CONNECT WITH US  

ಮನೆ ಗಟ್ಟಿ ನೋಡು, ಬಲಭೀಮ ಕಟ್ಟಡಕೆಕಾಳಜಿಯೊಂದೇ ಇಟ್ಟಿಗೆ

ಮನೆ ಕಟ್ಟುವಾಗ ಮುಖ್ಯ ಘಟ್ಟಗಳಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿದರೂ ಕೆಲವೊಮ್ಮೆ ತಪ್ಪುಗಳು ಆಗುವುದುಂಟು. ಎಲ್ಲ ತಪ್ಪುಗಳೂ ಕಟ್ಟಡಕ್ಕೆ ದಕ್ಕೆ ತಾರದೆ ಇರಬಹುದು. ಆದರೆ ಕೆಲವೊಂದನ್ನು ನಾವು ನೂರಕ್ಕೆ ನೂರರಷ್ಟು ಖಾತರಿ ಮಾಡಿಕೊಳ್ಳುವುದು ಉತ್ತಮ. ಕಡೆಗೆ ಕಟ್ಟಡಗಳು ಕೈಕೊಟ್ಟಾಗ, ನಾವೊಂದಷ್ಟು ಪತ್ತೆದಾರಿಯನ್ನು ಮಾಡಿದರೆ ಕಂಡುಬರುವ ಅಂಶ-ಒಂದೆರಡು ತಪ್ಪುಗಳೂ ಕೂಡ ಬೃಹತ್‌ ಕಟ್ಟಡಗಳನ್ನು ಕೆಡವಬಲ್ಲವು ಎಂಬುದು. ಹಾಗಾದರೆ ನಮ್ಮ ಮನೆಯ ಕಟ್ಟುವಿಕೆಯಲ್ಲಿ ತಪ್ಪುಗಳು ನುಸುಳದಂತೆ ತಡೆಯುವುದು ಹೇಗೆ?

ಫ್ಯಾಕ್ಟರ್‌ ಆಫ್ ಸೇಫ್ಟಿ ಕಡೆಗಣಿಸದಿರಿ...
ಉಕ್ಕು ಹಾಗೂ ಕಾಂಕ್ರಿಟ್‌ ಇತ್ತೀಚಿನ ದಿನಗಳಲ್ಲಿ ಮನೆಯ ಭಾರ ಹೊರುವ ಕಾರ್ಯದಲ್ಲಿ ಸಿಂಹಪಾಲು ಪಡೆದುಕೊಳ್ಳುತ್ತಿದ್ದು, ಈ ಹಿಂದಿನಂತೆ ನಾವು ಭಾರ ಹೊರುವ ಗೋಡೆಗಳ ಮೇಲೆ ಕಟ್ಟಡದ ದೃಢತೆಗೆ ಅವಲಂಬಿತವಾಗಿಲ್ಲ. ಗೋಡೆಗೂ ಕಾಲಂ- ಕಂಬಗಳಿಗೂ ಇರುವ ಮುಖ್ಯ ವ್ಯತ್ಯಾಸ ಏನೆಂದರೆ, ಗೋಡೆಗಳು ಉದ್ದಕ್ಕೂ ಭಾರಹೊರುತ್ತ ಅದೇ ರೀತಿಯಲ್ಲಿ ಪಾಯದ ಉದ್ದಕ್ಕೂ ಅದನ್ನು ಹರಡಿದರೆ, ಕಾಲಂಗಳು ಅಲ್ಲಲ್ಲಿ ಮಾತ್ರ ಇದ್ದು, ನಿಯೋಜಿಸಿದ ರೀತಿಯಲ್ಲಿ ಆಯಾ ಪ್ರದೇಶದ ಭಾರವನ್ನು ಮಾತ್ರ ಹೊರುತ್ತವೆ. ಹಾಗೂ ಹೀಗೆ ಹೊತ್ತ ಇಡಿ ಭಾರವನ್ನು ಭೂಮಿಗೆ ಫ‌ುಟಿಂಗ್‌ಗಳ ಮೂಲಕ ಹರಡಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಉದ್ದಕ್ಕೂ ಇರುತ್ತಿದ್ದ ಭಾರ ಹೊರುವ ಗೋಡೆಗಳಿಗೆ ಹೋಲಿಸಿದರೆ, ಆರ್‌ ಸಿ ಸಿ ಕಂಬಗಳು ಅಲ್ಲಲ್ಲಿ ಮಾತ್ರ ಇದ್ದು, ಅವುಗಳೇ ಇಡಿ ಕಟ್ಟಡದ ಎಲ್ಲ ಭಾರವನ್ನು ಹೊರಬೇಕಾಗುತ್ತದೆ. 

