ಯುಪಿಸಿಎಲ್ ಸ್ಥಾವರ ವಿಸ್ತರಣೆಗೆ ಬೆಂಬಲವೇ ಹೆಚ್ಚು

ಕಾಪು: ಎಲ್ಲೂರು ಮತ್ತು ಸಾಂತೂರು ಗ್ರಾಮದಲ್ಲಿ ಅದಾನಿ ಪವರ್ ಲಿಮಿಟೆಡ್ನ ಅಂಗ ಸಂಸ್ಥೆ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ನ ಉದ್ದೇಶಿತ ಕಲ್ಲಿದ್ದಲು ಆಧಾರಿತ ಹೆಚ್ಚುವರಿ 2*800 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರದ ವಿಸ್ತರಣಾ ಯೋಜನೆಗೆ ಜನಾಭಿಪ್ರಾಯ ಕೇಳುವ ಸಲುವಾಗಿ ನ. 10ರಂದು ಪಣಿಯೂರು ದುರ್ಗಾದೇವಿ ಹಿ. ಪ್ರಾ. ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಉಪಸ್ಥಿತರಿದ್ದವರಲ್ಲಿ ಶೇ. 95ರಷ್ಟು ಮಂದಿ ಘಟಕ ವಿಸ್ತರಣೆಗೆ ಷರತ್ತುಬದ್ಧ ಬೆಂಬಲ ವ್ಯಕ್ತಪಡಿಸುವ ಮೂಲಕ ಯುಪಿಸಿಎಲ್ ವಿಸ್ತರಣೆಗೆ ಹಸಿರು ಕಾಪೆìಟ್ ಹಾಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ದೇಶಿತ ಘಟಕದ ಕುರಿತು ತಾಂತ್ರಿಕ ವಿವರಣೆ ನೀಡಿದ ಬಳಿಕ ಸುಮಾರು 110ಕ್ಕೂ ಅಧಿಕ ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇವರಲ್ಲಿ ಕೇವಲ ಬೆರಳೆಣಿಕೆ ಮಂದಿ ಮಾತ್ರ ಕಂಪೆನಿ ವಿರುದ್ಧವಾಗಿ ಮತ್ತು ಬಹುತೇಕ ಮಂದಿ ಕಂಪೆನಿ ಪರವಾಗಿ, ಕಂಪೆನಿ ಕಳೆದ ಕೆಲವು ಸಮಯಗಳಿಂದ ನಡೆಸಿಕೊಂಡು ಬರುತ್ತಿರುವ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡುವ ಮೂಲಕ ಯುಪಿಸಿಎಲ್ ಮೂರನೇ ಹಂತದ ವಿಸ್ತರಣೆಗೆ ಬಹುತೇಕ ಹಸಿರು ನಿಶಾನೆ ತೋರಿಸಿದ್ದಾರೆ.
ಮೊದಲು ಭರವಸೆ ಈಡೇರಿಸಿರಿ: ವಿನಯ ಕುಮಾರ್ ಸೊರಕೆ
ಸಭೆಯಲ್ಲಿ ಮಾತನಾಡಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಯುಪಿಸಿಎಲ್ ಕಂಪೆನಿ 2002ರಲ್ಲಿ ಘಟಕ ಪ್ರಾರಂಭದ ಸಂದರ್ಭ ನೀಡಿರುವ ಭರವಸೆಯನ್ನೇ ಇನ್ನೂ ಈಡೇರಿಸಿಲ್ಲ. ಕಂಪೆನಿ ಅಂದಿನಿಂದ ಕಳೆದ ವರ್ಷದ ವರೆಗೂ ಜನರ ಭಾವನೆಗೆ ವಿರುದ್ಧವಾಗಿಯೇ ವರ್ತಿಸುತ್ತಾ ಬಂದಿದೆ. ಇದರ ನಡುವೆಯೇ ಈಗ ಮತ್ತೆ ಘಟಕ ವಿಸ್ತರಣೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಹಿಂದೆ ನೀಡಿರುವ ಆಶ್ವಾಸನೆಯನ್ನು ಮೊದಲು ಈಡೇರಿಸಿಸಲಿ. ಬಳಿಕ ಘಟಕ ವಿಸ್ತರಣೆ ಬಗ್ಗೆ ಮಾತನಾಡೋಣ ಎಂದರು.
