CONNECT WITH US  
echo "sudina logo";

ಹದವರಿತ ಹಾಸ್ಯಕುಶಲಿ

ಹಾಸ್ಯರಸವು ನವರಸಗಳಲ್ಲಿ ಅತ್ಯಂತ ಜನಪ್ರಿಯವಾದ ರಸವಾಗಿದೆ. ಆದರೆ ಅದರ ಅಭಿವ್ಯಕ್ತಿಯೂ ತುಂಬ ಸವಾಲಿನದ್ದು. ಕಡಿಮೆಯಾದರೆ ರಸ ಪ್ರತಿಪಾದನೆ ಸಾಧ್ಯವಾಗುವುದಿಲ್ಲ, ಹೆಚ್ಚಾದರೆ ಅಭಾಸವಾಗುತ್ತದೆ. ಹಾಸ್ಯದ ಸ್ಥಾಯಿ-ಸಂಚಾರಿ ಭಾವಗಳನ್ನು ಸಮತೂಕದಲ್ಲಿ ಪ್ರಸ್ತುತಪಡಿಸುವ ಪ್ರತಿಭೆ ಇರುವ ಕೆಲವೇ ಕಲಾವಿದರಲ್ಲಿ ಬಂಟ್ವಾಳ ಜಯರಾಮ ಆಚಾರ್ಯ ಒಬ್ಬರು.

ತೆಂಕುತಿಟ್ಟು ಯಕ್ಷಗಾನವು ಕಳೆದ ಆರೇಳು ದಶಕಗಳಲ್ಲಿ ಮಹೋನ್ನತ ಹಾಸ್ಯ ಕಲಾವಿದರನ್ನು ಕಂಡಿದೆ. ನಾಟಕೀಯ  ಅಭಿವ್ಯಕ್ತಿಯ ವಿಟ್ಲ ಗೋಪಾಲಕೃಷ್ಣ ಜೋಶಿ, ಪರಂಪರೆಗೆ ಬದ್ಧರಾಗಿರುವ ಪೆರುವಡಿ ನಾರಾಯಣ ಭಟ್ಟರು, ತುಳು ತಿಟ್ಟಿನಲ್ಲಿ ಅಂಗ್ರಪಂಕ್ತಿಯ ಸ್ಥಾನ ಪಡೆದ ಮಿಜಾರು ಅಣ್ಣಪ್ಪ... ಹೀಗೆ ಇವರೆಲ್ಲರ ಪ್ರಭಾವವನ್ನು ಮೈಗೂಡಿಸಿಕೊಂಡು  ಜಯರಾಮ ಆಚಾರ್ಯ ಸಮರ್ಥ ಹಾಸ್ಯಗಾರರಾಗಿ ರೂಪುಗೊಂಡವರು. ಪೌರಾಣಿಕ ಕಥಾನಕಗಳ ಸಾಂಪ್ರದಾಯಿಕ ಹಾಸ್ಯ ಪಾತ್ರಗಳಿಂದ ತೊಡಗಿ ಟೆಂಟ್‌ ಆಟಗಳ ತುಳು ಹಾಸ್ಯದವರೆಗೆ ಅವರು ಎಲ್ಲ  ಸ್ತರದ "ಹಾಸ್ಯಪ್ರಿಯ'ರಿಗೆ  ಪ್ರಿಯರಾದವರು. ಇಂದಿನ ವಿದೂಷಕರು ಕೇವಲ "ಚಮತ್ಕಾರಿಕವಾಗಿ' ಜನರನ್ನು ನಗಿಸಲು ಪ್ರಯತ್ನಿಸಿದರೆ, ಜಯರಾಮ ಆಚಾರ್ಯ "ಕಲಾತ್ಮಕವಾಗಿ' ವೈನೋದಿಕ ವಾತಾವರಣ ಸೃಷ್ಟಿಸುವ ಸೃಜನಶೀಲ ಕಲಾವಿದ. ಒಳ್ಳೆಯ ಹಾಸ್ಯಪಾತ್ರಧಾರಿಯಾಗಬೇಕಾದರೆ  "ಹಾಸ್ಯದ ಸ್ವಭಾವ ಸಿದ್ಧಿಸಿಕೊಳ್ಳಬೇಕು' ಎಂಬುದು ಬಂಟ್ವಾಳರ ಮಾರ್ಮಿಕ ಮಾತು.

ಜಯರಾಮ ಆಚಾರ್ಯ ಅವರು ಮೊದಲು ವ್ಯವಸಾಯಿ ಬದುಕನ್ನು ಆರಂಭಿಸಿದ್ದು ಹಂತಾಡಿ ಮೇಳದಲ್ಲಿ. ಯಕ್ಷಗಾನ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಪಡೆಯಬೇಕಾದರೆ ನಾಟ್ಯಾಭಿನಯಗಳ ಆಳವಾದ ಅಭ್ಯಾಸ ಅನಿವಾರ್ಯ ಎಂಬುದನ್ನು ಅರಿತು, ಧರ್ಮಸ್ಥಳ ಯಕ್ಷಗಾನ ಕೇಂದ್ರ ಸೇರಿ ಗುರು ಪಡ್ರೆ ಚಂದುರವರ ಶಿಷ್ಯರಾದರು. ಹಾಸ್ಯ ಪಾತ್ರಗಳ ಸ್ವರೂಪ, ಸ್ವಭಾವ ಸೂಕ್ಷ್ಮಗಳನ್ನು ಹೇಳಿಕೊಟ್ಟದ್ದು ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು. ಸ್ವರ್ನಾಡು, ಸುಂಕದಕಟ್ಟೆ , ಕಟೀಲು, ಪುತ್ತೂರು, ಕದ್ರಿ, ಕುಂಬ್ಳೆ , ಸುರತ್ಕಲ್‌, ಎಡನೀರು ಮುಂತಾದ ಮೇಳಗಳಲ್ಲಿ ಒತ್ತು ಹಾಸ್ಯಗಾರರಾಗಿ ಆರಂಭಿಸಿ ಮುಖ್ಯ ಹಾಸ್ಯಗಾರನ ಎತ್ತರಕ್ಕೇರಿದವರು. ಪ್ರಸ್ತುತ ಹೊಸನಗರ ಮೇಳದ ಮುಖ್ಯ ಹಾಸ್ಯಗಾರರು.

ಬಂಟ್ವಾಳ ಜಯರಾಮ ಆಚಾರ್ಯ ಯಕ್ಷಗಾನದ ಸರ್ವ ಅಂಗಗಳಲ್ಲಿ ಪರಿಶ್ರಮ ಉಳ್ಳ ಕಲಾವಿದೆ. ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸ‌ಬಲ್ಲರು. ಭಾಗವತಿಕೆ-ಚೆಂಡೆ-ಮದ್ದಲೆ ಗಳಲ್ಲಿಯೂ ಪರಿಣತಮತಿ. ತಾಳಮದ್ದಲೆಯಲ್ಲಿಯೂ ಮಾತಿನಮಂಟಪ ಕಟ್ಟಬಲ್ಲರು. ಯಕ್ಷಗಾನದ ಎಲ್ಲ ಅಂಗಗಳನ್ನು ಬಲ್ಲವನೇ ಸಮರ್ಥ ಹಾಸ್ಯಗಾರ ಎಂಬ ಮಾತಿದೆ. ಸಂಸ್ಕೃತ ನಾಟಕಗಳ ಸೂತ್ರಧಾರ ಸ್ಥಾನಮಾನ ಯಕ್ಷಗಾನದ ಹಾಸ್ಯಗಾರನಿಗಿದೆ. ಈ ದೃಷ್ಟಿಯಲ್ಲಿ ಜಯರಾಮ ಆಚಾರ್ಯ ಸಮರ್ಥ ಹಾಸ್ಯಗಾರ.

45 ವರ್ಷಗಳ ಕಾಲ ನಿರಂತರ ಮೇಳಗಳ ತಿರುಗಾಟ ನಡೆಸಿರುವ ಬಂಟ್ವಾಳ ಜಯರಾಮ ಆಚಾರ್ಯರನ್ನು ಆ. 8ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ "ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ' ನೀಡಿ ಗೌರವಿಸಲಾಗುತ್ತಿದೆ.

ವೈಕೆ

Trending videos

Back to Top