ಕಟ್ಟಡದ ಭಾರ ಹೊರುವ ಭಾಗಗಳ ಸಂಖ್ಯೆ ಕಡಿಮೆ ಇದ್ದಷ್ಟೂ ಒಂದೊಂದರ ಮೇಲೂ ಅತಿ ಹೆಚ್ಚು ಭಾರ ಬೀಳುತ್ತಿರುತ್ತದೆ. ಹಾಗಾಗಿ ನಾವು ಕಾಲಂ ಬೀಮ್‌ ಸ್ಟ್ರಕ್ಚರ್‌ಗಳ ವಿನ್ಯಾಸ ಮಾಡುವಾಗ ಹೆಚ್ಚು ಕಾಳಜಿಯಿಂದ ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ ಹೆಚ್ಚುವರಿ ಮೇಲ್ವಿಚಾರಣೆಯನ್ನೂ ಮಾಡಬೇಕಾಗುತ್ತದೆ. ಇಡಿ ಕಟ್ಟಡದ ಭಾರವನ್ನು ಹತ್ತು ಕಾಲಂಗಳು ಹೊರುತ್ತಿದ್ದರೆ, ಅದರಲ್ಲಿ ಒಂದೇಒಂದು ಕಾಲಂನ ಒಂದು ಅಡಿ ಭಾಗದಷ್ಟು ತುಂಡು 
ಸರಿಯಾಗಿ ಇರದಿದ್ದರೆ, ಇಡಿ ಕಟ್ಟಡವನ್ನು ದುರ್ಬಲಗೊಳಿಸಲು ಈ ಒಂದು ಸಣ್ಣ ಅಂಶವೇ ಸಾಕಾಗುತ್ತದೆ. 

ಈ ಕಾರಣದಿಂದಾಗಿ, ಒಂದೆರಡು ಕಾಲಂಗಳನ್ನು ಹೆಚ್ಚುವರಿಯಾಗಿ ಹಾಕಿ, ನಾಲ್ಕಾರು ಮಹಡಿಗಳಿಂದ ಬರುವ ಮನೆಯ ಭಾರವನ್ನು ಹೆಚ್ಚು ಸಮರ್ಥವಾಗಿ ಹೊರುವಂತೆ ಮಾಡುವುದು ಒಳ್ಳೆಯದು. ಅನಗತ್ಯವಾಗಿ ದೂರದೂರಕ್ಕೆ ಕಾಲಂಗಳನ್ನು ಹಾಕುವುದರಿಂದ, ನಮಗೆ ಉಳಿತಾಯ ಆಗುತ್ತಿದೆ ಎಂದೆನಿಸಿದರೂ ಕಡೆಗೆ ದುರ್ಬಲ ಮನೆ ನಮ್ಮದಾದರೆ, ಪ್ರತಿ ಬಾರಿ ಸಣ್ಣದೊಂದು ಪ್ಲಾಸ್ಟರ್‌ ಬಿರುಕು ಕಾಣಿಸಿಕೊಂಡರೂ ನಮಗೆ ಆತಂಕ ಆಗುವುದು ತಪ್ಪುವುದಿಲ್ಲ! 

