CONNECT WITH US  

ಆ್ಯಂಟಿಬಾಡಿ ಸಿಂಡ್ರೋಮ್‌

ಹಿಂದಿನ ವಾರದಿಂದ- ಎಪಿಎಸ್‌ ಚಿಕಿತ್ಸೆ ಎಪಿಎಸ್‌ ಗುಣ ಹೊಂದುವುದಿಲ್ಲ, ಆದರೆ ಚಿಕಿತ್ಸೆ ಇದ್ದೇ ಇದೆ. ಎಪಿಎಸ್‌ಗೆ ತುತ್ತಾಗಿ ರಕ್ತ ಹೆಪ್ಪುಗಟ್ಟುವಿಕೆ ಹೊಂದಿರುವ ರೋಗಿಗೆ ಆ್ಯಂಟಿಕೊಆ್ಯಗ್ಯುಲಂಟ್‌ ಥೆರಪಿಯು ಚಿಕಿತ್ಸೆಯ ಆಯ್ಕೆಯಾಗಿದೆ. ಇದು ಇನ್ನಷ್ಟು ಹೆಪ್ಪುಗಟ್ಟುವಿಕೆ ಉಂಟಾಗುವುದನ್ನು ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಎಪಿಎಸ್‌ಗೆ ತುತ್ತಾಗಿದ್ದು, ಪದೇಪದೇ ಗರ್ಭಸ್ರಾವ ಉಂಟಾಗುತ್ತಿರುವ, ಆದರೆ ಈ ಹಿಂದೆ ರಕ್ತ ಹೆಪ್ಪುಗಟ್ಟಿಲ್ಲದ ಮಹಿಳೆಯರಿಗೆ ಗರ್ಭಧಾರಣೆಯ ಸಂದರ್ಭದಲ್ಲಿ ಆ್ಯಂಟಿಕೊಆ್ಯಗ್ಯುಲಂಟ್‌ ಚಿಕಿತ್ಸೆಯನ್ನು ಒದಗಿಸಿದರೆ ಧನಾತ್ಮಕ ಫ‌ಲಿತಾಂಶ ಒದಗುವ ಸಾಧ್ಯತೆ ಹೆಚ್ಚು. ಕೆಲವರಲ್ಲಿ ಆ್ಯಂಟಿಪಾಸೊ#ಲಿಪಿಡ್‌ ಆ್ಯಂಟಿಬಾಡಿಗಳು ಅತ್ಯಧಿಕ ಪ್ರಮಾಣದಲ್ಲಿ ಇದ್ದರೂ ಯಾವುದೇ ರೋಗಲಕ್ಷಣಗಳು ಗೋಚರಿಸದೆ ಇರಬಹುದು. ಅಂತಹ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಆಸ್ಪಿರಿನ್‌ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ. ಆ್ಯಸ್ಪಿರಿನ್‌ ಔಷಧವು ಪ್ಲೇಟ್ಲೆಟ್‌ಗಳ ಅಂಟುಗುಣವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ತಪ್ಪಿಸುತ್ತದೆ. ಆ್ಯಸ್ಪಿರಿನ್‌ ಎಷ್ಟು ಪ್ರಯೋಜನಕಾರಿ ಮತ್ತು ಕಡಿಮೆ ಪ್ರಮಾಣದ ಆ್ಯಂಟಿಕೊಆಗ್ಯುಲಂಟ್‌ಗಳು ಹೆಚ್ಚು ಪರಿಣಾಮಕಾರಿಯಾಗಬಹುದೇ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ಒಟ್ಟಾರೆಯಾಗಿ, ರಕ್ತ ಹೆಪ್ಪುಗಟ್ಟುವಿಕೆಗೆ ಒಳಗಾದ (ಉದಾಹರಣೆಗೆ ಲಕ್ವಾ, ಹೃದಯಾಘಾತ, ಡಿವಿಟಿ) ಮತ್ತು ಆ್ಯಂಟಿಪಾಸೊಲಿಪಿಡ್‌ ಆ್ಯಂಟಿಬಾಡಿಗಳಿಗೆ ಸತತ ಪಾಸಿಟಿವ್‌ ಪರೀಕ್ಷೆ ಪ್ರದರ್ಶಿಸುತ್ತ ಬಂದಿರುವ ರೋಗಿಗಳನ್ನು ಆ್ಯಂಟಿಕೊಆಗ್ಯುಲಂಟ್‌ಗಳಿಂದ ಅನಿರ್ದಿಷ್ಟವಾಗಿ ಚಿಕಿತ್ಸೆಗೆ ಒಳಪಡಿಸಬೇಕು. ಇಂತಹ ರೋಗಿಗಳಲ್ಲಿ ಆರು ತಿಂಗಳಿನಂತಹ ಒಂದು ನಿರ್ದಿಷ್ಟ ಅವಧಿಯ ಬಳಿಕ ಚಿಕಿತ್ಸೆಯನ್ನು ನಿಲ್ಲಿಸುವುದು ಬಹಳ ಅಪಾಯಕಾರಿಯಾಗಬಹುದು. ರಕ್ತ ಹೆಪ್ಪುಗಟ್ಟುವ ಇತಿಹಾಸ ಹೊಂದಿರುವ ಕೆಲವು ರೋಗಿಗಳಲ್ಲಿ ಆ್ಯಂಟಿಪಾಸೊ#ಲಿಪಿಡ್‌ ಆ್ಯಂಟಿಬಾಡಿಗಳು ಕೆಲವು ಸಮಯದ ಬಳಿಕ ಮಾಯವಾಗಬಹುದು. ಇಂತಹ ಸನ್ನಿವೇಶದಲ್ಲಿ ಆ್ಯಂಟಿಕೊಆಗ್ಯುಲೇಶನ್‌ ನಿಲ್ಲಿಸಿಬಿಡುವುದು ಸುರಕ್ಷಿತವೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಇಂತಹ ರೋಗಿಗಳು ಎಪಿಎಸ್‌ ಚಿಕಿತ್ಸೆಯಲ್ಲಿ ಪರಿಣಿತರಾದ ವೈದ್ಯರ ಜತೆಗೆ ಸಮಾಲೋಚಿಸುವುದು ವಿಹಿತ.  

