CONNECT WITH US  

16ಕ್ಕೆಹಿಂದೂಸ್ಥಾನಿ ಸಂಗೀತ ವಿಶೇಷ ಕಾರ್ಯಕ್ರಮ

ಶಿಷ್ಯ ವೃಂದದಿಂದ ಮಹಾಗುರುವಿಗೆ ನಮನ, ಕಲ್ಬಾಗ ಕುಟುಂಬದ ಒಂದೇ ಮನೆಯಲ್ಲಿ 11 ಕಲಾವಿದರು

ಹೊನ್ನಾವರ: ಹಿಂದುಸ್ಥಾನಿ ಸಂಗೀತ ಕಲಾವಿದರ ಕಲ್ಭಾಗ ಕುಟುಂಬ

ಹೊನ್ನಾವರ: ಯಕ್ಷಗಾನ, ಜಾನಪದ ಸಂಗೀತಗಳ ಮನೆಯಾಗಿದ್ದ ಉತ್ತರ ಕನ್ನಡದಲ್ಲಿ ಶಾಸ್ತ್ರೀಯ ಸಂಗೀತದ ಅರಿವಿಲ್ಲದ ಕಾಲದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಅಂಕುರಾರ್ಪಣೆ ಮಾಡಿ, ಜೀವನದ ಇತರ ಎಲ್ಲ ಮುಖ್ಯ ವಿಷಯಗಳಿಗಿಂತ ಸಂಗೀತಕ್ಕೆ ಆದ್ಯತೆ ನೀಡಿ, ಹಿಂದುಸ್ಥಾನಿ ಸಂಗೀತದ ಬೆಳವಣಿಗೆಗೆ ಕಾರಣರಾದವರು ಕಲ್ಭಾಗ ಗೋವಿಂದ ಹೆಗಡೆಯವರು. ಅವರ ನೆನಪಿಗೆ ಗುರುನಮನ ಕಾರ್ಯಕ್ರಮ ಸೆ.16 ರಂದು ಕಲ್ಭಾಗದ ಮನೆಯಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9ರಿಂದ ರಾತ್ರಿ 8ರ ವರೆಗೆ ನಾದಾರಾಧನೆ ನಡೆಸಿ, ಕುಟುಂಬದ 11 ಕಲಾವಿದರು ಮತ್ತು ಅತಿಥಿ ಕಲಾವಿದರು ಗುರುಗೌರವ ಸಲ್ಲಿಸಲಿದ್ದಾರೆ. ಗೋವಿಂದ ಹೆಗಡೆಯವರ ಮಗ ಪಂ| ಪರಮೇಶ್ವರ ಹೆಗಡೆ, ಪಂ| ಗೋಪಾಲಕೃಷ್ಣ ಹೆಗಡೆ, ವಿನಾಯಕ ಹೆಗಡೆ, ಶ್ರೀಧರ ಹೆಗಡೆ ಮಾತ್ರವಲ್ಲ ಹೆಣ್ಣು ಮಕ್ಕಳಾದ ಪಾರ್ವತಿ, ನಾಗವೇಣಿ, ಗೌರಿ, ಶಾರದಾಂಬಾ, ಉಮಾಂಬಾ, ಅಳಿಯ ರಾಮ ಹೆಗಡೆ, ಕೆರೆಮನೆ ಹಾಡಲಿದ್ದಾರೆ. ಸೊಸೆ ಭಾರತಿ ಗೋಪಾಲಕೃಷ್ಣ ಹೆಗಡೆ ಸಿತಾರ ನುಡಿಸುವರು. ಗೋಪಾಲಕೃಷ್ಣ ಹೆಗಡೆಯವರ ಮಗ ಓಂಕಾರ ಉತ್ತಮ ತಬಲಾ ಪಟುವಾಗಿದ್ದು ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಹೀಗೆ ಇಡೀ ಕುಟುಂಬ ರಾಜ್ಯದ ನಾನಾಭಾಗಗಳಲ್ಲಿ, ವಿನಾಯಕ ಹೆಗಡೆ ಅಮೇರಿಕಾದಲ್ಲಿ ಸಂಗೀತ ಮತ್ತು ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಗೋವಿಂದ ಹೆಗಡೆಯವರ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಸಂಗೀತ ಕಲಿಸಿದ ಗುರು ಎಸ್‌.ಎಂ. ಭಟ್‌ ಕಟ್ಟಿಗೆ, ಖ್ಯಾತ ಸಂಗೀತ ಸಂಘಟಕ ಎಸ್‌.ಶಂಭು ಭಟ್‌ ಮತ್ತು ಪ್ರಾಚಾರ್ಯ ಇಂದೂಧರ ಪೂಜಾರ ಉಪಸ್ಥಿತಿಯಲ್ಲಿ ನಾದನಮನ ನಡೆಯಲಿದೆ.