ಒಂದು ಕಾಲಂ ಎಷ್ಟು ಭಾರ ಹೊರಲು ಸಾಧ್ಯವೋ ಅಷ್ಟೂ ಭಾರ ಹೊರಿಸುವುದಕ್ಕೆ ಬದಲು, ಸಾಮಾನ್ಯವಾಗಿ ಅದರ ಸಾಮರ್ಥ್ಯದ ಅರ್ಧ ಇಲ್ಲ ಮೂರರಲ್ಲಿ ಒಂದು ಭಾಗದಷ್ಟು ಮಾತ್ರ ಹೊರಿಸಬೇಕು. ಹೀಗೆ ಮಾಡುವುದರಿಂದ ಮನೆ ಕಟ್ಟುವಾಗ ಬರುವ ಅನಿರೀಕ್ಷಿತ ಭಾರಗಳನ್ನು ನಮ್ಮ ಮನೆ ಯಶಸ್ವಿಯಾಗಿ ಹೊರಲು ಸಾಧ್ಯವಾಗುತ್ತದೆ. ಉದಾಹರಣೆಗೆ ನೀವು ಅಟ್ಯಾಚ್‌x ಟಾಯ್ಲೆಟ್‌ ಇಲ್ಲದೆ  ಮನೆ ಕಟ್ಟಲೆಂದು ಕಾಲಂಗಳನ್ನು ವಿನ್ಯಾಸ ಮಾಡಿಸಿದ್ದರೆ, ನಂತರ ಹೆಚ್ಚುವರಿಯಾಗಿ ಟಾಯ್ಲೆಟ್‌ಗಳನ್ನು ಸೇರಿಸಲು ಪ್ರಯತ್ನಿಸಿದರೆ, ಪ್ರತಿ ಟಾಯ್ಲೆಟ್‌ ಹೆಚ್ಚುವರಿಯಾಗಿ ಹತ್ತರಿಂದ ಹನ್ನೆರಡು ಟನ್‌ ಭಾರವನ್ನು ನಮ್ಮ ಮನೆಯ ಮೇಲೆ ಹೇರಬಲ್ಲದು. ಹೀಗೆ ನೀವು ಪ್ರತಿ ಮಹಡಿಯಲ್ಲೂ ಮಾಡಿದರೆ, ನಾಲ್ಕಾರು ಮಹಡಿಗಳಲ್ಲಿ ಇದರ ಭಾರವೇ ನೂರು ಟನ್‌ಗಳಷ್ಟು ಹೆಚ್ಚಾಗಿರಬಲ್ಲದು.  ನಾವು ಶುರುವಿನಲ್ಲಿ ನೂರು ಟನ್‌ ಭಾರ ಬರುತ್ತದೆ ಎಂದು ಒಂದು ಕಾಲಂ ಡಿಸೈನ್‌ ಮಾಡಿದ್ದರೆ, ನಂತರ ಮತ್ತೂಂದು ನೂರು ಟನ್‌ ಭಾರ ಅದರ ಮೇಲೆ ಬಿದ್ದರೆ, ಬರಿ ಕಾಲಂಗೆ ಮಾತ್ರವಲ್ಲ ಇಡಿ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. 

