CONNECT WITH US  

ಜೋಡು ಕೆರೆಯೇ ನಮ್ಮ ಜಲನಿಧಿಗಳು

ಕೆರೆಗಳನ್ನು ನೋಡುತ್ತ ಹೋದರೆ ಸ್ಥಳೀಯ ಪರಿಸರಕ್ಕೆ ತಕ್ಕುದಾದ ನಿರ್ಮಾಣ ತಂತ್ರ ಕಲಿಯಬಹುದು. ಒಂದರ ಮೇಲೆ ಮತ್ತೂಂದು ಕೆರೆ ರೂಪಿಸಿ ತಗ್ಗಿನಲ್ಲಿ ಕೆರೆ ಪಾತ್ರದಲ್ಲಿ ಜವುಳು ಹುಟ್ಟಿಸಿ, ವರ್ಷವಿಡೀ ನೀರಿರುವ ನೆಲೆ ರೂಪಿಸಿದ ಜಲ ಜಾಣ್ಮೆಯೂ ಕಾಣಿಸುತ್ತದೆ. ಬೇಸಿಗೆಯಲ್ಲಿ ಕೆರೆಗಳು ಒಣಗಿದ ಬಳಿಕ ಕಟ್ಟಕಡೆಗೆ ನೀರಿರುವ ಕೆರೆಗಳನ್ನು ನೋಡುತ್ತ ಹೋದರೆ ರಾಜ್ಯದ ಜೋಡು ಕೆರೆಗಳ ಜಲ ರಹಸ್ಯ ಬಯಲಾಗುತ್ತದೆ.

ಕೆರೆ ಮಾಡಿಸಿದ್ದೇವೆ, ಬಾವಿ ತೆಗೆಸಿದ್ದೇವೆ, ಬೇಸಿಗೆ ಕೊನೆಯಲ್ಲಿ ನೀರಿರುವುದಿಲ್ಲ. ಮುಂದೇನು? ಇಂಥ ಪ್ರಶ್ನೆ ಹೊತ್ತು ಹಲವರು ಬರುತ್ತಾರೆ. ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲು ಸೀಮೆ ಸುತ್ತಾಡುವಾಗ ಹಳೆಯ ಕೆರೆಗಳ ದರ್ಶನವಾಗುತ್ತದೆ. 

ಇತ್ತೀಚೆಗೆ ಮಲೆನಾಡಿನ ಹಳ್ಳಿಗರೊಬ್ಬರು ತೀವ್ರ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೊಸ ಕೆರೆ ನಿರ್ಮಾಣಕ್ಕೆ ಸ್ಥಳ ಆಯ್ಕೆಗೆ ಆಹ್ವಾನಿಸಿದ್ದರು. ದೊಡ್ಡ ಗದ್ದೆ ಬಯಲಿನ ಹದಿನೈದು ಅಡಿ ಆಳದ ಬಾವಿಯಲ್ಲಿ ಒಂದೆರಡು ಅಡಿ ಮಾತ್ರ ನೀರಿತ್ತು. ಬಾವಿಯ ಮಣ್ಣಿನ ರಚನೆ ಗಮನಿಸಿದಾಗ ಆಳ ತೆಗೆಯಲು ಹೋದಂತೆಲ್ಲ ಪುಸುಕ್ಕನೆ ಕುಸಿಯುವ ಮರಳು ಕಾಣಿಸಿತು. ಕೋಟ್ಯಂತರ ವರ್ಷಗಳಿಂದ ಕಣಿವೆಯಲ್ಲಿ ನೀರು ಹರಿಯುತ್ತಿದೆ. ಭತ್ತದ ಕ್ಷೇತ್ರ ವಿಸ್ತರಿಸುವ ಕೃಷಿಕರು ನೀರು ಹರಿಯುವ ಹೊಳೆ, ಹಳ್ಳಗಳಿಗೆ ಮಣ್ಣು ಸುರಿದು ನೀರು ಹರಿಯುವ ಮೂಲ ನೆಲೆ ಬದಲಿಸುತ್ತಾರೆ. ಹತ್ತಿಪ್ಪತ್ತು ಅಡಿ ಅಗಲದ ಕಣಿವೆ ಮಾನವ ಶ್ರಮದಿಂದ ಎಕರೆಗಟ್ಟಲೆ ವಿಶಾಲ ಬಯಲಾಗಿ ಅಡಿಕೆ, ಭತ್ತ, ತೆಂಗು, ಬಾಳೆ ಬೆಳೆದಿದೆ. ಮಳೆ ನೀರು ಕೃಷಿ ಭೂಮಿಯ ಅಂಚಿನಲ್ಲಿ ಸರಾಗ ಹರಿಯಲು ಹಳ್ಳಕ್ಕೆ ಹೊಸ ಜಾಗ ಮಾಡಲಾಗುತ್ತದೆ. ಹೇರಳ ಮಳೆ ಸುರಿಯುವ ಕಾಲದಲ್ಲಿ ಭೂಮಿಯಿಂದ ನೀರು ಹೊರ ಕಳಿಸುವುದಕ್ಕೆ ಕೃಷಿಕರು ಬಹಳ ಶ್ರಮಿಸಿದ್ದಾರೆ. ಈಗ ನೀರಿಲ್ಲದೆ ತೋಟ ಒಣಗುತ್ತ ಪರಿಸ್ಥಿತಿ ಬದಲಾಗಿದೆ.

