CONNECT WITH US  

ಉಕ್ಕಿನ ಸೊಕ್ಕಿನ ಮನೆ

ಇತ್ತೀಚಿನ ದಿನಗಳಲ್ಲಿ ಇಟ್ಟಿಗೆ ಕಲ್ಲುಗಳನ್ನು ಬಳಸದೆ ಉಕ್ಕು ಹಾಗೂ ಗ್ಲಾಸ್‌ ಬಳಸಿಯೇ ಮನೆಗಳನ್ನು ಕಟ್ಟುವುದು ಜನಪ್ರಿಯವಾಗುತ್ತಿದೆ. ಗಾರೆಯವರ ಕಿರಿಕಿರಿ, ಒಳ್ಳೆ ಬಡಗಿಯವರಿಗಾಗಿ ನಿಲ್ಲದ ಹುಡುಕಾಟ ಇತ್ಯಾದಿಗಳಿಂದ ಮುಕ್ತಿ ಹೊಂದಲು ಮುಖ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಇಡೀ ಮನೆಯನ್ನೇ ಕೆಲವೇ ವಸ್ತುಗಳಿಂದ ಹೆಚ್ಚಾ ಕಡಿಮೆ ರೆಡಿಮೇಡ್‌ ಮನೆ ರೀತಿಯಲ್ಲಿ ಕಟ್ಟಲು ಶುರು ಮಾಡಿದ್ದಾರೆ. ನಮ್ಮ ದೇಶದಲ್ಲಿಯೂ ಕೂಡ ಈಗೀಗ ನಗರ ಪ್ರದೇಶಗಳಲ್ಲಿ "ಪ್ರಿ ಎಂಜಿನಿಯರ್‌x ಸ್ಟ್ರಕ್ಚರ್' ಎಂಬ ಹಣೆಪಟ್ಟಿಯೊಂದಿಗೆ ಬಹುಮಹಡಿ ಕಟ್ಟಡಗಳಿಗೆ ಅದರಲ್ಲೂ ವಾಣಿಜ್ಯ ಸಂಕೀರ್ಣಗಳಲ್ಲಿ ಉಕ್ಕಿನ ಕಂಬ ಹಾಗೂ ತೊಲೆಗಳು ಹೆಚ್ಚು ಬಳಕೆಯಲ್ಲಿ ಬರುತ್ತಿದೆ. ಇಡಿ ಮನೆಯನ್ನು ಉಕ್ಕು ಹಾಗೂ ಗ್ಲಾಸ್‌ನಿಂದ ಕಟ್ಟುವುದರ ಸಾಧಕಭಾದಕಗಳನ್ನು ಅರಿತು ಮುಂದುವರಿದರೆ ಕಡಿಮೆ ಖರ್ಚಿನಲ್ಲಿ ಸುಂದರ ಮನೆ ನಮ್ಮದಾಗುತ್ತದೆ.

