CONNECT WITH US  

ಕೆಎಟಿ 2 ಪೀಠ ಸ್ಥಾಪನೆಗೆ ಚಿಂತನೆ

ಬೆಂಗಳೂರು: ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ 2 ಪೀಠ ಸ್ಥಾಪನೆ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣವು ಶನಿವಾರ ಹಮ್ಮಿಕೊಂಡಿದ್ದ "ಅರೆನ್ಯಾಯಿಕ ಸಂಸ್ಥೆಗಳ ಕಾರ್ಯ ವಿಧಾನದಲ್ಲಿ ಸುಧಾರಣೆ' ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿ, ಕರ್ನಾಟಕ ಮೇಲ್ಮನವಿ ಪ್ರಾಧಿಕಾರಗಳ 2 ಪೀಠ ಸ್ಥಾಪನೆ ಹಾಗೂ ಪ್ರಾಧಿಕಾರಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಬೇಕೆಂಬ ಬೇಡಿಕೆ ಬಗ್ಗೆ ಪರಿಶೀಲನೆ ನಡೆದಿದ್ದು, ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನ್ಯಾಯಾಲಯದ ಮೇಲಿನ ಒತ್ತಡ ತಗ್ಗಿಸಲು ಅರೆ ನ್ಯಾಯಾಂಗ ಪ್ರಾಧಿಕಾರಗಳು ಇನ್ನಷ್ಟು ಸಕ್ರಮವಾಗಬೇಕಿದೆ. ಹಾಗಾಗಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಕರಣಗಳ ನಿಗಾ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದ್ದು, 9.74 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಎಂ. ಶಾಂತನಗೌಡರ್‌, ಎಲ್ಲ ಕ್ಷೇತ್ರಗಳಲ್ಲಿ ಪ್ರಕರಣ ಇತ್ಯರ್ಥಕ್ಕೆ ನ್ಯಾಯಾಧಿಕರಣಗಳಿದ್ದರೂ ಸೇವಾ ವಲಯಕ್ಕೆ ಅರೆನ್ಯಾಯಿಕ ಸಂಸ್ಥೆಗಳಿಲ್ಲ. ಇದರಿಂದಾಗಿ ಸೇವಾ ವಲಯಕ್ಕೆ ಸಂಬಂಧಪಟ್ಟಂತೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹಾಗಾಗಿ ಸೇವಾ ಕ್ಷೇತ್ರಕ್ಕೂ ನ್ಯಾಯಾಧಿಕರಣ ವಿಸ್ತರಣೆಯಾಗಬೇಕಿದ್ದು, ತ್ವರಿತ ಇತ್ಯರ್ಥಕ್ಕಾಗಿ ಪ್ರತ್ಯೇಕ ನ್ಯಾಯಾಧಿಕರಣ ಅಗತ್ಯವಿದೆ ಎಂದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌. ಕೆ.ಮುಖರ್ಜಿ, "ನ್ಯಾಯಾಲಯಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡಲು ನ್ಯಾಯಾಧಿಕರಣಗಳು ನೆರವಾಗಬೇಕು. ಕ್ಷಿಪ್ರ ನ್ಯಾಯದಾನ ಮಾಡಿದರಷ್ಟೇ ಹೈಕೋರ್ಟ್‌ನಲ್ಲಿ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ. ಅರೆ ನ್ಯಾಯಾಂಗ ಸಂಸ್ಥೆಗಳಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಪರಿಣತಿ ಪಡೆದವರನ್ನೇ ನೇಮಕ ಮಾಡಿದರೆ ಪ್ರಕರಣಗಳು ಸೂಕ್ತ ರೀತಿಯಲ್ಲಿ ಇತ್ಯರ್ಥವಾಗಲಿವೆ. ಇಲ್ಲದಿದ್ದರೆ ಪ್ರಾಧಿಕಾರಗಳಿದ್ದೂ ಪ್ರಯೋಜನವಾಗದು ಎಂದು ಹೇಳಿದರು.

ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸುಧಾರಿತ ವಿಧಾನಗಳನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡರೆ ನ್ಯಾಯದಾನ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದರು. ಸಚಿವ ಟಿ.ಬಿ.ಜಯಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿಯಾ ಇತರರಿದ್ದರು.

ಐಟಿ ದಾಳಿ ರಾಜಕೀಯ ಪ್ರೇರಿತ
ಕಾಂಗ್ರೆಸ್‌ ಮುಖಂಡರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸುತ್ತಿರುವ ದಾಳಿ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. "ರಾಜಕೀಯ ದುರುದ್ದೇಶದಿಂದಾಗಿ ಇತ್ತೀಚೆಗೆ ಕಾಂಗ್ರೆಸ್‌ ಶಾಸಕರು, ಸಚಿವರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆಯುತ್ತಿದೆ. ಬಿಜೆಪಿಯಲ್ಲೂ ಆದಾಯ ತೆರಿಗೆ ಪಾವತಿಸುವವರು, ಪಾವತಿಸದವರಿದ್ದಾರೆ. ಆದರೆ ಐಟಿ ಇಲಾಖೆ ಅಧಿಕಾರಿಗಳಿಗೆ ಕಾಂಗ್ರೆಸ್‌ ಪಕ್ಷದವರಷ್ಟೇ ಕಾಣಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಷಡ್ಯಂತ್ರ ನಡೆಸುತ್ತಿರುವುದು ಖಂಡನೀಯ ಎಂದರು.


Trending videos

Back to Top