ಒಮ್ಮೆ ಹೊಸ ಕೆರೆಗೆ ಜಾಗ ಆಯ್ಕೆಗೆ ಹೋಗಿದ್ದಾಗ ಹಳ್ಳದ ಹರಿವಿನ ಮೂಲನೆಲೆಯ ಮೇಲೆ ಬಾವಿ ನಿರ್ಮಿಸಿದ್ದು ತಿಳಿಯಿತು. ಹತ್ತಾರು ಅಡಿ ಆಳದ ಹೊಳೆಯ ಹಳೆ ದಾರಿಯಲ್ಲಿ ಕಲ್ಲು, ಮರಳಿನ ಮೂಲಕ  ಬಾವಿಯ ನೀರು ಬಸಿದು ಹೋಗುತ್ತಿತ್ತು. ಬಾವಿಯ ನೀರು ಒಂದು ಹಂತ ಏರಿದ ಬಳಿಕ ನಾಪತ್ತೆಯಾಗುವುದಕ್ಕೆ ಕಾರಣ ದೊರೆಯಿತು. ಸಿಕ್ಕ ನೀರನ್ನು ಶೇಖರಿಸಲು ಅಸಾಧ್ಯವಾಗಿ ಕೃಷಿಕರು ಸೋತಿದ್ದರು. ಹಳ್ಳದ ಪಾತ್ರದ ಕಲ್ಲು, ಮರಳು ತೆಗೆದು ಕಾಂಕ್ರೀಟ್‌ ಗೋಡೆ ಕಟ್ಟಬಹುದು. ಮರಳು ತೆಗೆದು ಹಳೆಯ ಕೆರೆಯ ಹೂಳು ತಂದು ತಡೆಗೋಡೆಯಂತೆ  ತುಂಬಿದರೂ ನೀರು ಓಡುವುದು ನಿಲ್ಲುತ್ತದೆ. ಆದರೆ ಪುಟ್ಟ ಬಾವಿಯಲ್ಲಿ ಇಳಿಜಾರಿಗೆ ಅಡ್ಡವಾಗಿ ಇಂಥ ಕಸರತ್ತು ಮಾಡುವುದು ಕಷ್ಟ. ಈಗ ಹೊಸ ಕೆರೆಗೆ ಜಾಗ ಬದಲಿಸಿ, ಆಳ ಹೆಚ್ಚಿಸಿ ನೀರ ಹರಿವನ್ನು ಅತ್ತ ತಿರುಗಿಸಿದರೆ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಕಾಣಿಸಿತು.

ಮಳೆ ನೀರು ಹರಿಯುವ ಕಣಿವೆಗಳಲ್ಲಿ ಕೆರೆ ನಿರ್ಮಿಸಿದ ಹಿರಿಯರು ನಿರ್ಮಾಣದಲ್ಲಿ ಜಾಣ್ಮೆ ಮೆರೆದಿದ್ದಾರೆ. ಒಂದು ಕೆರೆಯ ಮೇಲೆ ಇನ್ನೊಂದು ಕೆರೆ ನಿರ್ಮಿಸಿದ್ದಾರೆ. ನಾಲ್ಕಾರು ಸರಣಿ ಕೆರೆ ಕಟ್ಟಿಸಿದ್ದಾರೆ. ಕೆರೆದಂಡೆ ನಿರ್ಮಾಣಕ್ಕೆ ಮುಂಚೆ ಕಣಿವೆಯ ಮರಳು ಮಣ್ಣು ತೆಗೆದು ಅಂಟು ಮಣ್ಣು ಬಳಸಿ ದಂಡೆಯ ಅಡಿಪಾಯ ರೂಪಿಸಿದ್ದಾರೆ. ಮಳೆಯ ನೀರು ಮೇಲಿನ ಕೆರೆ ತುಂಬಿದ ಬಳಿಕ ಕೆಳಗಡೆಯ ಕೆರೆಗೆ ಬರಲು ಕಾಲುವೆಯಿರುತ್ತದೆ. ವಿಶೇಷವೆಂದರೆ ಮೇಲಿನ ಕೆರೆಯಲ್ಲಿ ನೀರು ನಿಲ್ಲುತ್ತಿದ್ದಂತೆ ಕೆಳಗಿನ ಕೆರೆಯ ತಳಭಾಗದ ಮಣ್ಣು ನೀರಿನ ಒತ್ತಡದಿಂದ ಜವುಗಾಗಲು ಶುರುವಾಗುತ್ತದೆ. ಆಳದಿಂದ ನೀರು ಮೇಲೇಳುವ ಕ್ರಿಯೆಯಲ್ಲಿ ಮಣ್ಣಿನ ಸ್ವರೂಪ ಬದಲಾಗುತ್ತದೆ. ಮಣ್ಣು ಒದ್ದೆಯಾಗಿ ಕೊಳೆಯುತ್ತಿದ್ದಂತೆ ನಾವು ಗೋಡೆ ಕಟ್ಟುವಾಗ, ಮಡಿಕೆ ಮಾಡುವಾಗ ಹದ ಬರುವಂತೆ ಕೆರೆಯ ಮಣ್ಣು  ಬೆಣ್ಣೆಯಂತೆ ಮೃದುವಾಗಿ  ಬದಲಾಗುತ್ತದೆ.

ಜವುಗು ನೆಲೆಯ ಮಣ್ಣಿನ ಮೇಲೆ "ವಾಟಗ‌ರಿಕೆ ಹುಲ್ಲು' ಬೆಳೆಯಿತೆಂದರೆ ಮಣ್ಣಿಗೆ ನೀರು ಹಿಡಿದು ನಿಲ್ಲುವ ಶಕ್ತಿ ಬರುತ್ತಿದೆ ಎಂದರ್ಥ. ಕೆರೆ ನಿರ್ಮಿಸಿ ನಾಲ್ಕಾರು ವರ್ಷಗಳ ಬಳಿಕ ನೀರಿರುವ ಜೀವಂತ ಕೆರೆ ಮೈದಳೆಯುತ್ತದೆ. 

