CONNECT WITH US  

ಮಕ್ಕಳಲ್ಲಿ ಸೋಂಕಿನ ಪುನರಾವರ್ತನೆ

ಪ್ರತೀ ದಿನ ನಮ್ಮ ಶರೀರವು, ನಮ್ಮ ಸುತ್ತ ಮುತ್ತಲೂ ಇರುವ ವಿವಿಧ ರೀತಿಯ ಬ್ಯಾಕ್ಟೀರಿಯಾ, ವೈರಸ್‌ ಮತ್ತು ಫ‌ಂಗೈಗಳ ಜತೆಗೆ ಹೋರಾಡುತ್ತಿರುತ್ತದೆ. ದೇಹದ ಮೇಲೆ ದಾಳಿ ಮಾಡುವ ಈ ರೋಗಾಣುಗಳಿಗೆ ರೋಗಕಾರಕಗಳು ಎಂದು ಹೆಸರು. ಇವು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಅಥವಾ ರೋಗಪ್ರತಿರೋಧಕತೆಯನ್ನು ಹಾಳು ಮಾಡುತ್ತವೆ. ಕೆಲವು ಜನರ ದೇಹದ ಪ್ರತಿರೋಧಕ ವ್ಯವಸ್ಥೆಯು ಇತರ ಜನರಂತೆ ಸರಿಯಾಗಿ ಕೆಲಸ ಮಾಡುತ್ತಿರುವುದಿಲ್ಲ ಅಥವಾ ಭಾಗಶಃ ಕೆಲಸ ಮಾಡುತ್ತಿರುತ್ತದೆ. ಅವರಲ್ಲಿ  ಪ್ರ„ಮರಿ ಇಮ್ಯುನೋಡೆಫೀಶಿಯನ್ಸಿಯ ಕಾರಣದಿಂದಾಗಿ ಈ ಪರಿಸ್ಥಿತಿ ಇರಬಹುದು. ಇಂತಹ ಪರಿಸ್ಥಿತಿ ಇರುವ ಜನರು ಆಗಾಗ ಕಾಯಿಲೆಗೆ ಒಳಗಾಗುತ್ತಿರುತ್ತಾರೆ. ಪ್ರ„ಮರಿ ಇಮ್ಯುನೋಡೆಫೀಶಿಯನ್ಸಿ ಎಂಬುದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರಭಾವ ಉಂಟು ಮಾಡುವ 200ಕ್ಕಿಂತಲೂ ಹೆಚ್ಚಿನ ವಿಧದ ಪರಿಸ್ಥಿತಿಗಳ ಒಂದು ಗುಂಪು.  

ಈ ಪರಿಸ್ಥಿತಿ ಇರುವ ಜನರು ಸಾಮಾನ್ಯ ಜನರಿಗಿಂತಲೂ ಹೆಚ್ಚು ಪದೇಪದೇ ಸೋಂಕಿಗೆ ಒಳಗಾಗುತ್ತಿರುತ್ತಾರೆ. ಇಂತಹ ಜನರಿಗೆ ಆ್ಯಂಟಿಬಯಾಟಿಕ್‌ ಚಿಕಿತ್ಸೆಯನ್ನು ಆರಂಭಿಸಿದರೂ ಚೇತರಿಸಿಕೊಳ್ಳಲು ಅವರು ಬಹಳ ಸಮಯ ತೆಗೆದುಕೊಳ್ಳುತ್ತಾರೆ ಅಥವಾ ಇವರಲ್ಲಿ ಸೋಂಕು ಮತ್ತೆ ಮರುಕಳಿಸುವ ಸಾಧ್ಯತೆಯೂ ಇದೆ. ಸೋಂಕಿಗೆ ಈಡಾಗುವ ಈ ಪರಿಸ್ಥಿಯು ಕಐಈಯ ಒಂದು ಬಹಳ ಮಹತ್ವದ ಹಾಗೂ ಸಾಮಾನ್ಯ ರೋಗಲಕ್ಷಣ. 

