CONNECT WITH US  

ಐಸ್‌ಕ್ರೀಂನಲ್ಲಿ ಸಯನೈಡ್‌ ಬೆರೆಸಿ ಮಕ್ಕಳು, ಪತ್ನಿ ಜತೆ ಆತ್ಮಹತ್ಯೆ

ಕೊಲ್ಲಮೊಗ್ರು: 2014 ಮೇ 7ರಂದು ಬೆಂಗಳೂರು ಮೂಲದ ನಂಜುಂಡಯ್ಯ, ಪತ್ನಿ ಜಯಲಕ್ಷ್ಮೀ, ಪುತ್ರ ಪವನ್‌ ಹಾಗೂ ಪುತ್ರಿ ಶ್ರೀಲಕ್ಷ್ಮೀ ಜತೆ ಸುಬ್ರಹ್ಮಣ್ಯಕ್ಕೆ ಬಂದು ಇಲ್ಲಿಯ ಖಾಸಗಿ ವಸತಿಗೃಹದ ನಾಲ್ಕನೇ ಮಹಡಿಯ ಕೊಠಡಿಯನ್ನು ಬಾಡಿಗೆ ಪಡೆದು ತಂಗಿದ್ದರು. ಬಳಿಕ ದೇವರ ದರ್ಶನ ಪಡೆದು ಅಲ್ಲೇ ಉಳಿದಿದ್ದರು.

ಮೇ 8ರಂದು ವಸತಿಗೃಹ ತೆರವುಗೊಳಿಸುವ ವಿಚಾರವಾಗಿ ವಸತಿಗೃಹದ ಕೌಂಟರ್‌ನವರು ದೂರವಾಣಿ ಮೂಲಕ ಆತನಲ್ಲಿ ವಿಚಾರಿಸಿದಾಗ ಇನ್ನು ಎರಡು ದಿನ ತಾವು ಇಲ್ಲೇ ತಂಗುವುದಾಗಿ ನಂಜುಂಡಯ್ಯ ಹೇಳಿದ್ದರು. ಬಳಿಕ ಮೇ 10ರಂದು ಸಂಜೆ ಕುಟುಂಬ ತಂಗಿದ್ದ ಕೊಠಡಿಯಿಂದ ವಾಸನೆ ಬರಲು ಆರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಸತಿಗೃಹದ ಸಿಬಂದಿಗೆ ಸಂಶಯ ಬಂದು ಪರಿಶೀಲಿಸಿದಾಗ ಆ ನಾಲ್ಕು ಮಂದಿ ಕೊಠಡಿಯ ಒಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು  ಬೆಳಕಿಗೆ ಬಂತು.

ಸಾಮೂಹಿಕ ಆತ್ಮಹತ್ಯೆ

ಘಟನೆ ನಡೆದು ಬೆಳಕಿಗೆ ಬರುವ ಹೊತ್ತು ಬಾಡಿಗೆ ಪಡೆದ  ವಸತಿಗೃಹದ ಕೊಠಡಿಯ ಒಳಗಿನಿಂದ ಚಿಲಕ ಹಾಕಲಾಗಿತ್ತು. ಬೀಗ ಮುರಿದು ಒಳನುಗ್ಗಿ  ಪರೀಕ್ಷಿಸಿದಾಗ ನಾಲ್ಕು ಶವಗಳು ಉಬ್ಬಿಕೊಂಡು ವಿಪರೀತ ವಾಸನೆ ಬರುತ್ತಿದ್ದವು. ಕೊಠಡಿಯ ಟೇಬಲ್‌ನಲ್ಲಿ  ಅರ್ಧ ತಿಂದ ಐಸ್‌ಕ್ರೀಮ್‌ ಹಾಗೂ ಬಾದಾಮಿ ಮಿಲ್ಕ್ ಬಾಟಲಿಗಳಿದ್ದವು. ಜತೆಗೆ ಸ್ಟೀಲ್‌ ಪಾತ್ರೆಯಲ್ಲಿ ಕಲಸಿದ ಸಯನೈಡ್‌ ಕಂಡುಬಂದಿತ್ತು.

ಐಸ್‌ಕ್ರೀಮ್‌ಗೆ ಸಯನೈಡ್‌ ಸೇರಿಸಿ ತಿಂದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅಂದಾಜಿಸಲಾಗಿತ್ತು. ದೇವರ ದರುಶನ ಪಡೆದು ಬಂದು ಕೊಠಡಿಯಲ್ಲಿ ವಿಷಪ್ರಾಶನ ಮುನ್ನ ಕುಟುಂಬದ ಸದಸ್ಯರ ಬಳಿ ಚರ್ಚಿಸಿ ಸಾಮೂಹಿಕ ಆತ್ಮಹತ್ಯೆ ನಡೆಸುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ.

ಅದರಂತೆ ಪೊಲೀಸರು ಇದೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣವೆಂದು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಮಂಗಳೂರಿನ ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಮಹಾಬಲೇಶ್‌ ಶೆಟ್ಟಿ ಅವರ ತಂಡವು ಶವದ ಮರಣೋತ್ತರ ಪರೀಕ್ಷೆ ನಡೆಸಿತ್ತು. ಬಳಿಕ ವರದಿಯನ್ನು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಡೆತ್‌ನೋಟ್‌ನಲ್ಲಿ ಏನಿತ್ತು?