ಎಪಿಎಸ್‌ ಮತ್ತು ಮಹಿಳೆಯರು
ಎಪಿಎಸ್‌ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಸಂಕೀರ್ಣ ಸಮಸ್ಯೆಗಳು

ಎಪಿಎಸ್‌ ಹೊಂದಿರುವ ಮಹಿಳೆಯರು ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗಬಹುದಾಗಿದೆ. ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ರಿಎಕ್ಲಾಂಪ್ಸಿಯಾಕ್ಕೆ ತುತ್ತಾಗುವ ಸಾಧ್ಯತೆಗಳು ಅಧಿಕವಾಗಿವೆ. ಎಪಿಎಸ್‌ನಲ್ಲಿ ಗರ್ಭ ನಿಲ್ಲುವುದಿಲ್ಲ ಎಂದೇ ತಿಳಿಯಲಾಗಿದೆ, ಏಕೆಂದರೆ ತಾಯಿಮಾಸುವಿನಲ್ಲಿ ರಕ್ತಕರಣೆಗಳು ಉಂಟಾಗಿ ಭ್ರೂಣ ಪೌಷ್ಟಿಕಾಂಶ ಕೊರತೆಯಿಂದ ನರಳುತ್ತದೆ. ಕೆಲವು ಮಹಿಳೆಯರಿಗೆ ಗರ್ಭ ಧರಿಸುವುದಕ್ಕೆ ತೊಂದರೆಯಾಗಬಹುದು; ಇನ್ನು ಕೆಲವರು ಗರ್ಭಸ್ರಾವಕ್ಕೆ ತುತ್ತಾಗಬಹುದು. ತಾಯಿಮಾಸುವಿನಲ್ಲಿ ಉಂಟಾಗುವ ರಕ್ತ ಕರಣೆಯು ಭ್ರೂಣದ ಬೆಳವಣಿಗೆಯಲ್ಲಿ ತೀವ್ರ ಅಪಾಯಗಳನ್ನು, ವೈಕಲ್ಯ, ಅವಧಿಪೂರ್ವ ಜನನ ಅಥವಾ ಗರ್ಭಸ್ರಾವಕ್ಕೆ ಕಾರಣವಾಗಬಹುದು.
   
