CONNECT WITH US  

ಬ್ರಾಂಕಯಲ್‌ ಆಸ್ತಮಾ

ಹಿಂದಿನ  ವಾರದಿಂದ-   11. ಅಸ್ಮತಾ ಕ್ರಿಯಾಯೋಜನೆ ಅಂದರೇನು? ಅದನ್ನು ರೂಪಿಸುವುದು ಹೇಗೆ?
ಆಸ್ತಮಾ ಆಕ್ರಮಣದ ಮುನ್ನೆಚ್ಚರಿಕೆ ಸಂಕೇತಗಳನ್ನು ತಿಳಿಯುವುದು ಮತ್ತು ಅಂತಹ ಲಕ್ಷಣಗಳು ಕಾಣಿಸಿಕೊಂಡಾಗ ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ನಿಮ್ಮ ಆಸ್ತಮಾ ಚಿಕಿತ್ಸೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಆಸ್ತಮಾ ಆಕ್ರಮಣದ ಲಕ್ಷಣಗಳನ್ನು ಗುರುತಿಸುವುದು ನಿಮಗೆ ಕಷ್ಟವಾದರೆ, ಪೀಕ್‌ ಫ್ಲೋ ಮೀಟರ್‌ ಎಂಬ, ಶ್ವಾಸಕೋಶಗಳಿಂದ ಗಾಳಿಯನ್ನು ಹೊರದೂಡುವ ನಿಮ್ಮ ಸಾಮರ್ಥ್ಯ ಎಷ್ಟಿದೆ ಎಂದು ಅಳೆಯುವ ಕಿರು ಸಾಧನವನ್ನು ಉಪಯೋಗಿಸುವುದು ಹೇಗೆ ಎನ್ನುವುದನ್ನು ಕಲಿತುಕೊಳ್ಳಿ.

ನಿಮ್ಮ ಆಸ್ತಮಾ ಇತ್ತೀಚೆಗೆ ಕೆಲವು ಸಮಯದಿಂದ ನಿಯಂತ್ರಣದಲ್ಲಿ ಇದ್ದರೂ ಈಗಲೂ ನಿಮಗೆ ಆಸ್ತಮಾ ಉಂಟಾಗಬಹುದು. ನೀವು ಹೇಗೆ ತಯಾರಿರಬೇಕು ಎಂಬ ಮಾಹಿತಿ ಇಲ್ಲಿದೆ:

- ನಿಮ್ಮ ಆಸ್ತಮಾ ಪ್ರಚೋದಕಗಳನ್ನು ಅರಿತುಕೊಳ್ಳಿ: ನಿರ್ದಿಷ್ಟ ಸನ್ನಿವೇಶಗಳಿರಬಹುದು ಅಥವಾ ವರ್ಷದ ನಿರ್ದಿಷ್ಟ ಸಮಯ ಇರಬಹುದು; ನಿಮ್ಮಲ್ಲಿ ಆಸ್ತಮಾವನ್ನು ಪ್ರಚೋದಿಸುವ ಅಂಶವನ್ನು ತಿಳಿದುಕೊಳ್ಳುವುದು ಅದನ್ನು ನಿಭಾಯಿಸುವುದಕ್ಕೆ ಅತ್ಯಂತ ಮುಖ್ಯ. ಬೆಕ್ಕಿನ ಮೈಗೂದಲು, ಮೃತಚರ್ಮದ ತುಣುಕುಗಳು, ಹೊಗೆ, ಋತುಮಾನ ಅಲರ್ಜಿಗಳು ಮತ್ತು ಶ್ವಾಸಾಂಗ ಸೋಂಕುಗಳು ಅಂತಹ ಕೆಲವು ಸಾಮಾನ್ಯ ಪ್ರಚೋದಕಗಳಾಗಿವೆ. 