ಸ್ಟೀಲ್‌ ಮನೆ ಏಕೆ ಬೇಕು?
ನಮಗೆಲ್ಲ ನೂರಾರು ವರ್ಷಗಳಿಂದ ಮನೆ ಎಂದರೆ ಹೀಗೆಯೇ ಇರಬೇಕು ಎಂದು ಪೂರ್ವಾಗ್ರಹಗಳಿವೆ. ಆದರೆ ಹೀಗೆ ಅಂತ ನಮಗೆ ಅನ್ನಿಸಲು ಮುಖ್ಯಕಾರಣ ನಾವು ಇತರೆ ಮಾದರಿಯ ಮನೆಗಳನ್ನು ನೋಡಿದ್ದು ಕಡಿಮೆ. ಹಾಗಾಗಿ ಮನೆ ಎಂದರೆ ಹೀಗೆಯೇ ಇರಬೇಕು, ಹೀಗೆ ಇಲ್ಲದ್ದು ಮನೆಯೇ ಅಲ್ಲ ಎಂದು ಅನ್ನಿಸಲೂಬಹುದು. ಆದರೆ ಮನೆ ಎಂಬುದು ಮೂಲದಲ್ಲಿ ನಮ್ಮನ್ನು ಮಳೆಗಾಳಿ, ಬಿಸಿಲು ಧೂಳು ಇತ್ಯಾದಿಯಿಂದ ರಕ್ಷಿಸಲು ನಮ್ಮ ಪೂರ್ವಜರು ಅಕ್ಕಪಕ್ಕ ಸುಲಭದಲ್ಲಿ ಸಿಗುತ್ತಿದ್ದ ಇಟ್ಟಿಗೆ ಕಲ್ಲಿನಿಂದ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರೇ ವಿನಹ ಬೇರೆ ಕಾರಣಗಳಿಂದಾಗಿ ಅಲ್ಲ. ಹೀಗೆ ನಮಗೆ ರಕ್ಷಣೆ ಕೊಡಲು ಇಟ್ಟಿಗೆ, ಕಲ್ಲುಗಳಿಂದ ಮಾತ್ರ ಸಾಧ್ಯ ಎಂದೇನೂ ಇಲ್ಲವಲ್ಲ.  ಇಟ್ಟಿಗೆ ಕಲ್ಲಿಗೆ ಹೋಲಿಸಿದರೆ ಉಕ್ಕು ಬಲು ಗಟ್ಟಿಯಾಗಿರುತ್ತದೆ. ಒಂಭತ್ತು ಇಂಚು ದಪ್ಪದ ಇಟ್ಟಿಗೆ ಗೋಡೆಗಿನ್ನ ಕಾಲು ಇಂಚಿನ ಉಕ್ಕಿನ ಗೋಡೆ ಹೆಚ್ಚು ದೃಢವಾಗಿರುತ್ತದೆ.  ಹಾಗಾಗಿ ನಮ್ಮ ಮನೆಗಳನ್ನು ಉಕ್ಕಿನಲ್ಲಿ ಕಟ್ಟುವುದಕ್ಕೆ ಅದರ ಬಲವೂ ಮುಖ್ಯಕಾರಣವಾಗಬಹುದು.  ಇಟ್ಟಿಗೆ, ಕಲ್ಲಿಗೆ ಹೋಲಿಸಿದರೆ, ಉಕ್ಕು ಸುಮಾರು ನೂರರಷ್ಟು ಹೆಚ್ಚು ಗಟ್ಟಿಮುಟ್ಟಾಗಿರುತ್ತದೆ.  ಜೊತೆಗೆ ಕಳ್ಳಕಾಕರು ಇಟ್ಟಿಗೆ ಗೋಡೆಗಳಿಗೆ ಸುಲಭದಲ್ಲಿ ಕನ್ನ ಹಾಕುವ ರೀತಿಯಲ್ಲಿ ಉಕ್ಕಿಗೆ ಹಾಕಲು ಸಾಧ್ಯವಾಗುವುದಿಲ್ಲ.  ಹಾಗೆಯೇ ಕ್ರಿಮಿ ಕೀಟಗಳಿಂದ ರಕ್ಷಣೆ ಕೊಡಲೂ ಕೂಡ ಉಕ್ಕಿನ ಮನೆಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲವು. ಇಲಿ ಹೆಗ್ಗಣಗಳಿಗೆ, ಹಾಗೆಯೇ ಗೆದ್ದಿಲಿಗೆ ಉಕ್ಕನ್ನು ಕೊರೆಯುಲು ಸಾಧ್ಯವಾಗುವುದಿಲ್ಲ!  

ಉಕ್ಕಿನ ಮನೆಯ ಲಾಭಗಳು
ಇಟ್ಟಿಗೆ ಕಾಂಕ್ರಿಟ್‌ ಮನೆಗಳಿಗೆ ಹೋಲಿಸಿದರೆ ಉಕ್ಕಿನ ಮನೆಗಳು ಬಲು ಲಘುವಾಗಿದ್ದು,  ಭಾರಿ ಪಾಯವನ್ನು ಬೇಡುವುದಿಲ್ಲ. ಹತ್ತಾರು ವರ್ಷದ ಬಳಿಕ ಮನೆ ಬೇಡವೆಂದರೆ, ಉಕ್ಕನ್ನು ಮರುಬಳಕೆ ಮಾಡಬಹುದು.  ಆದರೆ ಇಟ್ಟಿಗೆ ಕಾಂಕ್ರಿಟ್‌ ಮನೆಗಳನ್ನು ಸಾಮಾನ್ಯವಾಗಿ ಮರುಬಳಕೆ ಮಾಡಲು ಬರುವುದಿಲ್ಲ. ಮಳೆ ಗಾಳಿ ಪ್ರವಾಹಗಳನ್ನು ಎದುರಿಸಲು ಹೆಚ್ಚು ಸೂಕ್ತವಾಗಿರುವುದರ ಜೊತೆಗೆ ಉಕ್ಕಿನ ಮನೆಗಳು ಭೂಕಂಪ ನಿರೋಧಕ ಗುಣವನ್ನೂ ಸ್ವಾಭಾವಿಕವಾಗೇ ಪಡೆದಿರುತ್ತದೆ.  ಫ್ಯಾಕ್ಟರಿಗಳಲ್ಲಿ ಮನೆಯ ಬಹುಪಾಲು ಭಾಗಗಳನ್ನು  ತಯಾರಿಸಿ ನಮ್ಮ ನಿವೇಶನದಲ್ಲಿ ತಂದು ಜೋಡಿಸಿಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಗುಣಮಟ್ಟ ಹೆಚ್ಚು ಖಾತರಿಯೂ ಆಗುತ್ತದೆ.

ಮನೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿದರೆ, ಮನೆಗಳ ಬೆಲೆಯೂ ಕಡಿಮೆ ಆಗುತ್ತದೆ. ಉಕ್ಕಿನ ಮನೆಗಳು ಎಷ್ಟು ಗಟ್ಟಿಮುಟ್ಟಾಗಿರುತ್ತವೆ ಎಂದರೆ ಅವು ಸಾಮಾನ್ಯವಾಗಿ ಇಟ್ಟಿಗೆ ಕಾಂಕ್ರಿಟ್‌ ಮನೆಗಳಂತೆ ಕುಸಿದು ಬೀಳುವ ಸಾಧ್ಯತೆ ತೀರ ಕಡಿಮೆ ಇರುತ್ತದೆ!

ಸ್ಟೀಲ್‌ ಮನೆಯ ಮಿತಿಗಳು
ಇಟ್ಟಿಗೆ ಕಾಂಕ್ರಿಟ್‌ಗೆ ಹೋಲಿಸಿದರೆ, ಸ್ಟೀಲ್‌ ಹೆಚ್ಚು ಉಷ್ಣ ಹಾಗೂ ಶೀತ ನಿರೋಧಕ ಗುಣಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಉಕ್ಕಿನ ಮನೆಗಳಿಗೆ ಕಡ್ಡಾಯವಾಗಿ ಹೆಚ್ಚುವರಿ ಶಾಖನಿರೋಧಕ ಪದರವನ್ನು ಕೊಡಬೇಕು. ಇದೇನೂ ತೀರ ದಪ್ಪಗಿರುವುದಿಲ್ಲ. ನಾವೆಲ್ಲ ನೋಡಿರುವಂತೆ ಎಲ್ಲ ಕಾರುಗಳಲ್ಲೂ ಒಳಪದರವಾಗಿ ಈ ನಿರೋಧಕಗಳನ್ನು ನೀಡಿರುತ್ತಾರೆ. ಕಾರುಗಳಿಗೆಂದೇ ಸಾಕಷ್ಟು ಸಂಶೋಧನೆಗಳಾಗಿದ್ದು.  ಈಗ ನಮಗೆ ಉತ್ತಮ ಉಷ್ಣ ನಿರೋಧಕ ವಸ್ತುಗಳು ಲಭ್ಯವಿದೆ ಹಾಗೂ ಇವನ್ನು ನಾವು ನಮ್ಮ ಉಕ್ಕಿನ ಮನೆಗಳಲ್ಲಿ ಯಶಸ್ವಿಯಾಗಿ ಬಳಸಬಹುದು.  ಇವೇನೂ ತೀರ ದುಬಾರಿಯಾಗಲೀ, ಭಾರದ ವಸ್ತುಗಳಾಗಲೀ ಆಗಿರುವುದಿಲ್ಲ.

ಜಗದ್ವಿಖ್ಯಾತ ಉಕ್ಕಿನ ಮನೆಗಳು
ಉಕ್ಕಿನ ಮನೆಗಳಿಗೂ ಅವುಗಳದೇ ಆದ ಪರಂಪರೆ ಇದೆ. ಅರವತ್ತು ಎಪ್ಪತ್ತು ವರ್ಷಗಳ ಹಿಂದೆಯೇ ಫ್ರಾನ್ಸ್‌ವರ್ಥ್ ಹೋಮ್‌ ಎಂಬ ಮನೆಯನ್ನು ಅಮೇರಿಕಾದಲ್ಲಿ ಮಾಸ್ಟರ್‌ ಆರ್ಕಿಟೆಕ್ಟ್ ಎಂದೇ ಪರಿಗಣಿಸಲಾಗುವ ಮೀಸ್‌ ವಾನ್‌ ಡೆರ್‌ ರೋಹೆ ಎಂಬುವವರು ಕಟ್ಟಿದ್ದು ಇಂದಿಗೂ ಅದು ಪ್ರವಾಸಿತಾಣವಾಗಿ ಉಳಿದಿದೆ. ಇದರ ನಂತರವೂ ಸಾವಿರಾರು ಉಕ್ಕಿನ ಮನೆಗಳನ್ನು ಪಾಶ್ಚಾತ್ಯ ದೇಶಗಳಲ್ಲಿ ಕಟ್ಟಲಾಗಿದೆ. ಹಾಗಾಗಿ ಉಕ್ಕಿನ ಮನೆಗಳ ಪರಿಕಲ್ಪನೆಯಲ್ಲಿ ಅಂಥ ಹೊಸದೇನೂ ಇಲ್ಲ! (ನಮ್ಮ ದೇಶಕ್ಕೆ ಹೊಸದಿರುಬಹುದು ಅಷ್ಟೇ!) ಉಕ್ಕಿನ ಜೊತೆ ಗ್ಲಾಸ್‌ ಒಳ್ಳೆಯ ಕಾಂಬಿನೇಷನ್‌ ಆದಕಾರಣ, ಇಂಥ ಮನೆಗಳಲ್ಲಿ ಗಾಜನ್ನು ಹೆಚ್ಚು ಬಳಸಲಾಗುತ್ತದೆ. ಚಳಿ ಅಥವ ಶಾಖ ಹೆಚ್ಚಿರುವ ಪ್ರದೇಶಗಳಲ್ಲಿ ಗಾಜನ್ನು ಎರಡು ಪದರಗಳಲ್ಲಿ ಬಳಸುವುದೂ ಇದೆ. 

