CONNECT WITH US  

ಐಬಿಡಿ ಸಂಕೀರ್ಣ ಸಮಸ್ಯೆಗಳು

( ಹಿಂದಿನ  ವಾರದಿಂದ  )- ಅಲ್ಸರೇಟಿವ್‌ ಕೊಲೈಟಿಸ್‌ನ ಸಂಕೀರ್ಣ ಸಮಸ್ಯೆಗಳಲ್ಲಿ ಇವು ಸೇರಿವೆ:ತೀವ್ರವಾದ, ಸತತ ಭೇದಿ, ಗುದನಾಳದಲ್ಲಿ ರಕ್ತಸ್ರಾವ ಮತ್ತು ನೋವುರಂಧ್ರಗೊಂಡ ಕರುಳು - ಕರುಳಿನ ದೀರ್ಘ‌ಕಾಲಿಕ ಉರಿಯೂತವು ಕರುಳಿನ ಒಳಭಿತ್ತಿಯನ್ನು ತೀವ್ರವಾಗಿ ಹಾನಿಗೀಡು ಮಾಡಿ ರಂಧ್ರಗಳುಂಟಾಗುವಂತೆ ಮಾಡಬಹುದು.

- ದೊಡ್ಡ ಕರುಳಿನ ವಿಷಪೂರಿತ ಬಾವು - ದೊಡ್ಡ ಕರುಳಿನ ಕ್ಷಿಪ್ರ ಹಿಗ್ಗುವಿಕೆಗೆ ಕಾರಣವಾಗುವ ತೀವ್ರ ಸ್ವರೂಪದ ಉರಿಯೂತ

1. ಈ ಕಾಯಿಲೆಯನ್ನು ಪತ್ತೆ ಮಾಡುವುದು ಹೇಗೆ?
ನಿಮ್ಮ ವೈದ್ಯರ ಮೂಲಕ ಈ ಕಾಯಿಲೆಯನ್ನು ಸಮರ್ಪಕವಾಗಿ ಪತ್ತೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ರೋಗ ಪತ್ತೆಗಾಗಿ ಈ ಕ್ಷೇತ್ರದಲ್ಲಿ ತಜ್ಞ ವೈದ್ಯರಾದ ಗ್ಯಾಸ್ಟ್ರೊಎಂಟ್ರಾಲಜಿಸ್ಟ್‌ ಅವರನ್ನು ಸಂಪರ್ಕಿಸಬೇಕಾಗಬಹುದು. ಉರಿಯೂತದ ಚಿಹ್ನೆಗಳು ಅಥವಾ ಕೆಂಪು ರಕ್ತ ಕಣಗಳ ಪ್ರಮಾಣ ಕಡಿಮೆಯಾಗಿದೆಯೇ (ರಕ್ತ ಹೀನತೆ) ಎಂದು ತಿಳಿಯಲು ರಕ್ತ ಪರೀಕ್ಷೆಗಳನ್ನು ನಡೆಸಬೇಕಾಗಬಹುದು. ಮಲ ಪರೀಕ್ಷೆ ಬಹಳ ಮಹತ್ವದ್ದಾಗಿದ್ದು, ನಿಮ್ಮ ರೋಗಲಕ್ಷಣಗಳು ಉರಿಯೂತದಿಂದ ಉಂಟಾಗಿವೆಯೇ ಅಥವಾ ಸೋಂಕಿನಿಂದ ಉಂಟಾಗಿವೆಯೇ ಎಂಬುದನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. 