ಒಂದು ಕೆರೆಯ ಮೇಲೆ ಮತ್ತೂಂದು ಕೆರೆ ನಿರ್ಮಿಸಲು ಮುಖ್ಯಕಾರಣ ಕೆರೆಯ ನೀರು ಶೇಖರಣಾ ಸಾಮರ್ಥ್ಯವನ್ನು ಎರಡು ಭಾಗಗಲ್ಲಿ ಹಂಚುವುದು. ಕೆರೆದಂಡೆಯನ್ನು ನೀರಿನ ಒತ್ತಡದಿಂದ ರಕ್ಷಿಸುವುದೆಂದು ಸರಳವಾಗಿ ಹೇಳಬಹುದು. ಒಂದು ಕೆರೆಯ ದಂಡೆ ಒಡೆದರೆ ಮತ್ತೂಂದು ಕೆರೆಯಲ್ಲಿ ನೀರು ಶೇಖರಿಸುವ ಅವಕಾಶವೂ ಹೌದು. ಮೇಲಿನ ಕೆರೆಯನ್ನು "ಬತ್‌ ಕೆರೆ' ಎಂತಲೂ, ಕೆಳಗಿನದನ್ನು ಣಒರತೆಕೆರೆ' ಎಂದು  ಗುರುತಿಸುವರು. ಇಲ್ಲಿ "ಬತ್‌' ಕೆರೆ(ಹೊಟ್‌ ಕೆರೆ) ಎಂದರೆ ಒಣಗಿದ ಕೆರೆ ಎಂದರ್ಥ. ಬೇಸಿಗೆಯಲ್ಲಿ ನೀರಿಲ್ಲದ ನೆಲೆಯಾದ್ದರಿಂದ ವಾಡಿಕೆಯಲ್ಲಿ ಈ ಹೆಸರು ಬಂದಿದೆ. ನೀರಿಲ್ಲದ ಕೆರೆಯೇ ಮಳೆಗಾಲದಲ್ಲಿ ಭೂಮಿಗೆ ನೀರುಣಿಸುವ ಕೆರೆಯಾಗುತ್ತದೆ. ಮೇಲಿನ ಕೆರೆಯ ನೀರು ಹಿಡಿಯುವ ಶಕ್ತಿಯಿಂದ ಕೆಳಗಿನ ಕೆರೆ ಒರತೆ ಕೆರೆಯಾಗಿ ಬದಲಾಗುತ್ತದೆ. ಇವು ಕೆರೆಗೆ ಒಳಬರುವ ಹೂಳು ತಡೆಯುವ ಸುಲಭ ತಂತ್ರವೂ ಹೌದು. ಹಿರಿಯರ ಕೆರೆ ನಿರ್ಮಾಣದ ಈ ತಂತ್ರ ಅರಿಯದ ನಾವು ಬತ್‌ಕೆರೆಯನ್ನು  ನಿರುಪಯುಕ್ತವೆಂದು ಭಾವಿಸಿ ಅತಿಕ್ರಮಿಸಿ ನಾಶಮಾಡಿದ್ದೇವೆ. ಪರಿಣಾಮ ಒರತೆ ಕೆರೆಗಳು ಒಣಗುತ್ತಿವೆ. 

ಹಳೆಯ ಕೆರೆಗಳನ್ನು ಕಲಿಕೆಯ ಕಾರಣಕ್ಕೆ ಓದಬೇಕು. ಸ್ಥಳ ಆಯ್ಕೆ, ಸುತ್ತಲಿನ ಮಣ್ಣು, ಪರಿಸರ, ಮಳೆಯ ಸ್ವರೂಪ ಗಮನಿಸಬೇಕು. ದಂಡೆ ನಿರ್ಮಾಣ, ನೀರು ಹೊರ ಹೋಗುವ ಕಾಲುವೆಗಳ ಗಾತ್ರ ನೋಡಬೇಕು. ಪ್ರತಿಯೊಂದರಲ್ಲಿಯೂ ನೀರಿನ ಕಲಿಕೆ ಇದೆ.  ಮಳೆ ನೀರನ್ನು ಭೂಮಿಗೆ ಇಂಗಿಸಿದರೆ ಮಾತ್ರ ಅಂತರ್ಜಲ ಸುಧಾರಿಸುತ್ತದೆ. ಕೆರೆಗಳಲ್ಲಿ ನೀರು ವರ್ಷವಿಡೀ ಉಳಿಯಲು ಬತ್ತು ಕೆರೆ, ಹೊಟ್ಟು ಕೆರೆಗಳ ಮಹತ್ವವಿದೆ. ಈಗ ಕೆರೆಯ ಹೂಳು ತೆಗೆಯಲು ಹೋಗುವ ಬಹುತೇಕ ಜನ ಸರಕಾರಿ ದಾಖಲೆಯಲ್ಲಿರುವ ಒರತೆ ಕೆರೆಯಷ್ಟನ್ನೇ ಗಮನಿಸುತ್ತಾರೆ. ಆ ಕೆರೆಗಳ ಮೇಲೆ ಮಳೆ ನೀರು ಹಿಡಿಯುವ ಬತ್ತು ಕೆರೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬ್ಯಾಂಕಿನಲ್ಲಿ ಹಣ ಠೇವಣಿ ಇಡದೇ ನಿರಂತರವಾಗಿ ಹಣ ಪಡೆಯಲು ಸಾಧ್ಯವಿಲ್ಲ. ಬತ್ತು ಕೆರೆಗಳ ಹೂಳು ತೆಗೆದು ನೀರು ಇಂಗುವಂತೆ ಮಾಡುವುದು ಮುಖ್ಯವಾಗುತ್ತದೆ. 

