವಾಗಲೂ ನಿಜ ಆಗಲಾರದು. ಕಡಿಮೆ ಟಾರ್‌ ಮತ್ತು ನಿಕೋಟಿನ್‌ ಅಂಶ ಇರುವ ಸಿಗರೇಟುಗಳನ್ನು ಸೇದಲು ಆರಂಭಿಸಿದಾಗ  ಸಾಮಾನ್ಯವಾಗಿ ಅವರು ಹೆಚ್ಚು ಸಿಗರೇಟುಗಳನ್ನು ಸೇದುತ್ತಾರೆ, ಹೆಚ್ಚು ಸಿಗರೇಟುಗಳನ್ನು ಸೇದುವುದು ಅಂದರೆ ಹಿಂದೆ ದೇಹವನ್ನು ಸೇರುತ್ತಿದ್ದ ಅದೇ ಪ್ರಮಾಣದ ನಿಕೋಟಿನ್‌ ದೇಹವನ್ನು ಪ್ರವೇಶಿಸುತ್ತಿದೆ ಎಂದು ಅರ್ಥ. ಒಂದು ವೇಳೆ ಒಬ್ಬ ವ್ಯಕ್ತಿಯು ಸಿಗರೇಟಿನ ಆಳವಾದ ದಮ್ಮುಗಳನ್ನು ಆಗಾಗ ಎಳೆಯುತ್ತಿದ್ದರೆ ಅಥವಾ ಸಿಗರೇಟಿನ ಕೆಳಭಾಗದ ತುದಿಯವರೆಗೂ ಸೇದುತ್ತಿದ್ದರೆ,  ಕಡಿಮೆ ಟಾರ್‌ಯುಕ್ತ ಸಿಗರೇಟೂ ಸಹ ಅಧಿಕ ಟಾರ್‌ಯುಕ್ತ ಸಿಗರೇಟಿನಷ್ಟೆ ಹಾನಿಕರ. ಒಂದು ವೇಳೆ ಇದನ್ನು ಸರಿದೂಗಿಸಲು ವ್ಯಕ್ತಿಯು ಕಳಪೆ ಬ್ರಾಂಡಿನ ಸಿಗರೇಟನ್ನು ಸೇದಲು ಆರಂಭಿಸಿದರೂ ಸಹ ಹೆಚ್ಚು ಪ್ರಯೋಜನವಾಗದು. ಸಿಗರೇಟನ್ನು ಬಿಟ್ಟುಬಿಡುವುದರಿಂದ ಸಿಗುವ ಪ್ರಯೋಜನಗಳಿಗೆ ಹೋಲಿಸಿದರೆ ಮೇಲೆ ಹೇಳಿದ ಯಾವ ಕ್ರಮಗಳೂ ಸುರಕ್ಷಿತ ಅಲ್ಲ. 

ಧೂಮಪಾನ ಮಾಡುವವರಿಗೆ 
ಸ್ಮೋಕರ್ಸ್‌ ಕಫ್ ಯಾಕೆ 
ಉಂಟಾಗುತ್ತದೆ? 

ಧೂಮಪಾನದ ಹೊಗೆಯಲ್ಲಿ ಶ್ವಾಸನಾಳವನ್ನು ಕಿರಿಕಿರಿಗೊಳಿಸುವ ಅನೇಕ ರಾಸಾಯನಿಕಗಳು ಮತ್ತು ಹಾನಿಕಾರಕ ಅಂಶಗಳು ಇದ್ದು. ಧೂಮಪಾನ ಮಾಡುವವರು ಈ ಅಂಶಗಳನ್ನು ಒಳಗೆ ಉಸಿರಾಡಿದಾಗ, ಶರೀರವು ಕೆಮ್ಮು ಮತ್ತು ಕಫ‌ದ ಮೂಲಕ ಆ ಅಂಶಗಳನ್ನು ಹೊರದೂಡಲು ಪ್ರಯತ್ನಿಸುತ್ತದೆ. 
 
ಮುಂಜಾನೆ ಬಹಳ ಬೇಗನೆ ಸಿಗರೇಟು ಸೇದುವವರಲ್ಲಿ ಅನೇಕ ಕಾರಣಗಳಿಂದಾಗಿ ಕೆಮ್ಮು ಕಾಣಿಸಿಕೊಳ್ಳಬಹುದು. ನಮ್ಮ ಶ್ವಾಸಕೋಶದಲ್ಲಿ ಸಿಲಿಯಾ ಎಂದು ಕರೆಯಲಾಗುವ ಸಣ್ಣ ಕೂದಲಿನಂತಹ ರಚನೆಗಳು ಇದ್ದು, ಅಪಾಯಕಾರಿ ಅಂಶಗಳು ಶ್ವಾಸಕೋಶವನ್ನು ಪ್ರವೇಶಿಸದಂತೆ ಇವು ರಕ್ಷಣೆಯನ್ನು ಒದಗಿಸುತ್ತವೆ. ಆದರೆ ತಂಬಾಕಿನ ಹೊಗೆಯು ಈ ಸcತ್ಛಕಾರಕ ಪ್ರಕ್ರಿಯೆಯನ್ನು ತಡೆಯುತ್ತದೆ, ಈ ಕಾರಣದಿಂದಾಗಿ ಕೆಲವು ಅಪಾಯಕಾರಿ ಅಂಶಗಳು ಶ್ವಾಸಕೋಶ ಮತ್ತು ಶ್ಲೇಷ್ಮದಲ್ಲಿ ಉಳಿದು ಬಿಡುತ್ತವೆ.  ಧೂಮಪಾನ ಮಾಡುವವರು ನಿದ್ದೆ ಹೋದಾಗ (ಧೂಮಪಾನ ಮಾಡದೇ ಇರುವಾಗ) ಕೆಲವು ಸಿಲಿಯಾಗಳು ಚೇತರಿಸಿಕೊಂಡು ಮತ್ತೆ ಕೆಲಸಮಾಡ ತೊಡಗುತ್ತವೆ.

ನಿದ್ದೆಯಿಂದ ಎದ್ದ ಬಳಿಕ ಧೂಮಪಾನಿಯು ಕೆಮ್ಮ ತೊಡಗುತ್ತಾನೆ ಯಾಕೆಂದರೆ, ಶ್ವಾಸಕೋಶವು ಹಿಂದಿನ ದಿನ ತನ್ನಲ್ಲಿ ಸಂಗ್ರಹವಾದ ಕಿರಿಕಿರಿಕಾರಕಗಳು ಮತ್ತು ಶ್ಲೇಷ್ಮಗಳನ್ನು ಹೊರಹಾಕುವ ಪ್ರಯತ್ನದಲ್ಲಿ ಇರುತ್ತದೆ.  