ಇತರ ತೊಂದರೆಗಳ ಸಾಧ್ಯತೆಗಳನ್ನು ಬದಿಗೆ ಸರಿಸಿ ರೋಗಪತ್ತೆಯನ್ನು ಸಂಶಯಕ್ಕೆಡೆ ಇಲ್ಲದಂತೆ ನಡೆಸಲು ದೊಡ್ಡ ಕರುಳಿನ ಒಳಭಾಗವನ್ನು ವೀಕ್ಷಿಸುವುದು ಅತ್ಯಂತ ನಿಖರವಾದ ವಿಧಾನ. ಒಂದು ಕೊನೆಯಲ್ಲಿ ಬೆಳಕು ಮತ್ತು ಸೂಕ್ಷ್ಮ ಕೆಮರಾ ಹೊಂದಿರುವ ಮೃದು ಮತ್ತು ಸಪೂರವಾದ ಕೊಳವೆಯ ಮೂಲಕ ಇದನ್ನು ನಡೆಸಲಾಗುತ್ತದೆ. ಈ ಉಪಕರಣವನ್ನು ಗುದದ್ವಾರದ ಮೂಲಕ ಒಳ ಕಳುಹಿಸಿ ದೊಡ್ಡ ಕರುಳಿನ ಒಳಕ್ಕೆ ಸೇರಿಸಲಾಗುತ್ತದೆ. ಇದನ್ನು ಕೊಲೊನೊಸ್ಕೊಪಿ ಎಂದು ಕರೆಯುತ್ತಾರೆ. ದೊಡ್ಡ ಕರುಳಿನ ಒಳಗನ್ನು ವೀಕ್ಷಿಸಲು ನಡೆಸಲಾಗುವ ಎರಡು ಸಾಮಾನ್ಯ ತಪಾಸಣೆಗಳಿವೆ. 

ಕೊಲೊನೊಸ್ಕೊಪಿಯ ಮೂಲಕ ಗುದನಾಳ ಮತ್ತು ಸಂಪೂರ್ಣ ದೊಡ್ಡ ಕರುಳನ್ನು ತಪಾಸಿಸಬಹುದಾಗಿದೆ. ಇನ್ನೊಂದು ವಿಧಾನವಾಗಿರುವ ಸಿಗ್ಮಾಯೊxಗ್ರಫಿಯಲ್ಲಿ, ಗುದನಾಳ ಮತ್ತು ಕರುಳಿನ ಕೆಳಭಾಗಗಳನ್ನು ತಪಾಸಿಸಬಹುದು. ಸೂಕ್ಷ್ಮದರ್ಶಕ ಪರೀಕ್ಷೆಗಾಗಿ ಜೀವಕೋಶಗಳ ಸೂಕ್ಷ್ಮ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಬಯಾಪ್ಸಿ ಎಂದು ಕರೆಯುತ್ತಾರೆ. 

ಚಿಕಿತ್ಸೆ
ಐಬಿಡಿಯಿಂದ ಬಳಲುತ್ತಿರುವ ಸರ್ವರಿಗೂ ನೀಡಬಹುದಾದ ಸಾರಾಸಗಟು ಚಿಕಿತ್ಸಾ ವಿಧಾನ ಎಂಬುದಿಲ್ಲ. ವ್ಯಕ್ತಿಯನ್ನು ಆಧರಿಸಿ ಚಿಕಿತ್ಸಾ ವಿಧಾನವನ್ನು ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ. ಚಿಕಿತ್ಸಾ ವಿಧಾನವನ್ನು ನಿರ್ಧರಿಸುವ ಅಂಶಗಳು ಹೀಗಿವೆ:
- ವೈದ್ಯಕೀಯ ಚಿಕಿತ್ಸೆ
- ಚಿಕಿತ್ಸೆ ನೀಡುವ ಔಷಧಿಗಳಲ್ಲಿ ನಾಲ್ಕು ಮುಖ್ಯ ವರ್ಗಗಳಿವೆ:
ಅಮೈನೊಸಾಲಿಸೈಲೇಟ್‌ಗಳು, ಕಾರ್ಟಿಕೊಸ್ಟೀರಾಯ್ಡಗಳು, ಇಮ್ಯುನೊಮಾಡ್ಯುಲೇಟರ್‌ಗಳು, ಬಯಾಲಾಜಿಕ್‌ ಚಿಕಿತ್ಸಾ ಕ್ರಮಗಳು