ಕಾಪು ಕ್ಷೇತ್ರಕ್ಕೆ ಉಚಿತ ವಿದ್ಯುತ್ ನೀಡಲು ಕರೆ
ಕೃಷಿ ಪ್ರಧಾನ ಪ್ರದೇಶದಲ್ಲಿ ಕೃಷಿಯೇ ಮಾಡದಂತಹ ಪರಿಸ್ಥಿತಿಯಿದ್ದು, ಕೃಷಿಕರು ಊರು ಬಿಟ್ಟು ಹೋಗುವಂತಾಗಿದೆ. ಕಳೆದ ಒಂದು ವರ್ಷಗಳಿಂದೀಚೆಗೆ ಸಿಎಸ್ಆರ್ ಅನುದಾನ ನೀಡುತ್ತಿದ್ದು, ಇದು ಎಳ್ಳಷ್ಟೂ ಸಾಕಾಗುತ್ತಿಲ್ಲ. ಯುಪಿಸಿಎಲ್ಗೆ ಜನರು ನೀಡಿರುವ ಭೂಮಿ, ತ್ಯಾಗಕ್ಕೆ ಬದಲಾಗಿ ಇಡೀ ಕಾಪು ಕ್ಷೇತ್ರಕ್ಕೆ ಉಚಿತ ವಿದ್ಯುತ್ ನೀಡಬೇಕು.
ಮನೆಗೊಂದರಂತೆ ಉದ್ಯೋಗ ನೀಡಬೇಕು. ಮೀನುಗಾರರಿಗೆ ಮತ್ತು ಕೃಷಿಕರಿಗೆ ಉತ್ತಮ ಪರಿಹಾರ ನೀಡಬೇಕು. ಪರಿಸರಕ್ಕೆ ಆಗಿರುವ ಹಾನಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಯೋಜನಾ ಪ್ರದೇಶದ ಸುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಅರಣ್ಯ ನಿರ್ಮಾಣ ಮಾಡಬೇಕು. ಕಂಪೆನಿ 100 ಬೆಡ್ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿ ಎಂಬಿತ್ಯಾದಿ ಬೇಡಿಕೆಗಳ ಪಟ್ಟಿಯನ್ನು ಶಾಸಕ ಸೊರಕೆ ಜಿಲ್ಲಾಧಿಕಾರಿ ಮತ್ತು ಕಂಪೆನಿ ಮುಂದಿರಿಸಿದರು.
ಸೋಲಾರ್ ಘಟಕಕ್ಕೆ ಒತ್ತು ನೀಡಿ: ಬಾಲಕೃಷ್ಣ ಶೆಟ್ಟಿ
ನಂದಿಕೂರು ಜನಜಾಗೃತಿ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಇಂದು ಜಿಲ್ಲೆಯಲ್ಲಿ ಸೆಕ್ಷನ್ ಜಾರಿ ಮಾಡಿದ್ದಾರೆ. ಆದರೆ ಎಲ್ಲೂರಿನಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸರ ಸಮ್ಮುಖದಲ್ಲಿಯೇ ಸಾರ್ವಜನಿಕ ಸಭೆ ನಡೆಯುತ್ತಿದೆ. ಇದು ಸರಿಯೇ ಎಂದು ಪ್ರಶ್ನಿಸಿದರು. ಯುಪಿಸಿಎಲ್ ಬಗ್ಗೆ ಈಗಾಗಲೇ ಪರಿಸರ ಸಂರಕ್ಷಣಾ ಇಲಾಖೆ, ನೀರಿನ ಆಯೋಗವೂ ಸೇರಿದಂತೆ ಹಲವು ಆಯೋಗಗಳು ವಿರುದ್ಧ ವರದಿ ನೀಡಿವೆ. ಕರಾವಳಿಯ ಪರಿಸರ ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ಯೋಜನೆ ವಿಸ್ತರಣೆ ಬೇಡ. ಅಷ್ಟಕ್ಕೂ ಯೋಜನೆ ಆಗಲೇಬೇಕೆಂದಿದ್ದರೆ ಸೋಲಾರ್ ಘಟಕಕ್ಕೆ ಹೆಚ್ಚಿನ ಒತ್ತು ನೀಡಿ ಎಂದರು.