-ನಿಮ್ಮ ಆಸ್ತಮಾ ಕ್ರಿಯಾಯೋಜನೆಯನ್ನು ಹಂಚಿಕೊಳ್ಳಿ: ಸಹೋದ್ಯೋಗಿಗಳು, ಕುಟುಂಬಿಕರಂತಹ ಸದಾ ನಿಮ್ಮ ಜತೆಗೆ ಇರುವ ಜನರ ಜತೆಗೆ ನೀವು ನಿಮ್ಮ ಆಸ್ತಮಾ ಕ್ರಿಯಾಯೋಜನೆಯನ್ನು ಎಲ್ಲಿ ಇರಿಸಿಕೊಳ್ಳುತ್ತೀರಿ ಎಂಬುದನ್ನು ಹೇಳಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅವರು ಏನು ಮಾಡಬೇಕು ಎಂಬುದನ್ನು ಹಂಚಿಕೊಳ್ಳಿ. 

- ರಕ್ಷಕ ಔಷಧಿಗಳನ್ನು ಜತೆಗಿರಿಸಿಕೊಳ್ಳಿ: ಆಸ್ತಮಾ ರೋಗಿಗಳು ಸದಾ ಜತೆಗೆ ಇರಿಸಿಕೊಳ್ಳಬೇಕಾದ ಔಷಧಿ ಯಾವುದಾದರೂ ಇದ್ದರೆ ಅದು ಆಲುºಟರಾಲ್‌ ಅಥವಾ ಸಾಲುಟಮಾಲ್‌

12. ಆಸ್ತಮಾ ಕಾಯಿಲೆಗೆ ಚಿಕಿತ್ಸೆ  ನೀಡುವ "ಸ್ಟೆಪ್‌ವೈಸ್‌ ಅಪ್ರೋಚ್‌' ಎಂದರೇನು?
"ಸ್ಟೆಪ್‌ವೈಸ್‌ ಅಪ್ರೋಚ್‌' ಎಂದು ತಾವು ಕರೆಯುವ ಚಿಕಿತ್ಸಾ ವಿಧಾನವೊಂದನ್ನು ಆಸ್ತಮಾ ಕಾಯಿಲೆಗೆ ಚಿಕಿತ್ಸೆ ನೀಡಲು ವೈದ್ಯರು ಅವಲಂಬಿಸುತ್ತಾರೆ. ನಿಮ್ಮ ಸಾಮಾನ್ಯ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾಗಲೂ ಆಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಸ್ವಲ್ಪ ಕಾಲದವರೆಗೆ ನೀವು ಹೆಚ್ಚು ಪ್ರಮಾಣದ ಔಷಧವನ್ನು ಅಥವಾ ಹೆಚ್ಚುವರಿ ಔಷಧಿಯನ್ನು ತೆಗೆದುಕೊಳ್ಳಬೇಕಾಗಬಹುದು. ಇದನ್ನು "ಸ್ಟೆಪಿಂಗ್‌ ಅಪ್‌'  ಎನ್ನಲಾಗುತ್ತದೆ. ಇದರರ್ಥ ನೀವು ಯಾವಾಗಲೂ ಹೆಚ್ಚು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ ಎಂದಲ್ಲ. ಒಮ್ಮೆ ನಿಮ್ಮ ಆಸ್ತಮಾ ನಿಯಂತ್ರಣಕ್ಕೆ ಬಂದ ಕೂಡಲೇ ವೈದ್ಯರು ನಿಮ್ಮ ಚಿಕಿತ್ಸೆಯನ್ನು "ಸ್ಟೆಪ್‌ ಡೌನ್‌' ಮಾಡುತ್ತಾರೆ. ನಿಮ್ಮ ಆಸ್ತಮಾ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಮತ್ತು ಅವುಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನಿಮ್ಮ ವೈದ್ಯರು ಯಾವಾಗಲೂ ಅತಿ ಕಡಿಮೆ ಪ್ರಮಾಣದಲ್ಲಿ ಔಷಧಿಗಳನ್ನು ನೀಡುವುದಕ್ಕಾಗಿ ಪ್ರಯತ್ನಿಸುತ್ತಾರೆ. ಔಷಧಿಯ ಪ್ರಮಾಣ ಕಡಿಮೆ ಇದ್ದಷ್ಟೂ ನಿಮಗೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಕಡಿಮೆ.