ಪಾಯದ ಲೆಕ್ಕಾಚಾರ
ನಮ್ಮ ಮನೆ ಎಷ್ಟೇ ಗಟ್ಟಿಮುಟ್ಟಾಗಿ ಕಟ್ಟಿದರೂಕೂಡ ಕಡೆಗೆ ಎಲ್ಲ ಭಾರವನ್ನೂ ಹೊರುವುದು ನೈಸರ್ಗಿಕವಾಗಿ ರೂಪಗೊಂಡಿರುವ ನೆಲದಡಿಯ ಮೂಲ ನೆಲ. ಇದು ಕರ್ನಾಟಕದ ಬಹುಪಾಲು ಪ್ರದೇಶಗಳಲ್ಲಿ ಸಾಕಷ್ಟು ಗಟ್ಟಿತನವನ್ನು ಹೊಂದಿದ್ದರೂ ಕೂಡ ಎಲ್ಲೆಲ್ಲಿ ಜೇಡಿಮಣ್ಣು ಇಲ್ಲ ಭರ್ತಿ ಮಣ್ಣು ಇರುತ್ತದೋ ಅಂಥ ಪ್ರದೇಶಗಳಲ್ಲಿ ನಾವು ವಿಶೇಷ ಕಾಳಜಿವಸಿ ಪಾಯವನ್ನು ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳ ಸಹಾಯದಿಂದ  ಸ್ಟ್ರಕ್ಚರಲ್‌ ಡಿಸೈನ್‌  ಮಾಡಿಸುವುದು ಉತ್ತಮ. ಕೆಲವೊಮ್ಮೆ ಮೇಲು ನೋಟಕ್ಕೆ ಸದೃಢ ಎಂದೆನಿಸಿದರೂ, ನಾಲ್ಕಾರು ಅಡಿ ಅಗೆದಾಗ ಪುಸುಕಲು ಮಣ್ಣು ಇರುವುದು ಕಂಡುಬರಬಹುದು. ಇಂತಹ ಪ್ರದೇಶದಲ್ಲಿ ಕೆಲವೊಮ್ಮೆ ವಿಶಾಲವಾದ ರಾಫ್ಟ್ ಮಾದರಿಯ ಪಾಯ ಇಲ್ಲವೆ ಫೈಲ್ಸ್‌ಗಳನ್ನೂ ಕೂಡ ಹಾಕಬೇಕಾಗುತ್ತದೆ. ಕೆಲವೊಮ್ಮೆ ಹೆಚ್ಚು ಆಳ ಹಾಗೂ ಅಗಲ ಅಗೆದಾಗ ಮಧ್ಯದಲ್ಲಿ ಮಣ್ಣುಗಡ್ಡೆಗಳೇ ಉಳಿಯದ ಕಾರಣ, ಅನಿವಾರ್ಯವಾಗಿ ನೆಲಮಾಳಿಗೆಗಳನ್ನೂ ನಿರ್ಮಿಸಬೇಕಾಗುತ್ತದೆ. 

ಪ್ರತಿ ಚದುರ ಅಡಿ ಗಟ್ಟಿ ಭೂಮಿ ಸುಮಾರು ಒಂದರಿಂದ ಒಂದೂವರೆ ಟನ್‌ನಷ್ಟು ಭಾರ ಹೊರುವ ಸಾಮರ್ಥ್ಯ ಹೊಂದಿದ್ದರೂ ಇದು ಜೆಡಿ ಮಣ್ಣಿಗೆ ಅನ್ವಯವಾಗುವುದಿಲ್ಲ. ಜೆಡಿಮಣ್ಣು ಒಣಗಿದಾಗ ಬಹಳ ಗಟ್ಟಿಯಾಗಿದ್ದದ್ದು ನೀರು ಮೀರಿದರೆ ಮೆತ್ತಗೆ ಆಗಿಬಿಡುತ್ತದೆ! ಆದರೆ ಮರಳು ಮಿಶ್ರಿತ ನುರುಜು ಕಲ್ಲುಗಳನ್ನು ಒಳಗೊಂಡ ಕೆಂಪು ಮಣ್ಣು  ನೀರು ಮೀರಿದಾಗಲೂ ಹೆಚ್ಚು ದುರ್ಬಲವಾಗುವುದಿಲ್ಲ!

