CONNECT WITH US  

ಕಾವೇರಿ ನದಿ ತೀರದಲ್ಲಿ ಓಡಿ ಮಾಯವಾಯ್ತು ಚಿರತೆ

ಇದ್ದಕ್ಕಿದ್ದ ಹಾಗೆ ಹುಣಸೇ ಮರದ ಮೇಲಿನಿಂದ ಮಂಗಗಳು ಕೆಕಕ್‌ ಎಂದು ಕೂಗಲಾರಂಭಿಸಿದವು

ಉದ್ದವಾದ ಕೋಲಿನಿಂದ ಒಮ್ಮೆ ಅದಕ್ಕೆ ತಿವಿದು ಸಂಪೂರ್ಣವಾಗಿ ಮಲಗಿದೆಯೆಂದು ಖಾತರಿ ಮಾಡಿಕೊಂಡು ಬೋನಿನ ಬಾಗಿಲು ತೆಗೆದೆ. ಪ್ರಾಣಿಯನ್ನು ಮೆಲ್ಲನೆ ಆಚೆ ಎಳೆದು, ಕೆಳಗೆ ದಪ್ಪವಾದ ಬಲೆಯಿದ್ದ ಹೊದಿಕೆಯ ಮೇಲೆ ಮಲಗಿಸಿ, ತೂಕ ಮಾಡಲು ತೆಗೆದುಕೊಂಡು ಹೋದೆವು. ತಕ್ಕಡಿಗೆ ಚಿರತೆ ಮಲಗಿದ್ದ ತಾಟಿ ಮತ್ತು ಬಲೆಯನ್ನು ತೂಗುಹಾಕಿದರೆ ತಕ್ಕಡಿಯ ಮುಳ್ಳು 61 ಕೆ.ಜಿ. ಎಂದು ತೋರಿಸಿತು.

ಊದುಕೊಳವೆ (ಬ್ಲೋ ಪೈಪ್‌) ಪ್ರಾಣಿಗಳಿಗೆ ಅರಿವಳಿಕೆ ಮದ್ದು ಕೊಡುವ ಮತ್ತೂಂದು ಸಲಕರಣೆ. ಆದರೆ ಪ್ರಾಣಿ ಹತ್ತಿರದಲ್ಲಿದ್ದರೆ ಮತ್ತು ಬೋನಿನಲ್ಲಿದ್ದರೆ ಮಾತ್ರ ಇದು ಉಪ ಯೋಗಿ. ಉದ್ದವಾದ ಕೊಳವೆಯೊಳಗೆ ಅರಿವಳಿಕೆ ಮದ್ದಿರುವ ಸಿರಿಂಜ್‌ ಹಾಕಿ ಒಂದು ತುದಿಯಿಂದ ಜೋರಾಗಿ ಊದಿದರೆ ಸಿರಿಂಜ್‌ ಪ್ರಾಣಿಗೆ ಚುಚ್ಚಿಕೊಂಡು ಮದ್ದು  ಮೈಯೊಳಗೆ ಸೇರು ತ್ತದೆ. ದಕ್ಷಿಣ ಏಷ್ಯಾ, ದಕ್ಷಿಣ ಅಮೆರಿಕದ ದೇಶಗಳಲ್ಲಿ ಅರಣ್ಯ ವಾಸಿಗಳು ಮಂಗಗಳಂತಹ ಪ್ರಾಣಿಗಳನ್ನು ಬೇಟೆಯಾಡಲು ಇದೇ ತಂತ್ರವನ್ನು ಉಪಯೋಗಿಸುತ್ತಾರೆ. ಆದರೆ ಅವರು ಅರಿವಳಿಕೆ ಮದ್ದಿನ ಬದಲು ಪ್ರಾಣಿಯನ್ನು ಕೊಲ್ಲಲು ವಿಷವನ್ನು ಉಪ ಯೋಗಿಸುತ್ತಾರೆ. ಬಹುಶಃ ಇದೇ ತಂತ್ರಜ್ಞಾನವನ್ನು ಆಧುನಿಕ ಪಶುವೈದ್ಯಕೀಯ ವಿಜ್ಞಾನ ಅಳವಡಿಸಿಕೊಂಡಿದೆ. 