13. ನನಗೆ ಆಸ್ತಮಾ ಲಕ್ಷಣಗಳಷ್ಟೇ ಇದ್ದಾಗ ವೈದ್ಯರನ್ನು ಸಂಪರ್ಕಿಸಬೇಕೇ?
ನಿಮ್ಮ ಆಸ್ತಮಾ ಸಾಕಷ್ಟು ನಿಯಂತ್ರಣದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಹಾಗೂ ಭವಿಷ್ಯದ ಆಸ್ತಮಾ ನಿರ್ವಹಣೆ ಮತ್ತು ಔಷಧಿಗಳ ವಿಚಾರವಾಗಿ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಿ ಸಮಾಲೋಚಿಸುವುದು ಒಳಿತು. ನಿಮ್ಮ ವೈದ್ಯರು ಮನೆಯಲ್ಲಿ ಅಥವಾ ಅವರ ಕ್ಲಿನಿಕ್‌ನಲ್ಲಿ ಪಿಇಎಫ್ಆರ್‌ ಮೀಟರ್‌ (ಪೀಕ್‌ ಎಕ್ಸ್‌ಪಿರೇಟರಿ ಫ್ಲೋ ಮೀಟರ್‌ ಎಂಬುದರ ಹ್ರಸ್ವ ರೂಪ ಪಿಇಎಫ್ಆರ್‌) ಎಂಬ ಉಪಕರಣದಿಂದ ನಿಮ್ಮ ಉಸಿರಾಟವನ್ನು ಪರೀಕ್ಷಿಸಬಹುದು. ನೀವು ಎಷ್ಟು ಕ್ಷಿಪ್ರವಾಗಿ ಉಸಿರನ್ನು ಹೊರಗೆಡಹಬಲ್ಲಿರಿ ಎಂದು ಈ ಸಾಧನ ಅಳೆಯುತ್ತದೆ. ನಿಮ್ಮ ಆಸ್ತಮಾ ಸಾಕಷ್ಟು ನಿಯಂತ್ರಣದಲ್ಲಿ ಇಲ್ಲದಾಗ ನೀವು ಸಹಜ ಸ್ಥಿತಿಯಷ್ಟು ಪ್ರಮಾಣದಲ್ಲಿ ಉಸಿರನ್ನು ಹೊರಗೆಡಹಲಾರಿರಿ. ನಿಮಗೆ ಆಸ್ತಮಾ ಲಕ್ಷಣಗಳು ಇಲ್ಲದೆ ಇದ್ದರೂ ಪಿಇಎಫ್ಆರ್‌ ಉಪಕರಣವನ್ನು ಉಪಯೋಗಿಸಿ ನಿಮ್ಮ ಆಸ್ತಮಾ ಎಷ್ಟು ನಿಯಂತ್ರಣದಲ್ಲಿ ಇದೆ ಎಂಬುದನ್ನು ಪರೀಕ್ಷಿಸಬಹುದು. 