ಯುಪಿಸಿಎಲ್ ಅನುಷ್ಠಾನದಲ್ಲಿ ಎಲ್ಲ ಸರಕಾರಗಳ ಕೊಡುಗೆಯಿದೆ:ಡಾ| ದೇವಿಪ್ರಸಾದ್ ಶೆಟ್ಟಿ
ಉಡುಪಿ ಜಿಲ್ಲಾ ಗ್ರಾ. ಪಂ. ಒಕ್ಕೂಟಗಳ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಯುಪಿಸಿಎಲ್ ವಿರುದ್ಧ ಹೋರಾಟದಿಂದ ಮೈತುಂಬಾ ಕೇಸ್ ದಾಖಲಿಸಿ ಕೊಂಡಿದ್ದೇವೆ. ಯುಪಿಸಿಎಲ್ ಕರಾವಳಿಯಲ್ಲಿ ಬೇರೂರುವಲ್ಲಿ ರಾಜ್ಯದ ಪ್ರತೀ ಸರಕಾರಗಳ ಕೊಡುಗೆಯಿದೆ. ಕರಾವಳಿ ಇತಿಹಾಸದಲ್ಲೇ ಪ್ರಥಮವೆಂಬಂತೆ ಯುಪಿಸಿಎಲ್-ಅದಾನಿ ಸಮೂಹ ಸಂಸ್ಥೆ ತನ್ನ ಸಿಎಸ್ಆರ್ ಅನುದಾನವನ್ನು ಗ್ರಾಮಾಭಿವೃದ್ಧಿಗಾಗಿ ಕೊಡುಗೆ ನೀಡಿದ್ದು, ಈ ಕೊಡುಗೆಯನ್ನು ಕಾಪು ಕ್ಷೇತ್ರದ ಎಲ್ಲ ಗ್ರಾ. ಪಂ.ಗಳಿಗೂ ವಿಸ್ತರಿಸಬೇಕು. ಸ್ಥಳೀಯರಿಗೆ ಸಂಪೂರ್ಣ ಉದ್ಯೋಗವಕಾಶ ನೀಡಬೇಕು. ಜನರಿಗೆ ಮತ್ತು ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಯೋಜನೆ ವಿಸ್ತರಿಸುವುದಾದಲ್ಲಿ ಯೋಜನೆಗೆ ಸಹಮತವಿದೆ. ಆದರೆ ಯಾವುದೇ ಕನಿಷ್ಠ ಮಟ್ಟದ ತೊಂದರೆಗಳಾದರೂ ಕಂಪೆನಿ ಮತ್ತು ಅಧಿಕಾರಿಗಳಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆಯೊಡ್ಡಿದರು.
ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯ: ಲಾಲಾಜಿ ಮೆಂಡನ್
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಯುಪಿಸಿಎಲ್ ವಿರುದ್ಧ ಹೋರಾಟ ಮಾಡಿ, ನಮ್ಮ ಮೇಲೆ, ನಮ್ಮ ಪಕ್ಷದ ಮುಖಂಡರ ಮೇಲೆ ಹಲವು ಕೇಸುಗಳು ದಾಖಲಾಗಿವೆ. ಬಂಧನಕ್ಕೂ ಒಳಗಾಗಿದ್ದೇವೆ. ಆದರೂ ಕಂಪೆನಿ ಅನುಷ್ಠಾನಕ್ಕೆ ಬಂದಿದೆ. ಇನ್ನು ಇದನ್ನು ಓಡಿಸಲು ಸಾಧ್ಯವಿಲ್ಲ. ಯುಪಿಸಿಎಲ್-ಅದಾನಿ ಗ್ರೂಫ್ಸ್ನ ಒಡೆತನಕ್ಕೆ ಬಂದ ಬಳಿಕ ಸಾಮಾಜಿಕ ಕಾರ್ಯಗಳಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಸುತ್ತಲಿನ ಎಲ್ಲ ಗ್ರಾಮಗಳಿಗೂ ಈ ಬೆಂಬಲ ವಿಸ್ತರಣೆಯಾಗಲಿ. ಮೀನುಗಾರರ ಬಹುಕಾಲದ ಬೇಡಿಕೆ ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೂ ಯುಪಿಸಿಎಲ್-ಅದಾನಿ ಗ್ರೂಫ್ಸ್ ತನ್ನ ಸಹಕಾರ ನೀಡಲಿ ಎಂದರು.
