CONNECT WITH US  

ಎತ್ತಿನಹೊಳೆ ಯೋಜನೆ ವಿರೋಧಿಸಿ ಉಪ್ಪಿನಂಗಡಿಯಲ್ಲಿ ಬೃಹತ್‌ ಪ್ರತಿಭಟನೆ

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಎತ್ತಿನಹೊಳೆ ಹೆಸರಿನಲ್ಲಿ ತಿರುಗಿಸುವ ಮೂಲಕ ಜನಜೀವನವನ್ನು ಬರಡಾಗಿಸದಂತೆ ಆಗ್ರಹಿಸಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಸಂಗಮ ಸ್ಥಳವಾದ ಉಪ್ಪಿನಂಗಡಿಗೆ ಮಂಗಳವಾರ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಜಿಲ್ಲೆಯ ಜನರು ಎತ್ತಿನಹೊಳೆ ಯೋಜನೆ ನಿಲ್ಲಿಸಿ ಎಂದು ರಾಜ್ಯ ಸರಕಾರಕ್ಕೆ ಒಕ್ಕೊರಲ "ಜನಾದೇಶ' ನೀಡಿದರು.

ಜನರ ಸಾತ್ವಿಕ ಕೋಪ ಮತ್ತು ಜಿಲ್ಲೆಯ ಭವಿಷ್ಯತ್‌ನ ಪ್ರಶ್ನೆ ಉಪ್ಪಿನಂಗಡಿಯಲ್ಲಿ ನಡೆದ ಎತ್ತಿನಹೊಳೆ ಯೋಜನೆ ವಿರೋಧಿ ಹೆದ್ದಾರಿ ತಡೆ ಪ್ರತಿಭಟನೆ ಸಾಕ್ಷಿಯಾಯಿತು. ಬಡವ ಬಲ್ಲಿದರೆನ್ನದೆ ಜಾತಿ, ಮತ, ಪಂಥಗಳನ್ನು ಮೀರಿ ಜೀವನದಿ ನೇತ್ರಾವತಿಯನ್ನು ಉಳಿಸುವ ಹೋರಾಟಕ್ಕೆ ಸಹಸ್ರಾರು ಜನರು ಸಾಗರೋಧಿಪಾದಿಯಲ್ಲಿ ಬಂದು ಬೆಂಬಲ ವ್ಯಕ್ತಪಡಿಸಿದರು. ಶಿರಾಡಿ, ಚಾರ್ಮಾಡಿ, ಉಡುಪಿ, ಕುಂದಾಪುರ ಸಹಿತ ಕರಾವಳಿ ಮತ್ತು ಮಲೆನಾಡಿನ ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

10 ಸಾವಿರ ಮಂದಿ
ಉಪ್ಪಿನಂಗಡಿಯಲ್ಲಿ ನಡೆದ ಎತ್ತಿನಹೊಳೆ ಯೋಜನೆ ವಿರೋಧಿ ರಸ್ತೆ ತಡೆ ಹೋರಾಟದಲ್ಲಿ 10,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಹೋರಾಟಗಾರರು ಉಪ್ಪಿನಂಗಡಿ ಸರಕಾರಿ ಪ.ಪೂ. ಕಾಲೇಜಿನ ಬಳಿ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆಯಲ್ಲಿ ರಾ.ಹೆ. 75ರಲ್ಲಿನ ಉಪ್ಪಿನಂಗಡಿ ಬೈಪಾಸ್‌ ಜಂಕ್ಷನ್‌ಗೆ ಬಂದು ತಲುಪಿದರು. ಮಂಗಳೂರು ಕಡೆಯಿಂದ, ಸುಳ್ಯ ಕಡೆಯಿಂದ ಬಂದವರು 34ನೇ ನೆಕ್ಕಿಲಾಡಿ ಗ್ರಾಮದಿಂದಲೇ ಮೆರವಣಿಗೆಯಲ್ಲಿ ಬಂದರು.

ಮಂಗಳವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಉಪ್ಪಿನಂಗಡಿ ಬೈಪಾಸ್‌ ಜಂಕ್ಷನ್‌ ಮತ್ತು ಅದಕ್ಕೆ ಹೊಂದಿಕೊಂಡ ರಸ್ತೆಗಳಲ್ಲಿ ಹೋರಾಟಗಾರರು ಸಮಾವೇಶಗೊಂಡಿದ್ದರು. 