ಕಾಲಂ ಕಾಂಕ್ರಿಟ್‌ ಹಾಕುವಾಗ ಎಚ್ಚರ
ಸೂರು ಹಾಕಲು ಮೆನ್‌ಗಳನ್ನು ಬಳಸಿ ಸಿಮೆಂಟ್‌, ಮರಳು ಹಾಗೂ ಜೆಲ್ಲಿ ಬೆರೆಸಿ ಕಾಂಕ್ರಿಟ್‌ ಅನ್ನು ಬಹಳ ಹುಷಾರಾಗಿ ತಯಾರುಮಾಡಿ ಹಾಕಿದರೂ ನಂತರ ಕಾಲಂಗಳನ್ನು ಸಾಮಾನ್ಯವಾಗೇ ಕೈಯಲ್ಲಿ ಬೆರೆಸಿ ಬಾಕ್ಸ್‌ಗಳಲ್ಲಿ ಸುರಿಯಲಾಗುತ್ತದೆ. ಹೀಗೆ ನಾವು ಗಾರೆಯವರಿಗೆ ಇಲ್ಲ ಕೂಲಿಯವರಿಗೆ ಈ ಗುರುತರವಾದ ಜವಾಬ್ದಾರಿಯನ್ನು ನೀಡಿದರೆ, ಅವರು ಅಷ್ಟೇ ಕಾಳಜಿಯಿಂದ ಸರಿಯಾದ ಅನುಪಾತದಲ್ಲಿ ಬೆರೆಸಿ ಉತ್ತಮ ಕಾಂಕ್ರಿಟ್‌ ತಯಾರಿಸುತ್ತಾರೆ ಎಂದೇನೂ ಇಲ್ಲ. ಹಾಗಾಗಿ ನಾವು ಸೂರಿಗೆ ಎಷ್ಟು ಕಾಳಜಿಯಿಂದ ಕಾಂಕ್ರಿಟ್‌ ತಯಾರಿಸುತ್ತೇವೋ ಅಷ್ಟೇ ಎಚ್ಚರಿಕೆಯಿಂದ ಪ್ರತಿ ಕಾಲಂ ಕಾಂಕ್ರಿಟ್‌ ಅನ್ನೂ ಸೂಕ್ತ ನುರಿತ ತಂತ್ರಜ್ಞರ ಮೇಲ್‌ ಉಸ್ತುವಾರಿಯಲ್ಲಿ ತಯಾರಿಸಿ ಬಳಸುವುದು ಉತ್ತಮ. ಜೊತೆಗೆ ಕಾಲಂಗಳು ಸ್ವಲ್ಪ ಮಾತ್ರ ಕಾಂಕ್ರಿಟ್‌ ಬೇಡುತ್ತವೆ. ಅದಕ್ಕೇಕೆ ವೈಬ್ರೇಟರ್‌ ಬೇಕು? ಹಾಗೆಯೇ ಪ್ಯಾಕ್‌ ಮಾಡಿದರೆ  ಸಾಲುವುದಿಲ್ಲವೆ? ಎಂದು ನಿರ್ಲಕ್ಷಿಸಬೇಡಿ. ಕಾಲಂಗಳನ್ನು ಹಾಕಲು ಎಂದೆರಡು ದಿನ ತಗುಲಿದರೂ ಅಷ್ಟೂ ದಿನ ವೈಬ್ರೆಟರ್‌ಗಳನ್ನು ತಂದು ಸೂರಿಗಿಂತ ಹೆಚ್ಚು ಸಿಮೆಂಟ್‌ ಅಂದರೆ ಒಂದೂವರೆ ಪಾಲು ಸಿಮೆಂಟಿಗೆ ಮೂರು ಪಾಲು ಮರಳು ಹಾಗು ಐದರಿಂದ ಆರು ಪಾಲು ಜೆಲ್ಲಿ ಹಾಕಿದ ಸುದೃಢ ಕಾಂಕ್ರಿಟ್‌ ಹಾಕಿ ವೈಬ್ರೆಟ್‌ ಮಾಡುವುದು ಕಡ್ಡಾಯ.

"ನಡೆವನು ಎಡಯಾನು, ಕುಳಿತವನು ಎಡಯಾನೇ?' ಎಂಬುದು ನಿಜವಾದರೂ ಮನೆಕಟ್ಟುವಾಗಿನ ಅನಿವಾರ್ಯವಾದ ನಡೆಗಳನ್ನು ಸ್ವಲ್ಪ ಹುಶಾರಾಗಿ ಇಟ್ಟರೆ ಯಾವುದೇ "ಎಡವು'ತೊಡರುಗಳಿಲ್ಲದೆ ಗಟ್ಟಿಮುಟ್ಟಾದ ಮನೆ ನಮ್ಮದಾಗುತ್ತದೆ.

ಹೆಚ್ಚಿನ ಮಾತಿಗೆ: 98441 32826

- ಆರ್ಕಿಟೆಕ್ಟ್ ಕೆ. ಜಯರಾಮ್‌

Trending videos

Back to Top