14. ಆಸ್ತಮಾಕ್ಕೆ ಚಿಕಿತ್ಸೆ ನೀಡಲು ಉಪಯೋಗಿಸುವ ವಿವಿಧ ಬಗೆಯ ಔಷಧಿಗಳು ಯಾವುವು?
ಬಾಯಿಯ ಮೂಲಕ ಹೊಟ್ಟೆಗೆ ತೆಗೆದುಕೊಳ್ಳುವ ಔಷಧಿಗಳು ಇದ್ದರೂ ಆಸ್ತಮಾ ಚಿಕಿತ್ಸೆಗೆ ಉಸಿರೌಷಧ (ಇನ್‌ಹೆಲೇಶನ್‌) ಚಿಕಿತ್ಸಾ ವಿಧಾನವನ್ನು ಹೆಚ್ಚು ಆದ್ಯತೆಯಿಂದ ಶಿಫಾರಸು ಮಾಡಲಾಗುತ್ತದೆ. ಏಕೆಂದರೆ, ಇವು ಚಿಕಿತ್ಸೆಗೆ ಒಳಗಾಗುವ ಸ್ಥಳವನ್ನು ಮುಟ್ಟುವಂಥವು ಮತ್ತು ಮೈಕ್ರೊಗ್ರಾಂಗಳಲ್ಲಿ, ಅತಿ ಅಲ್ಪ ಪ್ರಮಾಣದ ಔಷಧಿ ಬಳಸುವುದರಿಂದ ಅಡ್ಡ ಪರಿಣಾಮಗಳು ಕಡಿಮೆ. 

ಉಸಿರೌಷಧಗಳ ವಿಧಗಳು:
1. ಶಮನಕಾರಿ ಔಷಧಗಳು
: ಆಸ್ತಮಾ ಲಕ್ಷಣಗಳು ಕಂಡುಬಂದಾಗ ಈ ಶೀಘ್ರ ಶಮನಕಾರಿ ಉಸಿರೌಷಧಗಳು ಸಹಾಯ ಮಾಡುತ್ತವೆ. ಸಾಲುºಟಮಾಲ್‌ ಅಥವಾ ಅಲುಟರಾಲ್‌ ಅಥವಾ ಟಬುìಟಾಲೈನ್‌ ಎಂಬ ಹೆಸರುಳ್ಳ ಇವುಗಳಲ್ಲಿ ಕ್ಷಿಪ್ರವಾಗಿ ಕಾರ್ಯವೆಸಗುವ ಬೇಟಾ - 2 ಅಗೊನಿಸ್ಟ್‌ ಎಂಬ ಒಂದು ವಿಧದ ಔಷಧವಿರುತ್ತದೆ. ನಿಮ್ಮ ಉಸಿರೌಷಧಿ ಅಥವಾ ಇನ್‌ಹೇಲರನ್ನು ನೀವು ಯಾವಾಗಲೂ ನಿಮ್ಮ ಜತೆಗೆ ಇರಿಸಿಕೊಳ್ಳಬೇಕು. ವಾರಕ್ಕೆ ಎರಡು ಬಾರಿ ಅಥವಾ ಅದಕ್ಕಿಂತ ಕಡಿಮೆ ಬಾರಿ ಅಥವಾ ವ್ಯಾಯಾಮ ನಡೆಸಿದಾಗ ಮಾತ್ರ ಮತ್ತು ರಾತ್ರಿಕಾಲದಲ್ಲಿ ಲಕ್ಷಣಗಳು ಇಲ್ಲದಿದ್ದರೆ ಉಸಿರೌಷಧಿಯಷ್ಟೇ ನಿಮಗೆ ಅಗತ್ಯವಾಗಿರುವ ಔಷಧ. 
2. ನಿಯಂತ್ರಕ ಔಷಧಿಗಳು: ನಿಮಗೆ ಆಗಾಗ ಆಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ, ರಾತ್ರಿ ಕಾಲದಲ್ಲಿ ಉಂಟಾಗುತ್ತಿದ್ದರೆ ಮತ್ತು ಆಸ್ತಮಾ ಆಕ್ರಮಣ ಆಗುತ್ತಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಮಾಲೋಚಿಸಿದ ಬಳಿಕ ನಿಯಂತ್ರಕ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಬಹುದು. ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಆಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮ ವೈದ್ಯರು ಆಸ್ತಮಾ ಲಕ್ಷಣಗಳನ್ನು ತಡೆಯಲು ಚಿಕಿತ್ಸೆಯನ್ನು ಶಿಫಾರಸು ಮಾಡಬಹುದು. ದೀರ್ಘಾವಧಿ ಪರಿಣಾಮ ಬೀರುವ ಬೇಟಾ 2 ಅಗೊನಿಸ್ಟ್‌ ಸಹಿತವಾದ ಅಥವಾ ಇಲ್ಲದೆ ಇರುವ ಸ್ಟೀರಾಯ್ಡ ಉಸಿರೌಷಧಿ ಅತ್ಯುತ್ತಮ ನಿಯಂತ್ರಕ ಚಿಕಿತ್ಸೆಯಾಗಿದೆ. ಇವು ಉರಿಯೂತವನ್ನು ಕಡಿಮೆ ಮಾಡಲು ನಮ್ಮ ದೇಹ ಉತ್ಪತ್ತಿ ಮಾಡುವ ರಾಸಾಯನಿಕಗಳಿಗೆ ಸರಿಸಮಾನವಾದ ಕಾರ್ಟಿಕೊಸ್ಟಿರಾಯ್ಡ ಗಳಾಗಿವೆ. ಆಸ್ತಮಾ ಲಕ್ಷಣ (ವ್ಯಾಯಾಮದಿಂದ ಉಂಟಾದವುಗಳ ಸಹಿತ) ಗಳನ್ನು ತಡೆಯಲು, ಚೆನ್ನಾಗಿ ನಿದ್ದೆ ಬರಲು (ಆಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳದೆ ಇರುವುದರಿಂದ ಸರಿಯಾಗಿ ನಿದ್ರೆ ಬರುತ್ತದೆ) ಹಾಗೂ ಶೀಘ್ರ ಶಮನಕಾರಿ ಉಸಿರೌಷಧದ ಬಳಕೆಯ ಅಗತ್ಯವನ್ನು ಕಡಿಮೆ ಮಾಡಲು ಸ್ಟೀರಾಯ್ಡ ಉಸಿರೌಷಧಗಳು ಸಹಾಯ ಮಾಡುತ್ತವೆ ಎಂಬ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. 