ಆದರೆ ತಂಬಾಕಿನ ಹೊಗೆಗೆ ದೀರ್ಘ‌ ಸಮಯ ಒಡ್ಡಿಕೊಂಡ ಅನಂತರ, ಶ್ವಾಸಕೋಶದ ಸಿಲಿಯಾಗಳು ಕೆಲಸ ಮಾಡುವು ದನ್ನು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಡುತ್ತವೆ. ಹೀಗಾದಾದ ಶ್ವಾಸಕೋಶವು, ಸೋಂಕು ಮತ್ತು ಕಿರಿಕಿರಿಕಾರಕಗಳಿಗೆ ಹೆಚ್ಚು ಹೆಚ್ಚಾಗಿ ಈಡಾಗಬೇಕಾಗುತ್ತದೆ ಮತ್ತು ಒಡ್ಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣ ವಾಗುತ್ತದೆ. ಸ್ಮೋಕರ್ಸ್‌ ಕಫ್ ಎನ್ನುವುದು ಇOಕಈ ಕಾಯಿಲೆಯ ಆರಂಭಿಕ ಲಕ್ಷಣ ಎನ್ನಬಹುದು. ಇOಕಈ ಅಂದರೆ ಶ್ವಾಸಕೋಶದ ದೀರ್ಘ‌ಕಾಲಿಕ ಅಡಚಣೆಯ ಕಾಯಿಲೆ.

ಸಿಗರೇಟು ಸೇದುವುದರಿಂದ 
ಉಂಟಾಗುವ ಅಪಾಯಗಳು 
ಯಾವುವು?

ಧೂಮಪಾನ ಎನ್ನುವುದು ಜೀವಕ್ಕೆ ಅಪಾಯಕಾರಿಯಾದ ಒಂದು ಚಟ. ಧೂಮಪಾನದಿಂದ ಐಷೆಮಿಕ್‌ ಹೃದಯವೈಫ‌ಲ್ಯ, ಅಧಿಕ ರಕ್ತದೊತ್ತಡ, ಅಥೆರೋಸ್ಕಿ$Éರೋಸಿಸ್‌ ಮತ್ತು ಶ್ವಾಸಕೋಶ, ಹೊಟ್ಟೆ, ಪ್ಯಾಂಕ್ರಿಯಾಸ್‌, ಮೂತ್ರಪಿಂಡ, ದೊಡ್ಡಕರುಳು, ಗುದನಾಳ, ಮೂತ್ರಕೋಶ, ಅನ್ನನಾಳ, ಬಾಯಿ, ಗಂಟಲು ಮತ್ತು ಲ್ಯಾರಿಂಕ್ಸ್‌ನ ಕ್ಯಾನ್ಸರ್‌ನಂತಹ  ರೋಗಗಳಿಗೆ ಈಡಾಗುವ ಸಾಧ್ಯತೆ ಇದೆ. ಇಷ್ಟು ಮಾತ್ರವಲ್ಲದೆ ಧೂಮಪಾನದಿಂದ ನ್ಯುಮೋನಿಯಾ ಮತ್ತು ರಕ್ತದ ಕ್ಯಾನ್ಸರ್‌ ಬರುವ ಅಪಾಯವೂ ಇದೆ. ಗರ್ಭಿಣಿ ಮಹಿಳೆಯರು ಧೂಮಪಾನ ಮಾಡಿದರೆ ಗರ್ಭಪಾತವಾಗುವ ಮತ್ತು ಕಡಿಮೆತೂಕದ ಮಗುವು ಜನಿಸುವ ಅಪಾಯ ಸಾಧ್ಯತೆಗಳಿವೆ. 

ಧೂಮಪಾನವು ನಮಗೆ ಶ್ವಾಸಕೋಶದ 
ತೊಂದರೆ ಉಂಟಾಗುವ ಅಪಾಯವನ್ನು 
ಹೇಗೆ ಉಂಟುಮಾಡುತ್ತದೆ?

ಧೂಮಪಾನವು ಶ್ವಾಸಕೋಶದ ಅಂಗಾಂಶಗಳಿಗೆ ಹಾನಿ ಉಂಟುಮಾಡುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ಶ್ವಾಸಕೋಶದ ಶಕ್ತಿಯನ್ನು ಕುಗ್ಗಿಸುತ್ತದೆ. ಧೂಮಪಾನದ ಕಾರಣದಿಂದಾಗಿ ಶ್ವಾಸಕೋಶದ ಅಂಗಾಂಶಗಳಿಗೆ ಆಗುವ ಹಾನಿಯಿಂದಾಗಿ ಇOಕಈ - ಅಂದರೆ ಶ್ವಾಸಕೋಶದ ದೀರ್ಘ‌ಕಾಲಿಕ ಅಡಚಣೆಯ ಕಾಯಿಲೆ ಕಾಣಿಸಿಕೊಳ್ಳಬಹುದು. ಇOಕಈಯ ಹಿನ್ನೆಲೆಯಲ್ಲಿ ಎಂಫೈಸೇಮಾ ಮತ್ತು ಶ್ವಾಸಕೋಶದ ದೀರ್ಘ‌ಕಾಲಿಕ ಉರಿಯೂತದಂತಹ ಅನೇಕ ಕಾಯಿಲೆಗಳು ಇರಬಹುದು. ಶ್ವಾಸನಾಳವು ಯಾವತ್ತೂ ಸರಿಯಾಗದಂತೆ ಹಾನಿಗೊಂಡಿರುತ್ತದೆ ಮತ್ತು ಈ ಕಾರಣದಿಂದಾಗಿ ಶ್ವಾಸಕೋಶವು ತನ್ನ ಸ್ಥಿತಿಸ್ಥಾಪಕ ಗುಣವನ್ನು ಕಳೆದುಕೊಳ್ಳುತ್ತದೆ.  ಯುನೈಟೆಡ್‌ ಸ್ಟೇಟ್ಸ್‌ ನಲ್ಲಿ  ಇOಕಈ ಎಂಬುದು ಜನರ ಮರಣಕ್ಕೆ ಕಾರಣವಾಗುತ್ತಿರುವ ಮೂರನೆಯ ಮುಖ್ಯ ಕಾರಣ.  ಇOಕಈ ಯಿಂದ ಸಂಭವಿಸುತ್ತಿರುವ 10 ರಲ್ಲಿ 8 ಮರಣಗಳು ಧೂಮಪಾನದ ಹಿನ್ನೆಲೆಯನ್ನು ಹೊಂದಿರುತ್ತವೆ.

