CONNECT WITH US  

ನುಗ್ಗೆ ಹೂವಿನ ಬಗೆಬಗೆ ಅಡುಗೆ

ಸರ್ವರೋಗಕ್ಕೂ ನುಗ್ಗೆ ಮದ್ದು ಎಂಬ ಮಾತಿದೆ. ಏಕೆಂದರೆ ನುಗ್ಗೆಯ ಪ್ರತಿಯೊಂದು ಭಾಗವೂ ಔಷಧೀಯ ಗುಣವನ್ನು ಹೊಂದಿದೆ. ನುಗ್ಗೆ ಹೂವಿನಲ್ಲೂ ಅಧಿಕ ಔಷಧೀಯ ಶಕ್ತಿ ಇದೆ. ಇದರ ಸೇವನೆಯಿಂದ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ನುಗ್ಗೆಕಾಯಿಯಿಂದ ಮಾತ್ರವಲ್ಲ ನುಗ್ಗೆ ಹೂವಿನಿಂದಲೂ ಬಗೆಬಗೆ ಅಡುಗೆ ತಯಾರಿಸಬಹುದು.

ನುಗ್ಗೆ ಹೂವಿನ ಹುಳಿ
ಬೇಕಾಗುವ ಸಾಮಗ್ರಿಗಳು:
ನುಗ್ಗೆ ಹೂವು 2 ಕಪ್‌, ಬೇಯಿಸಿದ ತೊಗರಿಬೇಳೆ 1/2 ಕಪ್‌, ಕೊತ್ತಂಬರಿ 1 ಚಮಚ, ಜೀರಿಗೆ 1/4 ಚಮಚ, ಸಾಸಿವೆ 1/4 ಚಮಚ, ಮೆಂತೆ 8 ಕಾಳು, ಹುಣಸೇಹಣ್ಣು 2 ಹುಣಸೇ ಬೀಜದಷ್ಟು, ಕೆಂಪು ಮೆಣಸು 5-6, ಕಾಯಿತುರಿ 3/4 ಕಪ್‌, ಎಣ್ಣೆ 2 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಸ್ವಲ್ಪಎಣ್ಣೆ ಹಾಕಿ ಕೊತ್ತಂಬರಿ, ಜೀರಿಗೆ, ಸಾಸಿವೆ, ಮೆಂತೆ ಹಾಗೂ ಕೆಂಪು ಮೆಣಸನ್ನು ಹುರಿದು ಕಾಯಿತುರಿ ಹಾಗೂ ಹುಣಸೆ ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿದ ತೊಗರಿಬೇಳೆಗೆ ನುಗ್ಗೆ ಹೂವು ಹಾಕಿ ಬೇಯಿಸಿ. ರುಬ್ಬಿದ ಮಿಶ್ರಣ, ಉಪ್ಪು ಬೆರೆಸಿ ಬೇಕಾದಷ್ಟು ನೀರು ಹಾಕಿ ಹದ ಮಾಡಿಕೊಳ್ಳಿ. ಚೆನ್ನಾಗಿ ಕುದಿಸಿ ಇಳಿಸಿ. ಒಗ್ಗರಣೆ ಕೊಡಿ. ಊಟಕ್ಕೆ ರುಚಿ.