ಕೊನೆಗೆ ಸುಜಯರ ಸಹಾಯಕ ರಮೇಶನನ್ನು ಬೋನಿನ ಮುಂದೆ ನಿಲ್ಲಿಸಿ ಪ್ರಾಣಿಯ ಗಮನ ಅವನತ್ತ ಹರಿಯುವ ಹಾಗೆ ಮಾಡಿದೆವು. ಎಡಭಾಗದಿಂದ ಮೆಲ್ಲನೆ ಬಂದ ಸುಜಯ್‌ ಊದುಕೊಳವೆಯನ್ನು ಜೋರಾಗಿ ಊದಿದೊಡನೆ ಸಿರಿಂಜ್‌ ಬಾಣದಂತೆ ಚಿರತೆಯ ಎಡಭುಜಕ್ಕೆ ಹಾರಿ ನಾಟಿತು. ಸಿರಿಂಜ್‌ ಚುಚ್ಚಿದ ಕೂಡಲೇ ಒಮ್ಮೆ "ಗುರ್ರ' ಎಂದು ಬೋನಿನಲ್ಲಿದ್ದ ಸತ್ತ ಮೇಕೆಯನ್ನು ಕಚ್ಚಿಹಿಡಿದು ಕುಳಿತಿತು ಚಿರತೆ. ಅರಿವಳಿಕೆ ಮದ್ದು ಕೊಟ್ಟೊಡನೆ ನಾವೆಲ್ಲರೂ ಅಲ್ಲಿಂದ ಸ್ವಲ್ಪ ದೂರಕ್ಕೆ ಹೋದೆವು. ಏಕೆಂದರೆ ಮದ್ದು ನೀಡಿದ ಬಳಿಕ ಪ್ರಾಣಿ ಬೇಗನೆ ಜ್ಞಾನತಪ್ಪ ಬೇಕಾದರೆ ಸುತ್ತಮುತ್ತಲು ನಿಶ್ಶಬ್ದವಿರಬೇಕು. ಇಲ್ಲವಾದಲ್ಲಿ ಹೊರಗಿನ ಶಬ್ದದಿಂದ ಮತ್ತು ಇತರ ಗಲಾಟೆಗಳಿಂದ ಅದು ಮಲಗುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತದೆ. 

ಹತ್ತು ನಿಮಿಷಗಳ ನಂತರ ಮೆಲ್ಲನೆ ಬೋನಿನೊಳಗೆ ಇಣುಕಿ ನೋಡಿದರೆ ಚಿರತೆಯಾಗಲೇ ಮಲಗಿತ್ತು. ಉದ್ದವಾದ ಕೋಲಿ ನಿಂದ ಒಮ್ಮೆ ಅದಕ್ಕೆ ತಿವಿದು ಸಂಪೂರ್ಣವಾಗಿ ಮಲಗಿದೆಯೆಂದು ಖಾತರಿ ಮಾಡಿಕೊಂಡು ಬೋನಿನ ಬಾಗಿಲು ತೆಗೆದೆ. ಪ್ರಾಣಿಯನ್ನು ಮೆಲ್ಲನೆ ಆಚೆ ಎಳೆದು, ಕೆಳಗೆ ದಪ್ಪವಾದ ಬಲೆಯಿದ್ದ ಹೊದಿಕೆಯ ಮೇಲೆ ಮಲಗಿಸಿ, ತೂಕ ಮಾಡಲು ತೆಗೆದುಕೊಂಡು ಹೋದೆವು. ತಕ್ಕಡಿಗೆ ಚಿರತೆ ಮಲಗಿದ್ದ ತಾಟಿ ಮತ್ತು ಬಲೆಯನ್ನು ತೂಗುಹಾಕಿ ದರೆ ತಕ್ಕಡಿಯ ಮುಳ್ಳು 61 ಕೆ.ಜಿ. ಎಂದು ತೋರಿಸಿತು. "ಕಟ್ಟುಮಸ್ತಾದ ಆಸಾಮಿ' ಎಂದು ಮನಸ್ಸಿನಲ್ಲಿ ಅಂದುಕೊಂಡೆ. 