ಧೂಮಪಾನವು ಶ್ವಾಸನಾಳಿಕೆಗಳ ಉರಿಯೂತ ಮತ್ತು ನ್ಯೂಮೋನಿಯಾ ರೀತಿಯ ಇನ್ನಿತರ ರೋಗಗಳನ್ನೂ ಸಹ ಉಂಟುಮಾಡುತ್ತದೆ. ಧೂಮಪಾನ ಮಾಡದವರಿಗಿಂತಲೂ ಧೂಮಪಾನ ಮಾಡುವವರಲ್ಲಿ ಮೇಲಿನ ಶ್ವಾಸಾಂಗವ್ಯೂಹದಲ್ಲಿ  ಸೋಂಕುಗಳು ಕಾಣಿಸಿಕೊಳ್ಳುವ ಅಪಾಯ ಹೆಚ್ಚು. ಧೂಮಪಾನವು ದೇಹದ ರೋಗಪ್ರತಿರೋಧಕ ವ್ಯವಸ್ಥೆಯನ್ನು ಕುಗ್ಗಿಸುವುದರಿಂದ ಹೀಗಾಗುತ್ತದೆ. ಧೂಮಪಾನ ಮಾಡದವರ ಶ್ವಾಸಕೋಶದ ಚಟುವಟಿಕೆಗಳಿಗೆ ಹೋಲಿಸಿದರೆ, ಧೂಮಪಾನ ಮಾಡುವವರ ಶ್ವಾಸಕೋಶದ ಚಟುವಟಿಕೆಯು ಬಹಳ ಕ್ಷಿಪ್ರವಾಗಿ ಕುಗ್ಗುತ್ತದೆ. 

ಧೂಮಪಾನ ಮಾಡುವಿಕೆಯು ನನಗಿರುವ ಹೃದಯ ರಕ್ತನಾಳಗಳ ಕಾಯಿಲೆಯ ಮೇಲೆ ಯಾವ ರೀತಿ ಪರಿಣಾಮವನ್ನು ಉಂಟು ಮಾಡುತ್ತದೆ?

ಹೃದಯದ ಕಾಯಿಲೆ ಮತ್ತು ಲಕ್ವಾಗಳು ಅಂದರೆ, ಧೂಮಪಾನದ ಕಾರಣದಿಂದ ಉಂಟಾಗುವ ಹೃದಯ ರಕ್ತನಾಳದ ಕಾಯಿಲೆಗಳು.  ಈ ಕಾಯಿಲೆಗಳ ಹೆಚ್ಚಿನ ಪ್ರಕರಣಗಳು ಅಥೆರೋಸ್ಕಿ$Éರೋಸಿಸ್‌ ಕಾರಣದಿಂದ ಉಂಟಾಗಿರುತ್ತವೆ. ಅಥೆರೋಸ್ಕಿ$Éರೋಸಿಸ್‌ ಅಂದರೆ ರಕ್ತನಾಳವು ಸಪೂರವಾಗಿ ಪೆಡಸಾಗುವುದು. ಯುವಜನರಲ್ಲಿಯೂ ಸಹ ಧೂಮಪಾನದಿಂದಾಗಿ ಅಥೆರೋಸ್ಕಿ$Éರೋಸಿಸ್‌ ಪ್ರಕ್ರಿಯೆಯು ಕ್ಷಿಪ್ರಗೊಳ್ಳುತ್ತದೆ. ಸಿಗರೇಟಿನ ಹೊಗೆಯು ರಕ್ತನಾಳ ಮತ್ತು ಹೃದಯದ ಒಳಪದರದ ಜೀವಕೋಶಗಳಿಗೆ ಹಾನಿ ಉಂಟುಮಾಡಿ, ಅವು ಊದಿಕೊಳ್ಳುವಂತೆ ಮಾಡುತ್ತದೆ. ಈ ಕಾರಣದಿಂದಾಗಿ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.  ಧೂಮಪಾನವು ಒಬ್ಬ ವ್ಯಕ್ತಿಯಲ್ಲಿನ ರಕ್ತಹೆಪ್ಪುಗಟ್ಟುವ ಅಪಾಯವನ್ನೂ ಹೆಚ್ಚಿಸುವ ಕಾರಣದಿಂದಾಗಿ ಹೃದಯಾಘಾತ ಅಥವಾ ಲಕ್ವಾ ಉಂಟಾಗುವ ಅಪಾಯವಿದೆ. 

ಅದೃಷ್ಟವಶಾತ್‌, ವ್ಯಕ್ತಿಯು ಧೂಮಪಾನವನ್ನು ಬಿಟ್ಟರೆ, ಆತನಿಗಿರುವ ಹೃದಯದ ಕಾಯಿಲೆ ಮತ್ತು ಲಕ್ವಾದ ಅಪಾಯಗಳು ಕಡಿಮೆಯಾಗುತ್ತವೆ.  ವ್ಯಕ್ತಿಯು ಧೂಮಪಾನವನ್ನು ಬಿಟ್ಟ ಒಂದು ವರ್ಷದ ಬಳಿಕ ಹೃದಯಾಘಾತ ಆಗುವ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.  ಧೂಮಪಾನವನ್ನು ಬಿಟ್ಟು ಬಿಟ್ಟ ಮೂರರಿಂದ ಐದು ವರ್ಷಗಳಲ್ಲಿ, ಅಪಾಯವು ಧೂಮಪಾನ ಮಾಡದವರಿಗೆ ಇರುವ ಮಟ್ಟದಲ್ಲಿ ಇರುತ್ತದೆ. 

ನನ್ನ ಕ್ಯಾನ್ಸರ್‌ ಅಪಾಯದ ಮೇಲೆ 
ಧೂಮಪಾನವು ಯಾವ ರೀತಿ 
ಪ್ರಭಾವವನ್ನು ಬೀರುತ್ತದೆ?

ತಂಬಾಕಿನ ಹೊಗೆಯಲ್ಲಿರುವ ಹಾನಿಕಾರಕ ಅಂಶಗಳು ಜೀವಕೋಶಗಳ ಬೆಳವಣಿಗೆಗೆ ಪೂರಕವಾಗಿರುವ ಕೆಲವು ಜೀನ್‌ಗಳನ್ನು ನಾಶಪಡಿಸುತ್ತದೆ.  ಇದು ಒಬ್ಬ ವ್ಯಕ್ತಿಯಲ್ಲಿ ಅನೇಕ ರೀತಿಯ ಕ್ಯಾನ್ಸರ್‌ಗಳು ಬೆಳೆಯುವ ಅಪಾಯವನ್ನು ಹೆಚ್ಚಿಸುತ್ತದೆ. 
 
