CONNECT WITH US  

ವಿಮೆಯ ಆರೋಗ್ಯ ವಿಚಾರಿಸ್ಕೊಳ್ಳಿ ಹೊಸ ನಿಯಮ ಏನು ಬಂದಿದೆ ಗೊತ್ತಾ?

ಸರ್ಕಾರದ ಆರೋಗ್ಯ ಯೋಜನೆಗಳೆಲ್ಲವೂ ನಿರೀಕ್ಷಿತ ಫ‌ಲ ನೀಡದ ಕಾರಣ ಬಳಕೆದಾರರು ತಮ್ಮ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ ವಿಮೆ ಪಾಲಿಸಿ ಪಡೆದು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿಮೆ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಮಧ್ಯವರ್ತಿಗಳು ಥರ್ಡ್‌ ಪಾರ್ಟಿ ಅಡ್ಮಿನಿಸ್ಟ್ರೇಟರ್ ಕೈಜೋಡಿಸಿ, ಪಾಲಿಸಿದಾರರಿಗೆ ಸೇವೆ ನೀಡುವ ಬದಲು ಸಂಕಷ್ಟಗಳನ್ನೇ ನೀಡುತ್ತಾ ಬಂದಿದ್ದಾರೆ. ಗ್ರಾಹಕ ವೇದಿಕೆಗಳಲ್ಲಿ ಆರೋಗ್ಯ ವಿಮೆಗೆ ಸಂಬಂಧಿಸಿದ ದೂರುಗಳನ್ನು ಗಮನಿಸಿದರೆ, ಬಳಕೆದಾರರ ಎದುರಿಸುತ್ತಿರುವ ಸಮಸ್ಯೆಗಳು ತಿಳಿಯುತ್ತದೆ. 

ವಿಮೆ ಪಾಲಿಸಿ ಮಾರಾಟ ಮಾಡುವಾಗ ಕಂಪನಿಗಳು ಬಳಕೆದಾರರ ಬಗ್ಗೆ ತೋರುವ ಕಾಳಜಿ ಆನಂತರ ಇರುವುದಿಲ್ಲ. ಚಿಕಿತ್ಸೆ ಪಡೆದು, ತಮ್ಮ ಕೈನಿಂದ ಹಣ ನೀಡಿ, ಅದರ ಮರುಪಾವತಿಗೆ ಅರ್ಜಿ ಸಲ್ಲಿಸಿದಾಗಲೇ ನಿಜವಾದ ಸಮಸ್ಯೆ ಗೋಚರಿಸುವುದು. ಆರೋಗ್ಯ ವಿಮೆ ಪಾಲಿಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವ ಭಾರತೀಯ ವಿಮೆ ಅಭಿವೃದ್ಧಿ ಮತ್ತು ನಿಯಂತ್ರಣ ಪಾಧಿಕಾರ ಐಆರ್‌ಡಿಎಐ ಕಳೆದ ಜುಲೈ ತಿಂಗಳಲ್ಲಿ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಇದರಲ್ಲಿ ವಿಮೆ ಉದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರೂ, ಕೆಲವೊಂದು ಅಂಶಗಳು ಬಳಕೆದಾರರಿಗೂ ಅನುಕೂಲ ತರಲಿದೆ.