ನಾವು ನಮ್ಮ ಕೆಲಸ ಆರಂಭಿಸಿದರೆ, ಸುಜಯ… ಚಿರತೆಯ ಹೃದಯ ಬಡಿತ, ರಕ್ತ ಪರೀಕ್ಷೆ, ಅದರ ಆರೋಗ್ಯದ ತಪಾಸಣೆ, ಗಾಯಗಳ ಉಪಚಾರ, ಅದು ಸುಮಾರು ತಾಸುಗಳು ಬೋನಿನಲ್ಲಿ ಕಳೆದುದರಿಂದ ಆಗಿರುವ ಒತ್ತಡವನ್ನು ಶಾಂತಗೊಳಿಸಲು ಔಷಧಿ, ಹೀಗೆ ಹಲವು ಚಿಕಿತ್ಸೆಗಳನ್ನು ಕೊಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಹುಣಸೇ ಮರದ ಮೇಲಿನಿಂದ ಮಂಗಗಳು ಕೂಗಲು ಪ್ರಾರಂಭಿಸಿದವು. ಕೆಕ್‌, ಕೆಕಕ್‌, ಎಂದು ತಮ್ಮ ಭಾಷೆಯಲ್ಲಿ ಎಚ್ಚರಿಕೆಯ ಕೂಗಿನಿಂದ ಕಾಡಿನ ತಮ್ಮ ಸಹವರ್ತಿಗಳಿಗೆ ಹಾಗೂ ಇತರ ಸ್ನೇಹಿತರಿಗೆ "ಇಲ್ಲಾವುದೋ ತಮ್ಮನ್ನು ಬೇಟೆಯಾಡುವ ಪ್ರಾಣಿಯಿದೆ' ಎಂದು ತಿಳಿಸಿ ಹೇಳುತ್ತಿದ್ದವು. ನನಗೆ ಆಶ್ಚರ್ಯ ವಾಯಿತು. ಇಷ್ಟು ಹೊತ್ತು ಚಿರತೆ ಗರ್ಜಿಸುತ್ತಿದ್ದನ್ನು ಕೇಳಿದರೂ ಕೂಗಾಡದಿದ್ದ ಮಂಗಗಳು, ಚಿರತೆ ಕಾಣಲು ಪ್ರಾರಂಭಿಸಿದೊಡನೆ ಕಿರುಚಲು ಪ್ರಾರಂಭಿಸಿದ್ದವು. ಬಹುಶಃ ಅವುಗಳಿಗೆ ಗೊಂದಲ ವಾಗಿರಬೇಕು. ಚಿರತೆ ಕೂಗುವುದು ಕೇಳುತ್ತಿದೆ, ಆದರೆ ಕೂಗು ಕೇಳಿಬರುತ್ತಿರುವ ಸ್ಥಳದಲ್ಲಿ ಮನುಷ್ಯರಿ¨ªಾರೆ. ಇದೇನೋ ಹೊಸತು, ಅಸ್ತವ್ಯಸ್ತವೆನಿಸಿರಬೇಕು.   