ಶ್ವಾಸಕೋಶದ ಕ್ಯಾನ್ಸರ್‌ ಎನ್ನುವುದು ಕ್ಯಾನ್ಸರ್‌ ಕಾರಣದ ಮರಣಗಳಲ್ಲಿ ಪ್ರಮುಖವಾದುದು. ಸುಮಾರು 9ರಿಂದ 10 ಶ್ವಾಸಕೋಶದ ಕ್ಯಾನ್ಸರ್‌ ಪ್ರಕರಣಗಳಿಗೆ ಕಾರಣವಾಗಿರುವುದು ಧೂಮಪಾನ. ಧೂಮಪಾನ ಮಾಡದವರಿಗಿಂತಲೂ ಧೂಮಪಾನ ಮಾಡುವವರಿಗೆ ಕ್ಯಾನ್ಸರ್‌ ಆಗಬಹುದಾದ ಅಪಾಯ 20 ಪಟ್ಟು ಹೆಚ್ಚು.  ಧೂಮಪಾನದಿಂದಾಗಿ ಬಾಯಿ, ಗಂಟಲು, ಲ್ಯಾರಿಂಕ್ಸ್‌ (ಧ್ವನಿಪೆಟ್ಟಿಗೆ) ಮತ್ತು ಅನ್ನನಾಳಗಳಲ್ಲಿ ಕ್ಯಾನ್ಸರ್‌ ಆಗುವ ಅಪಾಯವಿದೆ ಮತ್ತು ಇದು ಒಬ್ಬ ವ್ಯಕ್ತಿಯಲ್ಲಿ ದೊಡ್ಡ ಕರುಳು ಮತ್ತು ಗುದನಾಳ, ಮೂತ್ರಕೋಶ, ಮೂತ್ರಪಿಂಡ, ಮೇದೋಜೀರಕ ಗ್ರಂಥಿಗಳು, ಪಿತ್ತಜನಕಾಂಗ, ಜಠರ ಮತ್ತು ಗರ್ಭಕೊರಳಿನ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ತೀವ್ರರೂಪದ ಮೈಲಾಯ್ಡ ಲ್ಯುಕೇಮಿಯಾ-ಅಂದರೆ ರಕ್ತದ ಕ್ಯಾನ್ಸರಿಗೂ ಸಹ  ಧೂಮಪಾನ ಕಾರಣವಾಗಬಹುದು. 
ಧೂಮಪಾನದ ಕಾರಣದಿಂದ ಬರುವಂತಹ ಕ್ಯಾನ್ಸರ್‌ಗಳಲ್ಲಿ, ಸೇದಿರುವ ಸಿಗರೇಟುಗಳ ಸಂಖ್ಯೆ ಮತ್ತು ಎಷ್ಟು ವರ್ಷದಿಂದ ಸೇದುತ್ತಿದ್ದಾರೆ ಎಂಬ ಅಂಶಗಳು ಅಪಾಯದ ಮಟ್ಟವನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶಗಳಾಗಿರುತ್ತವೆ. ವ್ಯಕ್ತಿಯು ಸಂಪೂರ್ಣವಾಗಿ ಧೂಮಪಾನವನ್ನು ಬಿಟ್ಟ ಅನಂತರ ಅಪಾಯವು ಕಡಿಮೆಯಾಗುತ್ತದೆ. ಧೂಮಪಾನವನ್ನು ಬಿಟ್ಟ ಹತ್ತು ವರ್ಷಗಳ ಅನಂತರ ಶ್ವಾಸಕೋಶದ ಕ್ಯಾನ್ಸರಿನ ಅಪಾಯವು ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗುತ್ತದೆ. 

ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯದ ಮೇಲೆ ಧೂಮಪಾನವು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ?
ಧೂಮಪಾನ ಮಾಡುವ ಮಹಿಳೆಯರಿಗೆ ಗರ್ಭಧಾರಣೆಯಾಗುವುದು ಬಹಳ ಕಷ್ಟವಾಗಬಹುದು ಮತ್ತು  ಯಾವತ್ತೂ ಗರ್ಭಧಾರಣೆ ಸಾಧ್ಯವಾಗದೆಯೇ ಇರುವ ಅಪಾಯ ಅವರಲ್ಲಿ ಕಾಣಿಸಿಕೊಳ್ಳಬಹುದು. ಧೂಮಪಾನದಿಂದಾಗಿ ಬಾಹ್ಯ ಗರ್ಭಧಾರಣೆಯ ಅಪಾಯ ಉಂಟಾಗುತ್ತದೆ ಎಂಬ ಅಂಶವು ತಿಳಿದು ಬಂದಿದೆ, ಬಾಹ್ಯ ಗರ್ಭಧಾರಣೆ ಅಂದರೆ ಫ‌ಲೀಕೃತ ಅಂಡವು ಗರ್ಭಾಶಯವನ್ನು ಸೇರಲು ಸಾಧ್ಯವಾಗದೆ ಫೆಲೋಪಿಯನ್‌ ನಾಳ ಅಥವಾ ಗರ್ಭಾಶಯದ ಹೊರಮೈಯ ಯಾವುದಾದರೂ ಅಂಗಕ್ಕೆ ಅಂಟಿಕೊಂಡಿರುತ್ತದೆ. 

ಗರ್ಭಧಾರಣೆಯ ಅವಧಿಯಲ್ಲಿ ಧೂಮಪಾನ ಮಾಡುವ ಮಹಿಳೆಯರಿಗೆ ವಿಶೇಷ ತೊಂದರೆಗಳಾಗುವ ಅಪಾಯವಿದೆ. ಇವರಲ್ಲಿ  ಪ್ಲಾಸೆಂಟಾ ಪ್ರಿವಿಯ- ಅಂದರೆ ಪ್ಲಾಸೆಂಟಾವು ಗರ್ಭಾಶಯದ ತೆರವಿನ ತೀರಾ ಸಮೀಪದಲ್ಲಿ ಬೆಳೆಯುವ ಮತ್ತು ಪ್ಲಾಸೆಂಟಾ  ಕಳಚಿಕೊಳ್ಳುವಂತಹ ಪರಿಸ್ಥಿತಿ (ಪ್ಲಾಸೆಂಟಲ್‌ ಅಬ್ರಪ್ಷನ್‌) ಅಂದರೆ ಹೊಕ್ಕುಳಬಳ್ಳಿಯು ಅವಧಿಗೆ ಮೊದಲೇ ಗರ್ಭಾಶಯದ ಗೋಡೆಯಿಂದ ಕಳಚಿಕೊಳ್ಳುವ ಪರಿಸ್ಥಿತಿ ಬರಬಹುದು. 

ಇಷ್ಟು ಮಾತ್ರ ಅಲ್ಲದೆ, ಗರ್ಭಧಾರಣೆ¿å  ಸಮಯದಲ್ಲಿ ಧೂಮಪಾನ ಮಾಡುವ ಮಹಿಳೆಯರಿಗೆ ಅವಧಿ ಪೂರ್ವ ಹೆರಿಗೆ ಆಗಬಹುದು, ಕಡಿಮೆ ತೂಕದ ಮಗುವು ಜನಿಸಬಹುದು, ಸತ್ತ ಮಗುವು ಜನಿಸಬಹುದು ಮತ್ತು ಹುಟ್ಟಿದ ನವಜಾತಶಿಶುವು ಮರಣಹೊಂದಬಹುದು. 