ಕೆಲವು ಇಮ್ಯುನೋಡೆಫೀಶಿಯನ್ಸಿಗಳು ಎಷ್ಟು ತೀವ್ರ ರೂಪದವುಗಳಾಗಿರುತ್ತವೆಂದರೆ, ಅವು ಮಗುವಿನ ಜನನವಾದ ಕೂಡಲೇ ತಪಾಸಣೆಯಲ್ಲಿ ಪತ್ತೆ ಆಗುತ್ತವೆ.  ನೀವು ಕೆಲವು ವರ್ಷಗಳ ಹಿಂದೆಯೇ ಬ್ಯಾಕ್ಟೀರಿಯಾಗಳಿಗೆ ಒಡ್ಡಿಕೊಂಡಿದ್ದರೂ ಕೆಲವು ವಿಧದ ಇಮ್ಯುನೋಡೆಫೀಶಿಯನ್ಸಿಗಳು ಒಂದೆರಡು ರೀತಿಯ ಬ್ಯಾಕ್ಟೀರಿಯಾಗಳಿಗೆ ನಿಮ್ಮನ್ನು ಅಪಾಯಕ್ಕೀಡು ಮಾಡಬಹುದು. ಇಷ್ಟು ಮಾತ್ರವಲ್ಲದೆ ಈ ಕಾಯಿಲೆಗಳು ಬಹಳ ಅಪರೂಪವಾಗಿರುವ ಕಾರಣ, ಅನೇಕ ವೈದ್ಯರುಗಳು ಇದು ಮರುಕಳಿಸುವ, ತೀವ್ರವಾಗಬಹುದಾದ ಅಥವಾ ಅಸಹಜ ಕಾರಣಗಳನ್ನು ತಪಾಸಣೆಯ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಕಾರಣದಿಂದಾಗಿ, ತಪಾಸಣೆಗೆ ಮೊದಲೇ ದೀರ್ಘ‌ಕಾಲ ಅಸೌಖ್ಯದ ಬಾಧೆಗೆ ಒಳಗಾಗುವ ಮತ್ತು ವಿಶೇಷ ಹಾನಿಯಾಗುವ ಸಾಧ್ಯತೆಗಳಿವೆ. ಇಮ್ಯುನೋಡೆಫೀಶಿಯನ್ಸಿ ರೋಗ ಪರಿಸ್ಥಿತಿಯು ಬೆಳೆದ ಮಕ್ಕಳು, ಹದಿಹರೆಯದವರು ಅಥವಾ ಹಿರಿಯರಲ್ಲಿಯೂ ಸಹ ಕಾಣಿಸಿಕೊಳ್ಳಬಹುದು. 

ಅಸ್ಥಿಮಜ್ಜೆಯ ಬದಲಿ ಜೋಡಣೆಯಲ್ಲದೆ ಈ ಕಾಯಿಲೆಗಳನ್ನು ಗುಣಪಡಿಸುವುದು ಸಾಧ್ಯವಾಗಲಾರದು.  ಆದರೆ ಸರಿಯಾದ ಆರೈಕೆಯಿಂದ ಗುಣಮಟ್ಟದ ಜೀವನವನ್ನು ನಿರ್ವಹಿಸಲು ಹೆಚ್ಚಿನ ಜನರಿಗೆ ಸಾಧ್ಯವಿದೆ.   

ಜನರಲ್ಲಿ ಇದರ ಬಾಧೆ ಯಾವ 
ರೂಪದಲ್ಲಿ  ಕಾಣಿಸಿಕೊಳ್ಳುತ್ತದೆ? 

ವ್ಯಕ್ತಿಗೆ ಯಾವ ವಿಧದ PID ಇದೆ ಎಂಬುದನ್ನು ಅವಲಂಬಿಸಿಕೊಂಡು, ಬಾಧಿತ ವ್ಯಕ್ತಿಯಲ್ಲಿ ಹದದಿಂದ ತೀವ್ರ ರೂಪದವರೆಗೆ ವಿವಿಧ ಶ್ರೇಣಿಯ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಉದಾ: ಕೆಲವು ಜನರಲ್ಲಿ ಆಗಾಗ ಶೀತ ಕಾಣಿಸಿಕೊಂಡರೆ, ಇನ್ನು ಕೆಲವರಲ್ಲಿ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೆಲವರಲ್ಲಿ  ಹೃದಯದ ತೊಂದರೆಗಳು ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಚರ್ಮದ ಅಸ್ವಸ್ಥತೆಗಳು ಮತ್ತು ಸಂಧಿವಾತಗಳು ಕಾಣಿಸಿಕೊಳ್ಳಬಹುದು. ಕಐಈ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಅಂದರೆ ಇದರ ಅರ್ಥ ಕೆಲವು ಜನರಲ್ಲಿ ಬಹಳಷ್ಟು ವರ್ಷಗಳವರೆಗೆ ಇದರ ತಪಾಸಣೆಯೇ ಆಗಿರುವುದಿಲ್ಲ. ಈ ಕಾರಣದಿಂದಾಗಿ ಇವರಲ್ಲಿ ಅಂಗಾಂಶ ಹಾನಿ ಮತ್ತು ವೈಕಲ್ಯಗಳಂತಹ ಸಮಸ್ಯೆಗಳು ಸಹ ಉಂಟಾಗಬಹುದು.  