ರೇಡಿಯೋ ಕಾಲರ್‌ ಚಿರತೆಯ ಕುತ್ತಿಗೆಯ ಅಳತೆಗೆ ತಕ್ಕಂತೆ ಕತ್ತರಿಸಿ ಹೊಂದಿಸಿದೆ. ಇದನ್ನು ಬಹು ಜಾಗರೂಕವಾಗಿ ಮಾಡ ಬೇಕು. ಕಾಲರ್‌ ಬಿಗಿಯಾಗಿರಲೂಬಾರದು, ಹಾಗೆಯೇ ಸಡಿ ಲವೂ ಆಗಿರಬಾರದು. ಹೀಗಿದ್ದರೆ ಚಿರತೆಗೆ ತೊಂದರೆಯೂ ಆಗುವುದಿಲ್ಲ ಹಾಗೂ ಕಾಲರ್‌ ಕಳಚಿ ಬೀಳುವುದಿಲ್ಲ. ತಂಡದ ಸದಸ್ಯರೆಲ್ಲರಿಗೂ ಅವರದ್ದೇ ಆದ ಕರ್ತವ್ಯಗಳಿದ್ದವು. ಅದರ ಉಸಿರಾಟ ಸರಾಗವಾಗಿ ಆಗುವ ಹಾಗೆ ಅದರ ಕುತ್ತಿಗೆಯನ್ನು ನೇರವಾಗಿ ಹಿಡಿದಿಟ್ಟುಕೊಳ್ಳುವುದೇ ಒಬ್ಬರ ಕೆಲಸವಾದರೆ, ನಾವು ಸಂಗ್ರಹಿಸಿದ ದತ್ತಾಂಶವನ್ನು ಒಂದು ಹಾಳೆಯಲ್ಲಿ ಬರೆದು ಕೊಳ್ಳುವುದು ಪೂರ್ಣೇಶನ ಕೆಲಸವಾಗಿತ್ತು. ನನಗೆ ಬೇಕಾದ ಸೂಕ್ತ ಸಲಕರಣೆಗಳನ್ನು ತೆಗೆದುಕೊಡುವುದು ಹರೀಶನ ಕರ್ತವ್ಯ. ಚಿರತೆಯನ್ನು ಸೆರೆಹಿಡಿಯುವುದರಿಂದ, ಅದನ್ನು ಬಿಡುವ ಸ್ಥಳಕ್ಕೆ ಸಾಗಣೆ ಮಾಡುವುದು, ಅರಿವಳಿಕೆ ಮದ್ದು ಕೊಡುವುದು...ಹೀಗೆ ಅನೇಕ ಕಾರಣಗಳಿಂದ ಪ್ರಾಣಿಗೆ ಆಯಾಸವಾಗಿ, ಅದರ ದೇಹ ದಿಂದ ಜಲಾಂಶ ನಷ್ಟವಾಗಿರುತ್ತದೆ (ಡಿಹೈಡ್ರೇಷನ್‌). ಹಾಗಾಗಿ ಅದಕ್ಕೆ ನಿರಂತರವಾಗಿ ಐ.ವಿ ದ್ರವವನ್ನು ಕೊಡಲಾಗು ತ್ತದೆ. ಆ ಬಾಟಲಿಯನ್ನು ಹಿಡಿದು ನಿಲ್ಲುವುದೇ ಒಬ್ಬರ ಕೆಲಸ. ಫೋಟೋ ತೆಗೆಯುವವರು ಅರುಣ್‌, ವಿಡಿಯೋ ತೆಗೆಯುತ್ತಿದ್ದದ್ದು ಪ್ರಕಾಶ್‌ ಮಠದ. ಹೀಗೆ ಪ್ರತಿಯೊಬ್ಬರಿಗೆ ಅವರದ್ದೇ ಕರ್ತವ್ಯ. ತಮ್ಮ ಕೆಲಸವಲ್ಲದೆ ಬೇರೆ ಯಾವುದೇ ಕೆಲಸಕ್ಕೆ ಕೈಹಾಕುವಂತಿಲ್ಲ. 