ಧೂಮಪಾನವು ಪುರುಷರ ಸಂತನೋತ್ಪತ್ತಿ ವ್ಯವಸ್ಥೆಯ ಆರೋಗ್ಯದ ಮೇಲೆ ಹೇಗೆ ಪರಿಣಾಮ ಉಂಟು ಮಾಡುತ್ತದೆ?

ಪುರುಷರ ನಿಮಿರುವಿಕೆಯ ಕಾರ್ಯನ್ಯೂನತೆಗೆ ಧೂಮಪಾನವೂ ಸಹ ಕಾರಣ ಎಂಬುದಾಗಿ ಇತ್ತೀಚಿನ ಸಂಶೋಧನಾ ವರದಿಗಳು ಹೇಳುತ್ತಿವೆ. ನಿಮಿರುವಿಕೆಯ ಕಾರ್ಯನ್ಯೂನತೆ ಎಂಬುದು ಪುರುಷನ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡುವ ಒಂದು ಅಂಶ. ನಿಮಿರುವಿಕೆಯ ತೊಂದರೆ ಇರುವ ಪುರುಷನಿಗೆ ಲೈಂಗಿಕ ಸಂತೃಪ್ತಿಗೆ ಆವಶ್ಯವಿರುವಷ್ಟು  ನಿಮಿರುವಿಕೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಪುರುಷನಿಗೆ ಸಂತಾನೋತ್ಪತ್ತಿಗೆ ಆರೋಗ್ಯಕರ ವೀರ್ಯಾಣು ಆವಶ್ಯಕ. ಆದರೆ ಧೂಮಪಾನದಿಂದ ವೀರ್ಯಾಣುವಿಗೆ ಹಾನಿಯಾಗುತ್ತದೆ. ಇದರಿಂದ ಸಂತಾನಹೀನತೆ ಉಂಟಾಗಬಹುದು ಅಥವಾ ಭ್ರೂಣದಲ್ಲಿಯೇ ಮಗುವು ಸಾಯಬಹುದು.

ತಾಯಿ ಧೂಮಪಾನ ಮಾಡುತ್ತಿದ್ದರೆ 
ಹುಟ್ಟಿದ ನವಜಾತ ಶಿಶುವಿನ ಮೇಲೆ 
ಯಾವ ಪರಿಣಾಮ ಉಂಟಾಗುತ್ತದೆ?

ಗರ್ಭಧಾರಣೆಯ ಅವಧಿಯಲ್ಲಿ ಮಹಿಳೆ ಧೂಮಪಾನ ಮಾಡುವುದರಿಂದ ಗರ್ಭಧಾರಣೆಯ ಅವಧಿಯ ತೊಂದರೆಗಳು, ಅವಧಿಪೂರ್ವ ಹೆರಿಗೆ, ಕಡಿಮೆ ತೂಕದ ಶಿಶು ಜನನ ಮತ್ತು ಮಗುವು ಗರ್ಭದಲ್ಲೇ ಸತ್ತುಹೋಗಬಹುದಾದ ಅಪಾಯಗಳು ಎದುರಾಗಬಹುದು.

ತಾಯಿಯು ಗರ್ಭಧರಿಸಿದ್ದಾಗ ಧೂಮಪಾನ ಮಾಡುತ್ತಿದ್ದರೆ, ಪರೋಕ್ಷ ಧೂಮಪಾನಕ್ಕೆ ಒಳಗಾದ ಮಗುವು, ಹಠಾತ್ತಾಗಿ ಸಾಯುವ ಅಪಾಯ ಹೆಚ್ಚು. ಮಾತ್ರವಲ್ಲದೆ ಬೇರೆ ಮಕ್ಕಳಿಗೆ ಹೋಲಿಸಿದರೆ ಈ ಮಕ್ಕಳ ಶ್ವಾಸಕೋಶಗಳು ಬಹಳ ದುರ್ಬಲವಾಗಿರುತ್ತವೆ ಮತ್ತು ಅವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  

ಶರೀರದಲ್ಲಿ  ನಿಕೋಟಿನ್‌ ಅಂಶವು ಎಷ್ಟು ಸಮಯದವರೆಗೆ ಉಳಿದುಕೊಳ್ಳುತ್ತದೆ ಮತ್ತು ಶರೀರದಲ್ಲಿ ಉಳಿದುಕೊಂಡಿರುವ ನಿಕೋಟಿನ್‌ ಅಂಶವನ್ನು ಪತ್ತೆ ಮಾಡಲು ಯಾವ ವಿಧಾನವನ್ನು ಅನುಸರಿಸುತ್ತಾರೆ?
ವ್ಯಕ್ತಿಯು ತಂಬಾಕನ್ನು ಯಾವ ಪ್ರಮಾಣದಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಿದ್ದಾನೆ ಮತ್ತು ವ್ಯಕ್ತಿಯ ಧೂಮಪಾನದ ನಡವಳಿಕೆಯ (ಎಷ್ಟು ಆಳವಾಗಿ ಎಳೆಯುತ್ತಾನೆ) ಆಧಾರದ ಮೇಲೆ ಶರೀರದಲ್ಲಿ ನಿಕೋಟಿನ್‌, ಕಾಂಟಿನೈನ್‌, ಕಾರ್ಬನ್‌, ಕಾರ್ಬನ್‌ ಮಾನಾಕ್ಸೆ„ಡ್‌ ಅಥವಾ ಇತರ ಅಂಶಗಳು ವಿವಿಧ ಪ್ರಮಾಣದಲ್ಲಿ ಇರುತ್ತವೆ.  ಆದರೆ ಧೂಮಪಾನವನ್ನು ಬಿಟ್ಟ 3ರಿಂದ 4 ದಿನಗಳಲ್ಲಿ, ದೇಹದಲ್ಲಿ ಸಿಗುವ ಸ್ವಲ್ಪಾಂಶ ಗಳ ಆಧಾರದ ಮೇಲೆ ವ್ಯಕ್ತಿಯು ಸಕ್ರಿಯ ಧೂಮಪಾನವನ್ನು ಬಿಟ್ಟಿದ್ದಾನೆ ಎಂಬ ತೀರ್ಮಾನಕ್ಕೆ ಬರಬಹುದಾಗಿದೆ. 