ಹೋರಾಟ ನಿರಂತರ
ಪ್ರತಿಭಟನೆಯಲ್ಲಿ ಪಾಲ್ಗೊಂಡ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ತುಳುನಾಡಿನ ಜನರ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಜಾಗೃತವಾಗುತ್ತಿದೆ. ಬೇರು ಕತ್ತರಿಸಿದರೆ ಮರ ಉಳಿಯಲು ಸಾಧ್ಯವಿಲ್ಲ. ಜನರಿಗೆ ಸೂಕ್ತ ಉತ್ತರ ಸಿಗುವ ತನಕ ಹೋರಾಟ ನಿರಂತರವಾಗಲಿ. ಜಿಲ್ಲೆಯ ಸಂತರು, ಯೋಜನೆಯ ವಿರೋಧಿ ಹೋರಾಟದಲ್ಲಿ ಸದಾ ಇರುತ್ತಾರೆ ಎಂದರು.

ಮುಸ್ಲಿಂ ಧರ್ಮಗುರು ಎಸ್‌.ಬಿ. ಮಹಮ್ಮದ್‌ ಧಾರಿಮಿ ಮಾತನಾಡಿ, ನೇತ್ರಾವತಿಯನ್ನು ಪ್ರಕೃತಿ ದತ್ತವಾಗಿ ಹರಿಯಲು ಬಿಡಬೇಕು. ನೇತ್ರಾವತಿ ಬರಡಾದರೆ ಕರಾವಳಿ ಬರಡಾದೀತು ಎಂದರು.

ಸರ್ವ ಸಮಾಜದ ಸಂಗಮವಾಗಿದೆ
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮತ್ತು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ  ಮಾತನಾಡಿ, ನೇತ್ರಾವತಿ ನದಿಯ ರಕ್ಷಣೆಗೆ ಎಲ್ಲರೂ ಒಂದಾಗಿದ್ದಾರೆ. ಅವೈಜ್ಞಾನಿಕ ಯೋಜನೆ ಜಾರಿಯ ವಿರುದ್ಧ ಇಂದು ನಡೆದ ರಸ್ತೆ ತಡೆ ಮುಷ್ಕರ ಸರಕಾರಕ್ಕೆ ಮುಂದಿನ ಹೋರಾಟದ ಎಚ್ಚರಿಕೆಯಾಗಿದೆ ಎಂದರು.

ಸಹ್ಯಾದ್ರಿ ಸಂಚಯನದ ಸಂಚಾಲಕ ದಿನೇಶ್‌ ಹೊಳ್ಳ ಮಾತನಾಡಿ, ಎತ್ತಿನಹೊಳೆ ಯೋಜನೆಯ ಮೂಲಕ ರಾಜಕಾರಣಿಗಳು ನೀರು ತುಂಬಿದ್ದ ನೇತ್ರಾವತಿಯಲ್ಲಿ ಜನರ ಕಣ್ಣೀರು ತುಂಬಿಸಲು ಹೊರಟಿದ್ದಾರೆ. ಅನುಷ್ಠಾನಕ್ಕೆ ಮೊದಲು ಸಾಧಕ ಬಾಧಕಗಳ ಅಧ್ಯಯನ ನಡೆಯಲಿ. ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದರು.

ಒಡಿಯೂರಿನ ಸಾಧ್ವಿ ಮಾತಾನಂದಮಯಿ ಮಾತನಾಡಿ, ಪ್ರಕೃತಿಯನ್ನು ಸಂಸ್ಕೃತಿಯನ್ನಾಗಿ ಮಾಡಬೇಕು. ವಿಕೃತಿಯಾದರೆ ಮನುಕುಲಕ್ಕೆ ಉಳಿಗಾಲವಿಲ್ಲ. ಎತ್ತಿನಹೊಳೆ ಯೋಜನೆಯನ್ನು ಎಲ್ಲರೂ ವಿರೋಧಿಸಬೇಕು ಎಂದರು. 

ಕಣಿಯೂರು ಮಠದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಮಾತನಾಡಿ, ದ.ಕ. ಜಿಲ್ಲೆಧಿಯನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆಧಿಯನ್ನು ಯಾವುದೇ ಸವಾಲುಗಳನ್ನು ಎದುರಿಸಿಧಿಯಾದರೂ ತಡಯಲೇ ಬೇಕು ಎಂದರು.