ನನ್ನ ಗಮನವೆಲ್ಲ ಚಿರತೆಯ ಮೇಲೆಯೇ. ಚಿರತೆಗೆ ಅರಿವಳಿಕೆ ಮದ್ದು ಕೊಟ್ಟು, ಕಾಲರ್‌ ತೊಡಿಸಿ ಅದಕ್ಕೆ ವಾಪಸ್ಸು ಪ್ರಜ್ಞೆ ಬರುವ ಮದ್ದು ಕೊಟ್ಟು, ಮತ್ತೆ ಬೋನಿಗೆ  ಹಾಕುವುದಕ್ಕೆ ಸುಮಾರು 45 ನಿಮಿಷ ಹಿಡಿಯುತ್ತದೆ. ಆದರೆ ಅಷ್ಟು ಸಮಯ ಹೇಗೆ ಹೋಗುತ್ತದೆಂದು ನನಗೆಂದೂ ಗೊತ್ತೇ ಆಗುತ್ತಿರಲಿಲ್ಲ. ನನಗೆ ಬೇರೆಯವರು ಏನು ಮಾತನಾಡುತ್ತಿ¨ªಾರೆ, ಏನೂ ತಿಳಿಯುತ್ತಿ ರಲಿಲ್ಲ. ಆಗಾಗ ಸುಜಯ… ಜೊತೆಗೆ ಪ್ರಾಣಿಯ ಮೈ ಉಷ್ಣಾಂಶ ಮತ್ತು ಅದರ ಉಸಿರಾಟದ ಬಗ್ಗೆ ವಿಚಾರಿಸುವುದು ಬಿಟ್ಟರೆ ಆಚೆಯ ಪ್ರಪಂಚ ಗೊತ್ತೇ ಆಗಲಿಲ್ಲ. ನನ್ನ ಮುಂದಿರುವ ಸುಂದರ, ಹಳದಿ ಮಿಶ್ರಿತ ಕಂದು ಬಣ್ಣದ ಚುಕ್ಕೆ ಚುಕ್ಕೆ ತುಪ್ಪಳವಿರುವ ಪ್ರಾಣಿ, ಆಗಾಗ ಅದರ, ಅಷ್ಟೇನೂ ಹಿತವಲ್ಲದ ಉಸಿರಾಟದ ವಾಸನೆ, ಅದರ ಯೋಗಕ್ಷೇಮ ಮತ್ತು ನನ್ನ ಕೈಲಿರುವ ಕೆಲಸ ಬಿಟ್ಟರೆ ನನ್ನ ಮನಸ್ಸು, ಗಮನ ಇನ್ನೆಲ್ಲಿಯೂ ಇರುತ್ತಿರಲಿಲ್ಲ. ತಲೆಯ ಮೇಲಿಂದ ನಿರಂತರವಾಗಿ ಕೂಗುತ್ತಿದ್ದ ಮಂಗಗಳ ಕೂಗು ಸಹ ನಾನು ಆ ಕಡೆ ಗಮನಹರಿಸಿದರೆ ಮಾತ್ರ ಕೇಳುತ್ತಿತ್ತು. 

ಒಮ್ಮೆ ಯಾಕೋ ಚಿರತೆಯ ಮೈ ಬಿಸಿಯಾಗಲು ಪ್ರಾರಂಭಿಸಿತು ಅನಿಸಿತು. "ಸುಜಯ…, ಯಾಕೋ ಟೆಂಪರೇಚರ್‌ ಜಾಸ್ತಿ ಆಗ್ತಾ ಇದೆ ಅನ್ನಿಸುತ್ತೆ ನೋಡಿ' ಅಂದೆ. ತಕ್ಷಣ ಬೆಡ್‌ಶೀಟ್ ಒಂದನ್ನು ಚೆನ್ನಾಗಿ ಒದ್ದೆ ಮಾಡಿ ಚಿರತೆ ಮೈ ಮೇಲೆ ಹೊದಿಸಿದೆವು. ಕೆಲವೇ ಕ್ಷಣಗಳಲ್ಲಿ ಉಷ್ಣಾಂಶ ಸಾಧಾರಣ ಮಟ್ಟಕ್ಕೆ ಹಿಂದಿರುಗಿತು. ಈ ತರಹದ ಸನ್ನಿವೇಶಗಳಿಗಾಗಿಯೇ ನೀರು ತುಂಬಿರುವ ದೊಡ್ಡ, ದೊಡ್ಡ ಕ್ಯಾನುಗಳನ್ನು ಯಾವಾಗಲೂ ನಮ್ಮೊಟ್ಟಿಗೆ ಇಟ್ಟುಕೊಂಡಿರುತ್ತಿದ್ದೆವು.  