ಉತ್ತರ ಕನ್ನಡದ ಯಲ್ಲಾಪುರ ನಗರದಲ್ಲಿ ಜೋಡುಕೆರೆ ಇದೆ. ಕಳೆದ ಎರಡು ವರ್ಷಗಳಿಂದ ನಗರದ ವಿವಿಧ ಬಡಾವಣೆಗಳಿಗೆ ನೀರಿನ ಕೊರತೆಯಾದಾಗ ಕಡು ಬರದಲ್ಲಿಯೂ ಇಲ್ಲಿನ ಕೆರೆ ನೀರು ನೀಡಿದೆ. ಮಲೆನಾಡಿನ ಕಾಡಿನಲ್ಲಿ, ಬೇಸಿಗೆ ಕೊನೆಯಲ್ಲಿ ನೀರಿರುವ ಕೆರೆಯಿದೆಯೆಂದರೆ ಅದರ ಮೇಲೆ ಇನ್ನೊಂದು ಕೆರೆ ಇದೆ ಎಂದು ಕಣ್ಮುಚ್ಚಿ ಹೇಳಬಹುದು. ಕೆಲವು ದಿನಗಳ ಹಿಂದೆ ಚಾಮರಾಜನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಕೆರೆಯ ಕುರಿತ ಮಾತುಕತೆಗೆ ಬಂದಿದ್ದರು. ನಮ್ಮೂರಿನ ಕಣಿವೆ ಕೆರೆ, ಕಾಡು ಸುತ್ತಾಡುತ್ತ ಜೋಡುಕೆರೆಯ ರಚನಾ ವಿಶೇಷದ ಬಗೆಗೆ ಸಹಜವಾಗಿ ವಿವರಿಸಿದೆ. ತೀವ್ರ ಬರಗಾಲ ಈ ವರ್ಷ ಮೈಸೂರು ಸೀಮೆಯನ್ನು ಕಾಡಿದ್ದು ಎಲ್ಲರಿಗೂ ತಿಳಿದಿದೆ. ಕಾಡಿನಲ್ಲಿ ಹೊಸ ಕೆರೆ ನಿರ್ಮಿಸಿ ವನ್ಯಜೀಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆ ಮುಂದಾಗಿತ್ತು. ಇಂಥ 
ಸಂದರ್ಭದಲ್ಲಿ ಚಾಮರಾಜನಗರ ಕಾಡಿನಲ್ಲಿ ಹೊಸ ಕೆರೆ ನಿರ್ಮಿಸುವ ಪೂರ್ವದಲ್ಲಿ ನೀರಿರುವ ಹಳೆಯ ಕೆರೆಗಳ ಸಮೀಕ್ಷೆಯನ್ನು  ರವಿಯವರು ಮಾಡಿಸಿದರು. ವಿಶೇಷವೆಂದರೆ ನೀರಿರುವ ಎಲ್ಲ ಕೆರೆಗಳ ಪಕ್ಕದಲ್ಲಿ ಮತ್ತೂಂದು ಕೆರೆ ಇರುವುದು ಅವರ ಗಮನಕ್ಕೆ ಬಂದಿದೆ! ಅಂದರೆ ಜೋಡು ಕೆರೆ ನಿರ್ಮಿಸಿದ ನೆಲೆಗಳಲ್ಲಿ ಕೆಳಭಾಗದ ಕೆರೆಯಲ್ಲಿ ವರ್ಷವಿಡೀ ನೀರಿರುವ ವಿಶೇಷ ಅರಣ್ಯದಲ್ಲಿ ಸಾಬೀತಾಗಿದೆ. 