ನುಗ್ಗೆ ಹೂವಿನ ಬಾತ್‌
ಬೇಕಾಗುವ ಸಾಮಗ್ರಿಗಳು
: ನುಗ್ಗೆಹೂವು 1 ಕಪ್‌, ಅಕ್ಕಿ 2 ಕಪ್‌, ಈರುಳ್ಳಿ ಹೆಚ್ಚಿದ್ದು 1, ಹಸಿ ಅಥವಾ ನೆನೆಸಿದ ಬಟಾಣಿ 1/4 ಕಪ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು1 ಚಮಚ, ಹಸಿಮೆಣಸು 4, ಬೆಳ್ಳುಳ್ಳಿ 4, ಲವಂಗ 2, ಚಕ್ಕೆ ಚೂರು 1 ಇಂಚು, ಹೆಚ್ಚಿದ ಟೊಮೆಟೋ 1, ಶುಂಠಿ ತುಂಡು 1 ಇಂಚು, ತುಪ್ಪ5 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನೀರು ಬಸಿದಿಡಿ. ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ , ಶುಂಠಿ, ಚಕ್ಕೆ , ಲವಂಗ, ಹೆಚ್ಚಿದ ಟೊಮೆಟೋ, ಹಸಿಮೆಣಸು ಎಲ್ಲವನ್ನೂ ನುಣ್ಣಗೆ ರುಬ್ಬಿ. ಕುಕ್ಕರಿನಲ್ಲಿ ತುಪ್ಪಹಾಕಿ ಈರುಳ್ಳಿ ಹಾಕಿ ಬಾಡಿಸಿ, ರುಬ್ಬಿದ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಬಳಿಕ ನುಗ್ಗೆ ಹೂವು, ಬಟಾಣಿ, ಅಕ್ಕಿ ಹಾಕಿ ಚೆನ್ನಾಗಿ ಮಗುಚಿ. ಉಪ್ಪು ಹಾಗೂ ನಾಲ್ಕು ಕಪ್‌ ನೀರು ಹಾಕಿ ಕುಕ್ಕರನ್ನು ಒಂದು ಸೀಟಿ ಕೂಗಿಸಿ ಇಳಿಸಿ. ಬಿಸಿಬಿಸಿ ನುಗ್ಗೆ ಹೂವಿನ ಬಾತ್‌ ಸವಿಯಲು ಸಿದ್ಧ. 

ನುಗ್ಗೆ ಹೂವಿನ ಚಟ್ನಿ
ಬೇಕಾಗುವ ಸಾಮಗ್ರಿಗಳು
: ನುಗ್ಗೆ ಹೂವು 1 ಬಟ್ಟಲು, ತೆಂಗಿನ ತುರಿ 1/2 ಬಟ್ಟಲು, ಹುಣಸೆ ಹಣ್ಣು ಚಿಕ್ಕ ಗೋಲಿ ಗಾತ್ರದಷ್ಟು, ಹಸಿಮೆಣಸು 3, ಬೆಳ್ಳುಳ್ಳಿ 4 ಎಸಳು, ಕೆಂಪು ಮೆಣಸು 1, ಇಂಗು ಚಿಟಿಕೆ, ಸಾಸಿವೆ, ಕರಿಬೇವು, ಉಪ್ಪುರುಚಿಗೆ ತಕ್ಕಷ್ಟು .

ತಯಾರಿಸುವ ವಿಧಾನ: ನುಗ್ಗೆ ಹೂವನ್ನು ಸ್ವಲ್ಪನೀರು ಹಾಕಿ ಬೇಯಿಸಿ. ಅದು ತಣ್ಣಗಾದ ಮೇಲೆ ತೆಂಗಿನ ತುರಿ, ಹುಣಸೆ ಹಣ್ಣು, ಹಸಿಮೆಣಸು, ಉಪ್ಪು$ಹಾಕಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಇಂಗು, ಸಾಸಿವೆ, ಕರಿಬೇವು, ಬೆಳ್ಳುಳ್ಳಿ , ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ರುಚಿಯಾದ ಈ ಚಟ್ನಿಯನ್ನು ದೋಸೆ, ಅನ್ನ, ಇಡ್ಲಿಯೊಂದಿಗೆ ಸವಿಯಿರಿ.

ನುಗ್ಗೆ ಹೂವಿನ ರೊಟ್ಟಿ     
ಬೇಕಾಗುವ ಸಾಮಗ್ರಿಗಳು:
ನುಗ್ಗೆ ಹೂವು 1 ಬಟ್ಟಲು, ತೆಂಗಿನತುರಿ 1/4 ಬಟ್ಟಲು, ಸಣ್ಣಗೆ ಹೆಚ್ಚಿದ ಈರುಳ್ಳಿ 1/2 ಬಟ್ಟಲು, ಹಸಿಮೆಣಸು 2, ಅಕ್ಕಿಹಿಟ್ಟು 2 ಬಟ್ಟಲು, ಉಪ್ಪುರುಚಿಗೆ ತಕ್ಕಷ್ಟು , ಕತ್ತರಿಸಿದ ಕೊತ್ತಂಬರಿ ಸೊಪ್ಪು3 ಚಮಚ.