15. ಲಕ್ಷಣಗಳು ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಎರಡೂ ಬಗೆಯ ಔಷಧಗಳನ್ನು ಜತೆಗಿರಿಸಿಕೊಳ್ಳಬೇಕೇ?
ಆಸ್ತಮಾ ಉಂಟಾದ ಬಳಿಕ ಅದನ್ನು ನಿಲ್ಲಿಸಲು ಸ್ಟೀರಾಯ್ಡ ಉಸಿರೌಷಧಗಳು ಸಹಾಯ ಮಾಡುವುದಿಲ್ಲ. ಅವು ಬಹಳ ನಿಧಾನವಾಗಿ ಕೆಲಸ ಮಾಡುತ್ತವೆ. ಆಸ್ತಮಾ ಲಕ್ಷಣಗಳು ಕಾಣಿಸಿಕೊಂಡಾಗ ನೀವು ಶೀಘ್ರ ಶಮನಕಾರಿ ಉಸಿರೌಷಧಗಳನ್ನು ಉಪಯೋಗಿಸಲೇ ಬೇಕು. ಸ್ಟೀರಾಯ್ಡ ಉಸಿರೌಷಧಗಳು ದೀರ್ಘ‌ಕಾಲಿಕವಾಗಿ ಆಸ್ತಮಾ ಲಕ್ಷಣಗಳನ್ನು ತಡೆಯುವ ಉದ್ದೇಶ ಹೊಂದಿರುವಂಥವು. 

16. ಔಷಧಗಳ ಸಂಭಾವ್ಯ 
ಅಡ್ಡ ಪರಿಣಾಮಗಳೇನು?