ಶಸ್ತ್ರಚಿಕಿತ್ಸೆ
ವೈದ್ಯಕೀಯ ಚಿಕಿತ್ಸೆ ಕಾಯಿಲೆಯನ್ನು ಗುಣಪಡಿಸಲು ವಿಫ‌ಲವಾಗಿ ಸಂಕೀರ್ಣ ಸಮಸ್ಯೆಗಳು ಪುನರಪಿ ಕಾಣಿಸಿಕೊಂಡರೆ ವೈದ್ಯರು ಶಸ್ತ್ರಚಿಕಿತ್ಸೆಯ ಆಯ್ಕೆಯನ್ನು ಪರಿಗಣಿಸುತ್ತಾರೆ. 

ವರ್ಜಿಸಬೇಕಾದ ಆಹಾರ ಯಾವುದು?
ನೀವು ಸೇವಿಸುವ ಆಹಾರ ಮತ್ತು ನಿಮಗಾಗುವ ಹಿತಾನುಭವ -ಇವುಗಳೆರಡರ ನಡುವಣ ಸಂಬಂಧ ಬಹಳ ಸಂಕೀರ್ಣವಾದದ್ದು. ಆಹಾರ ನಿಯಂತ್ರಣ ಅಥವಾ ಡಯಟ್‌ ಅಲ್ಸರೇಟಿವ್‌ ಕೊಲೈಟಿಸ್‌ ಉಂಟಾಗಲು ಕಾರಣವಾಗದು ಎಂಬ ಭಾವನೆ ಇದ್ದರೂ ವಿಭಿನ್ನ ಆಹಾರವಸ್ತುಗಳಿಗೆ ಜನರು ಪ್ರತಿಕ್ರಿಯಿಸುವ ಬಗೆಯೂ ಭಿನ್ನಭಿನ್ನವಾಗಿರುತ್ತದೆ. ಕೆಲವು ನಿರ್ದಿಷ್ಟ ಆಹಾರಗಳ ಬಗ್ಗೆ ಕೆಲವರು ಸೂಕ್ಷ್ಮ ಸಂವೇದಿಗಳಾಗಿರಬಹುದು ಅಥವಾ ಅವು ಅಲರ್ಜಿ ಉಂಟು ಮಾಡಬಹುದು, ಪರಿಣಾಮವಾಗಿ ಅಲ್ಸರೇಟಿವ್‌ ಕೊಲೈಟಿಸ್‌ನಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಕೆಲವು ಆಹಾರಗಳು ನಿಮ್ಮ ರೋಗ ಲಕ್ಷಣಗಳು ಉಲ್ಬಣಿಸಲು ಕಾರಣವಾಗಬಹುದಾದರೆ ಕೆಲವು ಆಹಾರ ಬದಲಾವಣೆಗಳು ರೋಗ ಲಕ್ಷಣಗಳನ್ನು ತಗ್ಗಿಸಲು ಸಹಾಯಕವಾಗಬಹುದು. ಅನುದಿನವೂ ನೀವು ಏನನ್ನು ಸೇವಿಸುತ್ತೀರಿ ಅನ್ನುವುದನ್ನು ದಾಖಲಿಸಿ ಇರಿಸಿಕೊಂಡರೆ ನಿಮ್ಮ ರೋಗ ಲಕ್ಷಣಗಳನ್ನು ತೀವ್ರಗೊಳಿಸುವ ಆಹಾರ ಅಥವಾ ಪಾನೀಯಗಳು ಯಾವುವು ಎಂಬುದನ್ನು ಖಚಿತವಾಗಿ ಗುರುತಿಸಲು ಸಹಾಯವಾಗುತ್ತದೆ. 