ಆರೋಗ್ಯ ವಿಮೆಯ ಆಧಾರದ ಮೇಲೆ ಬಳಕೆದಾರರು ಸಾಲ ಪಡೆಯಬಹುದಾಗಿದೆ. ಆರೋಗ್ಯ ಮತ್ತು ಜೀವ ವಿಮಾ ಕಂಪನಿಗಳು ಈ ರೀತಿಯ ಪಾಲಿಸಿಗಳನ್ನು ಮಾರಾಟ ಮಾಡಬಹುದಾಗಿದೆ.  ಪಾಲಿಸಿಯ ವಾಯ್ದೆಯನ್ನು ಐದು ವರ್ಷಕ್ಕೆ ವಿಸ್ತರಿಸಲಾಗಿದೆ. ಪಾಲಿಸಿದಾರರು ಸಾಲ ಪಡೆದಿದ್ದು, ಅನಾರೋಗ್ಯದ ಕಾರಣ ಅದನ್ನು ತೀರಿಸಲಾಗದಿದ್ದರೆ, ವಿಮೆ ಕಂಪನಿಯು, ಪಾಲಿಸಿ ಆಧಾರದ ಮೇಲೆ ಆ ಸಾಲವನ್ನು ತೀರುಸುತ್ತದೆ. ಈ ಹಿಂದೆ ಜೀವ ವಿಮಾ ಕಂಪನಿಗಳು ಮಾತ್ರ ಈ ರೀತಿ ಪಾಲಿಸಿಗಳನ್ನು ಮಾರಾಟಮಾಡುತ್ತಿದ್ದವು. ಇನ್ನು ಮುಂದೆ ವಿಮಾ ಕಂಪನಿಗಳು ಆರೋಗ್ಯ ಪಾಲಿಸಿಗಳನ್ನು ಮಾರಾಟಮಾಡುವಂತಿಲ್ಲ. ಈಗಾಗಲೆ ಚಾಲ್ತಿಯಲ್ಲಿರುವ ಪಾಲಿಸಿಗಳನ್ನು ಅದರ ವಾಯ್ದೆ ಮುಗಿದ ಕೂಡಲೆ ನಿಲ್ಲಿಸಬೇಕಾಗುತ್ತದೆ. ಅದನ್ನು ಮತ್ತೆ ಪರಿಷ್ಕರಿಸುವಂತಿಲ್ಲ. ಜೊತೆಗೆ, ಇನ್ನು ಮೂರು ತಿಂಗಳಲ್ಲಿ ಆ ಮಾದರಿ ಪಾಲಿಸಿಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ.

ಆರೋಗ್ಯ ವಿಮೆ ಖರೀದಿಸುವವರಿಗೆ ಇನ್ನು ಮುಂದೆ ಅನೇಕ ರಿಯಾಯಿತಿ ದೊರೆಯಲಿದೆ. ಐಆರ್‌ಟಿಎಐ ನಿಯಮದ ಪ್ರಕಾರ ಆರೋಗ್ಯ ವಿಮೆ ಕಂಪನಿಗಳು ಪಾಲಿಸಿದಾರರಿಗೆ ಹೊಸ ಪ್ರೋತ್ಸಾಹ ಯೋಜನೆಗಳನ್ನು ನೀಡಬಹುದು. ವಿಶೇಷವಾಗಿ ಯುವಜನಾಂಗಕ್ಕೆ ಪಾಲಿಸಿ ಮಾರಾಟಮಾಡುವ ಸಮಯದಲ್ಲಿ ಕಂಪನಿಗಳು ತಮ್ಮದೆ ಆದ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಬಹುದಾಗಿದೆ. ಹೊಸ ಪಾಲಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ  ವಿಷಯದಲ್ಲಿ  ಜೀವ ವಿಮೆಅಲ್ಲದ  ವಿಮಾ ಕಂಪನಿಗಳಿಗಳಿಗೆ ಕೆಲವೊಂದು ವಿನಾಯಿತಿ ಅಥವಾ ಸ್ವಾತಂತ್ರ ನೀಡಲಾಗಿದೆ. ಜೀವ ವಿಮಾ  ಕಂಪನಿಗಳು ಒಂದು ವರ್ಷದಿಂದ ಐದು ವರ್ಷದವರೆಗಿನ ಪಾಲಿಸಿಗಳನ್ನು ನೀಡಬಹುದಾಗಿದೆ. ಈ ಅವಧಿಯನ್ನು ವಿಮೆ ಕಂಪನಿಗಳು ಮಾರುಕಟ್ಟೆಗೆ ಅನುಗುಣವಾಗಿ ಬದಲಾವಣೆ, ಸುಧಾರಣೆ ಮಾಡಬಹುದು. ನಿಯಮದ ಪ್ರಕಾರ ವಿಮೆ ಕಂಪನಿಗಳು ಐದು ವರ್ಷ ಅವಧಿಯ ಪಾಲಿಸಿ ಮಾರಾಟ ಮಾಡಬಹುದು. ಒಂದು ವೇಳೆ  ಆ ಪಾಲಿಸಿ ಸರಿಯಿಲ್ಲವೆಂದು ತೋರಿದಲ್ಲಿ, ಐದು ವರ್ಷದ ನಂತರ ಅದನ್ನು ನಿಲ್ಲಿಸಬಹುದು ಅಥವಾ ಹಿಂದಕ್ಕೆ ಪಡೆಯಬಹುದು. 