ಎಪಿಎಸ್‌ ಚಿಕಿತ್ಸೆಯಲ್ಲಿ ನುರಿತಿರುವ ವೈದ್ಯರಿಂದ ಗರ್ಭದ ಚಿಕಿತ್ಸೆ, ಆರೈಕೆ ಮತ್ತು ನಿರಂತರ ನಿಗಾ ಅತ್ಯಗತ್ಯವಾಗಿರುತ್ತದೆ. ಗರ್ಭ ಧರಿಸಿದ ಅವಧಿಯಲ್ಲಿ ವೈದ್ಯರು ಕಡಿಮೆ ಪ್ರಮಾಣದ ಆ್ಯಸ್ಪಿರಿನ್‌ ಮತ್ತು ರಕ್ತವನ್ನು ತೆಳುಗೊಳಿಸುವ ಹೆಪಾರಿನ್‌ ಔಷಧದ ದೈನಿಕ ಇಂಜೆಕ್ಷನ್‌ ಶಿಫಾರಸು ಮಾಡಬಹುದಾಗಿದೆ. ಇದು 1980ರ ಕಾಲಘಟ್ಟಕ್ಕೆ ಹೋಲಿಸಿದರೆ ಗರ್ಭ ಬದುಕುಳಿಯುವ ಸಾಧ್ಯತೆಯನ್ನು ಶೇ.80ಕ್ಕೆ ಹೆಚ್ಚಿಸಿದೆ. 1980ರ ಸಮಯದಲ್ಲಿ ಬದುಕುಳಿಯುವ ಪ್ರಮಾಣ ಕೇವಲ ಶೇ.20ರಷ್ಟು ಇತ್ತು. ಈ ಚಿಕಿತ್ಸೆಯನ್ನು ಗರ್ಭ ಧರಿಸಿದ ಆರಂಭದಿಂದ ಶಿಶು ಜನನಕ್ಕೆ ಸ್ವಲ್ಪವೇ ಮುನ್ನಿನವರೆಗೂ ಒದಗಿಸಲಾಗುತ್ತದೆ. ಪ್ರಸವದ ವೇಳೆ ರಕ್ತಸ್ರಾವ ತಪ್ಪಿಸುವ ಉದ್ದೇಶದಿಂದ ಹೆರಿಗೆಗೆ ಸ್ವಲ್ಪ ಮುನ್ನ ಈ ಚಿಕಿತ್ಸೆಯನ್ನು ನಿಲ್ಲಿಸಲಾಗುತ್ತದೆ. ಹೆರಿಗೆಯ ಬಳಿಕ ಆರು ವಾರಗಳ ಬಾಣಂತಿ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು ಇರುವುದರಿಂದ ಹೆರಿಗೆಯ ತತ್‌ಕ್ಷಣವೇ ಮತ್ತೆ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. 

ಹೆಚ್ಚು ಗಂಭೀರವಾದ ಪ್ರಕರಣಗಳಲ್ಲಿ ಗರ್ಭಧಾರಣೆಯ ಕೊನೆಯ ಅವಧಿಯಲ್ಲಿ ಪ್ರಿಎಕ್ಲಾಂಪ್ಸಿಯಾ ಉಂಟಾಗಬಹುದಾಗಿದ್ದು, ಯೋಜಿತ ಅವಧಿಪೂರ್ವ ಹೆರಿಗೆಯನ್ನು ನಡೆಸಬೇಕಾಗಬಹುದು. ಹೆಪಾರಿನ್‌ ಬಳಕೆಯಿಂದ ಎಲುಬು ನಷ್ಟ ಉಂಟಾಗಬಹುದು, ಹೀಗಾಗಿ ಅಂತಹ ಮಹಿಳೆಯರು ಹೆಚ್ಚುವರಿ ಕ್ಯಾಲ್ಸಿಯಂ ಅಂಶವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಇಂತಹ ಮಹಿಳೆಯರು ಕಡಿಮೆ ಪ್ಲೇಟ್‌ಲೆಟ್‌ ಸಂಖ್ಯೆ ಹೊಂದಿರಬಹುದಾಗಿದ್ದು, ಇದಕ್ಕಾಗಿ ನಿಗಾ ವಹಿಸಬೇಕು. 

(ಮುಂದುವರಿಯುತ್ತದೆ)

Trending videos

Back to Top