ಆರೋಗ್ಯಯುತ ಆಹಾರಾಭ್ಯಾಸದ ಭಾಗ ಎಂದು ಪರಿಗಣಿತವಾದ ಆಹಾರಗಳು:
- ತರಕಾರಿಗಳು
- ಹಣ್ಣುಹಂಪಲು
- ಇಡೀ ಧಾನ್ಯಗಳು
- ಕೊಬ್ಬು ಮುಕ್ತ ಅಥವಾ ಕಡಿಮೆ ಪ್ರಮಾಣದಲ್ಲಿರುವ ಹೈನು ಉತ್ಪನ್ನಗಳು (ನೀವು ಲ್ಯಾಕ್ಟೋಸ್‌ ಅಸಹಿಷ್ಣುಗಳಾಗಿದ್ದರೆ ಅಥವಾ ನಿಮಗೆ ಹೈನು ಉತ್ಪನ್ನಗಳನ್ನು ಸೇವಿಸಿದ ಬಳಿಕ ಭೇದಿ ಉಂಟಾಗುತ್ತಿದ್ದರೆ ಲ್ಯಾಕ್ಟೋಸ್‌ ಇರುವ ಆಹಾರಗಳನ್ನು ವರ್ಜಿಸಬೇಕು)
- ಸಮುದ್ರ ಆಹಾರ
- ಹೆಚ್ಚು ಕೊಬ್ಬಿಲ್ಲದ ಮಾಂಸ ಮತ್ತು ಕೋಳಿಮಾಂಸ
- ಮೊಟ್ಟೆಗಳು
- ಬೀನ್ಸ್‌ ಮತ್ತು ಬಟಾಣಿ ಇತ್ಯಾದಿ ಕಾಳುಗಳು
- ಬೀಜಗಳು
- ಆಹಾರಗಳನ್ನು ಸಣ್ಣ ಸಣ್ಣ ಪ್ರಮಾಣಗಳಲ್ಲಿ ಸೇವಿಸಿ
- ಹೆಚ್ಚು ನಾರಿನಂಶ ಇರುವ ಆಹಾರಗಳ ಸೇವನೆಯನ್ನು ಮಿತಗೊಳಿಸಿ ಅದರ ಬದಲು ಉಗಿಯಲ್ಲಿ ಬೇಯಿಸಿದ ತರಕಾರಿ ಅಥವಾ ಹಣ್ಣುಗಳನ್ನು ಸೇವಿಸಿ. 
- ಸಾಕಷ್ಟು ನೀರು ಕುಡಿಯಿರಿ- ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯುವುದರಿಂದ ನಿರ್ಜಲೀಕರಣವನ್ನು ತಪ್ಪಿಸಬಹುದು. 

ಕಾಯಿಲೆ ಇದೆ ಎಂದುಕೊಂಡು ಪೌಷ್ಟಿಕ ಆಹಾರ ಸೇವನೆಯಿಂದ ನಿಮ್ಮನ್ನು ನೀವೇ ವಿಮುಖರನ್ನಾಗಿಸಬೇಡಿ, ಅದರಿಂದ ಒಳ್ಳೆಯದರ ಬದಲು ಕೆಟ್ಟದ್ದೇ ಆಗುತ್ತದೆ. ಯಾವ ಆಹಾರವಸ್ತುಗಳನ್ನು ವರ್ಜಿಸಬೇಕು ಎನ್ನುವ ವಿಚಾರದಲ್ಲಿ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆಗೆ ಸಮಾಲೋಚಿಸಿ.

2. ರೋಗಿಯಿಂದ ನಿರೀಕ್ಷಿಸಬಹುದಾದದ್ದೇನು?
- ಸರಿಯಾದ ತಜ್ಞ ವೈದ್ಯರನ್ನು ಸಂಪರ್ಕಿಸುವುದು
- ವೈದ್ಯರು ಸಲಹೆ ನೀಡಿದಂತೆ ನಿಯಮಿತವಾಗಿ ಪುನರ್‌ ಸಮಾಲೋಚನೆ ನಡೆಸುವುದು, ನಿಗಾ ವಹಿಸುವುದು
- ವೈದ್ಯರು ಶಿಫಾರಸು ಮಾಡಿರುವಂತೆ ಔಷಧಿ ಸೇವನೆಯನ್ನು ಮುಂದುವರಿಸುವುದು
- ಇದೊಂದು ದೀರ್ಘ‌ಕಾಲಿಕ ಆರೋಗ್ಯ ಸಮಸ್ಯೆಯಾಗಿದ್ದು, ಚಿಕಿತ್ಸೆಯೂ ಸಾಕಷ್ಟು ಸಮಯ ನಡೆಯುವುದು ಅಗತ್ಯ ಅನ್ನುವುದನ್ನು ಅರಿತುಕೊಳ್ಳುವುದು.
- ಔಷಧಿಗಳು ಪ್ರತಿಕ್ರಿಯೆ ತೋರಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು. 

