CONNECT WITH US  

ಎಚ್‌ಐವಿ ಮಕ್ಕಳ ಶೈಕ್ಷಣಿಕ ದತ್ತು ಪಡೆದ ಸಾಹಿತಿ

ಕಲಬುರಗಿ: ಎಚ್‌ಐವಿ ಮಕ್ಕಳಿಗೆ ಪುಸ್ತಕ ಹಾಗೂ ಪೆನ್ನು ವಿತರಣೆ ಮಾಡುವ ಸಮಾರಂಭ ಉದ್ಘಾಟಿಸಲು ಆಗಮಿಸಿದ್ದ ನಗರದ ಸಾಹಿತಿ ಸ್ವಾಮಿರಾವ ಕುಲಕರ್ಣಿ, ಎಚ್‌ಐವಿ ಸೋಂಕಿತ ಇಬ್ಬರು ಮಕ್ಕಳ ಶೈಕ್ಷಣಿಕ ಹೊಣೆ ಹೊತ್ತು ದತ್ತು ಪಡೆದ ಪ್ರಸಂಗ ಗುರುವಾರ ನಗರದ ಪತ್ರಿಕಾಭವನದಲ್ಲಿ ನಡೆಯಿತು.

ಹೊಸ ವರ್ಷದ ಸಂಭ್ರಮದಂದು ಇಲ್ಲಿನ ದಿವ್ಯ ಜೀವನ ನೆಟವಕ್‌ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವಜ್ಯೋತಿ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನು ವಿತರಣೆ ಮಾಡಿ ಮಾತನಾಡಿದ, ಸ್ವಾಮಿರಾವ ಕುಲಕರ್ಣಿ ದತ್ತು ಘೋಷಣೆ ಮಾಡಿ, ಎಚ್‌ಐವಿ ಮತ್ತು ಎಬೋಲಾದಂತಹ ಕಾಯಿಲೆಗಳು ಮಾನವನಿಗೆ ಸವಾಲುಗಳಾಗಿವೆ. ಇವುಗಳನ್ನು ಎದುರಿಸಿ ಛಲದಿಂದ ಬದುಕನ್ನು ಮುನ್ನಡೆಸಿಕೊಂಡು ಹೋಗಬೇಕು. ಅದಕ್ಕಾಗಿ ಸಮುದಾಯದ ಸಹಕಾರವೂ ಬೇಕು ಎಂದರು.

ಅತಿಥಿ ಡಾ| ಎಸ್‌.ಎಸ್‌.ಗುಬ್ಬಿ ಮಾತನಾಡಿ, ವೈಜ್ಞಾನಿಕವಾಗಿ ಮತ್ತು ವೈದ್ಯಕೀಯವಾಗಿ ಜಗತ್ತು ಸಾಕಷ್ಟು ಮುಂದುವರಿದಿದೆ. ಎಚ್‌ಐವಿ ಸೋಂಕಿತರು ಭಯ ಪಡಬೇಕಿಲ್ಲ. ಲಸಿಕೆ ಕಂಡು ಹಿಡಿಯುವಲ್ಲಿ ಸಕರಾತ್ಮಕ ಪ್ರಯತ್ನಗಳು ಜಗತ್ತಿನಲ್ಲಿ ನಡೆಯುತ್ತಿವೆ. ಈ ರೋಗಕ್ಕೆ ಪರಿಪೂರ್ಣವಾದ ಮದ್ದು ಸಿಗುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ವ್ಯಕ್ತಿಗಳ ನೋವಿಗೆ ಸ್ಪಂದಿಸುವುದೇ ನಿಜವಾದ ಸಮಾಜ ಸೇವೆ. ಹೊಸ ವರುಷದ ನೆಪದಲ್ಲಿ ಎಚ್‌ಐವಿ ಸೋಂಕಿತ ಮಕ್ಕಳಲ್ಲಿ, ಪಾಲಕರಲಿ ಈ ಮೂಲಕ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿತ್ತು ಎಂದರು.

ಶರಣು ಸಲಗರ, ಹೋರಾಟಗಾರ ಶಿವಲಿಂಗ ಹಳ್ಳಿ ಸೊನ್ನ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಮಂಜುನಾಥ ಕಂಬಳಿಮಠ, ಶರಣಪ್ಪ ದೇಸಾಯಿ, ಕೆ.ಎಂ.ಮಠ, ಕೆ.ಗಿರಿಮಲ್ಲ, ಶಿವರಾಜ ಅಂಡಗಿ, ಮಾಲತಿ ರೇಶ್ಮಿ, ಬಿ.ಎಂ.ಪಾಟೀಲ ಕಲ್ಲೂರ, ಶಿವಾನಂದ ಮಠಪತಿ, ನಿಜಲಿಂಗಪ್ಪ, ಶಿವುಕುಮಾರ, ಧೂಳಪ್ಪ ದ್ಯಾಮನಕರ್‌, ಶಿವುಕುಮಾರ ಸಿ.ಎಚ್‌. ಹಾಜರಿದ್ದರು. ದಿವ್ಯಜೀವನ ನೆಟ್‌ವರ್ಕನ ಅಧ್ಯಕ್ಷೆ ಜಯಶ್ರೀ ವಿ. ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು.
 

Trending videos

Back to Top