ಜನರಲ್ಲಿ ಇಮ್ಯುನೋಡೆಫೀಶಿಯನ್ಸಿ 
ಪರಿಸ್ಥಿತಿ ಹೇಗೆ ಕಾಣಿಸಿಕೊಳ್ಳುತ್ತದೆ? 

ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವ ಜೀವಕೋಶಗಳ ಜೀನ್‌ಗಳಲ್ಲಿನ ದೋಷಗಳ ಕಾರಣದಿಂದಾಗಿ ಇದು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಈ ದೋಷವು ಒಂದೇ ಒಂದು ಜೀನ್‌ನಲ್ಲಿದ್ದರೆ, ಇನ್ನು ಕೆಲವರಲ್ಲಿ ಅನೇಕ ಜೀನ್‌ಗಳಲ್ಲಿ ಜಂಟಿಯಾಗಿ ಕಾಣಿಸಿಕೊಂಡಿರುತ್ತದೆ. ಕಐಈ ಅಸ್ವಸ್ಥತೆಯನ್ನು ಹೊಂದಿದ್ದು ಜನಿಸಿರುವ ಅನೇಕ ಜನರಲ್ಲಿ ಇಂತಹ ಒಂದು ಪರಿಸ್ಥಿತಿ ಇರುತ್ತದೆ. ಕಐಈ ಎಂಬುದು ಪ್ರಮುಖವಾಗಿ ಒಂದು ಆನುವಂಶಿಕ ಅಸ್ವಸ್ಥತೆ ಆಗಿರುತ್ತದೆ. ಅಂದರೆ ಈ ಕಾಯಿಲೆಯ ಪರಿಸ್ಥಿತಿಯು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬಹುದು. ಪರಿಸ್ಥಿತಿ ಇರುವವರಲ್ಲಿ, ಅವರ ಶರೀರದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಒಳಗೊಂಡಿರುವ ಜೀನ್‌ಗಳನ್ನು ನಿರ್ಮಿಸುವ ಡಿಎನ್‌ಎ ನಿರ್ಮಾಣ ಅಂಶಗಳು ಒಂದೋ ಸ್ಥಾನಪಲ್ಲಟಗೊಂಡಿರುತ್ತವೆ ಅಥವಾ ಇರುವುದೇ ಇಲ್ಲ.

ಜೀನ್‌ಗಳು ಕಾಣೆಯಾಗಿರುವ ಅಥವಾ ದೋಷಪೂರಿತವಾಗಿವ ಕಾರಣದಿಂದಾಗಿ, ಸೋಂಕಿನ ವಿರುದ್ಧ ಹೋರಾಡುವ ಶರೀರದ ರೋಗಪ್ರತಿರೋಧಕ ವ್ಯವಸ್ಥೆಗೆ ಆವಶ್ಯಕವಿರುವ ಅಂಶಗಳ ನಿರ್ಮಾಣ ಸಾಧ್ಯವಾಗುವುದಿಲ್ಲ ಅಥವಾ ರೋಗಪ್ರತಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ.   ಕೆಲವು ರೀತಿಯ ಕಐಈಗಳಲ್ಲಿ, ಉದಾಹರಣೆಗೆ: ಸಾಮಾನ್ಯ ರೀತಿಯ ವ್ಯತ್ಯಸ್ಥ ರೋಗಪ್ರತಿರೋಧಕತೆಯ ಕೊರತೆ  ಮತ್ತು ಇತರ ಆ್ಯಂಟಿಬಾಡಿ ಕೊರತೆಗಳು; ಇಲ್ಲಿ ನ್ಯೂನತೆಯಿರುವ ನಿರ್ದಿಷ್ಟ ಜೀನ್‌ಗಳ ಸಂಬಂಧವನ್ನು ನಿಖರವಾಗಿ ಊಹಿಸುವುದು ಸುಲಭವಲ್ಲ, ಆದರೆ ಜೀನ್‌ಗಳ ಸ್ಕ್ರೀನಿಂಗ್‌ಗೆ ಸಂಬಂಧಿಸಿದಂತೆ ಬಹಳಷ್ಟು ಸಂಶೋಧನೆಗಳು ಆಗಿವೆ ಮತ್ತು ತಾಂತ್ರಿಕತೆಯೂ  ಬಹಳ ಮುಂದುವರಿದಿದೆ. ಆದರೆ ಪ್ರ„ಮರಿ ಇಮ್ಯುನೋಡೆಫೀಶಿಯನ್ಸಿಯು  ಬಾಧಿತರಿಂದ ಅದು ಇನ್ನೊಬ್ಬರಿಗೆ ಹರಡುವುದಿಲ್ಲ ಮತ್ತು ಇದು ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಹೊಸ ಸಂಶೋಧನೆಗಳ ಮೂಲಕ ಪ್ರ„ಮರಿ ಇಮ್ಯುನೋಡೆಫೀಶಿಯನ್ಸಿಯನ್ನು ಉಂಟು ಮಾಡುವ ಜೀನ್‌ ನ್ಯೂನತೆಗಳ ಬಗೆಗಿನ ಮಾಹಿತಿಗಳು ಹೆಚ್ಚು  ಕ್ಷೀಪ್ರವಾಗಿ ಲಭ್ಯವಾಗುತ್ತಿವೆ.    