ರೈತ ಸಂಘದ ವಿಜಯ ಕುಮಾರ್‌ ಹೆಗ್ಡೆ ಮಾತಧಿನಾಡಿ, ಆಕ್ರೋಶಿತ ಜನ ಅಧಿಕಾರಿಗಳ ಮನೆಗೆ ನುಗ್ಗುವ ಮೊದಲು ಎತ್ತಿನಹೊಳೆ ಯೋಜನೆಧಿ ನಿಲ್ಲಿಸಿ ಎಂದು ಎಚ್ಚರಿಸಿದರು. ಮಲೆನಾಡು ಹಿತರಕ್ಷಣಾ ವೇದಿಕೆಯ ಕಿಶೋರ್‌ ಶಿರಾಡಿ ಮಾತಧಿನಾಡಿ, ವೈಜ್ಞಾನಿಕ ರೀತಿಯಲ್ಲಿ ಪ್ರಕೃತಿ ಸೃಷ್ಟಿ ಸಾಧ್ಯಧಿವಿಲ್ಲ. ಅನಾಹುತಗಳಿಗೆ ಕಾರಣಧಿವಾಗುವ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಧಿಸಲು ನಾವು ಯಾವ ಶಿಕ್ಷೆಗೂ ಸಿದ್ಧರಾಗಬೇಕು ಎಂದರು.

ಪಶ್ಚಿಮಘಟ್ಟ  ಉಳಿಸಿ
ಎತ್ತಿನಹೊಳೆ ಯೋಜನೆ ವಿರೋಧಿ ಸಮಿತಿಯ ಸಂಚಾಲಕ ಡಾ| ನಿರಂಜನ ರೈ ಮಾತನಾಡಿ, ನದಿಯ ಮೂಲವನ್ನು ಕತ್ತರಿಸಿ ನದಿ ಪಾತ್ರದ ಪ್ರದೇಶವನ್ನು ಬರಡಾಗಿಸುವ ಅಧಿಕಾರವನ್ನು ಪ್ರಜಾಪ್ರಭುತ್ವದಲ್ಲಿ ಯಾವ ಸರಕಾರಕ್ಕೂ ಯಾವ ಅಧಿಕಾರಿಗಳಿಗೂ ನೀಡಿಲ್ಲ. ನೇತ್ರಾವತಿಯ ಅಸ್ತಿತ್ವಕ್ಕೆ ಸಂಚಕಾರ ತರುವ ಯಾವುದೇ ಯೋಜನೆಯ ಅನುಷ್ಠಾನವನ್ನು ಜಿಲ್ಲೆಯ ಜನ ಬೆವರು, ನೆತ್ತರು ಹರಿಸಿಯಾದರೂ ತಡೆಗಟ್ಟುತ್ತಾರೆ.
ಇಂದಿನ ಪ್ರತಿಭಟನೆಯ ಸಂದೇಶ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಅರ್ಥವಾಗಲಿ ಎಂದರು.

ಸಂಸದ - ಶಾಸಕರ ಬೆಂಬಲ
ಎತ್ತಿನಹೊಳೆ ಯೋಜನೆಯ ವಿರೋಧಿ ರಸ್ತೆ ತಡೆ ಹೋರಾಟದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ವಸಂತ ಬಂಗೇರ ಪಾಲ್ಗೊಂಡು ಜಿಲ್ಲೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು ಪ್ರತಿಭಟನೆ
ಯಲ್ಲಿ ಸಾರ್ವಜನಿಕರ ಜತೆ ಕುಳಿತುಕೊಂಡರು.

ಆಡಳಿತಗಾರರಿಗೆ ಜನರ ಸವಾಲು
ಯೋಜನೆ ವಿರೋಧಿ ಹೋರಾಟಗಾರ ಶಶಿಧರ ರೈ ಮಾತನಾಡಿ, ಜಿಲ್ಲೆಯ ಜನ ಶಾಂತ ಮನೋಭಾವದವರು ಎಂದು ಭಾವಿಸಿ ಎತ್ತಿನಹೊಳೆ ಯೋಜನೆಯಂತಹ ಮರಣ ಶಾಸನವನ್ನು ರೂಪಿಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅವೈಜ್ಞಾನಿಕ ಯೋಜನೆ ವಿರುದ್ಧ ಆಡಳಿತಗಾರರಿಗೆ ಸವಾಲು ಹಾಕಲು ಜಿಲ್ಲೆಯ ಪ್ರಜ್ಞಾವಂತ ಜನ ಸಿದ್ಧರಿದ್ದಾರೆ ಎಂದರು.

ಹೋರಾಟ ಸಮಿತಿಯ ಜಯಂತ ಪೊರೋಳಿ ಸ್ವಾಗತಿಸಿ, ಲೋಕೇಶ್‌ ಬೆತ್ತೋಡಿ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು ಅವರು ಕಾರ್ಯಕ್ರಮ ನಿರ್ವಹಿಸಿದರು.