ರೇಡಿಯೋ ಕಾಲರ್‌ ಅಳವಡಿಸಿದ ನಂತರ ಚಿರತೆಯ ಮೈ ಅಳತೆ, ಹಲ್ಲುಗಳ ಅಳತೆ ಇತರ ಮಾಹಿತಿಗಳನ್ನು ಕಲೆ ಹಾಕಲು ಪ್ರಾರಂಭಿಸಿದೆವು. ಮೂಗಿನ ತುದಿಯಿಂದ ಬಾಲದ ತುದಿಯ ವರೆಗೆ ಸುಮಾರು ಎರಡು ಮೀಟರ್‌ ಇಪ್ಪತ್ತು ಸೆಂಟಿಮೀಟರ್‌ ಇದ್ದ ದೊಡ್ಡ ಚಿರತೆಯಾಗಿತ್ತು ಇದು. 2.8 ಸೆಂಟಿಮೀಟರ್‌ ಉದ್ದದ ಹಳದಿ ಮಿಶ್ರಿತ ಬಿಳಿ ಕೋರೆ ಹಲ್ಲುಗಳು, ಸುಮಾರು ಆರು ಸೆಂಟಿಮೀಟರ್‌ ಅಗಲದ ಬಲವಾದ ವೃಷಣಗಳು ಆಗಲೇ ತನ್ನ ಜೀವನದ ಉತ್ಕೃಷ್ಟಮಟ್ಟ ತಲುಪುತ್ತಿರುವ ಗಂಡು ಚಿರತೆ ಎಂಬುದನ್ನು ಪ್ರದರ್ಶಿಸುತ್ತಿದ್ದವು. ಕಾಲಿನ ಎಲ್ಲಾ ಪಂಜಗಳು ಉತ್ತಮ ಪರಿಸ್ಥಿತಿಯಲ್ಲಿದ್ದವು. ಕಿವಿಯೊಳಗೆ ಯಥೇತ್ಛವಾಗಿದ್ದ ಉಣ್ಣೆಗಳು, ಆದರೆ ಆಶ್ಚರ್ಯಕರವಾಗಿ ಮೈಮೇಲೆ ಬಾಚಣಿಗೆ ಯಾಡಿಸಿದರೆ ಯಾವುದೇ ಚಿಗಟೆ ಅಥವಾ ಹೇನಿರಲಿಲ್ಲ.   

ಮತ್ತೂಮ್ಮೆ ಕಾಲರ್‌ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಿ, ಕಿವಿಯೊಳಗಿದ್ದ ಉಣ್ಣೆಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಕಲೆಹಾಕಿ ನಮ್ಮ ಕೆಲಸ ಮುಗಿಸುವ ವೇಳೆಗೆ ಆಗಲೇ ಸಂಜೆ ಆರು ಗಂಟೆಯಾಗಿತ್ತು. ನಮ್ಮ ಕೆಲಸ ಮುಗಿದಿದ್ದರಿಂದ, ಸುಜಯ… ಚಿರತೆಗೆ ಪ್ರಜ್ಞೆ ಮರಳುವ ಮದ್ದು ಕೊಟ್ಟರು. ಒಮ್ಮೆ ಚಿರತೆಯ ಮೈಯನ್ನು ಸಂಪೂರ್ಣವಾಗಿ ಸವರಿದೆ. ಇನ್ನೆಂದೂ ಈ ಚಿರತೆಯನ್ನು ಮುಟ್ಟುವ ಅವಕಾಶ ಸಿಗುವುದಿಲ್ಲವೆಂದು ಗೊತ್ತಿತ್ತು. 

ಎಚ್ಚರಿಕೆಯಿಂದ ಪ್ರಾಣಿಯನ್ನು ವಾಪಸ್ಸು ಬೋನಿಗೆ ಹಿಂದಿರು ಗಿಸಿದೆವು. ಹತ್ತೇ ನಿಮಿಷದಲ್ಲಿ ವಾಲಾಡುತ್ತ ನಮ್ಮ ಚಿರತೆ ಎದ್ದು ಕುಳಿತುಕೊಳ್ಳಲು ಪ್ರಾರಂಭಿಸಿತು. ಚೇತರಿಸಿಕೊಳ್ಳಲು ಸಹಕಾರಿ ಯಾಗಲು ಮೈಮೇಲೆ ಸ್ವಲ ನೀರು ಕೂಡ ಎರಚಿದೆವು. ತನ್ನ ಕುತ್ತಿಗೆಯ ಸುತ್ತಲಿದ್ದ ವಿಚಿತ್ರವಾದ ವಸ್ತುವನ್ನು ಒಂದೆರೆಡು ಣಬಾರಿ ಕಾಲಿನ ಪಂಜಗಳಿಂದ ಇದೇನು ಎಂಬಂತೆ ತನಿಖೆ ಮಾಡಿಕೊಂಡಿತು. ಅರ್ಧ ಗಂಟೆಯಲ್ಲಿ ಸಂಪೂರ್ಣ ಪ್ರಜ್ಞಾವಸ್ಥೆಗೆ ಬಂದಂತಿತ್ತು. ಬೋನಿನ ಆಸುಪಾಸು ಸುಳಿದರೂ ಗುರ್ರ ಎನ್ನುವ ಮೂಲಕ ತನ್ನ ಕಸಿವಿಸಿಯನ್ನು ತೋರ್ಪಡಿಸುತ್ತಿತ್ತು. "ನೀವ್ಯಾರು? ನನಗೇನು ಮಾಡಿದ್ದೀರಾ?' ಎಂದು ಪ್ರಶ್ನೆ ಕೇಳುವಂತಿತ್ತು ಅದರ ಮೆಲುವಾದ ಗರ್ಜನೆ.  

