CONNECT WITH US  

ಭಾರತ ಬಂದ್‌: ಪ್ರಯಾಣಿಕರ ಪರದಾಟ

ಉಡುಪಿ ಸಿಟಿ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. 

ಉಡುಪಿ: ನಗರದಲ್ಲಿ ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳು ನೀಡಿದ ಬಂದ್‌ನ ಬಿಸಿ ಉಡುಪಿ, ಮಣಿಪಾಲ, ಪರ್ಕಳ, ಮಲ್ಪೆ, ಕಲ್ಯಾಣಪುರ ಸಂತೆಕಟ್ಟೆ ಮೊದಲಾದೆಡೆ ಜೋರಾಗಿತ್ತು. ಬಸ್‌ಗಳು ರಸ್ತೆಗಿಳಿಯದೇ ಇದ್ದುದರಿಂದ ಸಾರ್ವಜನಿಕರು ಪರದಾಡುವಂತಾಯಿತು.

ಸರಕಾರಿ, ಖಾಸಗಿ ಕಚೇರಿಗಳಲ್ಲಿ ಸಿಬಂದಿ ಕೊರತೆ ಇತ್ತು ಮತ್ತು ಸಾರ್ವಜನಿಕರೂ ಕಡಿಮೆ ಸಂಖ್ಯೆಯಲ್ಲಿ ಕಂಡುಬಂದರು. ಉಡುಪಿ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರ್ಯಾಲಿ ಮೂಲಕ ನಗರಾದ್ಯಂತ ಸಂಚರಿಸಿ ಬಂದ್‌ ಮಾಡಿಸಿದ ಕಾರಣ ಅಲ್ಪಸ್ವಲ್ಪ ತೆರೆದಿದ್ದ ಅಂಗಡಿ, ಹೊಟೇಲ್‌ಗ‌ಳು ಬಾಗಿಲು ಹಾಕಿದವು. ಇದರ ಪರಿಣಾಮ ಅಗತ್ಯದ ವಸ್ತುಗಳಿಗೆ ಮತ್ತು ಮುಖ್ಯವಾಗಿ ಚಹಾ, ಕಾಫಿ, ತಿಂಡಿ ಸೇವಿಸುವವರಿಗೆ ತೊಂದರೆಯಾಯಿತು. ರವಿವಾರವೇ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಸಂಚರಿಸಿ ಬಂದ್‌ ಆಚರಿಸುವಂತೆ ಮನವಿ ಮಾಡಿದ್ದರಿಂದ ಸಣ್ಣ ಸಣ್ಣ ಹೊಟೇಲ್‌ಗ‌ಳ ಮಾಲಕರು ಕೆಲಸದವರನ್ನು ಮನೆಗೆ ಕಳುಹಿಸಿದರು.

ಉಡುಪಿ ರೈಲ್ವೇ ನಿಲ್ದಾಣಕ್ಕೆ ಬೆಳಗ್ಗೆ ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿ ಬಿಹಾರದಿಂದ 20 ಜನರ ತಂಡವೊಂದು ಬಂದಿತ್ತು. ಕಾಪುವಿನಲ್ಲಿ ನಡೆಯುವ ರಸ್ತೆ ಕಾಮಗಾರಿ ಕೆಲಸಕ್ಕೆಂದು ಬಂದ ಅವರಿಗೆ ಬಂದ್‌ನ ಬಿಸಿ ಮುಟ್ಟಿತು. ಕಾಪುವಿಗೆ ತೆರಳಲು ಬಸ್‌ ಆಗಲಿ ಇತರ ಯಾವುದೇ ಸಂಚಾರದ ವ್ಯವಸ್ಥೆ ಸಿಗದೆ ಅವರು ಪರದಾಡಿದರು.  

ಇಂದ್ರಾಳಿಯ ರೈಲ್ವೇ ನಿಲ್ದಾಣದಿಂದ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ನಡೆದುಕೊಂಡೇ ಬಂದ ಇವರಿಗೆ, ಇಲ್ಲಿ ಯಾವುದೇ ವಾಹನ ವ್ಯವಸ್ಥೆ ಆಗಲಿಲ್ಲ. ಉಪಹಾರಕ್ಕೆಂದು ಹೋದರೆ ಹೊಟೇಲ್‌ ಕೂಡ ತೆರೆದಿರಲಿಲ್ಲ. ಕೆಲಸಕ್ಕೆಂದು ಕರೆಸಿಕೊಂಡ ಗುತ್ತಿಗೆದಾರರಿಗೆ ಕರೆ ಮಾಡಿದರೆ ಅವರು ಕೂಡ ಸರಿಯಾಗಿ ಸ್ಪಂದಿಸಿಲ್ಲ. ಕೆಲಸಕ್ಕೆಂದು ಕರೆದುಕೊಂಡು ಬಂದ ಅಶ್ರಫ್ ಬೇರೆ ದಾರಿ ಕಾಣದೇ ಮುಂದೆ ಏನಾದರೂ ವ್ಯವಸ್ಥೆ ಆಗಬಹುದೆಂದು ಸಂಗಡಿಗರೊಂದಿಗೆ ನಡೆದುಕೊಂಡೆ ಕಾಪು ಕಡೆ ತೆರಳಿದರು. 