ಉಕ್ಕಿನ ಮನೆ ಚೆಂದವಾಗಿರುವುದಿಲ್ಲವೆ?
ಸೌಂದರ್ಯ ಎನ್ನುವುದು ನೋಡುಗರ ಕಣ್ಣುಗಳಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಇಟ್ಟಿಗೆ ಹಾಗೂ ಕಲ್ಲು ಮಾತ್ರ ಸುಂದರವಾಗಿರುತ್ತದೆ. ಉಕ್ಕಿನಲ್ಲಿ ನಿರ್ಮಾಣ ಮಾಡಿದ ತಕ್ಷಣ ಮನೆಯ ಅಂದ ಕೆಡುತ್ತದೆ ಎಂದೇನೂ ಇಲ್ಲ. ಎಲ್ಲ ವಸ್ತುಗಳಿಗೂ ಕೂಡ ಅವುಗಳದೇ ಆದ ನೈಸರ್ಗಿಕ ಸೌಂದರ್ಯ ಇರುತ್ತದೆ. ಆಯಾ ವಸ್ತುಗಳ ಬಲಾಬಲಗಳನ್ನು  ಅರಿತು, ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿದರೆ, ಸುಂದರ ಮನೆಗಳು ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.  ಇತ್ತೀಚಿನ ದಿನಗಳಲ್ಲಿ ನಾವು ಗಮನಿಸುವುದು ಚಿತ್ತಾಕರ್ಷಕ ವಿನ್ಯಾಸಗಳಲ್ಲಿ ಮೂಡಿಬರುತ್ತಿರುವ ಕಾರುಗಳನ್ನು. ಈ ಕಾರುಗಳ ಹೊರಕವಚ ಹಾಗೂ ಒಳಮೈ ಕೂಡ ಬಹುತೇಕ ಉಕ್ಕಿನಿಂದಲೇ ಮಾಡಿದ್ದು, ಇವುಗಳ ಅಂದ ಚೆಂದವನ್ನೂ ಆಸ್ವಾದಿಸಲು ದಿನಕಳೆದಂತೆ ಹೊಸಹೊಸ ಸೌಂದರ್ಯ ಮೀಮಾಂಸೆಗಳನ್ನು ಬರೆಯುವಂತಾಗಿದೆ. ಒಂದು ಕಾಲದಲ್ಲಿ ಕಾರುಗಳ ಹೆಡ್‌ ಲ್ಯಾಂಪ್‌, ಮಡ್‌ಗಾರ್ಡ್‌ ಇತ್ಯಾದಿ ಹೊರಗೆ ಕಾಣುವಂತೆ ವಿನ್ಯಾಸ ಮಾಡುವುದೇ ಸುಂದರ ಎಂದಿದ್ದದ್ದು ನಂತರ ಎಲ್ಲವನ್ನೂ ಸ್ಟ್ರೀಮ್‌ ಲೈನ್‌ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಪೂರವಾಗಿ ನೀರಿನಲ್ಲಿ ಸರಾಗವಾಗಿ ಹರಿದಿಹೋಗುವ ಮೀನುಗಳನ್ನು ಹೋಲುವಂತೆ ಏರೋಡೈನಾಮಿಕ್‌ ಕಾರುಗಳು ಹಾಗೂ ಅವುಗಳ ಸೌಂದರ್ಯ ಕೂಡ ವ್ಯಾಪಕವಾಗಿ ಮೆಚ್ಚಿಗೆ ಪಡೆದಿದೆ. ವಸ್ತು ಸ್ಥಿತಿ ಹಾಗಿರುವಾಗ, ಉಕ್ಕಿನಲ್ಲಿ ಮಾಡಿದ್ದು ಸುಂದರವಾಗಿರುವುದಿಲ್ಲ ಎಂದು ಹೇಳಲು ಆಗುವುದಿಲ್ಲ.

ಹೆಚ್ಚಿನ ಮಾಹಿತಿಗೆ: 9844132826 

- ಆರ್ಕಿಟೆಕ್ಟ್ ಕೆ. ಜಯರಾಮ್‌

Trending videos

Back to Top