ಶಿರಸಿ- ಯಲ್ಲಾಪುರ ರಸ್ತೆಯ ಸೋಂದಾ ಕ್ರಾಸ್‌ ಸನಿಹದಲ್ಲಿ ತೇಗದ ನೆಡುತೋಪಿನ ನಡುವೆ ಸರಣಿ ಕೆರೆಗಳಿವೆ. "ಚೌಡಿಕೆರೆ'ಯೆಂದು ಗುರುತಿಸುವ ಇಲ್ಲಿ ವರ್ಷವಿಡೀ ನೀರಿರುತ್ತದೆ. ಎಂದೂ ಬತ್ತದ ಅಘನಾಶಿನಿ, ಶಾಲ್ಮಲಾ ನದಿಗಳು ಒಣಗಿದ್ದಾಗಿಯೂ ಈ ಕೆರೆಯಲ್ಲಿ ನೀರಿರುವುದನ್ನು ದಾಖಲಿಸಿದ್ದೇನೆ.  ಹಳೆಯ ಕೆರೆ ಸುತ್ತಾಡುತ್ತ ಮಳೆ ಪರಿಸ್ಥಿತಿ ಗಮನಿಸುತ್ತ ಹೋದರೆ ವಾಡಿಕೆಯ ಅರ್ಧದಷ್ಟು ಮಳೆ ಸುರಿದರೂ  ಜೋಡುಕೆರೆಯಲ್ಲಿ ನೀರನಗು ಕಾಣಿಸುತ್ತದೆ.

ಅಮೂಲ್ಯ ಪುರಾತನ ಜಲ ಗ್ರಂಥಗಳಂತೆ ಇವು ನಿರ್ಮಾಣ ಸೂತ್ರಗಳನ್ನು  ಸಾರುತ್ತಿವೆ. ಕರಾವಳಿ, ಮಲೆನಾಡು, ಅರೆಮಲೆನಾಡು ಸೇರಿದಂತೆ ರಾಜ್ಯದ ಎಲ್ಲೆಡೆ ಸರಣಿ ಕೆರೆ, ಜೋಡುಕೆರೆಯ ತಂತ್ರಗಳಿವೆ. ವಿದೇಶಿ ನೆರವು ಸಾವಿರಾರು ಮೀಟರ್‌ ಆಳಕ್ಕೆ ಕೊಳವೆ ಬಾವಿ ಕೊರೆದು ಕೋಟ್ಯಂತರ ರೂ. ಖರ್ಚುಮಾಡಿ ಪಡೆದು ಪಾತಾಳ ಗಂಗೆಯ ನೀರೆತ್ತಲು ಯೋಜನೆ ರೂಪಿಸುವ ಸರಕಾರ ನಮ್ಮದೇ ನೆಲದ ಕೆರೆ ನಿರ್ಮಾಣ ತಂತ್ರ  ಮರೆತಿದೆ. ಈಗಲಾದರೂ ನೀರಿಲ್ಲದ ಕೆರೆಗಳ ಮೇಲೆ ಇನ್ನೊಂದು "ಇಂಗುಕೆರೆ' ನಿರ್ಮಿಸಬಹುದು. ಮಳೆ ಕೊರತೆಯ ದಿನಗಳಲ್ಲಿ, ಕಣಿವೆಗಳಲ್ಲಿ ಹೆಚ್ಚು ಹೆಚ್ಚು ಮಳೆನೀರು ಹಿಡಿಯುವ ಜಲಪಾತ್ರೆಗಳಾದ  ಸರಣಿಕೆರೆ ರೂಪಿಸಬೇಕಿದೆ.  ನಮ್ಮ ಕಾಡುಪ್ರಾಣಿ, ಪಕ್ಷಿಗಳಿಗೆ ಸಾವಿರಾರು ಮೀಟರ್‌ ಆಳದ ಕೊಳವೆ ಬಾಗೆ ಹೋಗಿ ನೀರು ಕುಡಿಯಲಾಗುವುದಿಲ್ಲ. ಜಲಪಕ್ಷಿಗಳ ಬದುಕನ್ನು ಕೊಳವೆ ಬಾವಿ, ಟ್ಯಾಂಕರ್‌ ನೀರಿಗೆ ವರ್ಗಾಯಿಸಲಾಗುವುದಿಲ್ಲ. ಕೆರೆಯಲ್ಲಿ ನೀರಿರುವಂತೆ ತಂತ್ರ ಕಲಿತರೆ ಮೇಲ್ಮೆ„ಯಲ್ಲಿ ಜೀವಜಲ ದೊರೆತು ನಾಳೆಗೂ ಜೀವಸಂಕುಲ ಉಳಿಯಬಹುದಲ್ಲವೇ?

- ಶಿವಾನಂದ ಕಳವೆ

Trending videos

Back to Top