ಎಚ್ಚರರಾಗೋಣ: ವಿಜಯ ಹೆಗ್ಡೆ
ಯುಪಿಸಿಎಲ್ ವಿರುದ್ಧ ಹೋರಾಟಗಾರ ವಿಜಯ ಹೆಗ್ಡೆ ಮಾತನಾಡಿ, ಇಂದಿನ ಪರಿಸರ ಸಾರ್ವಜನಿಕ ಸಭೆ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯೋ ಅಥವಾ ಕಂಪೆನಿ ಪರ ಅಭಿಪ್ರಾಯ ಸಂಗ್ರಹಣಾ ಸಭೆಯೋ ಎಂಬ ಸಂಶಯ ಎದ್ದಿವೆ. ಯಾವುದೇ ರೀತಿ ಪರವಾನಿಗೆ, ಯಾವುದೇ ಇಲಾಖೆಗಳಿಂದಲೂ ಪರವಾನಿಗೆ ಪಡೆಯದೇ ಯುಪಿಸಿಎಲ್ ಸ್ಥಾಪನೆಗೊಂಡಿದ್ದು, ಮತ್ತೆ ವಿಸ್ತರಣೆಯಾದಲ್ಲಿ ಸಮೃದ್ಧ ತುಳುನಾಡು ನಾಶವಾಗಿ, ಇದರ ಹಾರುಬೂದಿಯಿಂದ ಮತ್ತೂಂದು ಎಂಡೋಸಲ್ಫಾನ್ ದುರಂತಕ್ಕೆ ನಾವೇ ಸಾಕ್ಷಿಗಳಾಗಬೇಕಾದೀತು ಎಂದರು.
ಯುಪಿಸಿಎಲ್ ವಿರುದ್ಧ ಹೋರಾಟಗಾರರ ಮೇಲಿನ ಕೇಸ್ ರದ್ಧಾಗಲಿ: ಜಯಕೃಷ್ಣ ಶೆಟ್ಟಿ
ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಮಾತನಾಡಿ, ಯುಪಿಸಿಎಲ್ ವಿರುದ್ಧ ಪ್ರಥಮದಲ್ಲಿ ಹೋರಾಟ ನಡೆಸಿದ್ದೇ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ. ಆದರೆ ನಮ್ಮ ಮೇಲೂ ವಿನಾ ಕಾರಣ ಟೀಕೆ-ಟಿಪ್ಪಣಿ ಕೇಳಿ ಬಂದಿದ್ದವು. ಯುಪಿಸಿಎಲ್ನ್ನು ಅಂದು ವಿರೋಧಿಸಿದ್ದ ಬಹುತೇಕರು ಇಂದು ಬೆಂಬಲಿಸುತ್ತಿದ್ದಾರೆ. ಯುಪಿಸಿಎಲ್ ವಿರುದ್ಧದ ಹೋರಾಟಕ್ಕೆ ಬಂದವರ ಮೇಲೆ ಹಾಕಿರುವ ಕೇಸ್ಗಳನ್ನು ವಿಶೇಷ ಸಚಿವ ಸಂಪುಟ ಸಭೆ ರದ್ದುಗೊಳಿಸುವ ಪ್ರಯತ್ನವನ್ನು ಸರಕಾರ ಮತ್ತು ಸರಕಾರದ ಪ್ರತಿನಿಧಿಗಳು ನಡೆಸಬೇಕು ಎಂದರು.