ಈ ಪರಿಸ್ಥಿತಿಗಳು ಎಷ್ಟು 
ತೀವ್ರವಾಗಬಹುದು? 

ಕಐಈಯ ಪರಿಣಾಮವು ವ್ಯಾಪಕವಾಗಿರಬಹುದು. ಉದಾ: ತೀವ್ರ ರೂಪದ ಕಂಬೈನ್‌ ಇಮ್ಯುನೋಡೆಫೀಶಿಯೆನ್ಸಿಯ ಜತೆ ಹುಟ್ಟಿದ ಮಗುವನ್ನು, ಅಸ್ಥಿಮಜ್ಜೆಯ ಬದಲೀ ಜೋಡಣೆ ಮಾಡುವವರೆಗೆ ನಂಜುನಿರೋಧಕ ವಾತಾವರಣದಲ್ಲಿ ಪ್ರತ್ಯೇಕವಾಗಿ ಇಡದೆ ಹೋದರೆ, ಆ ಮಗುವು ಒಂದೆರಡು ವರ್ಷಕ್ಕಿಂತ ಹೆಚ್ಚು ಸಮಯ ಬದುಕಲಾರದು. ಮಗುವಿನಲ್ಲಿ ಅಸ್ವಸ್ಥತೆ ತೀವ್ರತೆಯು ಕಡಿಮೆ ಇದ್ದರೂ ದೀರ್ಘ‌ಕಾಲಿಕ ಅನಾರೋಗ್ಯವು ಮಗುವಿನ ಶಾಲಾಜೀವನ ಮತ್ತು ಸಾಮಾಜಿಕ ಸಂಪರ್ಕಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು.   ವಯಸ್ಕರಲ್ಲಿ ಆಗಾಗ ಕಾಣಿಸಿಕೊಳ್ಳುವ ಅಸ್ವಸ್ಥತೆಯು ಅವರನ್ನು ನಿತ್ರಾಣಗೊಳಿಸಬಹುದು, ಅವರಿಗೆ ತಮ್ಮ ವೃತ್ತಿ ಮತ್ತು ಕೌಟುಂಬಿಕ ಜೀವನವನ್ನು ಆನಂದಿಸಲು ಕಷ್ಟವಾಗಬಹುದು ಮತ್ತು ಅವರಲ್ಲಿ ಮಾನಸಿಕ ತೊಂದರೆಗಳು ಸಹ ಕಾಣಿಸಿಕೊಳ್ಳಬಹುದು. ಅವರು ಪ್ರತ್ಯೇಕತೆಯ ಭಾವನೆಯನ್ನು ಹೊಂದಬಹುದು, ತಮ್ಮ ಗಳಿಕೆಯನ್ನೆಲ್ಲಾ ಕಳೆದುಕೊಳ್ಳುವ ನೋವು ಅವರನ್ನು ಬಾಧಿಸಬಹುದು ಅಥವಾ ಮಗುವಿನ ಆರೈಕೆಗಾಗಿಯೇ ಬಹಳಷ್ಟು ಹಣ ನಷ್ಟವಾಗಬಹುದು.   