ಗೋವಿಂದ ಹೆಗಡೆಯವರು ಎಸ್‌. ಎಂ. ಭಟ್‌, ಚಂದ್ರಶೇಖರ ಪುರಾಣಿಕ ಮಠ, ಅಶೋಕ ಹುಗ್ಗಣ್ಣನವರ್‌ ಮೊದಲಾದ ಹಿರಿಯ ಕಲಾವಿದರನ್ನು ಮನೆಯಲ್ಲಿ ಉಳಿಸಿಕೊಂಡು ಮಕ್ಕಳಿಗೆ ಸಂಗೀತ ಪಾಠ ಹೇಳಿಸಿದರು. ಗೋವಿಂದ ಹೆಗಡೆಯವರಿಂದ ಸ್ಫೂರ್ತಿಗೊಂಡ ಆ ಕಾಲದ ಹಲವರು ಹಿಂದುಸ್ಥಾನಿ ಸಂಗೀತದ ಆರಾಧಕರಾದರು.

ಕಾರ್ಯಕ್ರಮದಲ್ಲಿ ಪಂಡಿತ ಪರಮೇಶ್ವರ ಹೆಗಡೆ, ಡಾ| ಅಶೋಕ ಹುಗ್ಗಣ್ಣವರ್‌, ರಾಘವೇಂದ್ರ ಉಪಾಧ್ಯಾಯ, ಶಾರದಾ ಭಟ್‌, ಕೆ.ಆರ್‌. ಶ್ರೀಲತಾ, ರಾಮ ಹೆಗಡೆ ಕೆರೆಮನೆ, ಸಹಿತ ತಬಲಾದಲ್ಲಿ ಗುರುರಾಜ, ಜಿ.ಕೆ. ಹೆಗಡೆ, ಬಾಲಚಂದ್ರ ಹೆಬ್ಟಾರ, ಅನಂತಮೂರ್ತಿ, ಸಂವಾದಿನಿಯಲ್ಲಿ ಗೌರೀಶ ಯಾಜಿ, ಮಾರುತಿ ನಾಯ್ಕ, ವಾಸುದೇವ ಸಾಮಂಣಕರ್‌ ಸಹಿತ 25ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ತಂದೆಯ ಆಶಯದಂತೆ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಕಲಾವಿದರಾಗಿ ಕಲಾಕುಟುಂಬವನ್ನು ವಿಸ್ತರಿಸುತ್ತಾ ಹಿಂದುಸ್ಥಾನಿ ಸಂಗೀತಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ. ಇದಕ್ಕೆಲ್ಲಾ ಕಾರಣರಾದ ಮಹಾಗುರು ಗೋವಿಂದ ಹೆಗಡೆ ಮತ್ತು ಗಣಪಿ ಹೆಗಡೆ ಇವರ ನೆನಪಿನ ಕಾರ್ಯಕ್ರಮ ವಿರಳವಾದದ್ದು. ಕಲಾಪ್ರೇಮಿಗಳು ಬರಬೇಕು ಎಂದು ಕಲ್ಭಾಗ ಕುಟುಂಬ ಬಯಸಿದೆ.

ಜೀಯು, ಹೊನ್ನಾವರ


Trending videos

Back to Top