ಶಾಸಕ ಯೂ ಟರ್ನ್!
ಉಪ್ಪಿನಂಗಡಿ: ಎತ್ತಿನಹೊಳೆ ಯೋಜನೆ ವಿರುದ್ಧ ಅಗತ್ಯ ಬಿದ್ದರೆ ರಾಜೀಧಿನಾಮೆ ಕೊಟ್ಟಾದರೂ ಹೋರಾಟ ಮಾಡುಧಿತ್ತೇನೆ ಎಂದು ಕೆಲ ದಿನಗಳ ಹಿಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಮಂಗಳವಾರ ಯೂಟರ್ನ್ ಹೊಡೆದಿದ್ದು, ರಾಜೀನಾಮೆ ಕೊಡುವ ವಿಚಾರದ ಕುರಿತು ಯೋಚಿಸಿ ನಿರ್ಧಧಿರಿಸುತ್ತೇನೆ ಎಂದಿದ್ದಾರೆ.

ಉಪ್ಪಿನಂಗಡಿಯಲ್ಲಿ ನಡೆದ ರಸ್ತೆ ತಡೆ ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಸಂದರ್ಭ ರಾಜೀನಾಮೆ ಕುರಿತು ಪತ್ರಧಿಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ವಿಧಾನಸಭೆಯ ಒಳಗೆ, ಹೊರಗೆ ತಾನು ಎತ್ತಿನಹೊಳೆ ಯೋಜನೆ ವಿರೋಧಿಸಿದ್ದೇನೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಜನರು ಒಟ್ಟಾಗಿ ಇದರ ವಿರುದ್ಧ ಧ್ವನಿ ಎತ್ತಬೇಕು. ಪ್ರಧಾನಿ ಬಳಿ ನಿಯೋಗ ತೆರಳುವುಧಿದಾದರೆ ನಾನೂ ಭಾಗವಹಿಸುಧಿತ್ತೇನೆ ಎಂದು ಅವರು ಹೇಳಿದರು.

ಮೂರು ತಾಸು ಕಾಲ ನಡೆದ ರಸ್ತೆ ತಡೆ
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ 3 ತಾಸು ಕಾಲ ರಸ್ತೆ ತಡೆ ಪ್ರತಿಭಟನೆ ನಡೆಯಿತು. ಬೆಳಗ್ಗೆ 10.30ಕ್ಕೆ ಆರಂಭಗೊಂಡ ಪ್ರತಿಭಟನೆ ಅಪರಾಹ್ನ 1.30ಕ್ಕೆ ಮುಕ್ತಾಯವಾಯಿತು. ಪೊಲೀಸರು ತಮ್ಮನ್ನು ಬಂಧಿಸುವ ತನಕ ಪ್ರತಿಭಟನ ಸ್ಥಳದಿಂದ ಎದ್ದೇಳುವುದಿಲ್ಲ ಎಂದು ಘೋಷಿಸಿದ್ದ ಪ್ರತಿಭಟನಕಾರರು ಪೊಲೀಸರು ಬಂಧನ ಆರಂಭಿಸಿದ ಬಳಿಕ ಸ್ಥಳದಿಂದ ತೆರವಾದರು.
ಬಂದೋಬಸ್ತ್ಗೆ 1,200 ಪೊಲೀಸರನ್ನು ನಿಯೋಜಿಸಲಾಗಿತ್ತು. ಸೋಮವಾರ ರಾತ್ರಿಯ ವೇಳೆಗೆ ಮಂಗಳವಾರದ ಪ್ರತಿಭಟನೆಯಲ್ಲಿ 8,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ  ಪೊಲೀಸರು ಬಂದೋಬಸ್ತ್ ಕ್ರಮವನ್ನು ಹೆಚ್ಚಿಸಿದರು.

145 ಮಂದಿ ಬಂಧನ
ಎತ್ತಿನಹೊಳೆ ಯೋಜನೆ ವಿರೋಧಿಸಿ ಉಪ್ಪಿನಂಗಡಿಯಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ 10,000 ಮಂದಿ ಪಾಲ್ಗೊಂಡಿದ್ದರೂ ಪೊಲೀಸರು ಹೋರಾಟ ಸಮಿತಿಯ ಸಂಚಾಲಕ ಡಾ| ನಿರಂಜನ ರೈ ಸಹಿತ 145 ಪ್ರಮುಖರನ್ನು ಮಾತ್ರ ಬಂಧಿಸಿದರು. ಬಂಧಿತರನ್ನು ಉಪ್ಪಿನಂಗಡಿ, ಪೆರಿಯಡ್ಕ, ಹೊಸಗದ್ದೆ ಶಾಲೆ ಮತ್ತು 34ನೇ ನೆಕ್ಕಿಲಾಡಿ ಗ್ರಾಮದ ಶಾಲೆಗೆ ಕೊಂಡೊಯ್ದು ಬಂಧನ ದಾಖಲೆ ನಡೆಸಿ ಬಳಿಕ ಗಂಜಿ, ಚಟ್ನಿ ಊಟ ನೀಡಿ ಬಿಡುಗಡೆಗೊಳಿಸಿದರು.