ಎಷ್ಟು ಜನರು ಕಐಈಯಿಂದ ಬಳಲುತ್ತಿದ್ದಾರೆ?  ನಿಖರವಾದ ಅಂಕಿಅಂಶಗಳು ಇನ್ನಷ್ಟೇ ತಿಳಿದು ಬರಬೇಕಿದೆ.  ಯಾಕೆಂದರೆ ಭಾರತದಲ್ಲಿ ಜನನ ಸಮಯದ  ಕಐಈಯನ್ನು ಪತ್ತೆ ಮಾಡಲು ಯಾವುದೇ ಸ್ಕ್ರೀನಿಂಗ್‌ ಕಾರ್ಯಕ್ರಮಗಳು ಇರುವುದಿಲ್ಲ. ಅದೇ ರೀತಿಯಲ್ಲಿ  ಜನರು ತಮ್ಮ ಜೀವನದ ಅವಧಿಯಲ್ಲಿಯೂ ನಿಯುತವಾಗಿ ಕಐಈಯನ್ನು  ಸ್ಕ್ರೀನಿಂಗ್‌ ಮಾಡಿಸಿಕೊಳ್ಳುವುದಿಲ್ಲ. ಕೆಲವು ರಾಷ್ಟ್ರಗಳು, ಜನನ ಸಮಯದ ತೀವ್ರ ರೂಪದ ಕಂಬೈನ್‌x ಇಮ್ಯುನೋಡೆಫಿಶಿಯೆನ್ಸಿಗೆ  ಸ್ಕ್ರೀನಿಂಗ್‌ ಅನ್ನು ಆರಂಭಿಸಿವೆ.  ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಕಾಯಿಲೆ ಬಿದ್ದಾಗ ಅಥವಾ ಆತನನ್ನು ಪರೀಕ್ಷೆ ಮಾಡಿದಾಗ ಮಾತ್ರವೇ, ಆ ವ್ಯಕ್ತಿಗೆ ಇಮ್ಯುನೋಡೆಫಿಶಿಯೆನ್ಸಿ ಇದೆ ಎನ್ನುವುದು ವೈದ್ಯರಿಗೆ ತಿಳಿದು ಬರುತ್ತದೆ. ಕೆಲವು ಜನರಲ್ಲಿ, ಅವರ ಶರೀರದಲ್ಲಿನ ಕಡಿಮೆ ತೀವ್ರ ರೂಪದ ಪ್ರ„ಮರಿ ಇಮ್ಯುನೋಡೆಫಿಶಿಯೆನ್ಸಿಯು ಅವರ ಬದುಕಿಗೆ ಮತ್ತು ಸಹಜ ಜೀವನ ಕ್ರಮಕ್ಕೆ ಹೆಚ್ಚು ಹಸ್ತಕ್ಷೇಪ ಮಾಡದೆ ಇರುವುದರಿಂದಾಗಿ, ಇಮ್ಯುನೋಡೆಫಿಶಿಯೆನ್ಸಿ ಪರಿಸ್ಥಿತಿಯು ಅವರ ಜೀವನದ ಉದ್ದಕ್ಕೂ ತಪಾಸಣೆ ಆಗದೆ ಹಾಗೆಯೇ ಮುಂದುವರಿಯುತ್ತದೆ.  ದುರದೃಷ್ಟವಶಾತ್‌ ಕೆಲವು ಜನರಲ್ಲಿ ಹಿನ್ನೆಲೆಯ ಪರಿಸ್ಥಿತಿಯ ತಪಾಸಣೆಯೇ ಆಗದಿರುವ ಕಾರಣ ಸಾವಿಗೀಡಾಗುತ್ತಾರೆ.  ಭಾರತದಲ್ಲಿ ಈ ಪರಿಸ್ಥಿತಿಯ ಅಂಕಿ ಅಂಶಗಳ ಬಗ್ಗೆ ನಾವು ಯಾವುದೇ ದಾಖಲೆಯನ್ನು ಹೊಂದಿರುವುದಿಲ್ಲ. ಹಾಗಾಗಿ, ಈ ಪರಿಸ್ಥಿತಿಯ ನಿಖರವಾದ ವಸ್ತುಸ್ಥಿತಿಯನ್ನು ಅಥವಾ ಪ್ರಕರಣಗಳನ್ನು ಹೇಳುವುದು ಕಷ್ಟ.  

PID ಯ 10 ಎಚ್ಚರಿಕೆಯ 
ಚಿಹ್ನೆಗಳು:  

1. ಒಂದು ವರ್ಷದ ಒಳಗಾಗಿ ನಾಲ್ಕು ಅಥವಾ ಹೆಚ್ಚು ಬಾರಿ ಕಿವಿಯ ಸೋಂಕುಗಳಾಗುವುದು. 

2. ಒಂದು ವರ್ಷದ ಒಳಗಾಗಿ ಎರಡು ಅಥವಾ ಹೆಚ್ಚು ಬಾರಿ ತೀವ್ರ ಸೈನಸ್‌ ಸೋಂಕು ಉಂಟಾಗುವುದು.
 
3. ಒಂದು ಅಥವಾ ಹೆಚ್ಚು ತಿಂಗಳುಗಳ ಕಾಲ ಆಂಟಿಬಯಾಟಿಕ್ಸ್‌ ಚಿಕಿತ್ಸೆಯನ್ನು ಪಡೆದೂ ಸಹ ಹೆಚ್ಚು ಪರಿಣಾಮ ದೊರಕದೆಯೇ ಇರುವುದು. 