ದೇಹದಲ್ಲಿನ ನಿಕೋಟಿನ್‌ ಸಾಂದ್ರತೆಯನ್ನು ಮಾಪನ ಮಾಡುವುದು  ಅಥವಾ ದೇಹದ ದ್ರವಾಂಶಗಳಾದ ರಕ್ತ, ಮೂತ್ರ ಅಥವಾ ಲಾಲಾರಸಗಳಲ್ಲಿ ಇರುವ ಅದರ ಅಂಶಗಳನ್ನು (ಉದಾ:ಕಾಟಿನೈನ್‌) ಮಾಪನ ಮಾಡುವ ಮೂಲಕ ವ್ಯಕ್ತಿಯು ಸದ್ಯ ಧೂಮಪಾನ ಮಾಡುತ್ತಿದ್ದಾನೆಯೇ? ಹೌದಾದರೆ, ಯಾವ ಪ್ರಮಾಣದಲ್ಲಿ ಸೇದುತ್ತಿದ್ದಾನೆ?ಎಂಬ ಅಂಶವನ್ನು ಪತ್ತೆ ಮಾಡಬಹುದು. ಬೇರೆ ಪರೀಕ್ಷೆಗಳು ಅಂದರೆ, ಕಾರ್ಬನ್‌ ಮಾನಕ್ಸೆ„ಡ್‌ ಇರು ವಿಕೆಯ ಪತ್ತೆಗಾಗಿ ಮಾಡುವ ತಂಬಾಕು ಬಳಕೆಯ ಸಾಂದ್ರತೆಯ ಮಾಪನಗಳು ಅಥವಾ ವ್ಯಕ್ತಿಯ ಉಸಿ ರಾಟದಲ್ಲಿ ಇತರ ಅನಿಲಾಂಶಗಳ ಪತ್ತೆಗಾಗಿ ಮಾಡುವ ಬೇರೆ ಬೇರೆ ಪರೀಕ್ಷೆಗಳು.

ಪರೋಕ್ಷ ಧೂಮಪಾನಕ್ಕೆ ಈಡಾಗುವ ವ್ಯಕ್ತಿಗಳ ಶರೀರದಲ್ಲಿಯೂ ಸಹ ಮಾಪನಕ್ಕೆ ಸಿಗುವ ಮಟ್ಟದ ನಿಕೋಟಿನ್‌ ಅಥವಾ ನಿಕೋಟಿನ್‌ ಉಪ-ಉತ್ಪನ್ನಗಳು ದೊರೆಯಬಹುದು.  ಆದರೆ ಇದು ಸಕ್ರಿಯ ಧೂಮಪಾನದ್ದಲ್ಲದೆ, ಪರೋಕ್ಷ ಧೂಮಪಾನಕ್ಕೆ ಸಂಬಂಧಿಸಿದುದಾಗಿರುತ್ತದೆ. ನೀವು ಪರೀಕ್ಷೆ ಮಾಡಬೇಕೆಂದಿದ್ದರೆ, ಪರೀಕ್ಷೆ ಮಾಡಿಸಿಕೊಳ್ಳುವುದಕ್ಕಿಂತ ಮೊದಲು, ಒಂದೆರಡು ದಿನ ಧೂಮಪಾನ ಮಾಡುತ್ತಿರುವ ಜನರಿರುವ, ಮುಚ್ಚಿದ ಪ್ರದೇಶಗಳಲ್ಲಿ ಇರುವುದನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. 

ನಿಕೋಟಿನ್‌ ಚಟ ಎಂದರೇನು?
ನಿಕೋಟಿನ್‌ ಎಂಬುದು ತಂಬಾಕಿನಲ್ಲಿ ಇರುವಂತಹ ಒಂದು ರೀತಿಯ ನೈಸರ್ಗಿಕ ಮಾದಕ ಅಂಶವಾಗಿದ್ದು ಇದು ಒಂದು ರೀತಿಯ ತೀವ್ರ ವ್ಯಸನಕಾರಕ ಪದಾರ್ಥ.  ಸಿಗರೇಟು, ಸಿಗಾರ್‌, ಧೂಮರಹಿತ ತಂಬಾಕಿನಲ್ಲಿ, ಶಿಶಾ (ಹುಕ್ಕಾ ಅಥಾÌ ಪೈಪ್‌ನಲ್ಲಿ  ಸೇದುವಂತಹ ಸುವಾಸನೆಯ ತಂಬಾಕು) ಬೀಡಿ ಮತ್ತು ಕ್ರಿಟೆಕ್ಸ್‌ (ಕ್ಲೋವ್‌ ಸಿಗರೇಟು) ಗಳಲ್ಲಿ ನಿಕೋಟಿನ್‌ ಇರುತ್ತದೆ. ತಂಬಾಕಿನ ಉತ್ಪನ್ನಗಳಲ್ಲಿ ಎಲ್ಲವೂ ನೈಸರ್ಗಿಕವಾದುದು ಎಂದು ಬರೆದಿದ್ದರೂ ಸಹ, ಇದರಲ್ಲಿರುವ ನಿಕೋಟಿನ್‌ ಅಂಶದ ಕಾರಣದಿಂದಾಗಿ ಇವು ಚಟಕಾರಕವೇ ಆಗಿರುತ್ತವೆ.  

ಹಿಂದಿನ ದಶಕಗಳಲ್ಲಿ ಸೇದುತ್ತಿದ್ದ ಸಿಗರೇಟುಗಳಿಗಿಂತಲೂ ಈಗಿನ ದಿನಗಳಲ್ಲಿ ಸೇದುವ ಸಿಗರೇಟು ಹೆಚ್ಚು ವ್ಯಸನವನ್ನುಂಟು ಮಾಡುತ್ತದೆ. ಈಗಿನ ದಿನಗಳಲ್ಲಿ ತಯಾರಿಸುವ ಸಿಗರೇಟಿಗೆ ಸೇರಿಸುವ ರಾಸಾಯನಿಕಗಳು, ಬಹಳ ಕ್ಷಿಪ್ರವಾಗಿ ಮೆದುಳನ್ನು ಸೇರುವಂತೆ ನಿಕೋಟಿನ್‌ ಅನ್ನು ಪ್ರಚೋದಿಸುತ್ತವೆ. ಸೇದುವ ಒಂದು ಪಫ್ ಸಿಗರೇಟ್‌ನ ನಿಕೋಟಿನ್‌ ಮೆದುಳನ್ನು ಸೇರಲು ಕೇವಲ 10 ಸೆಕೆಂಡುಗಳು ಸಾಕು. 

ಚಟಕಾರಕವಾಗಿ ನಿಕೋಟಿನ್‌ ಮುಂದೆ ಹೇಳುವ ಅಂಶಗಳನ್ನು ಒಳಗೊಂಡಿರುತ್ತದೆ:
1. ವ್ಯಕ್ತಿಯು ತೆಗೆದುಕೊಳ್ಳುವ ಮಾದಕ ವಸ್ತುವು ಮೆದುಳಿನ ಮೇಲೆ ಉಂಟುಮಾಡುವ ಪರಿಣಾಮದ ಕಾರಣ, ಮನಸ್ಥಿತಿಯ ಬದಲಾವಣೆಗೆ ಕಾರಣ ಆಗುವ ಮಾದಕ ವಸ್ತುನಿಂದ ಬಳಸುವವನ ನಡವಳಿಕೆಯನ್ನು ಅದು ವಿಶೇಷವಾಗಿ ನಿಯಂತ್ರಿಸಲ್ಪಡುತ್ತದೆ. 