ದುರ್ಗಾಂಬಾ ಬಸ್‌ನ ಆವಾಂತರ
ಮಂಗಳೂರಿನಿಂದ ಕುಂದಾಪುರಕ್ಕೆ ತೆರಳುವ ದುರ್ಗಾಂಬಾ ಬಸ್‌ವೊಂದು 50ರಿಂದ 60 ಪ್ರಯಾಣಿಕರನ್ನು ಕರೆದುಕೊಂಡು ಬಂದಿತ್ತು. ಅದರಲ್ಲಿ ಸಾಕಷ್ಟು ಮಂದಿ ಕುಂದಾಪುರಕ್ಕೆ ತೆರಳುವವರಿದ್ದರು. ಬಸ್‌ನ ಸಿಬಂದಿಗಳು ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಕುಂದಾಪುರಕ್ಕೆ ಹೋಗುತ್ತದೆ ಎಂದು ಹತ್ತಿಸಿಕೊಂಡವರು ಉಡುಪಿಯಲ್ಲಿ ಕುಂದಾಪುರಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ಈ ಸಂದರ್ಭ ಬಸ್‌ ಸಿಬಂದಿ ಜತೆ ಪ್ರಯಾಣಿಕರು ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಯಾಣಿಕ ಆಲ್ಬರ್ಟ್‌ ಚೆನ್ನೈನಿಂದ ಬೆಳಗ್ಗೆ 5.30ಕ್ಕೆ ಬಂದಿದ್ದೇವೆ. ಕುಂದಾಪುರಕ್ಕೆ ತೆರಳಲು ಟ್ರೈನ್‌ ತಡವಿದ್ದ ಹಿನ್ನೆಲೆ ಬಸ್‌ ಮೂಲಕ ಬಂದೆವು. ಮಂಗಳೂರಿನಲ್ಲಿ ಕುಂದಾಪುರಕ್ಕೆ ತೆರಳುತ್ತದಾ ಎಂದು ಪ್ರಶ್ನಿಸಿದ್ದೆ. ಹೋಗುತ್ತದೆ ಎಂದು ಹೇಳಿದ್ದರಿಂದ ಬಸ್‌ನಲ್ಲಿ ಪ್ರಯಾಣಿಸಿದೆವು. ಆದರೆ ಇಲ್ಲಿ ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ ಎಂದರು.

ಜರ್ಮನ್‌ ವಿದ್ಯಾರ್ಥಿನಿಗೂ ಬಂದ್‌ ಬಿಸಿ
ಜರ್ಮನ್‌ ಮೂಲದ ವಿದ್ಯಾರ್ಥಿನಿಯೋರ್ವಳು ಮೂಡಬಿದಿರೆಗೆ ತೆರಳುವವರಿದ್ದರು. ಬಂದ್‌ನ ವಿಚಾರ ಸರಿಯಾಗಿ ತಿಳಿಯದೆ ಇದ್ದ ಕಾರಣ ಉಡುಪಿಯಲ್ಲಿ ಸಿಲುಕಿಕೊಂಡು ಪರದಾಡಿದರು. 

ಆಟೋ ರಿಕ್ಷಾ ವಿನೂತನ ಪ್ರತಿಭಟನೆ
ಆಶ್ರಯದಾತ ಆಟೋ ರಿಕ್ಷಾ ಯೂನಿಯನ್‌ ವತಿಯಿಂದ ಬೆಳಗ್ಗೆ ಬೋರ್ಡ್‌ ಹೈಸ್ಕೂಲ್‌ನಿಂದ ತ್ರಿವೇಣಿ ಸರ್ಕಲ್‌ವರೆಗೆ ಆಟೋರಿಕ್ಷಾವನ್ನು ತಳ್ಳಿಕೊಂಡು ಹೋಗಿ ಪ್ರತಿಭಟನೆ ನಡೆಸಿದರು.

Trending videos

Back to Top