3. ನಿಯಮಿತ ಭೇಟಿಗಳಲ್ಲದೆ, ಯಾವಾಗ ಹೆಚ್ಚುವರಿಯಾಗಿ ವೈದ್ಯರನ್ನು ಸಂಪರ್ಕಿಬೇಕು?
-ಗುದನಾಳದಿಂದ ತೀವ್ರ 
 ರಕ್ತಸ್ರಾವ ಉಂಟಾದಾಗ
- ತೀವ್ರ ಮಲಬದ್ಧತೆ ಕಂಡುಬಂದರೆ
- ಹೊಟ್ಟೆ ನೋವು ಕಾಣಿಸಿಕೊಂಡರೆ
- ಜ್ವರ ಬಂದರೆ

ಕ್ರಾನ್ಸ್‌ ಡಿಸೀಸ್‌ನ ಸಂಕೀರ್ಣ ಸಮಸ್ಯೆಗಳು ಹೀಗಿವೆ 
- ಮೂಲವ್ಯಾಧಿ
- ನಾಳ ಸಂಕೋಚನೆ
- ಕರುಳಿನಿಂದ ಆಚೆಗಿನ ಸಂಕೀರ್ಣ ಸಮಸ್ಯೆಗಳು: ಇವು - 
- ಕಣ್ಣು (ಕೆಂಪಾಗುವಿಕೆ, ನೋವು ಮತ್ತು ತುರಿಕೆ)
- ಬಾಯಿಹುಣ್ಣು
- ಸಂದುಗಳು (ಬಾವು ಮತ್ತು ನೋವು)
- ಚರ್ಮ (ಮೃದು ಬಾವುಗಳು, ನೋವುಸಹಿತ ವ್ರಣಗಳು ಮತ್ತು ಇತರ ತುರಿಕೆ/ದದ್ದುಗಳು)
- ಎಲುಬುಗಳು (ಆಸ್ಟಿಯೊಪೊರೊಸಿಸ್‌)
- ಮೂತ್ರಪಿಂಡ (ಕಲ್ಲುಗಳು)
- ಪಿತ್ತಜನಕಾಂಗ (ಪ್ರೈಮರಿ ಸ್ಕೆರೋಸಿಂಗ್‌ ಕೊಲಾಂಗೈಟಿಸ್‌, ಹೆಪಟೈಟಿಸ್‌ ಮತ್ತು ಸಿರೋಸಿಸ್‌) - ಅಪರೂಪಕ್ಕೆ ಉಂಟಾಗುತ್ತದೆ.
ರಂಧ್ರಗೊಂಡ ಕರುಳು - ಕರುಳಿನ ದೀರ್ಘ‌ಕಾಲಿಕ ಉರಿಯೂತವು ಕರುಳಿನ ಒಳಭಿತ್ತಿಯನ್ನು ತೀವ್ರವಾಗಿ ಹಾನಿಗೀಡು ಮಾಡಿ ರಂಧ್ರಗಳುಂಟಾಗುವಂತೆ ಮಾಡಬಹುದು.
- ವಿಟಮಿನ್‌ಗಳು ಮತ್ತು ಖನಿಜಾಂಶಗಳ ಕೊರತೆಯ ಸಹಿತ ಅಸಂಪೂರ್ಣ ಹೀರಿಕೆ ಮತ್ತು ಅಪೌಷ್ಟಿಕತೆ.


Trending videos

Back to Top