2.  ವ್ಯಕ್ತಿಯು ಬೇರೆ ಅಂಶಗಳಿಗೆ ಆದ್ಯತೆ ಕೊಡುವುದಕ್ಕಿಂತ ಹೆಚ್ಚಾಗಿ ಈ ವಸ್ತುಗಳಿಗೆಯೇ ಮೊದಲ ಆದ್ಯತೆ ಕೊಟ್ಟು ಅದನ್ನು ತೆಗೆದುಕೊಳ್ಳುತ್ತಿರುತ್ತಾನೆ.

3. ವ್ಯಕ್ತಿಯಲ್ಲಿ ಒಂದು ಪ್ರಮಾಣದ ಮಾದಕ ಪದಾರ್ಥಕ್ಕೆ ತಾಳುವಿಕೆ ಹೆಚ್ಚುತ್ತಾ ಹೋದ ಹಾಗೆಲ್ಲಾ, ಅಮಲಿನ ಅದೇ ಮಟ್ಟದ ಉತ್ತೇಜನವನ್ನು ಪಡೆಯಲು ಆತ ತಾನು ತೆಗೆದುಕೊಳ್ಳುವ ಮಾದಕ ಪದಾರ್ಥದ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗುತ್ತಾನೆ.
 
4. ಒಂದು ವೇಳೆ ವ್ಯಕ್ತಿಯು ಮಾದಕ ಪದಾರ್ಥವನ್ನು ತೆಗೆದುಕೊಳ್ಳದೆ ಇದ್ದರೆ ಆತನಲ್ಲಿ  ವಿಥ್‌ಡ್ರಾವಲ್‌ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 

5. ಮಾದಕ ವಸ್ತುಗಳ ವ್ಯಸನವನ್ನು ಬಿಟ್ಟ ಅನಂತರ ಮತ್ತೆ ತೆಗೆದುಕೊಳ್ಳುವಂತಹ ಬಲವಾದ ಇಚ್ಛೆಯು ಮೂಡುತ್ತದೆ. 

ನಿಕೋಟಿನ್‌ ಅಂಶವು ದೇಹದ ಮೇಲೆ ಯಾವ ಪರಿಣಾಮವನ್ನು ಉಂಟು ಮಾಡುತ್ತದೆ?
ಸಿಗರೇಟಿನ ಹೊಗೆಯು ಶ್ವಾಸಕೋಶವನ್ನು ಪ್ರವೇಶಿಸಿದ 10 ಸೆಕೆಂಡುಗಳ ಒಳಗಾಗಿ ನಿಕೋಟಿನ್‌ ಮೆದುಳನ್ನು ಪ್ರವೇಶಿಸುತ್ತದೆ ಮತ್ತು ದೇಹದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ನಿಕೋಟಿನ್‌ ಹೃದಯ ಮತ್ತು ಉಸಿರಾಟದ ದರವನ್ನು ಹೆಚ್ಚಿಸುತ್ತದೆ, ರಕ್ತಕ್ಕೆ ಹೆಚ್ಚು ಗುÉಕೋಸ್‌ ಅಂಶವು ಬಿಡುಗಡೆ ಆಗುವಂತೆ ಮಾಡುತ್ತದೆ. ಇದೇ ಕಾರಣಕ್ಕಾಗಿ ಸಿಗರೇಟು ಸೇದುವವರು, ಒಂದು ಸಿಗರೇಟು ಸೇದಿದ ಅನಂತರ ಹೆಚ್ಚು ಕಾರ್ಯಶೀಲರಾಗಿರುತ್ತಾರೆ. 

ನಿಕೋಟಿನ್‌ ಅಂಶವು ಮೆದುಳಿನ ಜೀವಕೋಶಗಳು ಡೊಪಾಮೈನ್‌ ಎಂಬ ರಾಸಾಯನಿಕವನ್ನು ಅಸಹಜವಾಗಿ ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಮಾಡುವಂತೆ ಮಾಡುತ್ತದೆ.  ಡೋಪಾಮೈನ್‌ ನಮ್ಮ ಮೆದುಳಿನಲ್ಲಿ ಇರುವ ಆನಂದದ ಕೇಂದ್ರವನ್ನು ಪ್ರಚೋದಿಸಿ, ಧೂಮಪಾನಿಗಳಿಗೆ ಆನಂದ ಉಂಟಾಗುವಂತೆ ಮಾಡುತ್ತದೆ.
 
ಆದರೆ ನಿಕೋಟಿನಿನ ಪರಿಣಾಮವು ಬಹಳ ದೀರ್ಘ‌ ಸಮಯ ಇರುವುದಿಲ್ಲ. ಯಾವಾಗ  ನಿಕೋಟಿನ್‌ನ ಪರಿಣಾಮವು ಕಡಿಮೆಯಾಗುತ್ತದೆಯೋ ಆಗ ಧೂಮಪಾನಿಗಳಿಗೆ ಹೆಚ್ಚು ನಿಕೋಟಿನ್‌ ಅನ್ನು ಪಡೆಯಲು ಇನ್ನಷ್ಟು ಧೂಮಪಾನ ಮಾಡುವ ಅನಿಸಿಕೆ ಮೂಡುತ್ತದೆ. 
 
ಮತ್ತೆ ಮತ್ತೆ ತೆಗೆದುಕೊಳ್ಳುವ ನಿಕೋಟಿನ್‌ ಪ್ರಮಾಣಗಳಿಂದಾಗಿ ಮೆದುಳಿನ ಚಟುವಟಿಕೆ ವ್ಯತ್ಯಾಸಗೊಳ್ಳುತ್ತದೆ. ಮೆದುಳು ತಾನು ಉತ್ಪತ್ತಿ ಮಾಡುವ ಡೊಪಾಮೈನ್‌ ಪ್ರಮಾಣವನ್ನು ತಗ್ಗಿಸುತ್ತದೆ. 

ಜೀವಕೋಶಗಳಿಗೆ ಡೋಪಾಮೈನ್‌ ಅನ್ನು ಸರಬರಾಜು ಮಾಡುವ ಗ್ರಾಹಕಗಳ ಸಂಖ್ಯೆಯೂ ಸಹ ಕಡಿಮೆಯಾಗುತ್ತದೆ.  ಹೀಗಾದಾಗ, ಮೆದುಳಿನಲ್ಲಿ ಕೇವಲ ಸಹಜ ಮಟ್ಟದ ನಿಕೋಟಿನ್‌ ಅನ್ನು ಉಳಿಸಿಕೊಳ್ಳುವ ಆವಶ್ಯಕತೆ ಉಂಟಾಗುತ್ತದೆ. ಡೊಪಾಮೈನ್‌ ಮಟ್ಟವು ಕುಸಿದಾಗ, ಧೂಮಪಾನ ಮಾಡುವವರಿಗೆ ಕಿರಿಕಿರಿ ಮತ್ತು ಖನ್ನತೆ ಕಾಡುತ್ತದೆ. 