ನಂಜುಂಡಯ್ಯ ಕುಟುಂಬ ಆತ್ಮಹತ್ಯೆ ಮಾಡುವ ಮುನ್ನ ಡೆತ್‌ನೋಟು ಬರೆದಿಟ್ಟಿರುವುದು ಪೊಲೀಸರಿಗೆ ಶೋಧದ ವೇಳೆ ದೊರಕಿದೆ. ಬರೆದಿಟ್ಟ ಡೆತ್‌ನೋಟ್‌ನಲ್ಲಿ ತನಗೆ ಮೂವರಿಂದ ಜೀವ ಬೆದರಿಕೆ ಬಂದಿದೆ. ಸಾಲವಿದೆ. ಆದರೆ ಹಲವರು ನನಗೆ ಹಣ ನೀಡಲು ಬಾಕಿ ಇದೆ. ಆರ್ಥಿಕವಾಗಿ ಸೋತ ನಮ್ಮ ಕುಟುಂಬದ ಈ ಸಾವಿಗೆ  ನಾಲ್ಕು ಮಂದಿಯ ಸಹಮತವಿದೆ ಎಂದು ಬರೆದು ನಾಲ್ವರ ಸಹಿ ಇರುವುದು ಗೋಚರಿಸಿದೆ.

ಮುಗ್ಧ ಜೀವಗಳು ಬಲಿ

ಅಪ್ಪ ಮಾಡಿದ ತಪ್ಪಿಗೆ ಹೆಂಡತಿ ಮಕ್ಕಳು ಶಿಕ್ಷೆ ಅನುಭವಿಸಬೇಕಾಯಿತು. ಹಾಲು ಮತ್ತು ವಿಷ ಏನೆಂದು ಅರಿಯದ ಮುಗ್ಧ ಕರುಳ ಕುಡಿಗಳು ತಂದೆ ನೀಡಿದ ಐಸ್‌ಕ್ರೀಮ್‌ನಲ್ಲಿ ವಿಷ ಇದೆ ಎಂಬುದನ್ನು ಅರಿಯದಿದ್ದರೂ ತಂದೆ ಮಾಡಿದ ಕೃತ್ಯಕ್ಕೆ ಬಲಿಯಾಗಬೇಕಾಯಿತು. ಅರಳಿ ಬದುಕಬೇಕಾಗಿದ್ದ ಮಕ್ಕಳು ಸಾವಿನ ದವಡೆಗೆ ತಳ್ಳಲ್ಪಟ್ಟು ಬದುಕು ಮುದುಡಿ ಹೋದದ್ದು ದುರಂತವೇ ಸರಿ.

ಘಟನೆಗೆ ಕಾರಣ

ನಂಜುಂಡಯ್ಯ ಓರ್ವ ಚಿನ್ನದ ವ್ಯಾಪಾರಿ ಯಾಗಿದ್ದು, ಚಿನ್ನದ ಸ್ಕೀಂ ನಡೆಸುತ್ತಿದ್ದ. ಹಾಗಾಗಿ ಹಣದ ವ್ಯವಹಾರ ವಿಪರೀತವಿತ್ತು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣ ವಿಪರೀತ ಸಾಲದ ಹೊರೆ ಇತ್ತು. ಜತೆಗೆ ಹೊರಗಿನಿಂದಲೂ ಆತನಿಗೆ ಹಣ ಬರಲು ಬಾಕಿ ಇತ್ತು. ಈ ನಡುವೆ ಕೆಲವೊಂದು ಹವ್ಯಾಸಗಳನ್ನು ಈತ ಹೊಂದಿದ್ದ. ಜೂಜು, ಮಟ್ಕ ಇತ್ಯಾದಿ ದುರಭ್ಯಾಸಗಳು ಇದ್ದ ಕಾರಣ ನಷ್ಟ ಅನುಭವಿಸಿದ್ದ. ಪರಿಣಾಮ ಅನ್ಯ ಮಾರ್ಗವಿಲ್ಲದೆ ಈತ ಆತ್ಮಹತ್ಯೆಗೆ ಶರಣಾಗಬೇಕಾಯಿತು ಎಂಬುದು ಪೊಲೀಸ್‌ ತನಿಖೆ ವೇಳೆ ದೃಢಪಟ್ಟಿದ್ದು, ಕುಟುಂಬದ ಸಾವಿಗೆ ಸಾಲದ ಹೊರೆಯೇ ಕಾರಣ ಎಂದು ಸಾಬೀತಾಯಿತು. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಇವರು ಸೇವಿಸಿದ್ದು ಸಯನೈಡ್‌ ಎಂದು ಇತ್ತೀಚೆಗೆ ಬಂದ ಮಾಹಿತಿಯಲ್ಲಿ ಖಚಿತಗೊಂಡಿದೆ.

ಬಾಲಕೃಷ್ಣ  ಭೀಮಗುಳಿ

Trending videos

Back to Top