ಅಷ್ಟರೊಳಗೆ ಸೂರ್ಯನ ಬೆಳಕು ಮಾಯವಾಗಲು ಪ್ರಾರಂಭಿಸಿತ್ತು. ಸುಮಾರು ಒಂದೂವರೆ ತಾಸು ನಿರಂತರವಾಗಿ ಕೂಗುತ್ತಿದ್ದ ಮಂಗಗಳು ಸಹ ತಮ್ಮ ವಾದ್ಯಗೋಷ್ಠಿ ನಿಲ್ಲಿಸಿದ್ದವು. ಚಿರತೆ ಸಹ ಸಕ್ರಿಯವಾಗಿತ್ತು, ಅರಿವಳಿಕೆ ಮದ್ದಿನ ಪ್ರಭಾವ ಸಂಪೂರ್ಣವಾಗಿ ಇಳಿದಂತಿತ್ತು, ಅದನ್ನು ಸ್ವತಂತ್ರಗೊಳಿಸಲು ಸೂಕ್ತವಾದ ಸಮಯವಾಗಿತ್ತು. ಎಲ್ಲರೂ ಜೀಪಿನೊಳಗೆ ಹತ್ತಿದೆವು. ಇಬ್ಬರು 407 ಮೇಲೆ ಹತ್ತಿ ಬೋನಿನ ಬಾಗಿಲು ತೆಗೆಯಲು ಸಿದ್ಧರಾದರು. ಏಳು ಗಂಟೆ ಐದು ನಿಮಿಷ. 407 ಮೇಲಿದ್ದವರು ಮೆಲ್ಲನೆ ಬೋನಿನ ಬಾಗಿಲು ತೆಗೆದರು. ಒಂದೆರೆಡು ಬಾರಿ ಮೆಲ್ಲನೆ ಗರ್ಜಿಸಿ ಬೋನಿನಿಂದ ಕೆಳಗೆ ಹಾರಿದ ಚಿರತೆ, ಕುದುರೆಯ ಹಾಗೆ ಕಾಡಿನ ಕತ್ತಲಿನಲ್ಲಿ ಮಾಯವಾಯಿತು.  ಅದು ಓಡಿದ ವೇಗಕ್ಕೆ ಮಣ್ಣಿನ ಧೂಳು ನೆಲದಿಂದ ಮೇಲಕ್ಕೆ ಏಳುತ್ತಿದ್ದದ್ದು ಜೀಪಿನ ಹೆಡ್‌ ಲೈಟ್‌ ಬೆಳಕಿನಲ್ಲಿ ಕಾಣಿಸುತ್ತಿತ್ತು. ಕಾವೇರಿ ನದಿ ತೀರದ ಒಣ ಕಾಡುಗಳಲ್ಲಿ ಚಿರತೆ ಎಲ್ಲೋ ಆಗಲೇ ಮಾಯವಾಗಿತ್ತು...
(ಮುಂದುವರಿಯುವುದು)

ಲೇಖನ ಕುರಿತ ವಿಡಿಯೋ ನೋಡಲು ಈ ಲಿಂಕ್‌ ಟೈಪ್‌ ಮಾಡಿ: bit.ly/2K5DSAr


Trending videos

Back to Top