4. ಒಂದು ವರ್ಷದ ಒಳಗಾಗಿ ಎರಡು ಅಥವಾ ಹೆಚ್ಚು ಬಾರಿ ನ್ಯುಮೋನಿಯಾ ಆಗಿರುವುದು. 

5. ನವಜಾತ ಶಿಶುವು ತೂಕವನ್ನು ಗಳಿಸಲು ಅಥವಾ ಸಹಜವಾಗಿ ಬೆಳೆಯಲು ಕಷ್ಟವಾಗುವುದು. 

6. ಆಗಾಗ ಚರ್ಮದ ಆಳದಲ್ಲಿ ಅಥವಾ ಅಂಗಾಂಶಗಳಲ್ಲಿ ಕುರು ಆಗುವುದು. 

7. ಬಾಯಿಯಲ್ಲಿ ನಿರಂತರ ಬಿಳಿಯ ಮಚ್ಚೆ ಅಥವಾ ಚರ್ಮದಲ್ಲಿ ಫ‌ಂಗಸ್‌ ಸೋಂಕು. 

8. ಸೋಂಕನ್ನು ತಡೆಯಲು ಈಂಟ್ರಾವೀನಸ್‌ ಆಂಟಿಬಯಾಟಿಕ್ಸ್‌ ಆವಶ್ಯಕ ಅನಿಸುವುದು. 

9. ಸೆಪ್ಟಿ ಸೇಮಿಯಾವೂ ಸೇರಿದಂತೆ ಎರಡು ಅಥವಾ ಹೆಚ್ಚಿನ ಆಳದ ಸೋಂಕುಗಳು 

10. ಇಮ್ಯುನೋಡೆಫಿಶಿಯನ್ಸಿಯ ಕೌಟುಂಬಿಕ ಹಿನ್ನೆಲೆ ಇರುವುದು.  

ಸಾಮಾನ್ಯವಾಗಿ, ಕಐಈ ತಪಾಸಣೆ ಯನ್ನು ಮೊದಲೇ ಮಾಡಿದರೆ, ಆಗಬಹುದಾದ ಹಾನಿಯ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ವೀ ಚಿಕಿತ್ಸೆ  ಸುಲಭವಾಗುತ್ತದೆ. ರಕ್ತದ ಘಟಕಗಳ ಸಂಪೂರ್ಣ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ, ಅದರಲ್ಲೂ  ವಿಶೇಷವಾಗಿ ಲಿಂಫೋಸೈಟ್‌ ಕೌಂಟ್‌, ಇಮ್ಯುನೋಗ್ಲೋಬ್ಯುಲಿನ್‌ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕೆಲವು ರೀತಿಯ ಇಮ್ಯುನೋಡಿಫೀಶಿ ಯನ್ಸಿ  ಪರಿಸ್ಥಿತಿಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವೈದ್ಯರು ಮತ್ತು ದಾದಿಯರು ಕಐಈನ ಚಿಹ್ನೆಗಳು ಮತ್ತು ಗುಣಲಕ್ಷಣಗಳನ್ನು ಸರಿಯಾಗಿ ತಿಳಿದಿಲ್ಲದಿರುವ ಕಾರಣ, ಆಗ ತಪಾಸಣೆ ಯಲ್ಲಿ ವಿಶೇಷವಾಗಿ ವಿಳಂಬವಾಗುತ್ತದೆ. 