ಪ್ರತಿಭಟನಕಾರರು ಭಾಷಣದಲ್ಲಿ ಜೈಲ್‌ ಭರೋ ಚಳವಳಿ ಎಂದು ಹೇಳುತ್ತಿದ್ದ ಕಾರಣ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಳ್ಳಿಯ ಜನರಲ್ಲಿ ಪೊಲೀಸರು ತಮ್ಮನ್ನು ಜೈಲಿಗೆ ಹಾಕುತ್ತಾರೆ ಎಂಬ ತಪ್ಪು ಭಾವನೆ ಕೂಡ ಮೂಡಿತ್ತು.

ಸ್ವಯಂ ಪ್ರೇರಿತ ಬಂದ್‌
ಎತ್ತಿನಹೊಳೆ ಯೋಜನೆ ವಿರೋಧಿಸಿ ಉಪ್ಪಿನಂಗಡಿಯಲ್ಲಿ ಇಂದು ನಡೆದ ರಸ್ತೆ ತಡೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ವರ್ತಕರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಪ್ರೇರಿತ ಬಂದ್‌ ನಡೆಸಿದರು. ಹೋರಾಟ ಸಮಿತಿಯು ರಸ್ತೆ ತಡೆ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿತ್ತು. ಬಂದ್‌ ಕರೆ ನೀಡಿರಲಿಲ್ಲ. ಆದರೆ ವರ್ತಕರು ಬೆಳಗ್ಗೆ 10 ಗಂಟೆಯ ಬಳಿಕ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು.

ಅರ್ಧದಲ್ಲೇ ತಡೆದರು
ರಸ್ತೆ ತಡೆ ಹೋರಾಟಕ್ಕೆ ಪೊಲೀಸರ ನಿರೀಕ್ಷೆಗೂ ಮೀರಿ ಜನ ಉಪ್ಪಿನಂಗಡಿಗೆ ಬರುತ್ತಿರುವುದನ್ನು ಕಂಡು ಪೊಲೀಸರು ನೆಲ್ಯಾಡಿ ಕಡೆಯಿಂದ ಬಂದವರನ್ನು ರಾ.ಹೆ. 75ರಲ್ಲಿನ ಹಳೆ ಗೇಟು ಬಳಿ ತಡೆದರು. ಪುತ್ತೂರು, ಸುಳ್ಯ ಕಡೆಗಳಿಂದ ಬಂದವರನ್ನು 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ತಡೆದರು. ಈ ಕಾರಣದಿಂದ ಕನಿಷ್ಠ ಎರಡು ಸಾವಿರ ಮಂದಿಗೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿಭಟನೆ ಮುಗಿದ ಬಳಿಕ ಸ್ಥಳಕ್ಕೆ ಬಂದು ಸಂಘಟಕರಲ್ಲಿ ಈ ವಿಚಾರವನ್ನು ತಿಳಿಸಿದರು.

ಅಶ್ವಾರೋಹಿ ಪ್ರತಿಭಟನಕಾರ
ಮೂಲತಃ ಸಕಲೇಶಪುರ ನಿವಾಸಿ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿ ಅವಿನಂದನ್‌ ತನ್ನ ಶ್ವೇತವರ್ಣದ ಕುದುರೆ ಏರಿಬಂದು ಚಳವಳಿಯಲ್ಲಿ ಭಾಗವಹಿಸಿ ಜನರ ಗಮನ ಸೆಳೆದರು. ಪೊಲೀಸರು ಬಂಧಿಸುವಾಗ ತನ್ನನ್ನು ಕುದುರೆ ಸಹಿತ ಬಂಧಿಸುವಂತೆ ಆಗ್ರಹಿಸಿದರು. ಆದರೆ ಇವರ ಬೇಡಿಕೆಗೆ ಪೊಲೀಸರು ಮನ್ನಣೆ ನೀಡಲಿಲ್ಲ.


Trending videos

Back to Top