ಅನಿಲಾಧಾರಿತ ಅಥವಾ ಸೋಲಾರ್ ಘಟಕಕ್ಕೆ ಒತ್ತು ನೀಡಿ: ಜಯಂತ್ ಭಟ್
ಎಲ್ಲೂರು ಗ್ರಾ. ಪಂ. ಉಪಾಧ್ಯಕ್ಷ ಜಯಂತ ಭಟ್ ಮಾತನಾಡಿ, ಯುಪಿಸಿಎಲ್ನಿಂದ ಉಂಟಾಗಿರುವ ಸಮಸ್ಯೆಗಳಿಂದ ನಾವು ಮನೆ ಬಿಡುವಂತಾಗಿದೆ. ಹುಟ್ಟಿದ ಊರು-ಪರಿಸರ ಬಿಟ್ಟು ಫ್ಲಾಟ್ಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಉದ್ಭವಿಸಿದೆ. ಕಂಪೆನಿ ತನ್ನ ಸಿಎಸ್ಆರ್ ಯೋಜನೆ ಬಗ್ಗೆ ಮಾತನಾಡುತ್ತಿದೆ. ಆದರೆ ಸಿಎಸ್ಆರ್ ಯೋಜನೆಯನ್ನು ಮೊದಲು ಯೋಜನಾ ಪ್ರದೇಶ ಎಲ್ಲೂರು ಗ್ರಾಮದಲ್ಲಿ ಪೂರ್ಣಗೊಳಿಸಲಿ. ಬಳಿಕ ಉಳಿದ ಗ್ರಾಮಗಳಿಗೆ ವಿಸ್ತರಿಸಲಿ. ಮುಂದೆ ಅನಿಲಾಧಾರಿತ ಅಥವಾ ಸೋಲಾರ್ ಘಟಕದ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಿ ಎಂದರು.
ಉಡುಪಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಜಿ. ಪಂ. ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ರೇಷ್ಮಾ ಯು. ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ತಾ. ಪಂ. ಸದಸ್ಯರಾದ ರಮೇಶ್ ಮೈಕಲ್ ಡಿ'ಸೋಜಾ, ಕೇಶವ ಮೊಲಿ, ಮಾಜಿ ತಾ. ಪಂ. ಸದಸ್ಯೆ ಶಾರದಾ ಪೂಜಾರಿ, ವಿವಿಧ ಗ್ರಾ. ಪಂ. ಅಧ್ಯಕ್ಷರಾದ ಡೇವಿಡ್ ಡಿ'ಸೋಜಾ, ಜಿತೇಂದ್ರ ಫುರ್ಟಾಡೋ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ಜಯಶ್ರೀ ಕೋಟ್ಯಾನ್, ಎಲ್.ವಿ. ಅಮೀನ್, ಅಂಡಾರು ದೇವಿಪ್ರಸಾದ್ ಶೆಟ್ಟಿ, ಫಾ| ಗೋಮ್ಸ್, ಶರತ್ ಗುಡ್ಡೆಕೊಪ್ಲ, ಶೇಖರ್ ಹೆಜಮಾಡಿ, ಯೋಗೀಶ್ ಶೆಟ್ಟಿ ಜೆಪ್ಪು, ಯಶವಂತ್ ಶೆಟ್ಟಿ, ಶಶಿಧರ್ ಶೆಟ್ಟಿ, ಲೋಕೇಶ್ ಕಂಚಿನಡ್ಕ, ರಾಘವೇಂದ್ರ ಉಪ್ಪೂರು, ಭರತ್ ಕುಮಾರ್ ಎರ್ಮಾಳ್, ವೈ. ಸುಕುಮಾರ್, ಸತೀಶ್ ಸಾಲ್ಯಾನ್, ಪ್ರಭಾಕರ ಇನ್ನಾ, ದಾಮೋದರ್ ಸುವರ್ಣ, ಪುಟ್ಟಮ್ಮ ಶ್ರೀಯಾನ್ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಅನುರಾಧಾ ಸ್ವಾಗತಿಸಿದರು. ಪರಿಸರ ಮಾಲಿನ್ಯ ಅಧಿಕಾರಿ ಚೆನ್ನಬಸವಣ್ಣ ತಾಂತ್ರಿಕ ಮಾಹಿತಿ ನೀಡಿದರು. ಅಧಿಕಾರಿಗಳಾದ ರಮಾನಂದ ನಾಯಕ್, ರಾಜಶೇಖರ್ ಪುರಾಣಿಕ್, ಕಾಪು ವೃತ್ತ ನಿರೀಕ್ಷಕ ವ. ಎಸ್. ಹಾಲಮೂರ್ತಿ ರಾವ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಪರ-ವಿರುದ್ಧ ಹೇಳಿಕೆ ಸಂದರ್ಭ ಸಿಳ್ಳೆ, ಚಪ್ಪಾಳೆ
ಯುಪಿಸಿಎಲ್ ನೂತನ ಘಟಕ ವಿಸ್ತರಣೆಗೆ ಸಂಬಂಧಪಟ್ಟು ನಡೆದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ 2,500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಯೋಜನೆ ಪರ ಮತ್ತು ವಿರೋಧವಾಗಿ ಮಾತನಾಡಿದವರಿಗೆ ಸಿಳ್ಳೆ-ಚಪ್ಪಾಳೆಯ ಸ್ವಾಗತ ದೊರಕಿತು. ಪರ ಮಾತನಾಡಿದವರಿಗೆ ಮಾತು ಮುಂದುವರಿಸಲು ಚಪ್ಪಾಳೆ ಸಿಕ್ಕಿದರೆ, ವಿರೋಧವಾಗಿ ಮಾತನಾಡಿದವರಿಗೆ ಮಾತು ಮುಗಿಸಲು ಸಿಳ್ಳೆಗಳು ಕೇಳಿ ಬಂದವು. ಮಂಗಳೂರಿನಿಂದ ಬಂದಿದ್ದ ಪರಿಸರ ಹೋರಾಟಗಾರ್ತಿ ವಿದ್ಯಾ ದಿನಕರ್ ಅವರಿಗೆ ಅಂತಿಮ ಕ್ಷಣದಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಯಿತು.
ಮತ್ತೆ ಧಾರಣಾಶಕ್ತಿ ಅಧ್ಯಯನಕ್ಕೆ ಕನಿಷ್ಠ ಸಂಖ್ಯೆಯ ಬೇಡಿಕೆ
ಯುಪಿಸಿಎಲ್ ಹಿಂದಿನ ಘಟಕ ಸ್ಥಾಪನೆ ಸಂದರ್ಭ ಧಾರಣಾ ಶಕ್ತಿಯ ಅಧ್ಯಯನವಾಗಬೇಕೆಂದು ಎಲ್ಲ ಹೋರಾಟಗಾರರು ಹಕ್ಕೊತ್ತಾಯ ಮಂಡಿಸಿದ್ದರು. ಆದರೆ ಧಾರಣಾ ಶಕ್ತಿ ಅಧ್ಯಯನ ಎನ್ನುವುದು ಗಗನ ಕುಸುಮವಾಗಿ ಬಿಟ್ಟಿತ್ತು. ಆದರೆ ನ. 10ರಂದು ನಡೆದ ಸಭೆಯಲ್ಲಿ ಧಾರಣಾ ಶಕ್ತಿ ಅಧ್ಯಯನವಾಗಲಿ ಎಂಬ ಬೇಡಿಕೆಯನ್ನು ಶಾಸಕ ವಿನಯ ಕುಮಾರ್ ಸೊರಕೆ, ಬಾಲಕೃಷ್ಣ ಶೆಟ್ಟಿ, ವಿಜಯ ಹೆಗ್ಡೆ, ಸಶಿಧರ್ ಶೆಟ್ಟಿ ಸಹಿತ ಕೆಲವರು ಮಾತ್ರ ಸಭೆ ಮುಂದಿರಿಸಿದ್ದು ನೆರೆದವರಲ್ಲಿ ಆಶ್ಚರ್ಯ ಮೂಡಿಸಿತು.