ವಿಮೆ ಬಗ್ಗೆ ಕಂಪನಿಗಳು ನೀಡುವ ಮಾಹಿತಿ ವಿಷಯದಲ್ಲೂ ಕೆಲವೊಂದು ನಿಯಮ ಜಾರಿಗೆ ಬಂದಿದೆ. ಇದು ಬಳಕೆದಾರರಿಗೆ ನೇರವಾಗಿ ಉಪಯೋಗ ಆಗದಿದ್ದರೂ, ವಿಮಾ ಉದ್ಯಮದಲ್ಲಿ ಪಾರದರ್ಶಕತೆ ತರಲಿದೆ. 

ಆರೊಗ್ಯ ವಿಮೆ ಪಾಲಿಸಿಯ ವಿಷಯದಲ್ಲಿ ವಿಮೆ ಕಂಪನಿಗಳು ಎರಡು ರೀತಿಯ ಕ್ರಮ ಕೈಗೊಳ್ಳುತ್ತದೆ, ಒಂದು ಪಾಲಿಸಿದಾರರ ಕ್ಲೈಮ್‌ಅನ್ನು ನಿರಾಕರಿಸುವುದು. ಮತ್ತೂಂದು ಕ್ಲೈಮ್‌ಅನ್ನು ಕ್ಲೋಸ್‌ ಮಾಡುವುದು ಅಥವಾ ಮುಕ್ತಾಯಗೊಳಿಸುವುದು. ಪಾಲಿಸಿದಾರರು ಪ್ರೀಮಿಯಮ್‌ ಪಾವತಿಸದಿದ್ದಲ್ಲಿ, ಪಾಲಿಸಿ ಕೊನೆಗೊಳ್ಳುತ್ತದೆ ಅಥವಾ ಸರಿಯಾದ ದಾಖಲೆ ಇಲ್ಲದಿದ್ದಲ್ಲಿ ಪಾಲಿಸಿ ಕೊನೆಗೊಳ್ಳುತ್ತದೆ. ಪ್ರಸ್ತುತ ವಿಮೆ ಕಂಪನಿಗಳು ಇವೆರಡನ್ನೂ ಒಟ್ಟಾಗಿಸಿ, ಮಾಹಿತಿ ನೀಡುವಂತಿಲ್ಲ. ಹೊಸ ನಿಯಮದ ಪ್ರಕಾರ ಕ್ಲೈಮ್‌ಅನ್ನು ಪಾಲಿಸಿ ಮುಕ್ತಾಯವಾಗಿದೆ ಎಂದು ಪರಿಗಣಿಸುವಂತಿಲ್ಲ.

ತೀವೃ ಅನಾರೋಗ್ಯ ಮತ್ತು ಅಪಘಾತ ಎರಡೂ ಒಟ್ಟಿಗೆ ಸೇರಿರುವ ವಿಮೆ ಪಾಲಿಸಿಯನ್ನು ನೀಡುವ ನಿಯಮ ಜಾರಿಗೆ ಬರಲಿದೆ. ಪಾಲಿಸದಾರರು ಯಾವುದಾದರು ಅನಾರೋಗ್ಯಕ್ಕೆ ಪಾಲಿಸಿ ಪಡೆದಿದ್ದಲ್ಲಿ, 

ಆ ಅನಾರೋಗ್ಯದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪಡೆಯಬಹುದು. ಅಲ್ಲದೆ ಪಾಲಿಸಿದಾರರು 

ಯಾವುದಾದರು ಅಪಘಾತಕ್ಕೀಡಾದಲ್ಲಿ, ಅದರ ಚಿಕಿತ್ಸೆಗೆ ತಗಲುವ ವೆಚ್ಚವನ್ನೂ ಪಡೆಯಬಹುದಾಗಿದೆ. ಒಟ್ಟಾರೆ, ಐಆರ್‌ಡಿಎಐ ಸ್ಥಾಪನೆಗೊಂಡಾಗಿನಿಂದ ಸತತವಾಗಿ ಬಳಕೆದಾರರಿಗೆ ಅನುಕೂಲವಾಗುವ ನಿ¿ನಿಯಮಗಳನ್ನು ತರುತ್ತಿದೆ. ಜೊತೆಗೆ, ವಿಮೆ ಉದ್ಯಮಕ್ಕೂ ಉತ್ತೇಜನ ನೀಡುತ್ತಿದೆ. ಗ್ರಾಹಕ ಸಂರಕ್ಷಣೆಯಲ್ಲಿ ತೊಡಗಿರುವ ಸಂಘ/ಸಂಸ್ಥೆಗಳು ವಿಮಾ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಸೇರಿಸಿಕೊಳ್ಳಬೇಕಿದೆ. 

ವೈ.ಜಿ.ಮುರಳೀಧರನ್‌,
ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ

Trending videos

Back to Top