ತಯಾರಿಸುವ ವಿಧಾನ: ನುಗ್ಗೆ ಹೂವು, ಉಪ್ಪು , ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು , ಸ್ವಲ್ಪ ನೀರು ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ. ಆಮೇಲೆ ಅಕ್ಕಿಹಿಟ್ಟನ್ನು ಹಾಕಿ ಕಲಸಿ. ನಂತರ ಬಾಳೆಎಲೆಯ ಮೇಲೆ ತೆಳುವಾಗಿ ತಟ್ಟಿ ಕಾದ ಕಾವಲಿ ಮೇಲೆ ತುಪ್ಪಅಥವಾ ಎಣ್ಣೆ ಸವರಿ ಎರಡೂ ಬದಿ ಹೊಂಬಣ್ಣಕ್ಕೆ ಬರುವ ಹಾಗೆ ಬೇಯಿಸಿ. ಬೆಣ್ಣೆ ಹಾಗೂ ಕಾಯಿಚಟ್ನಿಯೊಡನೆ ಸವಿಯಿರಿ. ಆರೋಗ್ಯಕರವಾದ ಈ ರೊಟ್ಟಿ ಬೆಳಗಿನ ಉಪಹಾರಕ್ಕೆ, ಸಂಜೆಯ ಟೀಗೂ ಚೆನ್ನಾಗಿರುತ್ತದೆ. 

ನುಗ್ಗೆ ಹೂವಿನ ಸಾರು
ಬೇಕಾಗುವ ಸಾಮಗ್ರಿಗಳು
: ನುಗ್ಗೆ ಹೂವು 1 ಕಪ್‌, ಬೆಲ್ಲ 1 ಚಮಚ, ಮೆಣಸಿನ ಪುಡಿ 1/2 ಚಮಚ, ಹಸಿಮೆಣಸು 1, ಸಾಸಿವೆ 1/2 ಚಮಚ, ಉಪ್ಪುರುಚಿಗೆ ತಕ್ಕಷ್ಟು, ಹುಳಿ ಹುಣಸೆ ಬೀಜ ಗಾತ್ರ, ಎಣ್ಣೆ 1 ಚಮಚ, ಬೆಳ್ಳುಳ್ಳಿ 2 ಎಸಳು, ಒಣಮೆಣಸು 1, ಸಾಸಿವೆ 1 ಚಮಚ, ಕರಿಬೇವಿನೆಲೆ 1 ಎಸಳು.

ತಯಾರಿಸುವ ವಿಧಾನ: ನುಗ್ಗೆ ಹೂವನ್ನು ಪಾತ್ರೆಗೆ ಹಾಕಿ, 3 ಕಪ್‌ ನೀರು, ಉಪ್ಪು, ಬೆಲ್ಲ, ಹಸಿಮೆಣಸು, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಎಣ್ಣೆಯಲ್ಲಿ ಬೆಳ್ಳುಳ್ಳಿ, ಕರಿಬೇವಿನ ಒಗ್ಗರಣೆ ಕೊಡಿ.

ನುಗ್ಗೆ ಹೂವಿನ ತಂಬುಳಿ
ಬೇಕಾಗುವ ಸಾಮಗ್ರಿಗಳು:
ನುಗ್ಗೆ ಹೂವು 1 ಮುಷ್ಠಿ , ಕಾಳುಮೆಣಸು 5, ಜೀರಿಗೆ 2 ಚಮಚ, ತೆಂಗಿನ ತುರಿ 1/2 ಕಪ್‌, ಸಿಹಿ ಮಜ್ಜಿಗೆ 1 ಕಪ್‌, ಉಪ್ಪುರುಚಿಗೆ ತಕ್ಕಷ್ಟು, ಒಗ್ಗರಣೆಗೆ ಸಾಸಿವೆ 1/2 ಚಮಚ, ಎಣ್ಣೆ 1/2 ಚಮಚ.

ತಯಾರಿಸುವ ವಿಧಾನ: ನುಗ್ಗೆ ಹೂವನ್ನು ಸ್ವಲ್ಪ ಬೇಯಿಸಿ. ಕಾಳುಮೆಣಸು, ಜೀರಿಗೆ ಹುರಿಯಿರಿ. ಎಲ್ಲವನ್ನು ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಸಿಹಿ ಮಜ್ಜಿಗೆ, ಬೇಕಾದಷ್ಟು ನೀರು, ಉಪ್ಪುಸೇರಿಸಿ.

ಎಣ್ಣೆಯಲ್ಲಿ ಸಾಸಿವೆ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ. ಬಾಯಿ ರುಚಿ ಕೆಟ್ಟಾಗ ಈ ತಂಬುಳಿ ಹಿತಕರ.

- ಸಹನಾ ಕಾಂತಬೈಲು

Trending videos

Back to Top