ಶೀಘ್ರ ಪರಿಣಾಮದ ಉಸಿರೌಷಧಗಳು ಸಾಮಾನ್ಯವಾಗಿ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಆದರೆ ನಿಮಗೆ, ವಿಶೇಷವಾಗಿ ನಿಮ್ಮ ಕೈಗಳು ಲಘುವಾಗಿ ಕಂಪಿಸಿದ ಅಥವಾ ನಡುಗುವ ಅನುಭವ ಉಂಟಾಗಬಹುದು. ಈ ನಡುಕ ಸಮಸ್ಯೆ ಉಂಟುಮಾಡುವಷ್ಟು ಇದ್ದರೆ ತಾತ್ಕಾಲಿಕವಾಗಿ ಔಷಧವನ್ನು ನಿಲ್ಲಿಸಬೇಕಾಗಬಹುದು ಅಥವಾ ಬದಲಾಯಿಸಬೇಕಾಗಬಹುದು. 

ಸ್ಟಿರಾಯ್ಡ ಇನ್‌ಹೇಲರ್‌ನ ಸಂಭಾವ್ಯ ಅಡ್ಡ ಪರಿಣಾಮಗಳಲ್ಲಿ ಗಂಟಲು ಕಟ್ಟುವಿಕೆ, ಒಡೆದ ಧ್ವನಿ ಮತ್ತು ಬಾಯಿ ಅಥವಾ ಗಂಟಲಿನಲ್ಲಿ ಸೋಂಕು ಸೇರಿವೆ. ಆದರೆ ಎಲ್ಲರಿಗೂ ಈ ಸಮಸ್ಯೆ ಉಂಟಾಗಬೇಕು ಎಂದೇನಿಲ್ಲ. ಸ್ಟೀರಾಯ್ಡ ಇನ್‌ಹೇಲರ್‌ ಉಪಯೋಗಿಸಿದ ಬಳಿಕ ನೀರಿನಲ್ಲಿ ಬಾಯಿ ಮುಕ್ಕಳಿಸುವ ಮೂಲಕ ಈ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು. ದೀರ್ಘ‌ಕಾಲಿಕವಾಗಿ ಅತ್ಯಂತ ಕಡಿಮೆ ಪ್ರಮಾಣದ ಔಷಧವನ್ನು ಬಳಸುವುದರಿಂದ ಸ್ಟೀರಾಯ್ಡನಿಂದ ಉಂಟಾಗುವ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವ ಸಂಭವ ಇಲ್ಲ. 

17. ಆಸ್ತಮಾ ಇನ್‌ಹೇಲರ್‌ನ ವಿವಿಧ ವಿಧಗಳಾವುವು?
ಶಮನಕಾರಿ ಮತ್ತು ನಿಯಂತ್ರಕ ಔಷಧಿಗಳೆರಡನ್ನೂ ಇನ್‌ಹೇಲರ್‌ ಎಂಬ ಕಿರು ಸಾಧನದ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ. ವಿವಿಧ ಬಗೆಯ ಇನ್‌ಹೇಲರ್‌ಗಳಿವೆ. ಬಹು ಸಾಮಾನ್ಯವಾದ ವಿಧವೆಂದರೆ, ಮೀಟರ್‌ -ಡೋಸ್‌ ಇನ್‌ಹೇಲರ್‌ (ಸಂಕ್ಷಿಪ್ತವಾಗಿ ಎಂಡಿಐ ಎಂದು ಕರೆಯುತ್ತಾರೆ). ಡ್ರೈ ಪೌಡರ್‌ ಇನ್‌ಹೇಲರ್‌ (ಸಂಕ್ಷಿಪ್ತವಾಗಿ ಡಿಪಿಐ) ಎಂಬುದು ಇನ್ನೊಂದು ಸಾಮಾನ್ಯ ವಿಧ. 

- ಮುಂದಿನ ವಾರಕ್ಕೆ  

Trending videos

Back to Top