ಇದು ಸಮರ್ಪಕವಾಗಿ ಪತ್ತೆಯಾಗಲು, ಸರಿ ಸುಮಾರು ನಾಲ್ಕಕ್ಕಿಂತ ಹೆಚ್ಚು ವರ್ಷಗಳು ಹಿಡಿಯಬಹುದು, ಕೆಲವು ಮಧ್ಯಮ ತೀವ್ರತೆಯ ಪ್ರಕರಣಗಳಲ್ಲಿ ಹತ್ತು ವರ್ಷಗಳೂ ಹಿಡಿಯಬಹುದು. ವಿಶೇಷವಾಗಿ ಮಕ್ಕಳಲ್ಲಿ, ಅಸ್ವಸ್ಥತೆಯ ಪ್ರ„ಮರಿ ಲಕ್ಷಣ ಗಳನ್ನು ಮಾಮೂಲಿ ಅನಾರೋಗ್ಯ ಎಂದುಕೊಳ್ಳುವ ಸಾಧ್ಯತೆಗಳೆ ಹೆಚ್ಚಾಗಿ ರುವುದರಿಂದಲೂ ಕಐಈಯ ಒಂದು ನಿಖರವಾದ ತಪಾಸಣೆಯು ಇನ್ನೂ ವಿಳಂಬವಾಗುತ್ತಿದೆ. ಸಾಮಾನ್ಯವಾಗಿ ಆರೋಗ್ಯವಂತರು ಎಂದು ವರ್ಗೀಕರಿಸಲಾದ ಮಕ್ಕಳಲ್ಲೂ ಸಹ ಆಗಾಗ ಸೋಂಕುಗಳು ಕಾಣಿಸಿಕೊಳ್ಳಬಹುದು.   ಕಐಈ ಲಕ್ಷಣಗಳನ್ನು ತೋರಿಸುವ ಹಿರಿಯ ವಯಸ್ಕರಲ್ಲಿ, ಇತರ ಕಾರಣಗಳಿಂದಾಗಿ ತಪಾಸಣೆ ವಿಳಂಬ ಆಗಬಹುದು. ಮಕ್ಕಳಲ್ಲಿನ ತೀವ್ರ ರೂಪದ ಪ್ರಕರಣಗಳು ಪತ್ತೆಯಾಗುತ್ತವೆ, ಸೌಮ್ಯರೂಪದ ಗುಣಲಕ್ಷಣಗಳು ಹೆಚ್ಚಾಗಿ ಆ ಬಳಿಕ ಜೀವನದಲ್ಲಿ ಮತ್ತೆ ಕಾಣಿಸಿಕೊಳ್ಳುವುದಿಲ್ಲ. ಆರೋಗ್ಯ ಕಾರ್ಯಕರ್ತರು ಸೋಂಕಿನ ವಿನ್ಯಾಸ ಮತ್ತು ಲಕ್ಷಣಗಳನ್ನು ಗುರುತಿಸುವಲ್ಲಿ ವಿಫ‌ಲರಾಗದೆ, ಸರಿಯಾಗಿ ತಪಾಸಣೆ ಮಾಡಿ, ತ್ವರಿತ ಕ್ರಮ ಕೈಗೊಳ್ಳುವುದು ಆವಶ್ಯಕ. ಉದಾಹರಣೆಗೆ, ಮೇಲಿನ ಮತ್ತು ಕೆಳಗಿನ ಶ್ವಾಸಾಂಗವ್ಯೂಹದ ಸೋಂಕುಗಳನ್ನು ಹೆಚ್ಚಾಗಿ ಬೇರೆ ರೀತಿಯಲ್ಲಿ ತಪ್ಪಾಗಿ ಅರ್ಥಮಾಡಿಕೊಳ್ಳಲಾಗುತ್ತದೆ.  

ಯಾವ ಚಿಕಿತ್ಸೆಗಳು ಲಭ್ಯ ಇವೆ?

ನಿಮಗೆ ಆಗಿರುವುದು ಯಾವ ವಿಧದ ಕಐಈ ಮತ್ತು ಅದು ನಿಮ್ಮ ರೋಗಪ್ರತಿರೋಧಕ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಉಂಟುಮಾಡುತ್ತದೆ ಎಂಬ ಅಂಶವನ್ನು ಅವಲಂಬಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ.  ಕಐಈ ಯಿಂದ ಬಾಧಿತರಾಗಿರುವ ಬಹಳಷ್ಟು ಜನರಿಗೆ ಪ್ರತಿಕಾಯಗಳ ಕೊರತೆ ಇರುತ್ತದೆ. ಇಂತಹ ಜನರನ್ನು ಸೋಂಕು ಮುಕ್ತರನ್ನಾಗಿಸಲು, ಇಮ್ಯುನೋಗ್ಲೊಬ್ಯುಲಿನ್‌ ರಿಪ್ಲೇಸ್‌ ಮೆಂಟ್‌ ತೆರಪಿಯನ್ನು ನೀಡುತಾರೆ.  ಸೋಂಕುಗಳು ಉಂಟಾದಾಗಲೆಲ್ಲಾ ಆಂಟಿಬಯಾಟಿಕ್‌ಗಳನ್ನು ನೀಡಲಾಗುವುದು. ಇನ್ನು ಕೆಲವು ರೀತಿಯ ಕಐಈಗಳಲ್ಲಿ ಸೋಂಕನ್ನು ತಡೆಯಲು ಆಂಟಿಬಯಾಟಿಕ್‌ ಮತ್ತು/ಅಥವಾ ಆಂಟಿಫ‌ಂಗಲ್‌ ಔಷಧಿಯನ್ನು ಉಪಯೋಗಿಸಲಾಗುತ್ತದೆ.  ಆದರೆ ಹೆಚ್ಚು ನಿಖರವಾದ ವಿಶೇಷ ಪರಿಹಾರವನ್ನು ಒಳಗೊಂಡಿರುವ ಚಿಕಿತ್ಸೆ ಅಂದರೆ ಅಸ್ಥಿಮಜ್ಜೆಯ ಕಸಿ ಜೋಡಣಾ ಚಿಕಿತ್ಸೆ, ಎನ್‌ಝೈಮ್‌ ರಿಪ್ಲೇಸ್‌ಮೆಂಟ್‌ ಚಿಕಿತ್ಸೆ ಮತ್ತು ಜೀನ್‌ ತೆೆರಪಿ. ಜೊತೆಗೆ ಕಐಈ ಇರುವ ಜನರು ಸೋಂಕುಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿಕೊಳ್ಳುವ ಮುನ್ನೆಚ್ಚರಿಕಾ ಕ್ರಮಗಳನ್ನು  ಸಹ ಕೈಗೊಳ್ಳಬಹುದು.        