ತರುಣ ಮತ್ತು ವೃದ್ಧ ಧೂಮಪಾನಿಗಳಿಬ್ಬರೂ ಸಹ ನಿಕೋಟಿನ್‌ ಚಟಕ್ಕೆ ಬೀಳಬಹುದು. ಪ್ರೌಢ ವಯಸ್ಕರಲ್ಲಿ, ನಿಕೋಟಿನ್‌ ಚಟವು ತಂಬಾಕಿನ ಬಳಕೆಯ ಪ್ರಮಾಣ ಮತ್ತು ತೀವ್ರತೆಯನ್ನು ಅವಲಂಬಿಸಿದೆ. ಹದಿಹರೆಯದವರಲ್ಲಿ ಅವರು ನಿಯುಮಿತವಾಗಿ ತಂಬಾಕು ಬಳಕೆ ಮಾಡುವವರಾಗಿದ್ದರೆ, ಬಳಕೆಯ ಸಮಯಾವಧಿಯನ್ನು ಅವಲಂಬಿಸಿದೆ. ಸ್ವಲ್ಪವೆ ಪ್ರಮಾಣದಲ್ಲಿ ಆದರೆ ನಿತ್ಯವೂ ಸಿಗರೇಟು ಸೇದುವ ಹದಿಹರೆಯದವರಲ್ಲಿ ನಿಕೋಟಿನ್‌ ಚಟ ಉಂಟಾಗುವ ಅಪಾಯವಿದೆ. 

ಅಪರೂಪಕ್ಕೆ/ ಯಾವಾಗಲಾದರೊಮ್ಮೆ  ಧೂಮಪಾನ ಮಾಡಿದರೆ ಯಾವ ಪರಿಣಾಮಗಳು ಉಂಟಾಗುತ್ತವೆ?
ಸಂತೋಷ ಕೂಟಗಳಲ್ಲಿ ಸಂತೋಷಕ್ಕಾಗಿ ಅಥವಾ ದಿನದಲ್ಲಿ ಒಂದೆರಡು ಸಿಗರೇಟುಗಳನ್ನು ಸೇದಿದರೆ ಯಾವ ತೊಂದರೆಯೂ ಆಗುವುದಿಲ್ಲ ಎನ್ನುವುದು ಕೆಲವು ಜನರ ನಂಬಿಕೆ. ಆದರೆ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳು, ವ್ಯಕ್ತಿಯು ಯಾವ ಪ್ರಮಾಣದಲ್ಲಿ ಸೇದುತ್ತಾನೆ ಮತ್ತು ಎಷ್ಟು ಸಮಯ ಸೇದುತ್ತಾನೆ ಎಂಬುದರ ಆಧಾರ ಮೇಲೆ ಹೆಚ್ಚುತ್ತಾ ಹೋಗುತ್ತದೆ. ಧೂಮಪಾನ ಮಾಡುವುದರಲ್ಲಿ ಸುರಕ್ಷತಾ ಪ್ರಮಾಣ ಎಂಬುದು ಇಲ್ಲವೇ ಇಲ್ಲ. 

ತಂಬಾಕಿನ ಹೊಗೆಯು ಯಾವುದೇ ಸಮಯದಲ್ಲಿ ನಿಕೋಟಿನ್‌ ಜೀವಂತ ಕೋಶವನ್ನು ಮುಟ್ಟಿದರೆ, ಸ್ವಲ್ಪ ಮಟ್ಟಿನ ಹಾನಿ ಅಗಿಯೇ ಆಗುತ್ತದೆ. ವ್ಯಕ್ತಿಯು ಸಿಗರೇಟಿನ ಹೊಗೆಯನ್ನು ಒಳಕ್ಕೆಳೆದುಕೊಂಡಾಗ ಹೊಗೆಯು ಶ್ವಾಸಕೋಶವನ್ನು ಪ್ರವೇಶಿಸುತ್ತದೆ ಮತ್ತು ಶ್ವಾಸಕೋಶದ ಅಂಗಾಂಶಕ್ಕೆ ಹಾನಿ ಆಗುತ್ತದೆ. ಹೊಗೆಯಲ್ಲಿ ಇದ್ದ ನಿಕೋಟಿನ್‌ ಆನಂತರ ಕ್ಷಿಪ್ರವಾಗಿ ರಕ್ತವನ್ನು ಸೇರಿಕೊಳ್ಳುತ್ತದೆ. ಆ ಬಳಿಕದ 10 ನಿಮಿಷಗಳ ಒಳಗಾಗಿ ಅದು ಮೆದುಳನ್ನು ಪ್ರಚೋದಿಸಲು ಆರಂಭಿಸುತ್ತದೆ.  ನಿಕೋಟಿನ್‌ ತ್ವರಿತವಾಗಿ ಹೃದಯದ ಗತಿಯ ದರವನ್ನು ಹೆಚ್ಚಿಸುತ್ತದೆ ಮತ್ತು ಹೃದಯಕ್ಕೆ ಹರಿಯುವ ರಕ್ತಕ್ಕೆ ಅಡ್ಡಿಪಡಿಸುತ್ತದೆ.  ಮಾತ್ರವಲ್ಲದೆ ನಿಕೋಟಿನ್‌ ಚರ್ಮದ ಉಷ್ಣತೆಯನ್ನೂ ಸಹ ತಗ್ಗಿಸುತ್ತದೆ,

ಇದರ ಪರಿಣಾಮವಾಗಿ ಮತ್ತು ಕಾಲು ಹಾಗೂ ಪಾದಗಳಿಗೆ ಸರಬರಾಜು ಆಗುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. 

ಆದರೆ ಆತಂಕದ ವಿಚಾರ ಏನು ಅಂದರೆ, ಗವå¾ತ್ತಿಗಾಗಿ ಸಿಗರೇಟು ಸೇದುವುದನ್ನು ಅರಂಭಿಸಿದ ಜನರು, ತಾವು ಯಾವಾಗ ಬೇಕಾದರೂ ಸಿಗರೇಟು ಸೇದುವುದನ್ನು ನಿಲ್ಲಿಸಿಬಿಡಬಹುದು ಎಂದು ಯೋಚಿಸುತ್ತಾರೆ.  ಆದರೆ ಹಾಗಾಗದೆ, ಅಂತಹವರೇ ಮತ್ತೆ ನಿರಂತರವಾಗಿ ಸಿಗರೇಟು ಸೇದುವವರಾಗುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.

ಡಾ| ಶಿವಶಂಕರ್‌
ಪ್ರೊಫೆಸರ್‌,  ಮೆಡಿಸಿನ್‌ ವಿಭಾಗ, 
ಕೆಎಂಸಿ, ಮಣಿಪಾಲ


Trending videos

Back to Top