ರೋಗ ಲಕ್ಷಣಗಳು ಯಾವುವು 
ಮತ್ತು ಕಐಈ ತಪಾಸಣೆ ಹೇಗೆ?

 
ಪ್ರಮುಖ ವಿಧದ ಕಐಈಗಳು ಬಾಧಿತರಲ್ಲಿ ಸಮಾನ ರೀತಿಯ ರೋಗಲಕ್ಷಣಗಳನ್ನು ಉಂಟು ಮಾಡುತ್ತವೆ. 

ಈ ರೋಗಲಕ್ಷಣಗಳು ಗಮನಾರ್ಹವಾಗಿರುತ್ತವೆ: 
    
ಪದೇ ಪದೇ  

ಸೋಂಕುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುವುದು, ಅವು ದೀರ್ಘ‌ಕಾಲಿಕ ಮತ್ತು ತೀವ್ರರೂಪದವುಗಳಾಗಿರಬಹುದು. ಆದರೆ, ಸೋಂಕು ರಹಿತ ತೊಂದರೆಗಳಾದ ಅಟೋಇಮ್ಯುನಿಟಿ, ಉರಿಯೂತದ ಅಸ್ವಸ್ಥತೆಗಳು ಮತ್ತು ಜ್ವರ, ಸಂಧಿಗಳ ಬಾವುಗಳ, ದದ್ದುಗಳು ಮತ್ತು ಮಲವಿಸರ್ಜನೆಯಲ್ಲಿ ತೊಂದರೆಗಳು, ಹೃದಯದ ಈಡಿಮಾ ಅಥವಾ ಕೆಲವು ಬಾರಿ ಕ್ಯಾನ್ಸರ್‌ಗಳು, ಅದರಲ್ಲೂ  ವಿಶೇಷವಾಗಿ ಲಿಂಫೋಮಾದಂತಹ ಕ್ಯಾನ್ಸರ್‌ಗಳ ರೂಪಗಳಲ್ಲಿಯೂ  ಅದನ್ನು ಗುರುತಿಸಲಾಗುತ್ತದೆ.  ಇನ್ನೊಂದು ಬಹಳ ಮುಖ್ಯವಾದ ಸಾಧನ ಅಂದರೆ ತೀವ್ರರೂಪದ, ಅಸಹಜ, ಮರುಕಳಿಸುವ ಸೋಂಕುಗಳು ಮತ್ತು ಕಐಈ ಯ ಕೌಟುಂಬಿಕ ಹಿನ್ನೆಲೆ ಇರುವವರು ಎಂದು ಸಂದೇಹಾಸ್ಪದ ಗುಂಪಿನಲ್ಲಿ ಗುರುತಿಸಲ್ಪಟ್ಟ  ವೈದ್ಯರು ಮತ್ತು ಜನರ  ಗುಂಪು-   ಇವುಗಳನ್ನು ಜನಸಮಾನ್ಯರಿಗೆ ಮತ್ತು ಜನರಲ್‌ ಪ್ರಾಕ್ಟೀಶನರ್‌ಗಳಿಗೆ, ತಪಾಸಣಾ ದರವನ್ನು ಹೆಚ್ಚಿಸಿಕೊಳ್ಳಲು ಸ್ಕ್ರೀನಿಂಗ್‌ ಸಾಧನ ಎಂಬುದಾಗಿ ಪರಿಗಣಿಸಲಾಗುತ್ತಿದೆ.  

ಡಾ| ಹರ್ಷಪ್ರಸಾದ ಎಲ್‌.,
ಮಕ್ಕಳ ರಕ್ತ ಹಾಗೂ ಕ್ಯಾನ್ಸರ್‌ ತಜ್ಞರು,

ಪೀಡಿಯಾಟ್ರಿಕ್‌ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ,
ಕೆ.ಎಂ.ಸಿ., ಮಂಗಳೂರು.


Trending videos

Back to Top